ಸಾಂಪ್ರದಾಯಕ ಚೌಕಟ್ಟನ್ನು ಮೀರದ ಯುವ ಕಲಾವಿದ ಗಣೇಶ ಪೂಜಾರಿ ಕೆರಾಡಿ

ರಾಜೇಶ್ವರಿ ಆರ್ ಉಡುಪ ಕುಂಜೂರು

ಕರಾವಳಿಯ ಗಂಡು ಕಲೆ ಎಂದೇ ಪ್ರಸಿದ್ಧಿ ಪಡೆದಿರುವ ಯಕ್ಷಗಾನ ಕ್ಷೇತ್ರದಲ್ಲಿ ನಾವು ಇಂದು ಹಲವಾರು ಯುವ ಕಲಾವಿದರನ್ನು ಕಾಣಬಹುದು. ಅಂತಹ ಯಕ್ಷಕಲಾವಿದರಲ್ಲಿ ಗಣೇಶ ಪೂಜಾರಿ ಕೆರಾಡಿ ಕೂಡ ಒಬ್ಬರು. ಇವರು ಕೆರಾಡಿಯ ಕುಳ್ಳಂಬಳ್ಳಿಯ ಕೃಷ್ಣ ಪೂಜಾರಿ ಹಾಗೂ ಲಕ್ಷ್ಮೀ ಪೂಜಾರ್ತಿ ದಂಪತಿಗಳ ನಾಲ್ಕು ಮಕ್ಕಳಲ್ಲಿ ಮೂರನೆಯವರು. ಇವರು, ಕಿರಿಯ ಪ್ರಾಥಮಿಕ ಶಾಲೆ ಕುಳ್ಳಂಬಳ್ಳಿಯಲ್ಲಿ ನಾಲ್ಕನೇ ತರಗತಿಯವರೆಗೂ ಹಾಗೂ ಹಿರಿಯ ಪ್ರಾಥಮಿಕ ಶಾಲೆ ಕೆರಾಡಿಯಲ್ಲಿ ಎಂಟನೇ ತರಗತಿಯವರೆಗೂ ವಿದ್ಯಾಭ್ಯಾಸ ಪೂರ್ಣಗೊಳಿಸುತ್ತಾರೆ. ಚಿಕ್ಕಂದಿನಿಂದಲೇ ಯಕ್ಷಗಾನದಲ್ಲಿ ಅಪಾರವಾದ ಆಸಕ್ತಿ ಇದ್ದ ಕಾರಣ ತಮ್ಮ ನಂತರ ವಿದ್ಯಾಭ್ಯಾಸವನ್ನು ಎಂಟನೇ ತರಗತಿಗೆ ಮೊಟಕುಗೊಳಿಸಿ ಯಕ್ಷಗಾನದತ್ತ ಮುಖ ಮಾಡುತ್ತಾರೆ.

ಯಕ್ಷಗಾನದಲ್ಲಿ ತಾನೊಬ್ಬ ಸಮರ್ಥ ಕಲಾವಿದನಾಗಬೇಕೆಂಬ ಆಸೆಯಿಂದ ಆರ್ಗೋಡು ಸದಾನಂದ ಶೇಣೈ ಅವರಿಂದ ಒಂದು ತಿಂಗಳ ಯಕ್ಷಗಾನ ತರಬೇತಿ ಪಡೆದು ನಂತರ ಮಡಾಮಕ್ಕಿ ಮೇಳದಲ್ಲಿ ಗೆಜ್ಜೆಕಟ್ಟಿ ಯಕ್ಷಗಾನ ಕಲಿಕೆ ಪ್ರಾರಂಭಿಸಿದರು. ಯಕ್ಷಗಾನ ಕುರಿತಂತೆ ಆಲ್ಮನೆ ಗಣೇಶ್ ಹಾಗೂ ಗುಂಡಿಬೈಲು ಗಣಪತಿ ಭಟ್ ಇವರಿಂದ ಹೆಚ್ಚಿನ ಸಲಹೆ ಪಡೆದು, ಸ್ವಂತ ಪ್ರಯತ್ನದಿಂದ ಅರ್ಥಗಾರಿಕೆ ಕಲಿತು ಯಕ್ಷರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.


ಮಡಾಮಕ್ಕಿ ಮೇಳದಲ್ಲಿ ಒಂದು ವರ್ಷ ಹಾಗೂ ಕಮಲಶಿಲೆ ಮೇಳದಲ್ಲಿ ಎರಡು ವರ್ಷ ಸೇವೆ ಸಲ್ಲಿಸಿರುವ ಇವರು, ಪ್ರಸ್ತುತ ಶ್ರೀ ಶನೀಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಚೋನಮನೆ ಆಜ್ರಿ ಮೇಳದಲ್ಲಿ ಹದಿಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಯಾವುದೇ ಪಾತ್ರವನ್ನು ನೀಡಿದರೂ ಸಮರ್ಥವಾಗಿ ನಿರ್ವಹಿಸಬಲ್ಲ ಇವರು, ಶನೀಶ್ವರ ಮಹಾತ್ಮೆ'ಯ ಈಶ್ವರ, ವಿಕ್ರಮಾದಿತ್ಯ, ಚಂದ್ರಸೇನ,ರಾಜಸತ್ಯವೃತ ಪ್ರಸಂಗ’ದ ಸತ್ಯವೃತ, ಶೂರಸೇನ. ಮೀನಾಕ್ಷಿ ಕಲ್ಯಾಣ'ದ ಕೃಷ್ಣ , ಬಲರಾಮ, ಘಟೋದ್ಗಜ,ತಾಮ್ರದ್ವಜ ಕಾಳಗ’ದ ಭರತ, ಕುಶಲವ ಕಾಳಗ'ದ ಕುಶ, ಶತ್ರುಘ್ನ, ದ್ರೌಪದಿ ವಸ್ತ್ರಾಪಹರಣ, ಕರ್ಣ ಮುಂತಾದ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿ ಜನ ಮನ್ನಣೆಯನ್ನು ಪಡೆದಿದ್ದಾರೆ. ಪೌರಾಣಿಕ ಪ್ರಸಂಗಗಳಾದಶನೀಶ್ವರ ಮಹಾತ್ಮೆ’ಯ ವಿಕ್ರಮಾದಿತ್ಯ, ಕನಕಾಂಗಿ ಕಲ್ಯಾಣ'ದ ಬಲರಾಮ ಇವರ ಅಚ್ಚುಮೆಚ್ಚಿನ ಪಾತ್ರವಾಗಿದ್ದು, ಇವರಶನೀಶ್ವರ ಮಹಾತ್ಮೆ’ಯ ವಿಕ್ರಮಾದಿತ್ಯನ ಪಾತ್ರವು ಜನಮೆಚ್ಚುಗೆ ಪಡೆದ ಪಾತ್ರವಾಗಿದೆ.

ಗಂಭೀರವಾದ ಪಾತ್ರಗಳ ಜೊತೆಗೆ ಹಾಸ್ಯ ಪ್ರಧಾನವಾದ ಪಾತ್ರಗಳಲ್ಲೂ ಸೈ ಎನಿಸಿಕೊಂಡಿರುವ ಇವರು, ಅಬ್ಬರದ ಬೊಬ್ಬರ್ಯ ಪ್ರಸಂಗ'ದ ರಾಮಲಿಂಗ,ಶನೀಶ್ವರ ಮಹಾತ್ಮೆ’ಯ ಕೃಷಿಕ ಕಾಳ ಪಾತ್ರವನ್ನೂ ಯಶಸ್ವಿಯಾಗಿ ನಿರ್ವಹಿಸಿದ್ದಾರೆ, ಹಾಗೆಯೇ ಇವರ ಮಾರುತಿ ಪ್ರತಾಪ'ದ ನಾರದ,ರಾಮಾಂಜನೇಯ’ದ ಸುಗ್ರೀವ, `ದೇವಿ ಮಹಾತ್ಮೆ’ಯ ಚಂಡಾಸುರ ಮುಂತಾದ ಪಾತ್ರಗಳಿಗೆ ಕುಮಟಾ ಗಣಪತಿ ನಾಯ್ಕರಿಂದ ಪ್ರಶಂಸೆ ಸಿಕ್ಕಿರುತ್ತದೆ. ಇವರು, ಆಲ್ಮನೆ ಗಣೇಶ್, ಗುಂಡಿಬೈಲು ಗಣಪತಿ ಭಟ್, ಆರ್ಗೋಡು ಮೋಹನದಾಸ್ ಶೇಣೈ, ಅರೆಹೊಳೆ ಸಂಜೀವ ಶೆಟ್ಟಿ, ಜನಾರ್ದನ ಗುಡಿಗಾರ್ , ಕುಮಟಾ ಗಣಪತಿ ನಾಯ್ಕ್ , ಉಪ್ಪುಂದ ನಾಗೇಂದ್ರ ರಾವ್, ತಾರೆಕೊಡ್ಲು ಉದಯ ಮುಂತಾದ ಹಿರಿಯ ಕಲಾವಿದರ ಒಡನಾಟ ಹೊಂದಿದ್ದು, ಉತ್ತಮವಾದ ಪುರಾಣದ ಬಗೆಗಿನ ಜ್ಞಾನವನ್ನು ಹೊಂದಿದ್ದಾರೆ.

\
ಇವರ ಯಕ್ಷಗಾನದ ವೇಷಭೂಷಣ ಹಾಗೂ ಪಾತ್ರದ ಬಗ್ಗೆ ಹೇಳುವುದಾದರೆ, ಇವರದು ಸಾಂಪ್ರದಾಯಿಕ ವೇಷಭೂಷಣ, ಸಾಂಪ್ರದಾಯಿಕ ಬಣ್ಣಗಾರಿಕೆ, ಒಂದು ಪಾತ್ರಕ್ಕೆ ಎಷ್ಟು ಬೇಕೋ ಅಷ್ಟೇ ಮಾತುಗಾರಿಕೆ, ಹಿತಮಿತವಾದ ಕುಣಿತ. ಯಕ್ಷ ರಂಗದಲ್ಲಿ ಇವರ ಸಾಧನೆ ಹಾಗೂ ಪ್ರತಿಭೆಯನ್ನು ಗುರುತಿಸಿ, ಶನೀಶ್ವರ ಮೇಳದ ದಶಮಾನೋತ್ಸವ ಸಮಾರಂಭದಲ್ಲಿ ಇವರನ್ನು ಸನ್ಮಾನಿಸಲಾಗಿದ್ದು, ಇದರ ಜೊತೆಗೆ ಬಿಲ್ಲವ ಸಮಾಜ ಸೇವಾ ಸಂಘ ಕುಳ್ಳಂಬಳ್ಳಿ ಕೆರಾಡಿ ಹಾಗೂ ಮಹಾಲಿಂಗೇಶ್ವರ ಅಯ್ಯಪ್ಪ ಭಕ್ತವೃಂದ ಬೆಳ್ಳಾಲ ಮೂಡುಮುಂದ ಇವರ ವತಿಯಿಂದಲೂ ಗಣೇಶ್ ಅವರನ್ನು ಸನ್ಮಾನಿಸಲಾಯಿತು.

ಬಾಲ್ಯದಿಂದಲೇ ಯಕ್ಷಗಾನವನ್ನು ಆರಾಧಿಸುತ್ತಿರುವ ಇವರಿಗೆ ಭವಿಷ್ಯದಲ್ಲಿ ಯಕ್ಷಗಾನ ರಂಗದಲ್ಲಿ ಹೆಚ್ಚಿನ ಯಶಸ್ಸು, ಕೀರ್ತಿ ಸಿಗಲಿ ಎಂದು ಹಾರೈಸುತ್ತಾ ಶ್ರೀ ಶನೀಶ್ವರ ದೇವರ ಅನುಗ್ರಹ ಸದಾ ಇವರ ಮೇಲೆ ಇರಲೆಂದು ಆಶಿಸೋಣ

(ವಿ.ಸೂ: ಉಡುಪಿ ಟೈಮ್ಸ್ ನಲ್ಲಿ ಬರುವ ಎಲ್ಲ ಲೇಖನಗಳು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದ್ದು ಇದಕ್ಕೂ ಉಡುಪಿ ಟೈಮ್ಸ್ ಗೆ ಯಾವುದೇ ಸಂಬಂಧವಿಲ್ಲ)

1 thought on “ಸಾಂಪ್ರದಾಯಕ ಚೌಕಟ್ಟನ್ನು ಮೀರದ ಯುವ ಕಲಾವಿದ ಗಣೇಶ ಪೂಜಾರಿ ಕೆರಾಡಿ

Leave a Reply

Your email address will not be published. Required fields are marked *

error: Content is protected !!