ಮಕ್ಕಳ ಪ್ರತಿಭೆ ಅನಾವರಣಕ್ಕೆ ಶಿಕ್ಷಕರ ಪ್ರೋತ್ಸಾಹ ಅತೀ ಮುಖ್ಯ

ಉದ್ಯಾವರ: ಮಕ್ಕಳ ಕಲಿಕಾ ಪ್ರತಿಭೆ ಅಥವಾ ಇನ್ನಿತರ ಪ್ರತಿಭೆಗಳಾಗಲಿ ಅವು ಅನಾವರಣಗೊಳಿಸಿ ಹೊರ ಜಗತ್ತಿಗೆ ಗೊತ್ತಾಗುವಂತೆ ಮಾಡುವುದು ತಮ್ಮ ಶಾಲೆಯ ಶಿಕ್ಷಕರಿಂದ ಮಾತ್ರ ಸಾಧ್ಯ. ಒಬ್ಬ ವಿದ್ಯಾರ್ಥಿಯ ಪ್ರತಿಭೆಯನ್ನು ಗುರುತಿಸುವಲ್ಲಿ ಶಿಕ್ಷಕರು ಮಹತ್ತರವಾದ ಪಾತ್ರವನ್ನು ವಹಿಸುತ್ತಾರೆ. ಮತ್ತೆ ಅದನ್ನು ಬೆಳೆಸಿ ಹೊರ ಜಗತ್ತಿಗೆ ಅನಾವರಣ ಮಾಡುತ್ತಾರೆ. ಇಂತಹ ಶಿಕ್ಷಕರು ಸಿಕ್ಕಿದ ವಿದ್ಯಾರ್ಥಿಗಳು ಧನ್ಯರು. ನನ್ನ ಬದುಕಲ್ಲಿ ಇಂದು ಸಂಗೀತ ಕ್ಷೇತ್ರದಲ್ಲಿ ಕಿಂಚಿತ್ತು ಸಾಧನೆಯನ್ನು ಮಾಡಿದ್ದೇನಾದರೆ ಅದಕ್ಕೆ ಒಂದು ಕಾರಣ ನನ್ನ ಪ್ರಾಥಮಿಕ ಶಾಲೆಯ ಶಿಕ್ಷಕಿ ಗೀತಾ ಟೀಚರ್‌ರವರು. ನಾನು ಹಾಡುವುದನ್ನು ಕೇಳಿ ಖುಶಿಪಟ್ಟು ಹಾಡುವಂತೆ ಒತ್ತಾಯಿಸಿ ನನ್ನನ್ನು ಮನೆಗೆ ಕರಕೊಂಡು ಹೋಗಿ ನನ್ನ ಹಾಡನ್ನು ಟೇಪ್ ರೆಕಾರ್ಡ್ ಮೂಲಕ ಪ್ರಥಮವಾಗಿ ಧ್ವನಿ ಮುದ್ರಿಸಿಕೊಂಡವರು ಇವರು. ಹಾಗಾಗಿ ಇವತ್ತು ನನ್ನ ಸಾಧನೆಯ ಹಿಂದೆ ಇರುವವರಲ್ಲಿ ಇವರು ಪ್ರಮುಖರು ಎಂದು ಕಲರ್‍ಸ್ ಸೂಪರ್ ಸಂಗೀತ ರಿಯಾಲಿಟಿ ಶೋ ಕನ್ನಡ ಕೋಗಿಲೆ ಸೀಸನ್ ಒಂದರ ಫೈನಲಿಸ್ಟ್ ಶ್ರೀ ಗಣೇಶ್ ಕಾರಂತ್, ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ಗೀತಾ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ನುಡಿದರು.

ಮತ್ತೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಶ್ರೀಮತಿ ಉಮಾ ಮಾತನಾಡುತ್ತಾ ಶಿಕ್ಷಕರಿಗೆ ನಿವೃತ್ತಿಯ ಸಮಾರಂಭದಲ್ಲಿ ಭಾಗವಹಿಸಲು ಅವಕಾಶ ಸಿಗುವುದೇ ಒಂದು ಪುಣ್ಯ. ತನ್ನ ಸೇವೆಯನ್ನು ಪರಿಗಣಿಸಿ ಈ ಮಕ್ಕಳು ಮಾತನಾಡುವಾಗ ಯಾರಿಗಾದರೂ ಖುಶಿಯಾಗದೇ ಇರಲು ಸಾಧ್ಯವಿಲ್ಲ. ಇಂತಹ ಒಂದು ಭಾಗ್ಯ ಇಂದು ನಿವೃತ್ತಿ ಹೊಂದುತ್ತಿರುವ ಗೀತಾ ಟೀಚರ್‌ಗೆ ದೊರಕಿದೆ ಅವರು ಧನ್ಯರು. ಓರ್ವ ಶಿಕ್ಷಕಿ ಮಕ್ಕಳಿಂದ ಹೊಗಳಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ಆಕೆ ಕೇವಲ ಪಾಠ ಪ್ರವಚನಗಳನ್ನು ಉತ್ತಮವಾಗಿ ಮಾಡಿದರೆ ಸಾಲದು. ಮಕ್ಕಳನ್ನು ತನ್ನ ಮಕ್ಕಳಂತೆ ಪ್ರೀತಿಸಬೇಕು. ಹಾಗಾದಾಗ ಮಾತ್ರ ಮಕ್ಕಳು ಅಂತಹ ಶಿಕ್ಷಕರನ್ನು ನೆನಪಿಟ್ಟುಕೊಳ್ಳುತ್ತಾರೆ. ಗೀತಾ ಟೀಚರ್ ಅಂತಹ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದಾರೆ ಎಂದರು.

ಸನ್ಮಾನವನ್ನು ಸ್ವೀಕರಿಸಿದ ನಿವೃತ್ತ ಶಿಕ್ಷಕಿ ಶ್ರೀಮತಿ ಗೀತಾರವರು ಮಾತನಾಡಿ ನಾನು ಮಾಡಿದ ಕೆಲಸಕ್ಕಿಂತ ಹೆಚ್ಚಿನದ್ದು ಈ ಶಿಕ್ಷಕ ವೃತ್ತಿ ನನಗೆ ಕೊಟ್ಟಿದೆ. ನಾನು ಧನ್ಯಳು ಎಂದು ಭಾವುಕರಾಗಿ ನುಡಿದ ಅವರು ತನಗೆ ಸಹಕರಿಸಿದ ಎಲ್ಲರಿಗೂ ಅಭಾರವನ್ನು ಸಲ್ಲಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಡಾ| ಯು.ಎನ್. ಮಯ್ಯ ವಹಿಸಿ ಶುಭ ಹಾರೈಸಿದರು. ನಿವೃತ್ತ ಶಿಕ್ಷಕಿ ಶ್ರೀಮತಿ ಗೀತಾರವರಿಗೆ ಚಿನ್ನದ ಉಂಗುರ, ಸ್ಮರಣಿಕೆ, ಸೀರೆ, ಹೂಮುಡಿಸಿ ಅವರ ಪತಿ ಪ್ರೇಮನಾಥ ಜಿ. ಅವರಿಗೆ ಉಡುಗೊರೆ ಕೊಟ್ಟು ಆರತಿ ಬೆಳಗಿ ಸನ್ಮಾನಿಸಲಾಯಿತು.

ಶ್ರೀಮತಿ ಗೀತಾರವರ ಹಿರಿಯ ಶಿಷ್ಯ ಗಣೇಶ್ ಕಾರಂತ್ ಮತ್ತು ನಮ್ಮ ಶಾಲಾ ವಿದ್ಯಾರ್ಥಿ ಕಿರಿಯ ಶಿಷ್ಯ ಶ್ರೀ ಲಿಖಿತ್ ಉಮೇಶ್ ಇಬ್ಬರೂ ಕೂಡಾ ಕಲರ್‍ಸ್ ಸೂಪರ್‍ಸ್ ವಾಹಿನಿಯ ಸಂಗೀತ ರಿಯಾಲಿಟ ಶೋ ಕನ್ನಡ ಕೋಗಿಲೆಯ ಪ್ರತಿಭೆಗಳು. ಅವರು ತಮ್ಮ ಗುರುವಿನ ಬೀಳ್ಕೊಡುಗೆ ಸಮಾರಂಭದಲ್ಲಿ ಹಾಡು ಹೇಳಿ ಮಕ್ಕಳನ್ನು ರಂಜಿಸಿದರು.

ಪ್ರಾರಂಭದಲ್ಲಿ ಮುಖ್ಯ ಶಿಕ್ಷಕರಾದ ಶ್ರೀ ಗಣಪತಿ ಕಾರಂತ್ ಸ್ವಾಗತಿಸಿದರು. ಶಾಲಾ ಸಂಚಾಲಕರಾದ ಶ್ರೀ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಶ್ರೀಮತಿ ರಾಜೀವಿ ವಿದ್ಯಾರ್ಥಿಗಳಾದ ಸಮರ್ಥ್ ಸಿ.ಎಸ್, ಲವೀಶ್ ಪಿ., ದೀಕ್ಷಾ, ಪ್ರಜ್ವಲ್, ಸಾನ್ವಿ ಶೆಟ್ಟಿ, ದಕ್ಷರಾಜ್ ಶೆಟ್ಟಿ, ಶ್ರೀಕಂದ ನಿವೃತ್ತರಿಗೆ ಶುಭ ಹಾರೈಸಿದರು. ಹಿರಿಯ ಸಹ ಶಿಕ್ಷಕಿ ಶ್ರೀಮತಿ ಹೇಮಲತಾ ವಂದಿಸಿದರು. ಸಹ ಶಿಕ್ಷಕಿ ಶ್ರೀಮತಿ ರತ್ನಾವತಿ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

error: Content is protected !!