ಹೆಜ್ಜೆ ಗೆಜ್ಜೆಯ ನಂಟು : ಗಂಡು ಕಲೆಯ ಛಲ ಬಿಡದ ನಾಯಕ ಸುರೇಂದ್ರ ನಾಯ್ಕ್

ಲೇಖಕಿ :ನಾಗರತ್ನ. ಜಿ
ಯಕ್ಷಗಾನ ಕಲಾವಿದೆ

ಸಾಧನೆಗೆ ಮಹಾಬುದ್ಧಿವಂತಿಕೆ ಏನೂ ಬೇಕಾಗಿಲ್ಲ. ಹಿಡಿದ ಕೆಲಸವನ್ನು ಕೈಬಿಡದಿರುವ ಹಠವೊಂದಿದ್ದರೆ ಸಾಕು. ಆಗ ಸಾಧನೆ ನಮಗರಿವಿಲ್ಲದಂತೆಯೇ ಆಗಿಬಿಡುತ್ತದೆ. ಸಾಧನೆಗೆ ಎಟುಕದ್ದು ಈ ಪ್ರಪಂಚದಲ್ಲಿ ಯಾವುದೂ ಇಲ್ಲ. ಅಂತಹ ಸಾಧನೆಯಿಂದಲೇ ಮೇಲೆ ಬಂದ ಯಶಸ್ವೀ ಸಾಧಕ ಕ್ರಮಿಸಿ ಬಂದ ಹಾದಿಯಿದು. ಅವರೇ ಬಹುಮುಖ ಪ್ರತಿಭಾನ್ವಿತರಾದ ಸುರೇಂದ್ರ ನಾಯ್ಕ.

ಇವರು ಜೂನ್ 1, 1984 ರಂದು ಬ್ರಹ್ಮಾವರದ ಚಾಂತಾರು ಎಂಬಲ್ಲಿ ಜನಿಸಿದರು. ಇವರ ತಂದೆ ಬಾಬು ನಾಯ್ಕ, ತಾಯಿ ಯಶೋದ. ಇವರ ತಂದೆ, ತಾಯಿಯರು ಹೆಚ್ಚು ಕಲಿತವರಲ್ಲ. ಕೂಲಿ ಕೆಲಸ ಮಾಡಿ ಅದರಿಂದ ಬಂದ ಆದಾಯದಿಂದ ಕುಟುಂಬದ ಸದಸ್ಯರ ಜೀವನ ಸಾಗಬೇಕಾಗಿತ್ತು. ಹಾಗಾಗಿ ಬಾಲ್ಯದಲ್ಲಿ ತುಂಬಾ ಬಡತನವಿತ್ತು. ಇಂತಹ ಪರಿಸ್ಥಿತಿಯಲ್ಲಿ ತುಂಬಾ ಅವಮಾನವನ್ನೂ ಎದುರಿಸಬೇಕಾಯಿತು. ಈ ಅವಮಾನಗಳನ್ನು ಮೆಟ್ಟಿ ನಿಲ್ಲಲು ವಿದ್ಯೆಯೊಂದೇ ಉತ್ತಮ ಮಾರ್ಗ ಎಂಬುದನ್ನರಿತ ಇವರು ಛಲದಿಂದ ಕಲಿತು ಮೇಲೆ ಬಂದವರು. ತಂದೆಯೂ ಕೂಡಾ ಮಗ ತನ್ನಂತೆ ಆಗಬಾರದು, ತಾನು ಅನುಭವಿಸಿದ ಕಷ್ಟಗಳನ್ನು ಮಕ್ಕಳು ಅನುಭವಿಸಬಾರದು ಎಂಬ ಕಾರಣಕ್ಕೆ ಮಗನ ಆಸೆ ಆಕಾಂಕ್ಷೆಗಳಿಗೆ ನೀರೆರೆದು ಪೋಷಿಸಿದರು. ಅದರಿಂದಾಗಿ ತಾನು ಅಂದುಕೊಡ ಗುರಿ ತಲುಪಲು ಸಾಧ್ಯವಾಯಿತು ಎನ್ನುತ್ತಾರೆ.

ಇವರ ಪ್ರಾಥಮಿಕ ಶಿಕ್ಷಣ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ, ಚಾಂತಾರು ಇಲ್ಲಿ ನಡೆಯಿತು. ಪ್ರೌಢ ಶಿಕ್ಷಣ ವಿ. ಕೆ ಆಚಾರ್ಯ ಮೆಮೋರಿಯಲ್ ಹೈಸ್ಕೂಲ್, ಕುಂಜಾಲು ಇಲ್ಲಿ ಮುಗಿಸಿದರು. ಪದವಿಪೂರ್ವ ಶಿಕ್ಷಣವನ್ನು ಎಸ್.ಎಂ.ಎಸ್ ಜೂನಿಯರ್ ಕಾಲೇಜು, ಬ್ರಹ್ಮಾವರ ಇಲ್ಲಿ ಮಾಡಿದರು. ಮುಂದೆ ಓದಬೇಕೆಂಬ ಆಸೆಯಿದ್ದರೂ ಕೂಡಾ ಆದಷ್ಟು ಬೇಗ ತನ್ನ ಕಾಲ ಮೇಲೆ ತಾನು ನಿಲ್ಲಲೇಬೇಕಾದ ಅನಿವಾರ್ಯತೆ ಇತ್ತು. ಅದಕ್ಕಾಗಿ ಕುಮುದಾ ಉಮಾಶಂಕರ ಶಿಕ್ಷಕರ ತರಬೇತಿ ಕೇಂದ್ರ ಕೊಕ್ಕರ್ಣೆ ಇಲ್ಲಿ ಸೇರಿ ಡಿ.ಎಡ್ ಮಾಡಿ ಶಿಕ್ಷಕರಾಗಲು ಬೇಕಾದ ತರಬೇತಿಯನ್ನು ಪಡೆದುಕೊಂಡರು.

ಇವರಿಗೆ ಬಾಲ್ಯದಿಂದಲೂ ಯಕ್ಷಗಾನವೆಂದರೆ ಬಹಳ ಆಸಕ್ತಿ. ಎಲ್ಲಾ ಮಕ್ಕಳಂತೆಯೇ ಇವರೂ ಯಕ್ಷಗಾನಕ್ಕೆ ಹೋದಾಗ ಕಲಾವಿದರು ಧರಿಸಿದ ವೇಷಭೂಷಣಗಳನ್ನು ಅಚ್ಚರಿಯ ಕಣ್ಗಳಿಂದ ನೋಡುತ್ತಿದ್ದರು. ಅದನ್ನು ನೋಡಿದಾಗ ತಾನೂ ಕೂಡಾ ಒಮ್ಮೆಯಾದರೂ ಇಂತಹ ಶ್ರೀಮಂತ ಉಡುಗೆಯನ್ನು ಧರಿಸಿ ರಾಜನಾಗಿ, ರಾಣಿಯಾಗಿ, ದೇವಾನುದೇವತೆಯಾಗಿ ರಂಗದಲ್ಲಿ ಮೆರೆಯಬೇಕು ಎಂಬ ಆಸೆ ಮನದಲ್ಲಿ ಬೇರೂರಿತು. ಅದಕ್ಕಾಗಿ ತಂದೆಯ ಜೊತೆಗೆ ವಾರದಲ್ಲಿ 2-3 ಯಕ್ಷಗಾನವನ್ನು ನೋಡುತ್ತಿದ್ದರು. ಇವರ ತಂದೆಯೂ ಕೂಡಾ ಯಕ್ಷಗಾನ ಕಲಾವಿದರಾಗಿದ್ದು ಸಂಘದಲ್ಲಿ ಆಗಾಗ ವೇಷ ಮಾಡುತ್ತಿದ್ದರು. ಅವರಿಂದ ಇವರು ಪ್ರಭಾವಿತರಾದರು.

ಇವರ ಅದೃಷ್ಟಕ್ಕೆ ತರಬೇತಿ ಮುಗಿಸಿದ ಅಲ್ಪ ಅವಧಿಯಲ್ಲಿಯೇ ಸರ್ಕಾರಿ ನೌಕರಿ ದೊರಕಿತು. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಹೊಯ್ಯಾಣ ಇಲ್ಲಿ ಶಿಕ್ಷಕರಾಗಿ ನಿಯುಕ್ತಿಗೊಂಡರು. ಅಲ್ಲಿ ಎಂಟು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು. ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಮಕ್ಕಳಿಗೆ ಕೂಡಾ ಕುಣಿತ ಭಜನೆ, ಹಾಗೂ ಜನಪದ ನೃತ್ಯ ವಿಭಾಗದಲ್ಲಿ ತರಬೇತಿ ನೀಡಿ ಅವರನ್ನು ಪ್ರತಿಭಾ ಕಾರಂಜಿಗೆ ಅಣಿಗೊಳಿಸಿರುತ್ತಾರೆ. ಇವರಿಂದ ತರಬೇತಿ ಪಡೆದ ಮಕ್ಕಳು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಬಹುಮಾನಗಳನ್ನು ಕೂಡಾ ಪಡೆದಿರುತ್ತಾರೆ. ಇದರ ಜೊತೆ ಸಮೀಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಗೂ ಸರಕಾರಿ ಪೌಢಶಾಲೆ, ಆಲೂರು ಇಲ್ಲಿನ ಮಕ್ಕಳಿಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತರಬೇತಿ ನೀಡುತ್ತಿದ್ದರು. ಶಿಕ್ಷಕ ವೃತ್ತಿಯಲ್ಲಿರುವಾಗ ಹಿಂದೆ ಕಾರಣಾಂತರಗಳಿಂದ ನಿಲ್ಲಿಸಿದ್ದ ಓದನ್ನು ಮುಂದುವರೆಸಬೇಕೆಂಬ ಆಸೆ ಮತ್ತೆ ಚಿಗುರೊಡೆಯಿತು. ಹಾಗಾಗಿ ಖಾಸಗಿಯಾಗಿ ಧಾರವಾಡ ಮುಕ್ತ ವಿಶ್ವ ವಿದ್ಯಾನಿಲಯದಲ್ಲಿ ಬಿ.ಎ ಪದವಿಯನ್ನು ಪಡೆದರು. ನಂತರ ಕನ್ನಡವನ್ನು ಪ್ರಮುಖ ವಿಷಯವನ್ನಾಗಿ ತೆಗೆದುಕೊಂಡು ಎಂ.ಎ ಪದವಿಯನ್ನು ಕೂಡಾ ಪಡೆದುಕೊಂಡರು. ಅಲ್ಲಿಗೆ ತಮ್ಮ ಕನಸು ಈಡೇರಿದ ಸಂತೃಪ್ತ ಭಾವ ಇವರನ್ನಾವರಿಸಿತು.

ಯಕ್ಷಗಾನ ಗುರುಗಳಾದ ಗಣೇಶ ನಾಯ್ಕ, ಚೇರ್ಕಾಡಿ ಇವರು ಶ್ರೀ ಮಹಿಷ ಮರ್ದಿನಿ ಗದ್ದುಗೆ ಅಮ್ಮನವರ ದೇವಸ್ಥಾನ, ಚಾಂತಾರು ಇಲ್ಲಿ ಹೆಜ್ಜೆ ತರಗತಿ ಪ್ರಾರಂಭಿಸಿದಾಗ ಅದರಿಂದ ಆಕರ್ಷಿತರಾಗಿ ಹೆಜ್ಜೆ ತರಗತಿಗೆ ಸೇರಿಕೊಂಡರು. ಬಳಿಕ ಗುರುಗಳಾದ ರವಿ ಕುಮಾರ್ ಸೂರಾಲು, ಪ್ರಸಾದ ಕುಮಾರ ಮೊಗೆಬೆಟ್ಟು, ಮಂಜುನಾಥ ಕುಲಾಲ ಐರೋಡಿ ಇವರಲ್ಲಿಯೂ ಸಾಂಪ್ರದಾಯಿಕವಾದ ಹೆಜ್ಜೆಯನ್ನು ಅಭ್ಯಾಸ ಮಾಡಿದರು. 2009 ರಲ್ಲಿ ಶ್ರೀ ಮಹಿಷ ಮರ್ದಿನಿ ಗದ್ದುಗೆ ಅಮ್ಮನವರ ದೇವಸ್ಥಾನ, ಚಾಂತಾರು ಇಲ್ಲಿ ನಡೆದ ಯಕ್ಷಗಾನದಲ್ಲಿ ಮೊದಲ ಬಾರಿಗೆ ಕಂಸವಧೆಯ ಕಂಸನಾಗಿ ರಂಗವೇರಿದರು. ಪ್ರಥಮ ಪ್ರಯತ್ನದಲ್ಲೇ ಅತ್ಯದ್ಭುತವಾದ ಪ್ರದರ್ಶನವನ್ನು ನೀಡಿ ಜನಮನ ಸೂರೆಗೊಂಡರು. ಇವರ ಪ್ರಥಮ ವೇಷವಾದ ಕಂಸವಧೆಯ ಕಂಸನ ಪಾತ್ರವನ್ನು ನೋಡಿದ ಎಲ್ಲರೂ ಮುಂದೆ ಈತನೊಬ್ಬ ಸಮರ್ಥ ವೇಷಧಾರಿಯಾಗಬಲ್ಲ ಎಂದು ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಆ ಬಳಿಕ ಒಂದೊಂದೇ ಅವಕಾಶಗಳು ಸಿಕ್ಕಿತು. ಇದಲ್ಲದೇ ಅಭಿಮನ್ಯು ಕಾಳಗದ ದ್ರೋಣ, ಶ್ವೇತ ಕುಮಾರ ಚರಿತ್ರೆಯ ದುರ್ಜಯ, ಕುಶಲವದ ಲವ, ಜಾಂಬವತಿ ಕಲ್ಯಾಣದ ಬಲರಾಮ, ಮೀನಾಕ್ಷಿ ಕಲ್ಯಾಣದ ಮಂತ್ರಿ ಹೀಗೆ ಹಲವಾರು ಪಾತ್ರಗಳನ್ನು ಮಾಡಿದ್ದಾರೆ. ಇವರು ಅತ್ಯುತ್ತಮ ಸ್ತ್ರೀ ವೇಷಧಾರಿಯೂ ಹೌದು. ಹೀಗೆ ಪ್ರತಿ ಪ್ರಸಂಗದಲ್ಲೂ ಕೂಡಾ ಒಂದೊಂದು ತೆರನಾದ ವೇಷ ಮಾಡುವ ಅವಕಾಶ ದೊರಕಿದುದರಿಂದ ಹೊಸತನ್ನು ಕಲಿಯಲು ಸಾಧ್ಯವಾಯಿತು. ಇವರು ಉಡುಪಿ ಜಿಲ್ಲೆಯ ಹಲವಾರು ಕಡೆ ಪ್ರದರ್ಶನಗಳನ್ನು ನೀಡಿದ್ದಾರೆ. ಯಾವ ಪಾತ್ರ ಕೊಟ್ಟರೂ ತಾನದನ್ನು ಅತ್ಯುತ್ತಮವಾಗಿ ಮಾಡಬೇಕು ಎಂಬ ತುಡಿತ ಇವರದು. ಬೈಂದೂರು ಶಿಕ್ಷಕರ ಯಕ್ಷಗಾನ ತಂಡದ ಪ್ರಮುಖ ವೇಷಧಾರಿಗಳಲ್ಲಿ ಇವರೂ ಒಬ್ಬರು. ಸ್ಥಳೀಯ ಸಂಘ ಸಂಸ್ಥೆಗಳು ಇವರ ಸಾಧನೆಯನ್ನು ಗುರುತಿಸಿ ಗೌರವಿಸಿರುತ್ತಾರೆ.

ವಿದ್ಯಾಲಕ್ಷ್ಮೀ ಎಂಬುವವರನ್ನು ಬಾಳಸಂಗಾತಿಯನ್ನಾಗಿ ಇವರು ಸ್ವೀಕರಿಸಿದ್ದಾರೆ. ಅವರು ಪ್ರಸ್ತುತ ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಮಗಳು ಹರ್ಷಿಣಿ.

ಸುರೇಂದ್ರ ನಾಯ್ಕರು ನಾಟಕದಲ್ಲಿಯೂ ಆಸಕ್ತಿಯನ್ನು ಹೊಂದಿದ್ದು ತಮ್ಮ ಶಾಲಾ, ಕಾಲೇಜು ದಿನಗಳಲ್ಲಿ ಹಲವಾರು ಸಾಮಾಜಿಕ ನಾಟಕಗಳಲ್ಲೂ ನಟಿಸಿರುತ್ತಾರೆ. ಇದರ ಜೊತೆಗೆ ಹಾಡುವುದು ಇವರ ನೆಚ್ಚಿನ ಹವ್ಯಾಸಗಳಲ್ಲೊಂದು. ಸ್ಥಳೀಯರೆಲ್ಲ ಸೇರಿ ಒಂದು ಭಜನಾ ತಂಡವನ್ನು ಕಟ್ಟಿಕೊಂಡಿದ್ದು ಇವರು ಆ ತಂಡದೊಂದಿಗೆ ಹಲವಾರು ಕಡೆ ಭಜನಾ ಕಾರ್ಯಕ್ರಮವನ್ನೂ ನೀಡಿರುತ್ತಾರೆ. ಇವರಿಗೆ ಕುಣಿತ ಭಜನೆ ಎಂದರೆ ಬಲು ಇಷ್ಟ. ಅಲ್ಲದೇ ಸ್ಥಳೀಯವಾದ ಹಲವಾರು ಸಂಘಟನೆಗಳಲ್ಲಿ ಸದಸ್ಯರಾಗಿದ್ದು ಅದರಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಕೃಷಿ ಹಾಗೂ ಹೈನುಗಾರಿಕೆಯಲ್ಲಿ ಇವರಿಗೆ ವಿಶೇಷ ಆಸಕ್ತಿ ಇದ್ದು ತಮ್ಮ ಬಿಡುವಿನ ವೇಳೆಯಲ್ಲಿ ಆ ಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.

ಪ್ರಸ್ತುತ ಇವರು ಬೈಂದೂರು ವಲಯದ ತಲ್ಲೂರು, ಹೆಮ್ಮಾಡಿ ಮತ್ತು ಕರ್ಕುಂಜೆ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ ನಲಿಕಲಿ ಎಂಬ ನೂತನ ಶಿಕ್ಷಣ ಪದ್ಧತಿಯಲ್ಲಿ ಉತ್ತಮ ಸಂಪನ್ಮೂಲ ವ್ಯಕ್ತಿಯೆಂದು ಹೆಸರು ಗಳಿಸಿದ್ದಾರೆ. ನಾಡಿನ ಹಲವಾರು ಕಡೆ ಸಂಚರಿಸಿ ಶಿಕ್ಷಕರಿಗೆ ವಿವಿಧ ವಿಚಾರಗಳಲ್ಲಿ ತರಬೇತಿ ನೀಡುತ್ತಿದ್ದಾರೆ.

ಮರಾಠಿ ಜನಾಂಗದ ಪ್ರಮುಖ ಹಬ್ಬವಾದ ಹೋಳಿಯ ಜನಪದ ಸಂಸ್ಕೃತಿಯನ್ನು ಉಳಿಸುವುದಕ್ಕೆ ಗೆಳೆಯರೊಂದಿಗೆ ಸೇರಿ ಪ್ರಯತ್ನಿಸುತ್ತಿದ್ದಾರೆ. ಹೋಳಿ ಹಬ್ಬದ ಸಂದರ್ಭದಲ್ಲಿ 5 ದಿನಗಳ ಕಾಲ ತಂಡದೊಂದಿಗೆ ಮನೆಮನೆಗೆ ತೆರಳಿ ಪ್ರದರ್ಶನ ನೀಡುವ ಮೂಲಕ ತಮ್ಮ ಸಂಸ್ಕ್ರತಿಯ ವಿಶೇಷತೆಯನ್ನು ಸಾರುವಲ್ಲಿ ಇವರ ಪಾತ್ರ ಹಿರಿದು. ತಮ್ಮ ಹಿರಿಯರಿಂದ ತಮಗೆ ಬಳುವಳಿಯಾಗಿ ಬಂದ ಇಂತಹ ಅಪರೂಪದ ಕಲೆ, ಸಂಸ್ಕೃತಿ ಅಳಿದು ಹೋಗದೇ ಮುಂದಿನ ಜನಾಂಗಕ್ಕೆ ಅದನ್ನು ವರ್ಗಾಯಿಸಬೇಕು ಎಂಬಲ್ಲಿ ಇವರಿಗೆ ತಮ್ಮ ಸಂಸ್ಕೃತಿಯ ಬಗ್ಗೆ ಇರುವ ಅಭಿಮಾನ ಎದ್ದು ಕಾಣುತ್ತದೆ.

ಯಶಸ್ವಿಯಾಗುತ್ತೇನೆ ಎಂಬ ನಿರ್ಧಾರ ನಮ್ಮಲ್ಲಿ ಪ್ರಬಲವಾಗಿದ್ದರೆ ಸೋಲು ಎಂದಿಗೂ ನಮ್ಮನ್ನು ಹಿಮ್ಮೆಟ್ಟಿಸುವುದಿಲ್ಲ. ಹೀಗೆ ಸಾಧನೆಯ ಹಾದಿಯಲ್ಲಿ ಎದುರಾದ ಸೋಲು, ಅವಮಾನಗಳಿಗೆ ಅಂಜದೆ ಧೈರ್ಯವಾಗಿ ಮುನ್ನುಗಿದ್ದರಿಂದ ಇಂದು ಒಬ್ಬ ಯಶಸ್ವಿ ವ್ಯಕ್ತಿಯಾಗಿ ಸುರೇಂದ್ರ ನಾಯಕ್ ಅವರು ನಮ್ಮೊಂದಿಗಿದ್ದಾರೆ. ಅವರಿಂದ ಇನ್ನಷ್ಟು ಸಾಧನೆಗಳು ಮೂಡಿಬರಲಿ ಎಂಬ ಶುಭಹಾರೈಕೆ.

ಲೇಖಕಿ: ನಾಗರತ್ನ ಜಿ
ಯಕ್ಷಗಾನ ಕಲಾವಿದೆ

2 thoughts on “ಹೆಜ್ಜೆ ಗೆಜ್ಜೆಯ ನಂಟು : ಗಂಡು ಕಲೆಯ ಛಲ ಬಿಡದ ನಾಯಕ ಸುರೇಂದ್ರ ನಾಯ್ಕ್

  1. ಗಂಡು ಕಲೆ ಎನ್ನುವ ಮಾತು ತಗೆದು ಹಾಕಬೇಕು

  2. ನಾನು ಸುರೇಂದ್ರ ನಾಯ್ಕ್ ಸರ್ ಶಿಷ್ಯ. ಅವರು ಸ ಕಿ ಪ್ರ ಶಾಲೆಗೆ ಮೊದಲು ಬಂದಿದ್ದು. ನನಗೆ ಅಕ್ಷರ ಕಳಿಸಿದ ಗುರುಗಳು. ತುಂಬಾ ಸರಳ ಸ್ವಭಾವದ ವಕ್ತಿತ್ವಉಳ್ಳ ಅಪರೂಪದ ವ್ಯಕ್ತಿ. ವಿದ್ಯಾರ್ಥಿಗಳ್ಳಲ್ಲಿ ಪ್ರೋತ್ಸಹ ನೀಡುವ ಅವರ ಶೈಲಿ ನಾನು ಬೇರೆ ಎಲ್ಲೂ ನೋಡಿಲ್ಲ.ಪ್ರತಿಯೊಬ್ಬ ತನಂತೆ ಆಗಬೇಕು ಎನ್ನುವ ಅವರ ಪರಿಶ್ರಮಕ್ಕೆ ನಾನು ಖಂಡಿತವಾಗಲು ಬೆಲೆ ಕೊಡುತ್ತೇನೆ. ನಾನು ಒಂದು ದಿನ ಅವರ ಶಿಷ್ಯ ಎಂದು ಹೆಮ್ಮೆಯಿಂದ ಎದೆ ಯುಬ್ಬಿಸಿ ಹೇಳುವಂತ ವ್ಯಕ್ತಿಯಾಗಿ ಬೆಳೆಯುತ್ತೇನೆ. ನನಗೆ ಜೀವನದ ಮೌಲ್ಯಗಳನ್ನು ತಿಳಿಸಿಕೊಟ್ಟ ನನ್ನ ಗುರುಗಳ ಮುಂದಿನ ಜೀವನ ಯಶಸಿನಿಂದ ಕೂಡಲಿ ಎಂದು ದೇವರಲ್ಲಿ ಪ್ರತಿನಿತ್ಯ ಬೇಡುತ್ತೇನೆ. Love you forever ❤❤❤❤❤

Leave a Reply

Your email address will not be published. Required fields are marked *

error: Content is protected !!