ಮನೆ ಮನಗಳಲ್ಲಿ ಯಕ್ಷಗಾನದ ಕಂಪು ಪಸರಿಸುತ್ತಿರುವ ಚಿಕ್ಕ ಮೇಳ

ಲೇಖನ: ಕಟೀಲು ಸಿತ್ಲ ರಂಗನಾಥ ರಾವ್

ಯಕ್ಷಗಾನ ಕಲೆಯೆನ್ನುವುದು ಬಹಳ ಹಿಂದೆ ಒಂದು ಉತ್ತಮ ಸಂಪಾದನೆಯ ಮಾರ್ಗವಾಗಿರಲಿಲ್ಲ. ಆಗಿನ ಕಾಲದಲ್ಲಿ ಕಿತ್ತು ತಿನ್ನುವ ಬಡತನವಿತ್ತು. ಒಂದು ಹೊತ್ತಿನ ಊಟ ಸಿಕ್ಕಿದರೂ ಅದೇ ಬಹಳ ದೊಡ್ಡ ಲಾಭವೆನ್ನುವ ಯೋಚನೆಯ ಪರಿಸ್ಥಿತಿಯಲ್ಲಿ ಜನರು ಜೀವಿಸುತ್ತಿದ್ದ ಕಾಲ. ಕಿತ್ತು ತಿನ್ನುವ ಬಡತನ, ಯಕ್ಷಗಾನ ಕಲೆಯ ಮೇಲಿನ ಸೆಳೆತ, ಒಂದು ಹೊತ್ತಿನ ಊಟವಾದರೂ ಸಿಗುತ್ತದಲ್ಲ ಎನ್ನುವ ಆಶೆ ಮೊದಲಾದ ಕಾರಣದಿಂದ ಸದವಕಾಶಗಳಿಂದ ವಂಚಿತರಾದವರು ಮತ್ತು ಬಡತನದ ಬೇಗೆಯಿಂದ ಪರಿತಪಿಸುತ್ತಿದ್ದವರು ಯಕ್ಷಗಾನ ಕ್ಷೇತ್ರಕ್ಕೆ ಬಂದು, ಯಕ್ಷಗಾನವನ್ನು ಶೃದ್ಧೆಯಿಂದ, ಭಕ್ತಿಯಿಂದ ಕಲಿತು ಉತ್ತಮವಾದ ಪ್ರದರ್ಶನವನ್ನು ನೀಡುವುದರ ಮೂಲಕ ಪ್ರಶಂಸೆಯನ್ನೂ ಪಡೆಯುತ್ತ ತಮ್ಮ ಜೀವನ ನಿರ್ವಹಣೆಯನ್ನು ಕಷ್ಟದಿಂದ ಮಾಡಿಕೊಂಡು ಬರುತ್ತಿದ್ದರು. ಮೇಳಗಳ ಸಂಖ್ಯೆಯೂ ಈಗಿನ ಕಾಲದಲ್ಲಿರುವಷ್ಟು ಇರಲಿಲ್ಲ. ಬೆರಳೆಣಿಕೆಯ ಮೇಳಗಳು ಕಾರ್ಯನಿರ್ವಹಿಸುತ್ತಿದ್ದವು. ಅದೂ ಕೇವಲ 5 ತಿಂಗಳುಗಳ ಕಾಲ ತಿರುಗಾಟ. ಮಳೆಗಾಲದಲ್ಲಿ ಈಗಿನಂತೆ (ಅಂದರೆ ಕೊರೋನಾ ಬಾಧೆಯ ಮುಂಚಿನ ಕಾಲ) ಲೆಕ್ಕವಿಲ್ಲದಷ್ಟು ಯಕ್ಷಗಾನ ಪ್ರದರ್ಶನಗಳು ನಡೆಯುತ್ತಿರಲಿಲ್ಲ. ಮಳೆಗಾಲದಲ್ಲಿ ಏನೂ ಉದ್ಯೋಗವಿಲ್ಲ. ಉದ್ಯೋಗವಿಲ್ಲದಿದ್ದರೆ ಖರ್ಚಿಗೆ ಹಣವಿಲ್ಲ. ಹೊಟ್ಟೆಹೊರೆಯಬೇಕಲ್ಲ. ಉದ್ಯೋಗವಿಲ್ಲ, ಆದಾಯವಿಲ್ಲವೆಂದು ಹೊಟ್ಟೆ ಕೇಳುತ್ತದೆಯೇ, ಅವಶ್ಯಕತೆಗಳು ತೀರುತ್ತವೆಯೇ? ಆಗ ಚಿಕ್ಕ ಮೇಳ ಎನ್ನುವ ಒಂದು ಪರಿಕಲ್ಪನೆ ಮೂಡಿದ್ದಿರಬೇಕು.

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡಗಳಲ್ಲಿ ಓರ್ವ ಭಾಗವತ, ಓರ್ವ ಮದ್ದಳೆವಾದಕ, ಮತ್ತೀರ್ವರು ವೇಷಧಾರಿಗಳು ರಾಧಾ ಕೃಷ್ಣ ವೇಷವನ್ನು ಮಾಡಿಕೊಂಡು ಮನೆಮನೆಗೆ ಹೋಗಿ ಹತ್ತೋ ಹದಿನೈದೋ ನಿಮಿಷಗಳ ಪುಟ್ಟ ಪ್ರದರ್ಶನವನ್ನು ನೀಡುವ ಮೇಳವನ್ನು (ಗುಂಪನ್ನು) ಚಿಕ್ಕಮೇಳ ಎನ್ನುತ್ತಾರೆ. ಇದು ಯಕ್ಷಗಾನ ಕಲೆಯ ಒಂದು ಪ್ರಕಾರ. ಇದನ್ನು ಗೆಜ್ಜೆನಾದ ಸೇವೆ ಎಂದೂ ಕರೆಯುತ್ತಾರೆ. ಅಲ್ಲಿ ಆ ಮನೆಯವರು ಕೊಟ್ಟ ಅಕ್ಕಿ, ತೆಂಗಿನಕಾಯಿ, ಅಡಕೆ ಇವುಗಳ ಜತೆಗೆ ಹಣವನ್ನೂ ಕೊಟ್ಟರೆ ಪಡೆದುಕೊಂಡು ಬರುತ್ತಿದ್ದರು. ಅತ್ಯಂತ ಕಡು ಬಡತನದ ದಿನಗಳಲ್ಲಿ ಈ ಚಿಕ್ಕ ಮೇಳದಿಂದ ಸಂಪಾದನೆಯನ್ನು ಮಾಡಿಕೊಂಡು ತಮ್ಮ ಜೀವನಯಾಪನೆಯನ್ನು ಮಾಡಿಕೊಂಡು ಬರುತ್ತಿದ್ದರು.

ಚಿಕ್ಕಮೇಳದಲ್ಲಿ ರಾಮಾಯಣ, ಮಹಾಭಾರತ, ಭಾಗವತ ಮೊದಲಾದ ಪೌರಾಣಿಕ ಕಥೆಗಳ ಒಂದು ಪುಟ್ಟ ಸಂದರ್ಭದ ಪ್ರದರ್ಶನವನ್ನು ಹತ್ತರಿಂದ ಹದಿನೈದು ನಿಮಿಷಗಳಲ್ಲಿ ಪ್ರದರ್ಶಿಸಲಾಗುತ್ತದೆ.

ಕೆಲವು ವರ್ಷಗಳ‌ ಹಿಂದೆ ಯಕ್ಷಗಾನ ಸಂಪಾದನೆಯ ದೃಷ್ಟಿಯಿಂದ ಉಚ್ಛ್ರಾಯ ಸ್ಥಿತಿ ತಲುಪಿತ್ತು. ವರ್ಷಪೂರ್ತಿ ಯಕ್ಷಗಾನ, ಗಾನ-ನಾಟ್ಯ ವೈಭವ, ತಾಳಮದ್ದಳೆ ಹೀಗೆ ನಿರಂತರ ಕಾರ್ಯಕ್ರಮಗಳ ಕಾರಣ ಚಿಕ್ಕಮೇಳಗಳು ನೇಪಥ್ಯಕ್ಕೆ ಸರಿದಿತ್ತು. ಆದರೆ ಸಾಮಾನ್ಯ 8 ಅಥವಾ 10 ವರ್ಷಗಳ ಕೆಳಗೆ ಖ್ಯಾತ ಕಲಾವಿದರೋರ್ವರಿಂದ ಮತ್ತೆ ಚಿಕ್ಕ ಮೇಳಗಳು ವಿಶೇಷವಾಗಿ ಶುರುವಾದವು. ನಿಜವಾದ ದಯನೀಯ ಸ್ಥಿತಿಯಿಂದ ಮೇಲೇರಲು ಈ ಚಿಕ್ಕ ಮೇಳವೆನ್ನುವ ಪರಿಕಲ್ಪನೆಯನ್ನು ಆಧರಿಸಿದವರು ಅನೇಕರು.‌ ಎಲ್ಲರೂ ಖ್ಯಾತಿಯನ್ನು ಗಳಿಸಿದ ಕಲಾವಿದರಾಗಿರುವುದಿಲ್ಲ. ಖ್ಯಾತಿಯಿರದ ಕಲಾವಿದರಿಗೆ ಅವಕಾಶಗಳೂ ಕಡಿಮೆ. ಮೇಳದ ತಿರುಗಾಟವಿದ್ದಾಗ ದುಡಿಮೆ. ಮಳೆಗಾಲದಲ್ಲಿ ನಿರುದ್ಯೋಗ. ಈ ಕಾರಣಕ್ಕೆ ಮತ್ತೆ ಚಿಕ್ಕಮೇಳಗಳು ಮುನ್ನೆಲೆಗೆ ಬಂದಿತು.

ಕೊರೋನಾ ಮಹಾಮಾರಿಯ ಹಾವಳಿಗೆ ಮೊದಲು ಅವಿಭಜಿತ ದಕ್ಷಿಣಕನ್ನಡ, ಉತ್ತರಕನ್ನಡ ಜಿಲ್ಲೆಗಳಲ್ಲಿ 80 ಕ್ಕೂ ಹೆಚ್ಚಿನ ಚಿಕ್ಕಮೇಳಗಳು ತಿರುಗಾಟದಲ್ಲಿದ್ದವು.ಕಲಾವಿದರ ದೈನಂದಿನ ಜೀವನ ನಿರ್ವಹಣೆಯ ಜೊತೆಗೆ, ಮನೆಯಂಗಳದಲ್ಲಿ ಸೀಮಿತ ಅವಧಿಯಲ್ಲಿ ಮಕ್ಕಳಿಗೆ ಯಕ್ಷಗಾನ ಕಲೆಯ ಪರಿಚಯ ಮಾಡಿಸಿದಂತೆ ಆಗುತ್ತದೆ ಎಂದೂ ನಾವು ಹೇಳಬಹುದು.

ಲೇಖನ: ಕಟೀಲು ಸಿತ್ಲ ರಂಗನಾಥ ರಾವ್

Leave a Reply

Your email address will not be published. Required fields are marked *

error: Content is protected !!