ಕುಂದ ಕನ್ನಡದ ಚಂದ

ಲಲಿತ ಪ್ರಬಂಧ -ಎ.ಎಸ್.ಎನ್.ಹೆಬ್ಬಾರ್

‘ಹೋಯ್’ ಎಂಬ ಸರ್ವಾಂತರ್ಯಾಮಿ ಪದ
ನಾನು ಮನೆಯ ಬಾಗಿಲು ಹಾಕಿ ಹೊರಬರುತ್ತಿರುವಂತೆ ಎದುರಿಗೆ ಗೆಳೆಯ ಬೈಕಾಡಿ ಶ್ರೀನಿವಾಸರಾಯರು ಮನೆ ಕಡೆ ಕಾಲು ಹಾಕುತ್ತಿರುವುದು ಕಾಣಿಸಿತು. ಮಟ್ಟಿಲಿಳಿಯುತ್ತಿದ್ದ ನನ್ನನ್ನು ಉದ್ದೇಶಿಸಿ ಬೈಕಾಡಿ, ‘ಹೋಯ್?’ ಎಂದು ಕುತೂಹಲದ ಧ್ವನಿಯಲ್ಲಿ ಪ್ರಶ್ನಿಸಿದಾಗ, ‘ಒಂದು ಸಮಾರಂಭ ಇತ್ ಮಾರಾಯ್ರೆ’ ಎಂದೆ.
ಬರೇ ‘ಹೋಯ್’ ಎಂಬ ಒಂದು ಕುಂದಗನ್ನಡದ ಈ ಶಬ್ದ ಎಷ್ಟೊಂದು ಅರ್ಥಗರ್ಭಿತ. ಈ ಶಬ್ದವನ್ನು ಉಚ್ಚರಿಸುವ ಧಾಟಿಯಲ್ಲೇ ಅದೊಂದು ಪ್ರಶ್ನೆಯೋ, ಉದ್ಗಾರವೋ, ಪ್ರಶಂಸೆಯೋ, ಎಚ್ಚರಿಕೆಯೋ, ಟೀಕೆಯೋ ಆಗಿ ಬಿಡುತ್ತದೆ – ತಿಳಿದೂ ಬಿಡುತ್ತದೆ.
ಯಾರಾದರೂ ಮನೆಗೆ ಬಂದಾಗ ಮನೆ ಬಾಗಿಲು ಹಾಕಿದ್ದರೆ – ಕಾಲಿಂಗ್ ಬೆಲ್ ಇಲ್ಲದಿದ್ದರೆ – ‘ಹೋಯ್’ ಎಂದರೆ ಸಾಕು ‘ಒಳಗೆ ಯಾರಾದರೂ ಇದ್ದಾರಾ?’ ಎಂಬಂತೆ ಕೇಳಿಸಿ, ಒಳಗಿದ್ದವರು ತಕ್ಷಣ ‘ಯಾರು? ಬಂದೆ’ ಎಂದು ಬಾಗಿಲು ತೆಗೆಯುತ್ತಾರೆ.


ಹೋಟೇಲಿನಲ್ಲೋ, ಜಾತ್ರೆಯಲ್ಲೋ, ಮದುವೆಯಲ್ಲೋ ಗುರುತಿನವರು, ಸಂಬಂಧಿಗಳು ಸಿಕ್ಕಾಗ ಅವರನ್ನು ‘ಗ್ರೀಟ್’ ಮಾಡುವುದೂ ಬರೇ – ‘ಹೋಯ್’ ನಿಂದ. ಅವರು ವಾಪಾಸು ‘ಗ್ರೀಟ್’ ಮಾಡುವುದೂ ಅದೇ ಧ್ವನಿಯ – ‘ಹೋಯ್’ ಹೇಳುವುದರಿಂದ.
ಊಟಕ್ಕೆ ಕುಳಿತಾಗ, ಎದುರು ಸಾಲಿನ ನಿಮ್ಮ ಬಂಧುವೊಬ್ಬರು ಜಿಲೇಬಿ ಬೇಡ ಎಂದಾಗ ನೀವು – ‘ಹೋಯ್’ ಎಂದರೆ ಸಾಕು, ಅವರ ಉತ್ತರ ರೆಡಿ. ‘ಎರಡು ವರ್ಷ ಆಯಿತು’ ಎನ್ನುತ್ತಾರೆ. ಸುತ್ತಲಿದ್ದವರಿಗೆಲ್ಲ ಅದು ಅರ್ಥ ಆಗುತ್ತದೆ. ಎಷ್ಟು ಸಮಯದಿಂದ ಡಯಾಬಿಟೀಸ್ ಎಂತ ನೀವು ಬರೇ – ‘ಹೋಯ್’ ನಿಂದ ಕೇಳಿದಿರಿ – ಅದಕ್ಕೆ ಆತ ತಕ್ಷಣ ಉತ್ತರಿಸಿದ ಎಂತ. ಕೆಲವು ಸಲ ಮುಜುಗರದ ಸನ್ನಿವೇಶದಲ್ಲೂ ಹೆಚ್ಚು ಪದ ಪ್ರಯೋಗಗಳಿಲ್ಲದೆ ವಿಷಯ ತಿಳಕೊಳ್ಳಲು ಸಹಾಯಕ, ಇದೇ – ‘ಹೋಯ್’. ನಿಮ್ಮೊಂದಿಗೆ ನಿಮ್ಮ ಹೆಂಡತಿಯ ಬದಲು ಬೇರೆ ಯಾರಾದರೂ ಮಹಿಳೆ ಇದ್ದಾಗ ನಿಮ್ಮ ಪರಿಚಿತರು ಸುತ್ತು ಬಳಸಿ ಕೇಳುವುದಿಲ್ಲ. – ‘ಹೋಯ್’ ಎನ್ನುತ್ತಾನೆ. ಪಕ್ಕದಲ್ಲಿರುವವರು ಯಾರು? ಎಂತ. ‘ನಮ್ಮ ಅಣ್ಣನ ಹೆಂಡತಿಯ ಅಕ್ಕ’. ಎಂದು ತಕ್ಷಣ ಉತ್ತರ ಬರುತ್ತದೆ.


ಗುಂಪಿನಲ್ಲಿ ನೀವು ಕಾಣೆಯಾದಾಗ, ನಿಮ್ಮ ಮಿತ್ರ ನಿಮ್ಮನ್ನು ಹುಡುಕುವ ಸಾಧನವೂ ಇದೇ. ಆತ ಗಟ್ಟಿಯಾಗಿ – ‘ಹೋಯ್’ ಎಂದು ಕೂಗಿದರೆ ಸಾಕು, ನೀವೂ ಕೂಡಾ – ‘ಹೋಯ್’ ಎನ್ನುತ್ತೀರಿ. ಪುನರ್ಮಿಲನ ಆಗುತ್ತದೆ.
ಯಾರಿಗಾದರೂ ಸಿಟ್ಟು ಪರಾಕಾಷ್ಠೆಗೇರಿ ಬಾಯಿಗೆ ಬಂದಂತೆ ಮಾತಾಡ ತೊಡಗಿದಾಗ ಅವರ ಬಂಧುವೋ, ಹಿತಚಿಂತಕರೋ ಬಂದು, – ‘ಹೋಯ್’ ಎಂದು ಭುಜ ತಟ್ಟಿದರೆ ಸಾಕು – ‘ಇದು ಸರಿಯಲ್ಲ’ ಎಂದು ಹೇಳಿಂದತೆ ಭಾಸವಾಗಿ ಆತ ಸಿಟ್ಟು ಬಿಟ್ಟು ‘ಸಾರಿ’ ಎಂದು ಮಾಮೂಲು ಸ್ಥಿತಿಗೆ ಮರಳಲು ಇದು ಸಹಾಯಕ.

ಯಾರಾದರೂ ಬಾಳೆಹಣ್ಣು ಸಿಪ್ಪೆ ತುಳಿದು ಜಾರಿ ಬೀಳುವುದನ್ನು ತಪ್ಪಿಸುವುದೂ ಸಕಾಲಿಕವಾಗಿ ಒದರುವ ನಿಮ್ಮ – ‘ಹೋಯ್’ ಎಂಬ ಎಚ್ಚರಿಕೆ.
ಕುಂದಗನ್ನಡದಲ್ಲಿ ಅತೀ ಹೆಚ್ಚು ಬಳಕೆಯಾಗುವ ಈ – ‘ಹೋಯ್’ ಶಬ್ದ ಬಹುಮುಖಿಯಾದದ್ದು, ಬಹೂಪಯೋಗಿಯಾದದ್ದು, ಬಹು ಬಲಶಾಲಿಯಾದದ್ದು ಕೂಡಾ. ಕುಂದಗನ್ನಡದ ಹಿರಿಮೆ – ಗರಿಮೆ ಹೆಚ್ಚಿಸಲು ಈ – ‘ಹೋಯ್’ ಸಹಾಯಕ.
ಒಳ್ಳೇ ಕೆಲಸ ಮಾಡಿದ ಒಬ್ಬರನ್ನು ಅಭಿನಂದಿಸಲು ಸಹಾ ಈ – ‘ಹೋಯ್’ ಸಾಕು. ಗಂಡಾಂತರದಿಂದ ಬಚಾವ್ ಆಗಿ ಬಂದವರನ್ನು ಹರ್ಷದಿಂದ ಸ್ವಾಗತಿಸುವುದೂ ಈ – ‘ಹೋಯ್’. ಇದೆಲ್ಲ ಉಚ್ಚರಿಸುವ ಧಾಟಿ, ಧ್ವನಿ, ಹೇಳುವಾಗಿನ ಸಂದರ್ಭ, ಜನ, ವಾತಾವರಣ ಇವುಗಳನ್ನು ಹೊಂದಿಕೊಂಡು ಅರ್ಥಗರ್ಭಿತವಾಗುತ್ತಾ ಹೋಗುತ್ತದೆ.


ಯಾರಾದರೂ ಇನ್ನೊಬ್ಬರಿಗೆ ಕೈ ಕೊಟ್ಟರೆ ಆತ ಸಿಕ್ಕಿದಾಗ ಹೇಳುವ – ‘ಹೋಯ್!’ (ಕೈ ಕೊಟ್ಟು ಬಿಟ್ಟರಲ್ಲ!) ಕೈ ಕೊಟ್ಟವನಿಂದ ತಕ್ಷಣ ಸಮಾಧಾನ ನೀಡುವ ಉತ್ತರ ತರಿಸುತ್ತದೆ. ಬರುವ ಸಮಯಕ್ಕೆ ಬಾರದ, ತಡವಾಗಿ ಬಂದ ಅತಿಥಿಗೆ ಅತಿಥೇಯ ಏನೂ ಹೇಳದೆ – ‘ಹೋಯ್’ ಎಂದರೆ ಸಾಕು, ಆತ ವಿಳಂಬಕ್ಕೆ ಕಾರಣ ಹೇಳಿ, ಕ್ಷಮಾಪಣೆಯ ವಾಕ್ಯ ಉದುರಿಸುತ್ತಾನೆ. ಅತಿಥಿಗಳು ಸರಿಯಾಗಿ ಊಟ ಮಾಡದೇ ಇದ್ದಾಗ ಮನೆಯವರು – ‘ಹೋಯ್’ ಎಂದರೆ ಸಾಕು, ‘ಈಗಷ್ಟೇ ಹೋಟೇಲ್‌ನಲ್ಲಿ ತಿಂಡಿ, ಕಾಫಿ ಆಗಿತ್ತು. ಬೇಜಾರು ಮಾಡಬೇಡಿ’ ಎಂದು ಉತ್ತರ ಬರುತ್ತದೆ.


ನಿಮ್ಮ ಮಗಳ ಮದುವೆಗೆ ಬರುತ್ತೇನೆಂದು ಹೇಳಿಯೂ ಬಾರದ ಸ್ನೇಹಿತ ಆನಂತರ ದಾರಿಯಲ್ಲಿ ಸಿಕ್ಕಿದಾಗ ನೀವು ಕೇಳುವ – ‘ಹೋಯ್’ ಶಬ್ದ ಹೀಗೂ ಮಾಡಬಹುದಾ – ಏನಾಯಿತು? ಎಂಬ ಅರ್ಥದಲ್ಲಿದ್ದು ತಕ್ಷಣ ಆತ ಗ್ರಹಿಸಿಕೊಂಡು ಮನೆಯಲ್ಲಿ ಮಗುವಿಗೆ ಹುಷಾರಿರಲಿಲ್ಲ ಮಾರಾಯ, ಆಸ್ಪತ್ರೆಗೆ ಸೇರಿಸಬೇಕಾಯ್ತು ಎನ್ನುತ್ತಾನೆ. ಎದುರು ಬದುರಾಗದೆ, ಬರೇ ದೂರವಾಣಿ ಸಂಭಾಷಣೆಯಲ್ಲೂ ಈ – ‘ಹೋಯ್’ ಬಳಕೆ ಅಷ್ಟೇ ಪರಿಣಾಮಕಾರಿಯಾಗಿರುತ್ತದೆ. ಅಸೌಖ್ಯದಲ್ಲಿರುವ ನಿಮ್ಮ ಗೆಳೆಯ ಫೋನ್ ಎತ್ತಿಕೊಂಡು ಹಲೋ ಎಂದಾಕ್ಷಣ ನೀವು – ‘ಹೋಯ್’ ಎಂದರೆ ಸಾಕು, ಈಗ ಚಿಂತಿಲ್ಲ. ಹುಷಾರಾಗಿದ್ದೇನೆ, ವೈರಲ್ ಜ್ವರ ಬಂದಿತ್ತು. ಗಾಬರಿ ಬೇಡ ಎನ್ನುತ್ತಾನೆ.
ಅಪಘಾತವೊಂದರಲ್ಲಿ ಪಾರಾದ ಸ್ನೇಹಿತ ಎದುರಿಗೆ ಸಿಕ್ಕಾಗ ನೀವು – ‘ಹೋಯ್’ ಎಂದರೆ ಸಾಕು, ಏನಾಯ್ತು ಎಂಬರ್ಥ ಗ್ರಹಿಸಿ ಆತನೇ ಏನಿಲ್ಲ ಒಂದು ಸಣ್ಣ ಎಕ್ಸಿಡೆಂಟು – ಪುಣ್ಯಕ್ಕೆ ಬಚಾವಾದೆ ಎಂದು ಸಮಜಾಯಿಷಿ ಕೊಡುತ್ತಾನೆ.


ಯಕ್ಷಗಾನ ತಾಳ ಮದ್ದಳೆಯಲ್ಲಿ ನೀವು ಪಾತ್ರಧಾರಿಯಾಗಿ, ಸವಾಲಿಗೆ ಸೂಕ್ತ ಜವಾಬು ನೀಡಿ ಜಯಶಾಲಿಯಾದಾಗ, ನಂತರ ಸಿಕ್ಕ ಗೆಳೆಯ – ‘ಹೋಯ್’ ಎಂದರೆ ಅಡ್ಡಿಲ್ಲ – ಒಳ್ಳೆ ಮಾತಾಡಿದ್ದೀಯಾ ಎಂಬ ಅಭಿನಂದನೆ – ಮೆಚ್ಚುಗೆ ವ್ಯಕ್ತಪಡಿಸುತ್ತದೆ. ಒಳ್ಳೇ ಭಾಷಣ ಮುಗಿಸಿ ಬಂದಾಗ ಸ್ನೇಹಿತನ – ‘ಹೋಯ್’ ಭಾಷಣ ಚೆನ್ನಾಗಿತ್ತು ಎಂಬರ್ಥದಲ್ಲಿರುತ್ತದೆ. ಯಾರಾದರೂ ಮೃತಪಟ್ಟಾಗಲೂ ನೋಡ ಬಂದ ವ್ಯಕ್ತಿ ಮನೆಯವರ ಹತ್ತಿರ – ‘ಹೋಯ್’ ಎಂದರೆ ಅರ್ಥ ಆಗುತ್ತದೆ. ಛೇ ಹೀಗಾಗಬಾರದಿತ್ತು ಎಂಬರ್ಥ.

ಹೀಗೆ ಕುಂದಗನ್ನಡದ – ‘ಹೋಯ್’ ಸರ್ವಾಂತರ್ಯಾಮಿಯಾದ ಒಂದು ಸಶಕ್ತ ಶಬ್ದವಾಗಿ ಬಳಕೆಯಲ್ಲಿದೆ.
ಮರೆಯಬಾರದ ಮಾತು :- ವಿದೇಶದಿಂದ ನನ್ನ ಮಗಳು ಫೋನ್‌ನಲ್ಲಿ ಮಾತಾಡಿ ಅಪ್ಪಯ್ಯ ನಿಮ್ಮ – ‘ಹೋಯ್’ ಎಲ್ಲಿ? ಎಂದಾಗ, ನನ್ನಾಕೆಯನ್ನು ಕರೆದರೆ, – ‘ಹೋಯ್’ ಬಂದೆ ಎನ್ನುತ್ತಾಳೆ. ಕಾರಣ, ಹೆಚ್ಚಿನೆಲ್ಲ ಹೆಂಡತಿಯಂದಿರು ತಂತಮ್ಮ ಗಂಡಂದಿರನ್ನು ಕರೆಯುವುದೇ ಹೀಗೆ – ‘ಹೋಯ್’.

ಲಲಿತ ಪ್ರಬಂಧ -ಎ.ಎಸ್.ಎನ್.ಹೆಬ್ಬಾರ್

Leave a Reply

Your email address will not be published. Required fields are marked *