ಮಾಂಸಹಾರ ಸೇವಿಸಿ ನಾಗಬನ-ದೇವಸ್ಥಾನಕ್ಕೆ ಸಿ.ಟಿ ರವಿ ಪ್ರವೇಶ: ಫೋಟೋ ವೈರಲ್

ಕಾರವಾರ ಫೆ.22 : ಭಟ್ಕಳದ ಶಿರಾಲಿಯಲ್ಲಿರುವ ಶಾಸಕ ಸುನಿಲ್ ನಾಯ್ಕ್ ಮನೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬಾಡೂಟ ಸವಿದಿರುವ ಫೋಟೋ ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದೀಗ ಶಾಸಕ ಸಿ.ಟಿ ರವಿ ಅವರು ಮಾಂಸ ತಿಂದು ನಾಗಬನ ಮತ್ತು ಹನುಮ ದೇಗುಲಕ್ಕೆ ಭೇಟಿ ನೀಡಿದ್ರಾ ಅನ್ನೋ ಕುರಿತು ಭಾರೀ ಚರ್ಚೆ ನಡೆಯುತ್ತಿದೆ.

ಫೆ.19 ರಂದು ಉತ್ತರ ಕನ್ನಡ ಜಿಲ್ಲೆಗೆ ಸಿ.ಟಿ.ರವಿ ಅವರು ಆಗಮಿಸಿದ್ದರು. ಕಾರವಾರದ ಶಿವಾಜಿ ಜಯಂತಿಯಲ್ಲಿ ಭಾಗವಹಿಸಿ ಭಟ್ಕಳಕ್ಕೆ ಸಿ.ಟಿ.ರವಿ ಆಗಮಿಸಿದ್ದರು. ಭಟ್ಕಳ ನಗರದ ಹಳೇ ಬಸ್ ನಿಲ್ದಾಣ ಸಮೀಪ ಇರುವ ನಾಗಬನ ಹಾಗೂ ಕರಿಬಂಟ ಹನುಮ ದೇವಸ್ಥಾನಕ್ಕೆ ಸಿ.ಟಿ.ರವಿ ಭೇಟಿ ನೀಡಿದ್ದರು. ಭಟ್ಕಳ ಶಾಸಕ ಸುನಿಲ್ ನಾಯ್ಕ್ ಹಾಗೂ ದೇವಸ್ಥಾನದ ಕಮಿಟಿ ಸದಸ್ಯರೊಂದಿಗೆ ಸಿ.ಟಿ.ರವಿ ದೇವಸ್ಥಾನಕ್ಕೆ ತೆರಳಿದ್ದ ಅವರು ನಾಗಬನದ ಬಾಗಿಲು ಹಾಕಿದ್ದರಿಂದ ಗೇಟ್ ಮುಂಭಾಗದಲ್ಲಿ ದೇವರಿಗೆ ನಮಸ್ಕಾರ ಸಲ್ಲಿಸಿದ್ದರು. ನಂತರ ಗೇಟ್ ಮುಂಭಾಗದಲ್ಲಿಯೇ ಶಾಸಕ ಸುನಿಲ್ ನಾಯ್ಕ ಹಾಗೂ ಕಮಿಟಿ ಸದಸ್ಯರು ಸಿ.ಟಿ.ರವಿ ಅವರನ್ನು ಸನ್ಮಾನಿಸಿದ್ದರು.

ಈ ನಡುವೆ ಭಟ್ಕಳದ ಶಿರಾಲಿಯಲ್ಲಿರುವ ಶಾಸಕ ಸುನಿಲ್ ನಾಯ್ಕ್ ಮನೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬಾಡೂಟ ಸವಿದಿದ್ದರು. ಬಾಡೂಟ ಸವಿದಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಿಂದೂ ಧರ್ಮದ ಬಗ್ಗೆ ಮಾತನಾಡುವ ರವಿ ಅವರು ಧರ್ಮದ ಆಚಾರ, ವಿಚಾರಗಳು ಹಾಗೂ ಸಂಪ್ರದಾಯವನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸಿ.ಟಿ. ರವಿ ಅವರ ಬಾಡೂಟ ಹಾಗೂ ದೇವಾಲಯ ಪ್ರವೇಶದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

ಈ ಹಿಂದೆ ಮಾಂಸ ಸೇವನೆ ಮಾಡಿ ದೇವಾಲಯದೊಳಗೆ ಪ್ರವೇಶ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಭಾರಿ ವಿರೋಧವನ್ನು ಎದುರಿಸಿದ್ದರು. ಈಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಶಾಸಕರೊಬ್ಬರ ಮನೆಯಲ್ಲಿ ಭರ್ಜರಿ ಬಾಡೂಟವನ್ನು ಸವಿದು ದೇವಾಲಯ ಪ್ರವೇಶ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Leave a Reply

Your email address will not be published. Required fields are marked *

error: Content is protected !!