ಭಗವದ್ಗೀತೆಯ ಶ್ಲೋಕಾರ್ಥ-೨೦
ಪ್ರಥಮೋಧ್ಯಾಯ:
ಅರ್ಜುನ ವಿಷಾದಯೋಗ
ಸಂಜಯ ಉವಾಚ…
ಅಥ ವ್ಯವಸ್ಥಿತಾನ್ ದೃಷ್ಟ್ವಾ ಧಾರ್ತರಾಷ್ಟ್ರಾನ್ ಕಪಿಧ್ವಜ: |
ಪ್ರವೃತ್ತೇ ಶಸ್ತ್ರ ಸಂಪಾತೇ ಧನುರುದ್ಯಮ್ಯ ಪಾಂಡವ:||
ಯುದ್ಧರಂಗದಲ್ಲಿ ನಡೆಯುವ ಘಟನೆಗಳನ್ನು ವೀಕ್ಷಿಸಿ, ಅದನ್ನು ರಾಜನಾದ ಧೃತರಾಷ್ಟ್ರನಿಗೆ ತಿಳಿಸುವ ಸಲುವಾಗಿ , ಸಂಜಯನಿಗೆ ವೇದವ್ಯಾಸರು ದಿವ್ಯ ದೃಷ್ಟಿಯನ್ನು ನೀಡಿದ್ದರು ..ಅದರಿಂದ ಕೌರವ ಸೇನೆ ಮತ್ತು ಪಾಂಡವ ಸೇನೆಯ ವ್ಯೂಹ ರಚನೆ , ಕೌರವ ಸೇನೆಯಿಂದ ಕೇವಲ ಭೀಷ್ಮಾಚಾರ್ಯರು ಶಂಖನಾದ ಮಾಡಿದ್ದು , ಪಾಂಡವರ ಕಡೆಯಿಂದ ಹದಿನೆಂಟು ಮಂದಿ ಶಂಖನಾದ ಮಾಡಿ ಕೃಷ್ಣನನ್ನು ಅನುಸರಿಸಿದ್ದು .. ಹೀಗೆ ಎಲ್ಲಾ ವಿಷಯವನ್ನೂ ಧೃತರಾಷ್ಟ್ರನಿಗೆ ಸಂಜಯ ತಿಳಿಸಿ , ಮತ್ತೆ ನುಡಿಯುತ್ತಾನೆ..” ಹೇ ರಾಜನ್, ಹನುಮಂತನ ಬಾವುಟದ ಚಿಹ್ನೆ ಹೊಂದಿದ ರಥದಲ್ಲಿ ಕುಳಿತ ಅರ್ಜುನ, ಧಾರ್ತರಾಷ್ಟ್ರರು ಅಂದರೆ ಧೃತರಾಷ್ಟ್ರನ ಮಕ್ಕಳಾದ ಕೌರವರು ಯುದ್ಧಕ್ಕೆ ಸಜ್ಜಾಗಿದ್ದು ನೋಡಿ,ಅವರೊಂದಿಗೆ ಹೋರಾಡಲು ತನ್ನ ಬಿಲ್ಲನ್ನು ಅಣಿ ಮಾಡಿಕೊಂಡು ಕೃಷ್ಣನ ಬಳಿ ಹೀಗೆಂದನು”. ಇಲ್ಲಿ ಅರ್ಜುನನ ರಥದಲ್ಲಿ ಕೃಷ್ಣ ಸಾರಥಿಯಾಗಿದ್ದು ಮಾತ್ರವಲ್ಲ ,ಹನುಮಂತ ಅಂದರೆ ಪ್ರಾಣದೇವರ ವಿಶೇಷ ಸನ್ನಿಧಾನದ ಅನುಗ್ರಹ ಇತ್ತು. ನಮ್ಮ ದೇಹವೆಂಬ ರಥದಲ್ಲಿ ಸಹ ಪ್ರಾಣದೇವರು ಭಗವಂತನ ಜೊತೆ ದೇಹದಲ್ಲಿ ಇದ್ದೇ ಇರುವರು..ಪ್ರಾಣದೇವರು ನಿರ್ಗಮಿಸಿದರೆ ಭಗವಂತನು ನಿರ್ಗಮಿಸಿ ದೇಹ ಬಿದ್ದು ಹೋಗುವುದು .
ಹಾಗೇ ಹಿಂದೊಮ್ಮೆ ಭೀಮಸೇನ ಸೌಗಂಧಿಕಾ ಪುಷ್ಪ ತರಲು ಹೋದ ಸಂದರ್ಭದಲ್ಲಿ , , ಹನುಮಂತ ತನ್ನ ಬಾಲದಿಂದ ತಡೆದ ಘಟನೆಯಲ್ಲಿ , ಹನುಮಂತ ಭೀಮಸೇನನಿಗೆ ಮಾತು ಕೊಟ್ಟಿದ್ದನು… ಅಗತ್ಯ ಇದ್ದಾಗ ತಾನು ಅರ್ಜುನನ ರಥದಲ್ಲಿ ಸನ್ನಿಹಿತನಾಗಿ ಅಭಯ ಕೊಡುವೆ ಎಂದು .. ಹಾಗಾಗಿ ಇಂದು ಹನುಮನ ಧ್ವಜ ಸಹಿತ ಅರ್ಜುನ ಬಲವನ್ನು ಇಮ್ಮಡಿಯಾಗಿಸಿಕೊಂಡು , ಕೃಷ್ಣನಿಗೆ ಏನು ಹೇಳಿದನು ..ನಾಳೆ ನೋಡೋಣ 🙏
✍️ ಸುನೀತಾ ಉಡುಪ
ಜನ್ನಾಡಿ..ಬಿದ್ಕಲ್ ಕಟ್ಟೆ





