ಪ್ರೀತಿ, ಸಹಬಾಳ್ವೆ, ಐಕ್ಯತೆ ಬೀಜವನ್ನು ಬಿತ್ತಿ, ಶಾಂತಿ ಮತ್ತು ಸೌಹಾರ್ದತೆ ಕಾರ್ಯ ನಮ್ಮದಾಗಬೇಕಿದೆ: ಡಾ| ಜೆರಾಲ್ಡ್ ಲೋಬೊ

ಇಡೀ ವಿಶ್ವವು ಆರೋಗ್ಯ, ನೆಮ್ಮದಿ ಹಾಗೂ ಶಾಂತಿ-ಸಮಾಧಾನಗಳಿಗಾಗಿ ಹಾತೊರೆಯುತ್ತಿರುವ ಈ ಕಾಲದಲ್ಲಿ ಯೇಸು ಕ್ರಿಸ್ತರ ಜನನದ ಮಹೋತ್ಸವ ಕ್ರಿಸ್‌ಮಸ್ ಭರವಸೆಯ ಕಿರಣದಂತೆ ಹೊಮ್ಮಿ, ಬರಲಿರುವ ಹೊಸ ಬದುಕಿಗೆ ಪೀಠಿಕೆ ಹಾಕುವಂತೆ ಇದೆ. ಪ್ರತಿ ಬಾರಿಯ ಕ್ರಿಸ್ತ ಜಯಂತಿಯ ಆಚರಣೆ ಈ ಭೂಲೋಕದ ಎಲ್ಲ ಮನುಜರಿಗೆ ವಿಶೇಷವಾದ, ನವೀಕೃತವಾದ ಒಂದು ಕೊಡುಗೆಯಾಗಿದೆ ಎನ್ನುತ್ತಾರೆ ಪೋಪ್ ಫ್ರಾನ್ಸಿಸ್. ಕ್ರಿಸ್ತ ಜಯಂತಿಯತ್ತ ಭರವಸೆಯಿಂದ ನೋಡಲು, ಕಂದ ಯೇಸುವನ್ನು ಕಂಡು, ನಮಿಸಿ ಹೊಸ ಬದುಕಿನತ್ತ ಸಾಗಲು ಅವರು ನಮಗೆ ಕರೆ ನೀಡಿದ್ದಾರೆ.

ಕೋವಿಡ್ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ಈ ಕಾಲದಲ್ಲಿ ನಮ್ಮ ನೆರೆ ಹೊರೆಯವರಲ್ಲಿ ಪ್ರೀತಿ, ಸಹಬಾಳ್ವೆ, ಐಕ್ಯತೆ ಎಂಬ ಬೀಜವನ್ನು ಬಿತ್ತಿ ಎಲ್ಲೆಡೆ ಶಾಂತಿ ಮತ್ತು ಸೌಹಾರ್ದತೆಯನ್ನು ಸ್ಥಾಪಿಸುವ ಕಾರ್ಯ ನಮ್ಮದಾಗಬೇಕಿದೆ. ‘ಇವನಾರವ ಎನ್ನದಿರಯ್ಯ, ಇವ ನಮ್ಮವ ಎನ್ನಿರಯ್ಯ’ ಎಂಬ ಬಸವಣ್ಣನವರ ವಚನದಂತೆ ಯಾರನ್ನೂ ಪ್ರತ್ಯೇಕಿಸದೆ ಎಲ್ಲರನ್ನೂ ನಮ್ಮವರೆಂದು ಸ್ವೀಕರಿಸುವ ಉದಾರತೆ ನಮ್ಮಲ್ಲಿ ಬೆಳೆಯಬೇಕು. ಶಾಂತಿಯು ನಮ್ಮ ಮನೆ, ಮನಗಳಲ್ಲಿ ಮತ್ತು ಸಮಾಜದಲ್ಲಿ ಮನೆ ಮಾಡಬೇಕು. ಇದೇ ನಾವು ಪರರಿಗೆ ನೀಡುವ ಅತ್ಯುನ್ನತ ಕ್ರಿಸ್ಮಸ್ ಉಡುಗೊರೆ.
ಇದೇ ಸಂದೇಶವನ್ನು ಅಕ್ಟೋಬರ್ ತಿಂಗಳಲ್ಲಿ ಪೋಪ್ ಫ್ರಾನ್ಸಿಸ್‌ರವರು ನಾವೆಲ್ಲಾ ಸಹೋದರ ಸಹೋದರಿಯರು ಎಂಬ ವಿಶ್ವಪತ್ರದ ಮೂಲಕ ಇಡೀ ವಿಶ್ವಕ್ಕೆ ನೀಡಿದರು.

ಕೊರೋನಾ-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ನೀಡಿದ ‘ನಾವೆಲ್ಲಾ ಸಹೋದರ ಸಹೋದರಿಯರು’ ವಿಶ್ವಪತ್ರದಲ್ಲಿ ಎಲ್ಲಾ ಮಾನವರು ತಮ್ಮ ಧರ್ಮ, ಜಾತಿ, ವರ್ಗ, ಪ್ರಾಂತ್ಯ, ಸಂಸ್ಕೃತಿ, ರೀತಿ-ರಿವಾಜುಗಳು ಇನ್ನಿತರ ಸೀಮೆಗಳನ್ನು ದಾಟಿ ಮಾನವೀಯತೆ ಎಂಬ ವಿಶ್ವಧರ್ಮದಡಿ ಒಂದಾಗಲು ಕರೆನೀಡಿದ್ದಾರೆ. ತಮ್ಮೆಲ್ಲ ವೈಯಕ್ತಿಕತೆಯ ಹೊರತಾಗಿಯೂ ಸಹೋದರತ್ವ ಹಾಗೂ ಸಾಮಾಜಿಕ ಗೆಳೆತನಗಳು ಮಾನವರು ಪರಸ್ಪರ ಒಪ್ಪಿಕೊಳ್ಳಬೇಕಾದ ಮೌಲ್ಯಗಳು. ನಾವೆಲ್ಲ ಪರಸ್ಪರ ಒಪ್ಪಿಕೊಂಡು, ಪ್ರಶಂಸಿಸಿ, ಪ್ರೀತಿಸುವ ಮುಕ್ತ ಮನೋಭಾವವುಳ್ಳವರಾಗಿರಬೇಕು. ಪೃಕೃತಿಯ ಪ್ರತಿ ವಸ್ತು ಹಾಗೂ ಜೀವಿಯನ್ನು ತನ್ನ ಸಹೋದರ ಹಾಗೂ ಸಹೋದರಿ' ಎಂದು ಒಪ್ಪಿಕೊಳ್ಳುವ ಮನೋಭಾವವಿರುವ ನಾವು ನಮ್ಮದೇ ರೀತಿ ರಕ್ತ-ಮಾಂಸಗಳ ದೇಹವುಳ್ಳ ಪರರನ್ನುಸಹೋದರ ಮತ್ತು ಸಹೋದರಿ’ ಎಂದು ಒಪ್ಪಿಕೊಳ್ಳಲೇಬೇಕು ಎಂದು ಅವರು ಕರೆಕೊಟ್ಟಿದ್ದಾರೆ.

ಈ ವಿಷಮ ಕಾಲದಲ್ಲಿ ಕ್ರಿಸ್ಮಸ್ ಆಚರಣೆ ಹೆಚ್ಚು ಪ್ರಸ್ತುತವೆನಿಸುತ್ತದೆ. ಎರಡು ಸಾವಿರ ವರ್ಷಗಳ ಹಿಂದೆ ಜರುಗಿದ ಅನೇಕ ಘಟನೆಗಳನ್ನು ಅದು ಇಂದು ನೆನಪಿಸುತ್ತದೆ. ಲಾಕ್‌ಡೌನ್ ಹಾಗೂ ಕೋವಿಡ್-19 ನಿಂದ ಕೋಟ್ಯಾಂತರ ಜನರು ಉದ್ಯೋಗವನ್ನು ಕಳೆದುಕೊಂಡು ಬೀದಿಪಾಲಾದರು, ವಲಸೆ ಕಾರ್ಮಿಕರು ನಿರ್ವಸಿತರಾದರು, ಬಡವರು ಬಹಳವಾಗಿ ಬಳಲಿದರು. ಈ ಎಲ್ಲಾ ಯಾತ್ರಾರ್ಥಿಗಳಿಗೆ, ನಿರಾಶ್ರಿತರಿಗೆ ಹಾಗೂ ನಿರ್ಲಕ್ಷಿತರಿಗೆ ಮಾತೆ ಮರಿಯ ಮತ್ತು ಜೋಸೆಫ್ ಸ್ಫೂರ್ತಿ ಹಾಗೂ ಸಾಂತ್ವನವಾಗಿದ್ದಾರೆ. ಸ್ವತಃ ಅವರೇ ತಮ್ಮ ಕಂದ ಯೇಸುವಿನೊಂದಿಗೆ ಇಂತಹ ವಿಷಮ ಪರಿಸ್ಥಿತಿಗೆ ಒಳಗಾದರು. ಕಂದ ಯೇಸು ಹುಟ್ಟುವಾಗಲೇ ಅವರಿಗೆ ಒಂದಿಷ್ಟು ಯೋಗ್ಯ ಸ್ಥಳ ಸಿಗದಾಯಿತು. ಇಂದು ಲಕ್ಷಾಂತರ ಜನ ತಮ್ಮ ನಾಡು, ಮನೆಗಳಿಂದ, ಪ್ರೀತಿಪಾತ್ರರಿಂದ ಹೊರದಬ್ಬಲ್ಪಟ್ಟಿದ್ದಾರೆ. ನಿರಾಶ್ರಿತರು-ನಿರ್ಗತಿಕರು ಆಗಿದ್ದಾರೆ. ನೆಲೆಯಿಲ್ಲದೆ ಅಲೆಮಾರಿಗಳಾಗಿ ಜೀವಿಸುತ್ತಿದ್ದಾರೆ. ಇವರೆಲ್ಲರಿಗೂ ಈ ಕ್ರಿಸ್ಮಸ್ ಸಾಂತ್ವನದಾಯಕವಾಗಿದ್ದು ಹೊಸ ಮಾರ್ಗವನ್ನು ತೋರಿ, ಹೊಸ ಬದುಕಿನೆಡೆಗೆ ಮುನ್ನಡೆಸಲಿ ಎಂಬುದೇ ನಮ್ಮ ಹಾರೈಕೆ.

ಎಲ್ಲ ಸುಮನಸ್ಕ ಬಂಧು-ಬಾಂಧವರಿಗೆ ಕ್ರಿಸ್ಮಸ್ ಮಹೋತ್ಸವದ ಶುಭಾಷಯಗಳನ್ನು ಕೋರುತ್ತಾ, ಕರುಣಾಮಯಿ ಯೇಸುಕಂದ ನಿಮ್ಮ ಮನೆ-ಮನಗಳನ್ನು ತನ್ನ ಜ್ಯೋತಿಪ್ರಕಾಶದಿಂದ ಬೆಳಗಿಸಲಿ ಎಂದು ಪ್ರಾರ್ಥಿಸುತ್ತೇನೆ.
ಪರಮಪೂಜ್ಯ ಡಾ| ಜೆರಾಲ್ಡ್ ಲೋಬೊ
ಉಡುಪಿಯ ಧರ್ಮಾಧ್ಯಕ್ಷರು

Leave a Reply

Your email address will not be published. Required fields are marked *

error: Content is protected !!