ರಾಜ್ಯದ ಹೊಟೇಲ್ ಉದ್ಯಮಕ್ಕೆ 20 ಸಾವಿರ ಕೋಟಿ ರೂ. ನಷ್ಟ, ವೀಕೆಂಡ್ ಕರ್ಫ್ಯೂ ರದ್ದುಗೊಳಿಸುವಂತೆ ಒತ್ತಾಯ

ಬೆಂಗಳೂರು: ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ರದ್ದುಗೊಳಿಸಬೇಕು ಹಾಗೂ ರಾತ್ರಿ 11 ಗಂಟೆಯಿಂದ ನೈಟ್ ಕರ್ಫ್ಯೂ ಜಾರಿ ಮಾಡುವಂತೆ ಕರ್ನಾಟಕ ರಾಜ್ಯ ಹೊಟೇಲ್ ಗಳ ಸಂಘ ಮಂಗಳವಾರ ಸಚಿವ ಅಶ್ವಥ್ ನಾರಾಯಣ್ ಅವರಿಗೆ ಮನವಿ ಸಲ್ಲಿಸಿದೆ.

ಕರ್ನಾಟಕ ರಾಜ್ಯ ಹೊಟೇಲ್ ಗಳ ಸಂಘದ ಸದಸ್ಯರು ಬೆಂಗಳೂರಿನ ವಿಕಾಸಸೌಧದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಅವರನ್ನು ಭೇಟಿ ಮಾಡಿ, ಲಾಕ್ ಡೌನ್ ಹಾಗೂ ನೈಟ್ ಕರ್ಫ್ಯೂನಿಂದ ಉದ್ಯಮಕ್ಕೆ ಆದ ನಷ್ಟ ಕುರಿತಂತೆ ರಾಜ್ಯ ಸರ್ಕಾರದ ಗಮನಕ್ಕೆ ತಂದರು. ಅಲ್ಲದೆ ಮನವಿ ಪತ್ರವನ್ನು ನೀಡಿದ ಸಂಘದ ಸದಸ್ಯರು, ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದಲ್ಲಿ ಸಕ್ರೀಯವಾಗಿ ರಾಜ್ಯದಾದ್ಯಂತ 65 ಸಾವಿರಕ್ಕೂ ಹೆಚ್ಚು ಸಣ್ಣ, ಮಧ್ಯಮ ಮತ್ತು ಪಂಚತಾರ ಹೋಟೆಲುಗಳಿವೆ. ನಮ್ಮ ಉದ್ಯಮದಲ್ಲಿ ಒಂದು ಕೋಟಿಗೂ ಹೆಚ್ಚು ಗ್ರಾಮೀಣ ಪ್ರದೇಶದ ಅವಿದ್ಯಾವಂತ ನಿರುದ್ಯೋಗಿ ಯುವಕ ಯುವತಿಯರು ಹಾಗೂ ಅಂಗವಿಕಲರು ಮತ್ತು ಮಹಿಳೆಯರಿಗೆ ಉದ್ಯೋಗವನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಕೋವಿಡ್ 19 ನಿಂದಾಗಿ ನಮ್ಮ ಹೋಟೆಲು ಉದ್ಯಮ ಆರ್ಥಿಕ ಸಂಕಷ್ಟದಲ್ಲಿ ಮಳುಗಿದೆ. ಸುಮಾರು ಶೇಕಡಾ 30ಕ್ಕಿಂತ ಹೆಚ್ಚು ಹೋಟೆಲು ಉದ್ಯಮಿಗಳು ನಷ್ಟವನ್ನು ಭರಿಸಲಾಗದೇ ತಮ್ಮ ಉದ್ಯಮವನ್ನು ಖಾಯಂ ಆಗಿ ಮುಚ್ಚಿದ್ದಾರೆ ಎಂದು ತಿಳಿಸುವುದು ಖೇದದ ಸಂಗತಿ. ಆದ್ದರಿಂದ ಲಾಕ್‌ಡೌನ್ ಮತ್ತು ವೀಕೆಂಡ್ ಕರ್ಫ್ಯೂನಿಂದಾಗಿ ನಮ್ಮ ಇಡೀ ಉದ್ಯಮ ರಂಗಕ್ಕೆ ಇನ್ನಷ್ಟು ಆರ್ಥಿಕ ಹೊರೆಯಾಗಿದೆ.

ಈ ಲಾಕ್‌ಡೌನ್ ಮತ್ತು ವೀಕೆಂಡ್ ಕರ್ಫ್ಯೂನಿಂದಾಗಿ ನಮ್ಮ ವ್ಯವಹಾರದಲ್ಲಿ ಮಾಸಿಕ ರುಪಾಯಿ 20 ಸಾವಿರ ಕೋಟಿಗೂ ಹೆಚ್ಚು ನಷ್ಟವಾಗಿದೆ. ನಮ್ಮ ಉದ್ಯಮಕ್ಕೆ ವೀಕೆಂಡ್ ಕರ್ಫ್ಯೂನಿಂದಾಗಿ ಸುಮಾರು ಶೇಖಡ 70ಕ್ಕೂ ಹೆಚ್ಚು ವ್ಯಾಪಾರದಲ್ಲಿ ಹೊಡೆತ ಬಿದ್ದಿದೆ. ಆದ್ದರಿಂದ ರಾಜ್ಯ ಸರ್ಕಾರ ಈಗ ಇರುವಂತಹ ನೈಟ್ ಕರ್ಫ್ಯೂ ಅನ್ನು ರಾತ್ರಿ 11 ಘಂಟೆಯವರೆಗೂ ವಿಸ್ತರಿಸಬೇಕು, ವೀಕೆಂಡ್ ಕರ್ಫ್ಯೂ ಅನ್ನು ರದ್ದು ಮಾಡಿ ನಮ್ಮ ಉದ್ಯಮ ಹಾಗೂ ಉದ್ಯಮಿಗಳನ್ನು ಪ್ರೋತ್ಸಾಹಿಸಬೇಕಾಗಿ ಸರ್ವ ಸದಸ್ಯರ ಪರವಾಗಿ ವಿನಂತಿ ಮಾಡಿಕೊಳ್ಳುವುದಾಗಿ ಮನವಿ ಮಾಡಿದೆ.

Leave a Reply

Your email address will not be published. Required fields are marked *

error: Content is protected !!