ಮಲ್ಪೆ: ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ವಶಕ್ಕೆ

ಮಲ್ಪೆ ಎ.17(ಉಡುಪಿ ಟೈಮ್ಸ್ ವರದಿ): ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವಾಹನ ತಡೆದ ಪೊಲೀಸರು 13 ಸಾವಿರಕ್ಕೂ ಅಧಿಕ ಮೌಲ್ಯದ ಮದ್ಯವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಚುನಾವಣೆಯ ಸಲುವಾಗಿ ಜಿಲ್ಲಾಧಿಕಾರಿಯ ಸೂಚನೆ ಮೇರೆಗೆ ಆಯೋಜನೆಗೊಂಡಿರುವ ವಿಶೇಷ ತಂಡದ ಶಾಲಿನ್ ಡಿಕೋಸ್ತಾ ಅವರು ಮಲ್ಪೆ ಠಾಣಾ ವ್ಯಾಪ್ತಿಯ ಮೂಡುತೋನ್ಸೆ ಗ್ರಾಮದ ಹಂಪನ ಕಟ್ಟೆ ಚೆಕ್ ಪೋಸ್ಟ್ ನಲ್ಲಿ  ಮಲ್ಪೆ ಪೊಲೀಸ್ ಠಾಣಾ ಸಿಬ್ಬಂದಿಯವರೊಂದಿಗೆ ವಾಹನ ತಪಾಸಣೆ ನಡೆಸುತ್ತಿದ್ದಾಗ, ಕೆಮ್ಮಣ್ಣುವಿನಿಂದ ನೇಜಾರಿನ ಕಡೆಗೆ ಬರುತ್ತಿದ್ದ  ಕಾರನ್ನು ತಡೆದು ತಪಾಸಣೆ ನಡೆಸಿದಾಗ ಕಾರಿನ ಹಿಂಬದಿ ಸೀಟಿನಲ್ಲಿದ್ದ 13,280 ರೂ. ಮೌಲ್ಯದ ಮದ್ಯದ ಬಾಟಲಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಗಿರಿಧರ ಬಾಳಿಗ ಎಂಬಾತನ ಬಳಿ ವಿಚಾರಿಸಿದಾಗ ಆತನು ಎ.15 ರಂದು ಮಂಗಳೂರಿನ ಕದ್ರಿಯ ಮದ್ಯದ ಅಂಗಡಿಯಲ್ಲಿ  ಖರೀದಿ ಮಾಡಿರುವುದಾಗಿ ತಿಳಿಸಿದ್ದನು. ಬಿಲ್ ನ್ನು ಪರಿಶೀಲಿಸಿದಾಗ ಸೂಚಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ಮದ್ಯ ಪತ್ತೆಯಾಗಿದ್ದು ಹಾಗೂ ಸಾಗಾಟ ಮಾಡಲು ಯಾವುದೇ ಪರವಾನಿಗೆ ಹೊಂದಿರುವುದಿಲ್ಲ ಎಂದು ತಿಳಿದು ಬಂದಿದೆ. ಆದ್ದರಿಂದ ಪೊಲೀಸರು ಮದ್ಯವನ್ನು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ.  ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!