ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಮಹಿಳೆಗೆ ಬರೋಬ್ಬರಿ 61.15 ಲಕ್ಷ ರೂ ವಂಚನೆ
ಮಂಗಳೂರು: ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ಫೋನ್ ಕರೆ ಮಾಡಿ ಮಹಿಳೆಗೆ ಬರೋಬ್ಬರಿ 61.15 ಲಕ್ಷ ರೂ ಗಳನ್ನು ವಂಚಿಸಿರುವ ಘಟನೆ ಮಂಗಳೂರು ಸೆನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜೂ.೧ರಂದು ಬೆಳಿಗ್ಗೆ ಮಹಿಳೆಯೋರ್ವರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ತಾನು ಮುಂಬೈಯ ಕೊಲಾಬಾ ಪೊಲೀಸ್ ಠಾಣೆಯ ಅಧಿಕಾರಿ ಸಂದೀಪ್ ಎಂದು ಪರಿಚಯಿಸಿಕೊಂಡಿದ್ದಾನೆ. ಇಂಗ್ಲೀಷ್ ನಲ್ಲಿ ಮಾತನಾಡುತ್ತಿದ್ದ ಈತ ಮಹಿಳೆಯ ಬಳಿ ನಿಮ್ಮಗುರುತಿನ ಚೀಟಿ ಬಳಸಿ ಯಾರೋ ಮಾನವ ಕಳ್ಳಸಾಗಾಣೆ, ಡ್ರಗ್ಸ್ ದಂಧೆ ಮೊದಲಾದ ಅಕ್ರಮ ಚಟುವಟಿಕೆಯನ್ನು ಮಾಡುತ್ತಿದ್ದಾರೆ.ಇದಕ್ಕೆ ಕೆನರಾ ಬ್ಯಾಂಕ್ ಖಾತೆ ಬಳಸಿ ಲೇವಾದೇವಿ ವ್ಯವಹಾರ ನಡೆಸುತ್ತಿದ್ದಾರೆ. ನಿಮ್ಮನ್ನು ಡಿಜಿಟಲ್ ಅರೆಸ್ಟ್ ಗೆ ಒಳಪಡಿಸುತ್ತೇವೆ. ನೀವು ಹಣ ನೀಡಬೇಕು. ಈ ವಿಷಯ ಯಾರಿಗೂ ತಿಳಿಸಬಾರದು ಎಂದು ಹೆದರಿಸಿದ್ದಾನೆ. ಬಳಿಕ ಮತ್ತೊಮ್ಮೆ ಕರೆ ಮಾಡಿದ ಆತ ಈ ವಿಷಯವನ್ನು ಪತಿ ಮತ್ತು ಮಕ್ಕಳ ಬಳಿ ಚರ್ಚಿಸಿದ್ದಲ್ಲಿ ಪತಿಯನ್ನು ಕೆಲಸದಿಂದ ತೆಗೆಸುವುದಾಗಿ ಹೆದರಿಸಿದ್ದಾನೆ. ನಂತರ ಮರುದಿನ ಮೋಹಿತ್ ಕುಮಾರ್ ಎಂಬಾತ ವಾಟ್ಸ್ ಆಪ್ ಕರೆ ಮಾಡಿ ಅದೇ ವಿಷಯವನ್ನು ಪ್ರಸ್ತಾಪಿಸಿದ್ದಾನೆ. ಇದೇ ವೇಳೆ ಮಹಿಳೆಯ ಆಧಾರ್, ಪಾನ್ ಹಾಗೂ ಬ್ಯಾಂಕ್ ಖಾತೆಯ ವಿವರ ಪಡೆದು ಹಣವರ್ಗಾಯಿಸುವಂತೆ ಒತ್ತಾಯಿಸಿದ್ದಾನೆ. ಈ ಹಿನ್ನೆಲೆ ಮಹಿಳೆ ಜೂ. ೨೧ರಿಂದ ಜು.ರವರೆಗೆ ಹಂತಹಂತವಾಗಿ 61,15,050 ರೂ.ಗಳನ್ನು ಅಪರಿಚಿತ ವ್ಯಕ್ತಿಯ ಖಾತೆಗೆ ಆರ್‌ಟಿಜಿಎಸ್ ಮೂಲಕ ವರ್ಗಾಯಿಸಿದ್ದಾರೆ. ಇನ್ನೂ ಹೆಚ್ಚಿನ ಹಣಕ್ಕೆ ಆರೋಪಿಗಳು ಬೇಡಿಕೆ ಇಟ್ಟ ಹಿನ್ನೆಲೆ ವಿಷಯವನ್ನು ಪತಿ ಮತ್ತು ಮಕ್ಕಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಇನ್ನು, ಈ ಬಗ್ಗೆ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.





