ಪಡುಬಿದ್ರೆ: ಹೆದ್ದಾರಿಗೆ ಉರುಳಿ ಬಿದ್ದ ಮರ- ಸಂಚಾರ ಅಸ್ತವ್ಯಸ್ತ
ಪಡುಬಿದ್ರಿ ಜು.04 (ಉಡುಪಿ ಟೈಮ್ಸ್ ವರದಿ): ಇಂದು ಸಂಜೆ ಧಾರಾಕಾರವಾಗಿ ಸುರಿದ ಗಾಳಿ ಮಳೆಗೆ ರಾಷ್ಟ್ರೀಯ ಹೆದ್ದಾರಿ 66ರ ಎರ್ಮಾಳು ಸರ್ಕಾರಿ ಶಾಲೆ ಬಳಿಯ ಅಶ್ವತ್ಥ ಮರವೊಂದು ಧರಾಶಾಹಿಯಾದ ಘಟನೆ ನಡೆದಿದೆ.
ಹೆದ್ದಾರಿಗೆ ಮರ ಉರುಳಿ ಬಿದ್ದ ಕಾರಣ ಹೆದ್ದಾರಿಯ ಒಂದು ಪಾಶ್ವ ಸಂಪೂರ್ಣ ಬ್ಲಾಕ್ ಆಗಿತ್ತು. ಯಾವುದೇ ವಾಹನ ಸಂಚಾರ ಇಲ್ಲದ ಕಾರಣ ಬಾರೀ ದುರಂತ ತಪ್ಪಿದೆ.
ಸಂಜೆ 3-45ರ ಸುಮಾರಿಗೆ ಬಾರಿ ಮಳೆಗಾಳಿ ಬೀಸುತ್ತಿದ್ದ ಪರಿಣಾಮ ಮೂವರು ಬೈಕ್ ಸವಾರರು ತಮ್ಮ ಬೈಕನ್ನು ಹೆದ್ದಾರಿ ಪಕ್ಕದಲ್ಲಿರಿಸಿ ಮರದ ಸಮೀಪವೇ ಇದ್ದ ಬಸ್ ತಂಗುದಾಣದಲ್ಲಿ ನಿಂತಿದ್ದು, ಅವರು ನೋಡ ನೋಡುತ್ತಿದಂತೆ ಮರ ಧರೆಗುರುಳಿದೆ. ಒಂದು ಬೈಕ್ ಅದರೆಡೆಯಲ್ಲಿ ಸಿಲುಕಿ ಜಖಂ ಗೊಂಡಿದ್ದು ಬಿಟ್ಟರೆ ಯಾವುದೇ ಅಪಾಯ ಸಂಭವಿಸಿಲ್ಲ. ಸುಮಾರು ಒಂದುವರೆ ಗಂಟೆಗಳ ಕಾಲ ಒಂದೇ ಪಾಶ್ವದಲ್ಲಿ ವಾಹನಗಳು ಸಂಚರಿಸುತ್ತಿದ್ದರಿಂದ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿದ್ದು, ಆ ಬಳಿಕ ಸ್ಥಳಕ್ಕೆ ಯಂತ್ರ ಸಮೇತ ಬಂದ ಹೆಜಮಾಡಿ ಟೋಲ್ ಸಿಬ್ಬಂದಿಗಳು ಮರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ.
ಕೆಲ ಸಮಯದ ಹಿಂದೆಯಷ್ಟೆ ಪಕ್ಕದ ಶಾಲಾ ಶಿಕ್ಷಕಿಯೋರ್ವರು ಅದೇ ಮರದಡಿಯಲ್ಲಿ ಬಸ್ ಕಾಯುತ್ತಿದ್ದು ಅದೃಷ್ಟವಶಾತ್ ಈ ಅವಘಢ ಸಂಭವಿಸುವ ಮೊದಲೇ ಅವರು ಬಸ್ಸೇರಿ ಹೋಗಿದ್ದರು. ಒಂದರ್ಧ ಗಂಟೆ ವಿಳಂಬವಾಗುತ್ತಿದ್ದರೆ ಈ ಮರದ ಅಡಿಯಲ್ಲಿ ಶಾಲಾ ಮಕ್ಕಳು ಸಹಿತ ಶಿಕ್ಷಕಿಯರು ಬಸ್ ಕಾಯಲು ನಿಲ್ಲುತ್ತಿದ್ದು ಬಾರೀ ದುರಂತವೇ ಸಂಭವಿಸುತ್ತಿತ್ತು.





