ಮೊಂಟೆಪದವು ಗುಡ್ಡ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 2ಕ್ಕೆ ಏರಿಕೆ
ಕೊಣಾಜೆ: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಜೋರಾಗಿದ್ದು, ಬಿಡುವಿಲ್ಲದೇ ಸುರಿಯುತ್ತಿರುವ ಮಳೆಗೆ ಸಾಕಷ್ಟು ಅನಾಹುತಗಳು ಸಂಭವಿಸಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಮಂಜನಾಡಿ ಗ್ರಾಮದ ಮೊಂಟೆಪದವು ಹಿತ್ತಿಲುಕೋಡಿ ಕೊಪ್ಪಲ ಎಂಬಲ್ಲಿ ಶುಕ್ರವಾರ ಮುಂಜಾನೆ ಮನೆ ಮೇಲೆ ಗುಡ್ಡ ಕುಸಿತ ಉಂಟಾಗಿ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಗುಡ್ಡ ಕುಸಿತದಿಂದಾಗು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದ ಓರ್ವ ಮಗು ಮೃತಪಟ್ಟಿದ್ದು, ಇನ್ನೋರ್ವ ಮಗು ಹಾಗೂ ತಾಯಿಯನ್ನು ರಕ್ಷಿಸಲು ರಕ್ಷಣಾ ತಂಡ ಹರಸಾಹಸ ಪಡುತ್ತಿದೆ. ಈಗಾಗಲೇ ಮೃತಪಟ್ಟಿರುವ ಮಗುವನ್ನು ಅವಶೇಷಗಳಡಿಯಿಂದ ಹೊರತೆಗೆದಿದ್ದು, ಮನೆ ಮಾಲಕ ಕಾಂತಪ್ಪ ಹಾಗೂ ಅವರ ಮಗ ಸೀತಾರಾಮ ಅವರನ್ನು ರಕ್ಷಿಸಲಾಗಿದೆ. ಕಾಂತಪ್ಪ ಅವರ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು, ಘಟನೆಯಲ್ಲಿ ಕಾಂತಪ್ಪರವರ ಪತ್ನಿ ಪ್ರೇಮಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವಶೇಷಗಳಡಿ ಸಿಲುಕಿಬಿದ್ದಿರುವ ಇನ್ನೊಂದು ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದು, ಮಕ್ಕಳ ತಾಯಿ ಅಶ್ವಿನಿ ಉಸಿರಾಡುತ್ತಿದ್ದು, ಕೈ ಅಲ್ಲಾಡಿಸುತ್ತಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿರುವ ವೈದ್ಯರ ತಂಡವು ಅವರಿಗೆ ಆಕ್ಸಿಜನ್ ಪೂರೈಕೆಗೆ ವ್ಯವಸ್ಥೆ ಮಾಡಿದೆ ಎನ್ನಲಾಗಿದೆ.





