ಅಲ್ಪಸಂಖ್ಯಾತರ ವಿರುದ್ಧ ರಾಜ್ಯದಲ್ಲಿ ಪದೇ ಪದೇ ನಡೆಯುತ್ತಿರುವ ಹಿಂಸಾಚಾರ- ಗಣ್ಯರಿಂದ ಸಿಎಂಗೆ ಪತ್ರ

ಬೆಂಗಳೂರು ಜ.26 (ಉಡುಪಿ ಟೈಮ್ಸ್ ವರದಿ): ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ರಾಜ್ಯದಲ್ಲಿ ಪದೇ ಪದೇ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಮೂವತ್ತಕ್ಕೂ ಹೆಚ್ಚು ಮಂದಿ ಗಣ್ಯರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿಯವರಿಗೆ ಬರೆದಿರುವ ಪತ್ರದ ಆರಂಭದಲ್ಲಿ “ನಾವು ಹಿರಿಯ ವಿಜ್ಞಾನಿಗಳು, ಬರಹಗಾರರು, ಶಿಕ್ಷಣ ತಜ್ಞರು, ಕಲಾವಿದರು ಮತ್ತು ವಕೀಲರ ಗುಂಪಾಗಿದ್ದು, ಕರ್ನಾಟಕದ ಹದಗೆಡುತ್ತಿರುವ ಆಡಳಿತ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಪದೇಪದೇ ನಡೆಯುತ್ತಿರುವ ಹಿಂಸಾಚಾರದ ಕುರಿತು ಕಳವಳದಿಂದ ಈ ಪತ್ರವನ್ನು ಬರೆಯುತ್ತಿದ್ದೇವೆ” ಎಂದು ಉಲ್ಲೇಖಿಸಲಾಗಿದೆ. ಮುಂದುವರೆದು ಪತ್ರದಲ್ಲಿ “ಕಳೆದ ಕೆಲವು ತಿಂಗಳುಗಳಲ್ಲಿ, ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಯುವಕರ ಕ್ರೂರ ಹತ್ಯೆಗಳು, ಅತಿರೇಕದ ʼದ್ವೇಷ ಭಾಷಣಗಳು’, ಸಾರ್ವಜನಿಕ ಬೆದರಿಕೆಗಳು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಪೂಜಾ ಕಾರ್ಯಗಳಿಗೆ ಅಡ್ಡಿಪಡಿಸುವಿಕೆ, ʼಮರ್ಯಾದಾ ಹತ್ಯೆಗಳು’, ʼನೈತಿಕ ಪೋಲೀಸ್‌ಗಿರಿ, ಶಾಸಕರ ಸ್ತ್ರೀದ್ವೇಷದ ಹೇಳಿಕೆಗಳು ಮತ್ತು ವಿವಿಧ ಧಾರ್ಮಿಕ ಗುಂಪುಗಳ ನಡುವಿನ ಹಗೆತನ ಮತ್ತು ಹಿಂಸಾತ್ಮಕ ಎನ್ಕೌಂಟರ್ ಗಳ ಘಟನೆಗಳು ವರದಿಯಾಗಿವೆ. ಖುದ್ದು ಶಾಸಕರೇ ಮಾಡಿರುವ ದ್ವೇಷಪೂರಿತ ಮತ್ತು ಸಂವಿಧಾನ ವಿರೋಧಿ ಹೇಳಿಕೆಗಳು ಸಮಾಜವಿರೋಧಿ ಗುಂಪುಗಳನ್ನು ಉತ್ತೇಜಿಸುವಂತಿದೆ.”

ಬಹುಸಂಖ್ಯಾತ ಸಮಾಜದಲ್ಲಿನ ಸಾಮಾಜಿಕ ಸಾಮರಸ್ಯವನ್ನು ಉತ್ತಮಪಡಿಸಿದ ಮತ್ತು ಎಲ್ಲಾ ವರ್ಗದ ಜನತೆಗಾಗಿ ಯಾವುದೇ ತಾರತಮ್ಯವಿಲ್ಲದೇ ಮಾದರಿ ಕಲ್ಯಾಣ ಕಾರ್ಯಕ್ರಮಗಳನ್ನು ಆರಂಭಿಸಿದ ಪ್ರಗತಿಪರ ರಾಜ್ಯವಾಗಿದ್ದ ಕರ್ನಾಟಕದ ಸುದೀರ್ಘ ಇತಿಹಾಸದ ವಿರುದ್ಧ ಇಂತಹ ಪ್ರವೃತ್ತಿಗಳು ನಡೆಯುತ್ತಿವೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ. ಧಾರ್ಮಿಕ ಸಹಿಷ್ಣುತೆಯ ನಿಟ್ಟಿನಲ್ಲಿ ಹಿಂದಿನಿಂದಲೂ ಬಸವಣ್ಣ, ಅಕ್ಕಮಹಾದೇವಿ, ಕನಕದಾಸ, ಪುರಂದರದಾಸ ಮತ್ತು ಶಿಶುನಾಳ ಷರೀಫ, ಬೇಂದ್ರೆಯಿಂದ ಹಿಡಿದು ಕುವೆಂಪುವರೆಗಿನ ನಮ್ಮ ಸಾಹಿತಿಗಳು ಬಹು ಸಂಸ್ಕೃತಿಯ ಅಸ್ಮಿತೆಯ ಆಧಾರದ ಮೇಲೆ ಕರ್ನಾಟಕತ್ವವನ್ನು ಆಚರಿಸಿದ್ದಾರೆ. ಅದು ಸಾಮರಸ್ಯವನ್ನುಂಟು ಮಾಡುತ್ತದೆ ಎಂದು ಪತ್ರದಲ್ಲಿ ಬರೆಯಲಾಗಿದೆ.

Leave a Reply

Your email address will not be published. Required fields are marked *

error: Content is protected !!