ಸಾಮರಸ್ಯದ ವಾತಾವರಣಕ್ಕೆ ಮಹಿಳಾ ಕಾಂಗ್ರೆಸ್‌ನಿಂದ ಮನೆ ಮನೆಗೆ ಭೇಟಿ- ಚರ್ಚೆ

ಉಡುಪಿ ಜು.04(ಉಡುಪಿ ಟೈಮ್ಸ್ ವರದಿ): ಸಾಮರಸ್ಯರ ವಾತಾವರಣಕ್ಕೆ ಮನೆ ಮನೆಗೆ ಭೇಟಿ ನೀಡಿ ಧ್ವೇಷದ ವಾತಾವರಣ ಬೇಕೆ ಅಥವಾ ಅಭಿವೃದ್ಧಿ ಬೇಕೆ ಎಂಬುದರ ಬಗ್ಗೆ ಚರ್ಚೆ ಮಾಡಬೇಕು ಎಂದು  ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಹೇಳಿದ್ದಾರೆ.

ಈ ಬಗ್ಗೆ ಬನ್ನಂಜೆ ಶ್ರೀನಾರಾಯಣ ಗುರು ಸಭಾಭವನದಲ್ಲಿ ನಡೆದ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನೂತನ ಅಧ್ಯಕ್ಷರ ಹಾಗೂ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜಕೀಯ ಲಾಭಕ್ಕಾಗಿ ಕೋಮು ಸಂಘರ್ಷ ಹಾಗೂ ಧ್ವೇಷ ಭಾಷಣದ ಮೂಲಕ ಕರಾವಳಿಯಲ್ಲಿ ಕೋಮು ಸಾಮರಸ್ಯ ಹಾಳುವ ಮಾಡುವ ಕಾರ್ಯ ನಡೆಯುತ್ತಿದೆ ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಧ್ವೇಷದ ವಾತಾವರಣ ಬೇಕೆ ಅಥವಾ ಅಭಿವೃದ್ಧಿ ಬೇಕೆ ಎಂಬುದರ ಬಗ್ಗೆ ಚರ್ಚೆ ಮಾಡಬೇಕು. ಆ ಮೂಲಕ ಜಿಲ್ಲೆಯಲ್ಲಿ ಸಾಮರಸ್ಯದ ವಾತಾವರಣ ನಿರ್ಮಿಸುವ ಕಾರ್ಯ ಮಾಡಬೇಕು ಎಂದರು.

ಸಂಕಲ್ಪ, ಸರ್ಮಪಣೆ ಮೂಲಕ ಸಂಘರ್ಷವನ್ನು ಬದಿಗೊತ್ತಿ ತಳಮಟ್ಟದಿಂದಲೇ ಪಕ್ಷವನ್ನು ಕಟ್ಟಬೇಕು ಮತ್ತು ಮಹಿಳಾ ಮತದಾರರನ್ನು ಸಂಘಟಿಸಬೇಕು. ಜಾತಿ ಧರ್ಮದ ತಾರತಮ್ಯ ಇಲ್ಲದೇ ಎಲ್ಲರನ್ನು ಒಗ್ಗೂಡಿಸಿ ಕೊಂಡು ಕರೆದೊಯ್ಯುವ ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಜನರಿಗೆ ತಿಳಿಸುವ ಕಾರ್ಯ ಮಾಡಬೇಕು ಎಂದರು.

ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಆ ಹಣದಿಂದ ಹೊಸಹೊಸ ವ್ಯವಹಾರ ಆರಂಭಿಸಿದ್ದಾರೆ, ಕೆಲವರು ಮಕ್ಕಳ ಶಿಕ್ಷಣ, ಆರೋಗ್ಯಕ್ಕೆ ಬಳಸಿ ಕೊಂಡಿದ್ದಾರೆ. ಉಚಿತ ಬಸ್ ಪ್ರಯಾಣದಿಂದ ಗ್ರಾಮೀಣ ಪ್ರದೇಶದ ಮಹಿಳೆಯರು ಸ್ವಾಭಿಮಾನದಿಂದ ಎಲ್ಲ ಕಡೆ ತಿರುಗಾಡುತ್ತಿದ್ದಾರೆ. ಮುಂದಿನ ಪೀಳಿಗೆಯನ್ನು ಗಮನದಲ್ಲಿರಿಸಿಕೊಂಡು ಮಹಿಳೆಯರ ಕೈ ಬಲಪಡಿಸಲು ಸರಕಾರ ಈ ಎಲ್ಲ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗ್ಯಾರಂಟಿ ಫಲಾನುಭವಿಗಳ ಸಭೆ ನಡೆಸಿ ಅದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅವರು ತಿಳಿಸಿದರು.

ಈ ವೇಳೆ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಅವರು ಮಾತನಾಡಿ, ಯಾವುದೇ ಸರಕಾರ ಇಂದು ಅಧಿಕಾರಕ್ಕೇರಲು ಮಹಿಳಾ ಮತದಾರರು ಮುಖ್ಯ. ಅವರ ಸಂಖ್ಯೆಯೇ ಹೆಚ್ಚಾಗಿರುವುದರಿಂದ ಅವರೇ ನಿರ್ಣಯಕರು ಆಗಿದ್ದಾರೆ. ಅದನ್ನು ಅರ್ಥ ಮಾಡಿಕೊಂಡು ಅವರಿಗೆ ಸ್ಥಾನಮಾನ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸರಕಾರದ ಬಗ್ಗೆ ಬಿಜೆಪಿಯವರು ನಡೆಸುತ್ತಿರುವ ಅಪಪ್ರಚಾರದ ವಿರುದ್ಧ ನಮ್ಮ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.

ಇದೇ ವೇಳೆ ನಿಗರ್ಮನ ಅಧ್ಯಕ್ಷೆ ಗೀತಾ ವಾಗ್ಳೆ ಅವರು ನೂತನ ಅಧ್ಯಕ್ಷೆ ಜ್ಯೋತಿ ಕೃಷ್ಮ ಹೆಬ್ಬಾರ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಜಯಪ್ರಕಾಶ್ ಹೆಗ್ಡೆ, ವಿನಯ ಕುಮಾರ್ ಸೊರಕೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಂಗ್ರೆಸ್ ಮುಖಂಡರಾದ ಎಂ.ಎ. ಗಫೂರ್, ಪ್ರಸಾದ್‌ರಾಜ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಮುನಿಯಾಲು ಉದಯ ಶೆಟ್ಟಿ, ಮಮತಾ ಗಟ್ಟಿ, ಲಾವಣ್ಯ ಬಲ್ಲಾಳ್, ವರೋನಿಕಾ ಕರ್ನೆಲಿಯೋ, ಸರಳ ಕಾಂಚನ್, ದಿನಕರ ಹೆರೂರು, ಸರಸು ಡಿ.ಬಂಗೇರ, ಹರೀಶ್ ಕಿಣಿ, ರಾಜು ಪೂಜಾರಿ, ಕೃಷ್ಣ ಶೆಟ್ಟಿ ಬಜಗೋಳಿ, ಸತೀಶ್ ಕೊಡವೂರು ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *

error: Content is protected !!