ರಕ್ತದಾನಕ್ಕಿಂತ ಮಿಗಿಲಾದ ಸಾಮಾಜಿಕ ಸೇವೆ ಯಾವುದೂ ಇಲ್ಲ – ಸರಸು ಡಿ. ಬಂಗೇರ

ಉದ್ಯಾವರ: ಮನುಷ್ಯ ಜಾತಿಯಲ್ಲಿ ಹುಟ್ಟಿದ ನಾವೆಲ್ಲರೂ ಹತ್ತು ಹಲವು ಸಾಮಾಜ ಸೇವೆಯನ್ನು ಮಾಡಿರಬಹುದು. ಆದರೆ ರಕ್ತದಾನಕ್ಕಿಂತ ಮಿಗಿಲಾದ ಸಮಾಜ ಸೇವೆ ಬೇರೆ ಯಾವುದೂ ಇಲ್ಲ ಎಂದು ನನ್ನ ಅನಿಸಿಕೆ. ಏಕೆಂದರೆ ಬೇರೆ ಯಾವುದೇ ಸಮಾಜ ಸೇವೆಗಳಿಗೆ ಪರ್ಯಾಯವಿದೆ ಆದರೆ ರಕ್ತಕ್ಕೆ ರಕ್ತವೇ ಪರ್ಯಾಯ ಬೇರೊಂದು ಇಲ್ಲ. ನಮ್ಮ ವಿಜ್ಞಾನ ಎಷ್ಟು ಮುಂದುವರಿದರೂ ಕೃತಕ ರಕ್ತವನ್ನು ತಯಾರಿಸಲು ಸಾಧ್ಯವಿಲ್ಲ. ಹಾಗಾಗಿ ಇದೊಂದು ಸುತ್ಯಾರ್ಹ ಕಾರ್ಯಕ್ರಮ ಎಂದು, ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲಿನ ಆಶ್ರಯದಲ್ಲಿ ಜರಗಿದ ಏಳನೇ ವರ್ಷದ ಮಂಜುನಾಥ ಉದ್ಯಾವರ ಸಂಸ್ಮರಣೆ ಅಂಗವಾಗಿ ಉಡುಪಿ ಜಿಲ್ಲಾ ಆಸ್ಪತ್ರೆಯ ಸಹಯೋಗದಲ್ಲಿ ಉದ್ಯಾವರ ಹಿಂದೂ ಶಾಲೆಯಲ್ಲಿ ಜರಗಿದ ರಕ್ತದಾನ ಶಿಬಿರ ಉದ್ಘಾಟಿಸಿ ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಸರಸು ಡಿ. ಬಂಗೇರ ಅವರು ಹೇಳಿದರು.

ಅವರು ಮುಂದುವರಿಯುತ್ತಾ ಮಂಜುನಾಥ ಉದ್ಯಾವರ್‌ರವರ ಬದುಕಲ್ಲಿ ಅವರು ದೀನ ದಲಿತರ ನೋವಿಗೆ ಧ್ವನಿಯಾದವರು. ಅವರ ನೆನಪಲ್ಲಿ ಈ ಕಾರ್ಯಕ್ರಮ ಆಯೋಜಿಸುತ್ತಿರುವುದು ನಿಜವಾಗಿಯೂ ಅವರಿಗೆ ಕೊಡುವ ನಿಜವಾದ ಶ್ರದ್ಧಾಂಜಲಿ ಎಂದರು.

ಅಧ್ಯಕ್ಷತೆ ವಹಿಸಿದ ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯರಾದ ಶ್ರೀ ಮಹಾಬಲ ಕುಂದರ್‌ರವರು ಮಾತನಾಡಿ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಗೆಳೆತನಕ್ಕೊಂದು ಹೊಸ ಬಾಷ್ಯವನ್ನೇ ಬರೆಯುತ್ತಿದೆ. ಅಗಲಿದ ತಮ್ಮ ನಾಯಕ ಮಂಜುನಾಥ ಉದ್ಯಾವರ್ ನೆನಪಲ್ಲಿ ರಕ್ತದಾನ ಶಿಬಿರ, ವೈದ್ಯಕೀಯ ನೆರವು, ಸಂಸ್ಮರಣಾ ಕಾರ್ಯಕ್ರಮ ನಿರಂತರವಾಗಿ ಹಮ್ಮಿಕೊಂಡು ಬರುತ್ತಿರುವುದು ಅವರ ಪ್ರೀತಿಯನ್ನು ತೋರಿಸುತ್ತದೆ. ಆ ಮೂಲಕ ಮಂಜುನಾಥ ಉದ್ಯಾವರರವರ ಸಾಮಾಜಿಕ ಸೇವೆಯನ್ನು ಮುಂದುವರಿಸುತ್ತಿದೆ. ಜನಸಾಮಾನ್ಯರ ಮಧ್ಯ ಬದುಕಿದ ಮಂಜು ಅವರು ತೋರಿಸಿದ ನಡೆಯಲ್ಲಿ ನಡೆಯುವುದೇ ನಾವು ಅವರಿಗೆ ಕೊಡಬಹುದಾದ ಉನ್ನತ ಗೌರವ ಎಂದರು.

ಉಡುಪಿ ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿಯ ವೈದ್ಯರಾದ ಡಾ| ವೀಣಾ ಕುಮಾರಿ ಅವರು ರಕ್ತದಾನದ ಮಹತ್ವವನ್ನು ವಿವರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಗಣಪತಿ ಕಾರಂತ್, ಉದ್ಯಾವರ ಬಿಲ್ಲವ ಸಂಘ(ರಿ) ಅಧ್ಯಕ್ಷರಾದ ಶ್ರೀ ಪ್ರತಾಪ್ ಕುಮಾರ್ ಸಂದರ್ಭೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಗಂಧಿ ಶೇಖರ್ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಅಧ್ಯಕ್ಷರಾದ ಶ್ರೀ ತಿಲಕ್‌ರಾಜ್ ಸಾಲ್ಯಾನ್ ಅತಿಥಿಗಳನ್ನು ಸ್ವಾಗತಿಸಿದರು. ನಿರ್ದೇಶಕರಾದ ಶ್ರೀ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಶ್ರೀ ಗಿರೀಶ್ ಗುಡ್ಡೆಯಂಗಡಿ ಧನ್ಯವಾದವಾದವಿತ್ತರು. ಮಾಜಿ ಅಧ್ಯಕ್ಷ ಶ್ರೀ ಆಬಿದ್ ಆಲಿ ಕಾರ್ಯಕ್ರಮ ನಿರ್ವಹಿಸಿದರು.

ಈ ಶಿಬಿರದಲ್ಲಿ 86 ಯುನಿಟ್ ರಕ್ತ ಸಂಗ್ರಹವಾಯಿತು.

Leave a Reply

Your email address will not be published. Required fields are marked *

error: Content is protected !!