ವಿಆರ್ಎಲ್ ಕಂಪನಿಗೆ ಹೋಲುವಂತೆ ನಕಲಿ ವೆಬ್ಸೈಟ್ ಸೃಷ್ಟಿಸಿ, ಗ್ರಾಹಕರಿಗೆ ವಂಚನೆ ಆರೋಪಿ ಸೆರೆ
ಬೆಂಗಳೂರು: ವಿಆರ್ಎಲ್ ಕಂಪನಿಗೆ ಹೋಲುವಂತೆ ನಕಲಿ ವೆಬ್ಸೈಟ್ ಸೃಷ್ಟಿಸಿ, ಗ್ರಾಹಕರಿಗೆ ವಂಚನೆ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ದೀಪಕ್ ಕೌಶಿಕ್ ಎಂಬಾತನ ವಿರುದ್ಧ ಕೊಡಿಗೇಹಳ್ಳಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಆರೋಪಿ ದೀಪಕ್ ಕೌಶಿಕ್ ಹೈದರಾಬಾದ್ನಲ್ಲಿರುವ ಮಾಹಿತಿ ಸಿಕ್ಕಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಟ್ರಾನ್ಸ್ಪೋರ್ಟೇಷನ್ ಮಾಡುವುದಾಗಿ ಬೆಂಗಳೂರಿನ ಬೃಂದಾ ಕೆ.ವರ್ಮಾ ಅವರಿಂದ 10500 ರೂ. ಪಾವತಿಸಿಕೊಂಡು ದೀಪಕ್ ಕೌಶಿಕ್ ವಂಚಿಸಿದ್ದಾನೆ. ಹೈದರಾಬಾದ್ ಟ್ರಾನ್ಸ್ಪೋರ್ಟೇಷನ್ ಸಂಸ್ಥೆಗೆ ಸೇರಿದ ಪೀಣ್ಯ ಗೋದಾಮಿನಲ್ಲಿದ್ದ ಕಾರನ್ನು ಪತ್ತೆಹಚ್ಚಿರುವ ಪೊಲೀಸರು, ಬೃಂದಾ ಅವರ ವಶಕ್ಕೆ ಒಪ್ಪಿಸಿದ್ದು, ತನಿಖೆ ಮುಂದುವರಿಸಿದ್ದಾರೆ.
ಟಾಟಾನಗರದ ಬೃಂದಾ ಕೆ. ವರ್ಮಾ ಎಂಬುವರು ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿರುವ ಮಾರುತಿ 800 ಕಾರನ್ನು ಟ್ರಾನ್ಸ್ಪೋರ್ಟೇಷನ್ ಸರ್ವೀಸ್ ಕಂಪನಿ ಮೂಲಕ ಬೆಂಗಳೂರಿಗೆ ತರಿಸಿಕೊಳ್ಳಲು ಗೂಗಲ್ ಸರ್ಚ್ ಮಾಡಿದ್ದರು. ಆಗ ನಕಲಿ ವೆಬ್ಸೈಟ್ www.vrlcarcarrier.com ಲಭ್ಯವಾಗಿದ್ದು, ಅದರಲ್ಲೇ ಬುಕ್ ಮಾಡಿದ್ದಾರೆ. ಜ.15ಕ್ಕೆ ಆರೋಪಿ ದೀಪಕ್ ಕೌಶಿಕ್, ಬೃಂದಾ ಅವರಿಗೆ ಕರೆ ಮಾಡಿ ಬೆಂಗಳೂರು ವಿಆರ್ಎಲ್ ಕಚೇರಿಯಿಂದ ಮಾತನಾಡುತ್ತಿದ್ದೇನೆ ಎಂದು ಪರಿಚಯಿಸಿಕೊಂಡಿದ್ದ. ನಿಮ್ಮ ಕಾರನ್ನು ಬೆಂಗಳೂರಿಗೆ ತರಲು 10,500 ರೂ. ಶುಲ್ಕ ಆಗುತ್ತೆ ಎಂದು ಕೊಟೇಷನ್ ಕಳುಹಿಸಿದ್ದ. ಬುಕ್ಕಿಂಗ್ ಶುಲ್ಕವಾಗಿ ಮೊದಲಿಗೆ 2 ಸಾವಿರ ರೂ. ಆನ್ಲೈನ್ನಲ್ಲಿ ಪಾವತಿಸುವಂತೆ ತಿಳಿಸಿದ್ದ.
ಆರೋಪಿಯ ಮಾತು ನಂಬಿದ ಬೃಂದಾ, ಆತನ ಬ್ಯಾಂಕ್ ಖಾತೆಗೆ 2 ಸಾವಿರ ರೂ. ಹಾಕಿದ್ದರು. ಮರುದಿನ ಪ್ರವಿಣ್ ಎಂಬಾತ ರಾಜಮಂಡ್ರಿಯಲ್ಲಿದ್ದ ಕಾರು, ಬಟ್ಟೆ, ಖಾದ್ಯವಿದ್ದ 3 ಬ್ಯಾಗ್ಗಳನ್ನು ತೆಗೆದುಕೊಂಡು ಹೋಗಿದ್ದ. 1 ಗಂಟೆ ಬಳಿಕ ಕರೆ ಮಾಡಿದ ದೀಪಕ್ ಕೌಶಿಕ್, ಉಳಿದ 8500 ಹಣ ಕೊಡುವಂತೆ ಒತ್ತಾಯಿಸಿದ್ದ. ಕೊನೆಗೆ ಬೃಂದಾ ಅವರು ಜ.16ರಂದು ಆರೋಪಿ ಖಾತೆಗೆ 8500 ರೂ. ವರ್ಗಾಯಿಸಿದ್ದರು. ನಂತರ ಅನುಮಾನ ಬಂದು ವಿಆರ್ಎಲ್ ಲಾಜಿಸ್ಟಿಕ್ ಲಿಮಿಟೆಡ್ ಕಚೇರಿಗೆ ಕರೆ ಮಾಡಿ ದೀಪಕ್ ಕೌಶಿಕ್ ಬಗ್ಗೆ ವಿಚಾರಿಸಿದಾಗ ಆ ಹೆಸರಿನ ವ್ಯಕ್ತಿ ಇಲ್ಲ ಎಂದು ಗೊತ್ತಾಗಿದೆ.
ಬೃಂದಾ ಅವರು ಪುನಃ ಕೌಶಿಕ್ಗೆ ಕರೆ ಮಾಡಿದಾಗ ಕಾರು ಚೆನ್ನೈನಲ್ಲಿ ಇದೆ. ಬೆಂಗಳೂರಿಗೆ ತರಲು ಜಿಎಸ್ಟಿ ಮತ್ತು ವಿಮಾ ಹಣ ಕಟ್ಟಬೇಕಿದ್ದು, 10,185 ರೂ. ಹೆಚ್ಚುವರಿಯಾಗಿ ಪಾವತಿಸುವಂತೆ ಇನ್ವಾಯ್ಸ್ ಕಳುಹಿಸಿದ್ದ. ಕಾರು ಶಿಫ್ಟ್ ಮಾಡುತ್ತಿರುವ ವ್ಯಕ್ತಿಯ ಬಗ್ಗೆ ಕೇಳಿದಾಗ ಸೋನು ಪೋನಿಯಾ ಎಂಬಾತನ ಹೆಸರೇಳಿ ಆತನ ಮೊಬೈಲ್ ನಂಬರ್ ಕೊಟ್ಟಿದ್ದ. ಆ ನಂಬರ್ಗೆ ಕರೆ ಮಾಡಿದಾಗ ಜ.17ರಂದು ಕಾರು ಡೆಲಿವರಿ ಮಾಡಲಾಗುವುದು. ದೀಪಕ್ ಕೌಶಿಕ್ಗೆ ಹೆಚ್ಚುವರಿ ಹಣ ಕೊಡಬೇಡಿ ಎಂದು ಹೇಳಿದ್ದ.
ಜ.18ರಂದು ಬೃಂದಾ ಅವರಿಗೆ ಕರೆ ಮಾಡಿದ್ದ ಸೋನು ಪೋನಿಯಾ, ನೆಲಮಂಗಲ ಟಿಸಿಐ ಪೆಟ್ರೋಲ್ ಪಂಪ್ ಸಮೀಪದ ವೇರ್ಹೌಸ್ನಲ್ಲಿ ಕಾರು ಇರಿಸಲಾಗಿದೆ. ದೀಪಕ್ ಕೌಶಿಕ್ ನಮಗೆ ಟ್ರಾನ್ಸ್ಪೋರ್ಟೇಷನ್ ಹಣ ಕೊಟ್ಟಿಲ್ಲ. ಆದ್ದರಿಂದ ನೀವು ಹಣ ಕೊಟ್ಟರೆ ಕಾರು ಡೆಲಿವರಿ ಮಾಡುವುದಾಗಿ ಹೇಳಿದ್ದ. ಹೀಗಾಗಿ ಬೃಂದಾ ಅವರು ನೆಲಮಂಗಲಕ್ಕೆ ಹೋಗಿ ವೇರ್ಹೌಸ್ ಹುಡುಕಾಡಿದರೂ ಪತ್ತೆಯಾಗಿಲ್ಲ. ಆರೋಪಿಗಳ ಮೊಬೈಲ್ಗೆ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಬಂದಿದೆ. ಕೊನೆಗೆ ವಿಆರ್ಎಲ್ ಕಂಪನಿ ಹೆಸರಲ್ಲಿ ನಕಲಿ ವೆಬ್ಸೈಟ್ ಸೃಷ್ಟಿಸಿ, ವಂಚನೆ ಮಾಡಿರುವುದು ಗೊತ್ತಾಗಿ ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.
ಇನ್ನೊಂದು ಸಂಸ್ಥೆಗೆ ಅರ್ಡರ್ ಕೊಟ್ಟಿದ್ದ: ಕಾರು ಟ್ರಾನ್ಸ್ಪೋರ್ಟೇಷನ್ ಮಾಡುವುದಾಗಿ ಬೃಂದಾ ಅವರಿಂದ ಹಣ ಪಾವತಿಸಿಕೊಂಡಿದ್ದ ದೀಪಕ್ ಕೌಶಿಕ್, ಸೇವೆಯಲ್ಲಿರುವ ಹೈದರಾಬಾದ್ ಟ್ರಾನ್ಸ್ಪೋರ್ಟೇಷನ್ ಸಂಸ್ಥೆಯಲ್ಲಿ ಬುಕ್ ಮಾಡಿದ್ದ. ಅದರಂತೆ ಆ ಸಂಸ್ಥೆಯವರು ರಾಜಮಂಡ್ರಿಯಿಂದ ಕಾರು ತಂದು ಪೀಣ್ಯದ ಗೋದಾಮಿನಲ್ಲಿರಿಸಿದ್ದರು. ನಿಗದಿತ ಶುಲ್ಕ ಪಾವತಿಸದ ಕಾರಣಕ್ಕೆ ಕಾರು ಡೆಲಿವರಿ ಕೊಟ್ಟಿರಲಿಲ್ಲ. ಬೃಂದಾ ಅವರಿಂದ ದೀಪಕ್ ಕೌಶಿಕ್ ಹಣ ಪಡೆದಿದ್ದ. ಆದರೆ, ಕಂಪನಿಗೆ ಪಾವತಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.