ತೆಂಕು ತಿಟ್ಟಿನ ಪ್ರಸಿದ್ಧ ಪೀಠಿಕೆ ವೇಷದಾರಿ -ಜಯಾನಂದ ಸಂಪಾಜೆ

ಲೇಖಕರು – ರಾಜೇಶ್ವರಿ ಉಡುಪ

ಯಾವುದೇ ಸಮಾರಂಭ ಆರಂಭಿಸುವ ಮೊದಲು, ಬರವಣಿ ಆರಂಭಿಸುವ ಮೊದಲು ಪೀಟಿಕೆ ಅತೀ ಮುಖ್ಯ ವಾಗಿರುತ್ತದೆ. ಅದರಂತೆ ಕರಾವಳಿಯ ಗಂಡು ಕಲೆ ಯಕ್ಷಗಾನದಲ್ಲಿ ಪೀಠಿಕೆ ವೇಷ ಅತಿಮುಖ್ಯವಾಗಿರುತ್ತದೆ. ಯಕ್ಷ ಲೋಕದಲ್ಲಿ ಪೀಟಿಕೆ ವೇಷದಲ್ಲಿ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಛಾಪು ಮೂಡಿಸಿದ ಕಲಾವಿದರೊಬ್ಬರಿದ್ದಾರೆ ಅವರೇ, ಜಯಾನಂದ ಸಂಪಾಜೆಯವರು
1973 ರ ಡಿಸೆಂಬರ್ 8 ರಂದು, ಸುಳ್ಯ ಸಂಪಾಜೆಯ ಕಲ್ಲುಗುಂಡಿ ಸುಳ್ಯ ಕೊಡಿ ತಿಮ್ಮಯ್ಯ ಗೌಡ ಮತ್ತು ಲಕ್ಷ್ಮಿ ದಂಪತಿ ಪುತ್ರನಾಗಿ ಜನಿಸಿದ ಇವರಿಗೆ ಬಾಲ್ಯದಲ್ಲಿಯೇ ಯಕ್ಷಗಾನ ಎಂದರೆ ಎಲ್ಲಿಲ್ಲದ ಪ್ರೀತಿ. ಪಿಯುಸಿ ಶಿಕ್ಷಣವನ್ನು ಪೂರೈಸಿದ ಇವರು, ಅರಸಿನಮಕ್ಕಿ ಪರಮೇಶ್ವರ ಆಚಾರ್ಯರಿಂದ ಯಕ್ಷಗಾನ ಅಭ್ಯಾಸವನ್ನು ಮತ್ತು ಖ್ಯಾತ ತಾಳಮದ್ದಳೆಯ ಅರ್ಥಧಾರಿಯಾದ ಜಬ್ಬರ್ ಸಮೋ ಸಂಪಾಜೆ ಅವರಿಂದ ಮಾತುಗಾರಿಕೆ ಜ್ಞಾನವನ್ನು ಪಡೆದುಕೊಂಡರು, 1992 ರಲ್ಲಿ ಕಟೀಲು ಮೇಳದಲ್ಲಿ ಗೆಜ್ಜೆ ಕಟ್ಟಿದ ಇವರು, ಅಲ್ಲಿ 12 ವರ್ಷಗಳ ಕಾಲ ಸೇವೆ ಸಲ್ಲಿಸಿದರು.

ನಂತರ ಕುಂಟಾರು ಮೇಳದಲ್ಲಿ ಮೂರು ವರ್ಷ, ಹೊಸನಗರ ಮೇಳದಲ್ಲಿ ಎಂಟು ವರ್ಷ ಮತ್ತು ಪುತ್ತೂರು ಮೇಳದಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಮೂರು ವರ್ಷಗಳಿಂದ ಇವರು, ಹನುಮಗಿರಿ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ದೇವೇಂದ್ರ ಪಾತ್ರಧಾರಿಯಾಗಿ ಪ್ರಸಿದ್ಧಿ ಪಡೆದ ಇವರು ಕಿರೀಟ ವೇಷಗಳಾದ ರಕ್ತಬೀಜ ಇಂದ್ರಜಿತು, ಶತ್ರುವಿನ ಸುಗ್ರೀವ, ಅರ್ಜುನ, ಕಾರ್ತಿವೀರಾರ್ಜುನ ಮತ್ತು `ಕಟೀಲು ಕ್ಷೇತ್ರ ಮಹಾತ್ಮೆ’ಯ ಅರುಣಾಸುರ ಮುಂತಾದ ಪಾತ್ರವನ್ನು ತನ್ನದೇ ಆದ ವಿಶಿಷ್ಟ ನಾಟ್ಯ ಶೈಲಿ ಗತ್ತು-ಗಾಂಭೀರ್ಯದ ಹಾವಭಾವದ ಮೂಲಕ ಸುಂದರವಾಗಿ ಅಭಿನಯಿಸಿದ್ದಾರೆ. ಸ್ಪಷ್ಟ ಹಾಗೂ ಸುಲಲಿತ ಮಾತುಗಾರಿಕೆ, ಕರ್ಣಾನಂದ ವಾಗಿಸುವ ಸ್ವರ ಸಿರಿ, ಅಪಾರ ಪಾಂಡಿತ್ಯ, ಆಕರ್ಷಕ ಹೆಜ್ಜೆಗಾರಿಕೆ ಮತ್ತು ರಂಗ ನಡೆಯಿಂದ ಅಪಾರ ಅಭಿಮಾನಿಗಳ ಪ್ರೀತಿ ಮತ್ತು ಮನ್ನಣೆಗೆ ಪಾತ್ರರಾಗಿದ್ದಾರೆ.


ಇವರು, ಸದಾ ಅಧ್ಯಯನ ಶೀಲ ಗುಣಗಳಿಂದ ಯಕ್ಷ ರಂಗದಲ್ಲಿ ಯಾವುದೇ ಪ್ರಸಂಗದ, ಯಾವುದೇ ಪಾತ್ರದಲ್ಲಿ ಕೂಡ ಪ್ರತ್ಯುತ್ಪನ್ನಮತಿತ್ವದಿಂದ ಹಿರಿಯ ಕಲಾವಿದರಿಗೆ ಸಮ ದಂಡಿಯಾಗಿ ವ್ಯವಹರಿಸಬಲ್ಲ ಸಮರ್ಥ ಕಲಾವಿದರೆನಿಸಿಕೊಂಡಿದ್ದಾರೆ. ಜಬ್ಬಾರ್ ಸಮೋ ಅವರ ಶಿಷ್ಯ ಸಮೂಹದಲ್ಲಿ ಗುರುತಿಸಿಕೊಂಡಿರುವ ಇವರು, ತನ್ನ ವಿದ್ವತ್ಪೂರ್ಣ ಮತ್ತು ಪ್ರಕಾರ ಮಾತುಗಾರಿಕೆಯಿಂದ ಜನಮನ್ನಣೆಗಳಿಸಿದ್ದಾರೆ. ಇವರು, ಕೇವಲ ಆಟ ಮಾತ್ರವಲ್ಲದೆ ತಾಳಮದ್ದಲೆಯ ಕೂಟದಲ್ಲೂ ಭಾಗವಹಿಸುತ್ತಿದ್ದಾರೆ.

ಇವರು ತೆಂಕುತಿಟ್ಟಿನ ಪ್ರಸಿದ್ಧ ಪೀಠಿಕೆ ವೇಷಧಾರಿಗಳಲ್ಲಿ ಒಬ್ಬರಾಗಿದ್ದು, ಕೇದಗಡಿ ಗುಡ್ಡಪ್ಪ ಗೌಡ, ಪೆರುವಾಯಿ ನಾರಾಯಣ ಶೆಟ್ಟಿ, ಕುರಿಯ ಗಣಪತಿ ಶಾಸ್ತ್ರಿ, ಬೊಟ್ಟಿಕೆರೆ ಪುರುಷೊತ್ತಮ ಪೂಂಜ, ಪದ್ಯ ಪದ್ಯಾಣ ಗಣಪತಿ ಭಟ್, ಪದ್ಯಾಣ ಶಂಕರನಾರಾಯಣ ಭಟ್, ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ, ಶಿವರಾಮ ಜೋಗಿ ಮೊದಲಾದ ಹಿರಿಯ ಕಲಾವಿದರ ಸಾಂಗತ್ಯದಲ್ಲಿ ತೆಂಕುತಿಟ್ಟಿನ ಪರಿಪೂರ್ಣ ಕಲಾವಿದರಾಗಿ ರೂಪುಗೊಂಡಿದ್ದಾರೆ.
ಇವರು ಬಾಳಸಂಗಾತಿ ವಿಜಯ, ಮಗಳು ಬ್ರಾಮರಿ ಹಾಗೂ ಮಗ ನೈರುತ್ಯ ರೊಂದಿಗೆ ಸುಖವಾದ ಜೀವನವನ್ನು ನಡೆಸುತ್ತಿದ್ದಾರೆ.

ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಇವರು, ಸತತ 27 ವರ್ಷಗಳಿಂದ ಯಕ್ಷರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕರಾವಳಿ ಮಲೆನಾಡು ಬೆಂಗಳೂರು-ಮುಂಬೈ ಮೊದಲಾದ ಕಡೆಗಳಲ್ಲಿ ತಮ್ಮ ಕಲಾ ಪ್ರೌಢಿಮೆಯನ್ನು ಮೆರೆದಿದ್ದು, ಇವರ ಯಕ್ಷ ಸೇವೆಯನ್ನು ಗುರುತಿಸಿ ತರುಣ ಕಲಾವೃಂದ ದಾಮಸ್ಕಟ್ಟೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸುಳ್ಯ , ಕೃಷ್ಣ ಯಕ್ಷಸಭಾ ಕದ್ರಿ ಮಲ್ಲಿಕಟ್ಟೆ ಇವರುಗಳ ವತಿಯಿಂದ ಸನ್ಮಾನ ಹಾಗೂ ದುರ್ಗಾ ಸೇವಾ ಸಮಿತಿ ಕನ್ಯಾನ ಬಂಟ್ವಾಳ ಇವರಿಂದ ಯಕ್ಷ ನಿಧಿ ಬಿರುದಿನೊಂದಿಗೆ ಸನ್ಮಾನ, ಕಾಸರಗೋಡು ಸಂಕಡಕದ ಅರಸು ಸಂಕಲ ದೈವ ಕ್ಷೇತ್ರದಿಂದ ಅರಸು ಸಂಕಲ ಪ್ರಶಸ್ತಿ ಸೇರಿದಂತೆ ಹಲವಾರು ಸಂಘ- ಸಂಸ್ಥೆಗಳಿಂದ ಪುರಸ್ಕಾರಕ್ಕೆ ಭಾಜನರಾದವರು.


ತಮ್ಮದೇ ವಿಶೇಷವಾದ ಶೈಲಿಯಲ್ಲಿ ಯಕ್ಷ ಪ್ರಿಯರ ಮನಗೆದ್ದಿರುವ ಇವರಿಗೆ, ಕಲಾ ಮಾತೆ ಶ್ರೀ ಕಟೀಲು ಭ್ರಮರಾಂಬಿಕೆ ಯು ಯಕ್ಷರಂಗದಲ್ಲಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ನೀಡಿ ಕಾಪಾಡಲಿ ಎನ್ನುವುದು ನಮ್ಮ ಶುಭಹಾರೈಕೆ. ಪುಂಡುವೇಷಗಳಾದ ಕೃಷ್ಣ, ವಿಷ್ಣು, ಶ್ರೀನಿವಾಸ ಮೊದಲಾದ ವೇಷಗಳಲ್ಲಿ ರಂಗದಲ್ಲಿ ಸಂಚಲನ ಮೂಡಿಸಬಲ್ಲ ಸಮರ್ಥ ಕಲಾವಿದ ಹನುಮಗಿರಿ ಮೇಳದಲ್ಲಿ ಪ್ರದರ್ಶನಗೊಂಡ ಮಾನಿಷಾದ ಪ್ರಸಂಗದಲ್ಲಿ ಇವರ ವಾಲ್ಮೀಕಿಯ ಪಾತ್ರದಲ್ಲಿ ಅತ್ಯುತ್ತಮ ಅಭಿನಯ ಮತ್ತು ಪಾಂಡಿತ್ಯಪೂರ್ಣ ವಾಕ್ಚಾತುರ್ಯದಿಂದ ಅಪಾರವಾದ ಜನಮನ್ನಣೆಗೆ ಪಾತ್ರರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!