ಬಿಲ್ಲವರ ವಿರೋಧ: ವೇಣೂರು ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ರೋಹಿತ್ ಚಕ್ರತೀರ್ಥರ ಉಪನ್ಯಾಸ ರದ್ದು

ವೇಣೂರು ಫೆ.22 : ಬಿಲ್ಲವ ಸಮುದಾಯದ ತೀವ್ರ ವಿರೋಧದ ಹಿನ್ನೆಲೆಯಲ್ಲಿ ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಆಯೋಜಿಸಿದ್ದ ರೋಹಿತ್ ಚಕ್ರತೀರ್ಥರ ಉಪನ್ಯಾಸವನ್ನು ರದ್ದುಗೊಳಿಸಲಾಗಿದೆ. ಈ ಮೂಲಕ ಕಾರ್ಯಕ್ರಮಕ್ಕೆ ರೋಹಿತ್ ಚಕ್ರತೀರ್ಥರನ್ನು ಕರೆಸಿಯೇ ಸಿದ್ದ ಎಂದು ಪಟ್ಟುಹಿಡಿದಿದ್ದ ಶಾಸಕ ಹರೀಶ್ ಪೂಂಜರಿಗೆ ಭಾರೀ ಮುಖಭಂಗವಾಗಿದೆ.

ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ಹತ್ತನೇ ತರಗತಿ ಪಠ್ಯದಿಂದ ತೆಗೆದು ಹಾಕಿದ ಪುಸ್ತಕ ಪರಿಷ್ಕರಣ ಸಮಿತಿಯ ಮುಖ್ಯಸ್ಥರಾದ ರೋಹಿತ್ ಚಕ್ರತೀರ್ಥರನ್ನು ‘ಶಿಕ್ಷಣ ಮತ್ತು ಧರ್ಮ’ ಎನ್ನುವ ವಿಚಾರದಲ್ಲಿ ಉಪನ್ಯಾಸ ನೀಡಲು ವೇಣೂರು ದೇವಸ್ಥಾನದ ಸಮಿತಿಯವರು ಕರೆದಿರುವುದು ಬಿಲ್ಲವರ ಆಕ್ರೋಶಕ್ಕೆ ಕಾರಣವಾಗಿತ್ತು. ವಿಚಾರದಲ್ಲಿ ಉಂಟಾಗಿರುವ ವಿವಾದದ ಕುರಿತಂತೆ ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾದ ಚಿದಾನಂದ ಪೂಜಾರಿ ಎಲ್ಲಡ್ಕ ರವರ ನೇತ್ರತ್ವದಲ್ಲಿ ಬಿಲ್ಲವ ಸಮಾಜದ ಪ್ರಮುಖರ ನಿಯೋಗ ವೇಣೂರು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರೂ ಆಗಿರುವ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪಪ್ರಸಾದ್ ಅಜಿಲರವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ರೋಹಿತ್ ಚಕ್ರತೀರ್ಥರ ಉಪನ್ಯಾಸಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ಹಾಗೂ ವಿಶ್ವಗುರು ಬ್ರಹ್ಮಶ್ರೀ ನಾರಾಯಣ ಗುರುಗಳು ಸೇರಿದಂತೆ ಭಗವಾನ್ ಮಹಾವೀರ, ಸಂವಿಧಾನ ಶಿಲ್ಪಿ ಡಾ| ಬಿ.ಆರ್ ಅಂಬೇಡ್ಕರ್, ಕುವೆಂಪು, ರಾಣಿ ಅಬ್ಬಕ್ಕ ಮತ್ತು ಕಯ್ಯಾರ ಕಿಂಇಣ್ಣ ರೈ ಮುಂತಾದ ದಾರ್ಶನಿಕರ ವ್ಯಕ್ತಿತ್ವಕ್ಕೆ ಕುಂದು ಬರುವ ರೀತಿಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ನಡೆಸಿ ಕೊನೆಗೆ ಸರಕಾರದ ಆದೇಶದಂತೆ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯಿಂದ ಪದಚ್ಯುತಗೊಂಡ ವಿಕೃತ ವಿಚಾರಧಾರೆಗಳನ್ನು ಹೊಂದಿರುವ ರೋಹಿತ್ ಚಕ್ರತೀರ್ಥರನ್ನು ಬ್ರಹ್ಮಕಲಶೋತ್ಸವದ ಸಭಾ ಕಾರ್ಯಕ್ರಮಕ್ಕೆ ಆಹ್ವಾನಿಸಬಾರದು ಎಂದು ಒಕ್ಕೊರಲಿನಿಂದ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಡಾ| ಪದ್ಮಪ್ರಸಾದ್ ಅಜಿಲರವರು ಪ್ರತಿಕ್ರಿಯೆ ನೀಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಯಾಯಿಗಳ ವಿರೋಧವನ್ನು ದಿಕ್ಕರಿಸಿ ವಿವಾದಿತ ವ್ಯಕ್ತಿಗಳನ್ನು ಆಹ್ವಾನಿಸುವ ಯಾವುದೇ ಉದ್ದೇಶ ನಮಗಿಲ್ಲ. ನಿಮ್ಮ ಭಾವನೆಯನ್ನು ಗೌರವಿಸಿ ವಿವಿಧ ಸಮಿತಿಯವರೊಂದಿಗೆ ಚರ್ಚಿಸಿ ನಿರ್ಧಾರ ತಿಳಿಸುವುದಾಗಿ ಭರವಸೆಯಿತ್ತರು. ಅದರಂತೆ ಇದೀಗ ಅರಸರಾದ ಅಜಿಲರು ಸಮಿತಿಯಲ್ಲಿ ಮಾತನಾಡಿ ರೋಹಿತ್ ಚಕ್ರತೀರ್ಥ ಕಾರ್ಯಕ್ರಮ ರದ್ದುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!