ಗಾಳಿ ಮಳೆಗೆ ಮಗುಚಿ ಬಿದ್ದ ನಾಡ ದೋಣಿ: ಇಬ್ಬರು ನಾಪತ್ತೆ
ಮಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಮೀನು ಹಿಡಿಯುತ್ತಿದ್ದಾಗ ಜೋರಾದ ಗಾಳಿ ಮಳೆಯ ರಭಸಕ್ಕೆ ನಾಡ ದೋಣಿ ಮಗುಚಿಬಿದ್ದು ದೋಣಿಯಲ್ಲಿದ್ದ ಇಬ್ಬರು ನಾಪತ್ತೆಯಾಗಿರುವ ಘಟನೆ ತೋಟ ಬೆಂಗ್ರೆ ಅಳಿವೆ ಬಾಗಿಲು ಸಮೀಪ ಶುಕ್ರವಾರ ನಡೆದಿದೆ.
ನಾಪತ್ತೆಯಾದ ಮೀನುಗಾರರನ್ನು ಯಶವಂತ, ಕಮಲಾಕ್ಷ ಎಂದು ಗುರುತಿಸಲಾಗಿದೆ.
ಮಗುಚಿಬಿದ್ದ ನಾಡ ದೋಣಿಯ ಪೆಟ್ರೋಲ್ ಟ್ಯಾಂಕ್ ತೋಟ ಬೇಂಗ್ರೆ ಸಮೀಪ ದಡಕ್ಕೆ ಬಂದು ಬಿದ್ದಿದ್ದು, ನಾಡ ದೋಣಿ ಇನ್ನೂ ಪತ್ತೆಯಾಗಿಲ್ಲ. ಇನ್ನು, ಕರಾವಳಿ ಜಿಲ್ಲೆಗಳಲ್ಲಿ ವಿಪರೀತ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ. ಸಾರ್ವಜನಿಕರಿಗೆ ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ. ಮೀನುಗಾರರಿಗೆ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ. ಸೂಚನೆಯ ನಡುವೆಯೂ ಮೀನುಗಾರಿಕೆಗೆ ತೆರಳುತ್ತಿರುವುದು ಅಪಾಯಕ್ಕೆ ಕಾರಣವಾಗಿದೆ ಎನ್ನಲಾಗಿದೆ.





