ಕೆಮ್ಮಣ್ಣುವಿನಲ್ಲಿ ರಸ್ತೆ ಬದಿ ಮೃತ ವ್ಯಕ್ತಿ ಎಸೆದು ಹೋದ ಘಟನೆ- ಎಸ್.ಪಿ ಸ್ಪಷ್ಟನೆ

ಉಡುಪಿ ಫೆ.17 (ಉಡುಪಿ ಟೈಮ್ಸ್ ವರದಿ): ಕೆಮ್ಮಣ್ಣುವಿನಲ್ಲಿ ಟೆಂಪೋ ರಿಕ್ಷಾದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಕಸದ ಕೊಂಪೆಯಲ್ಲಿ ಎಸೆದ ಪ್ರಕರಣಕ್ಕೆ ಸಂಬಂಧಿಸಿ ಅನುಮನಾಸ್ಪದ ಸಾವು ಪ್ರಕರಣ ದಾಖಲಾಗಿದ್ದು, ಹರಡಿರುವ ಸುದ್ದಿಗಳಿಗೆ ಸಂಬಂಧಿಸಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಅವರು ಸ್ಪಷ್ಟನೆ ನೀಡಿದ್ದಾರೆ.

ನಿನ್ನೆ ಟೆಂಪೋ ರಿಕ್ಷಾವೊಂದರಿಂದ ವ್ಯಕ್ತಿಯೊಬ್ಬರನ್ನು ಕಸದ ಕೊಂಪೆಯಲ್ಲಿ ಎಸೆದು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಳಿಕ ವ್ಯಕ್ತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿ ಇದೊಂದು ಕೊಲೆ , ಹಾಗೂ ಮೃತ ವ್ಯಕ್ತಿಯನ್ನು ಅಮಾನವೀಯವಾಗಿ ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು.

ಇದೀಗ ಘಟನೆಗೆ ಸಂಬಂಧಿಸಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಅವರು ಮಾಹಿತಿ ನೀಡಿ ಸ್ಪಷ್ಟನೆ ನೀಡಿದ್ದು, ಈ ಘಟನೆ ಬಗ್ಗೆ ಜನರು ತಪ್ಪು ತಿಳಿದು ಕೊಂಡಿದ್ದಾರೆ. ಘಟನೆಯಲ್ಲಿ ಇರುವವರು ಎಪಿಎಂಸಿ ಯಲ್ಲಿ ಕೆಲಸ ಮಾಡುತ್ತಿರುವವರು. ಕೂಲಿ ಕಾರ್ಮಿಕರಾಗಿದ್ದ ಇವರು ತಮ್ಮ ಟೆಂಪೋ ರೀಕ್ಷಾದಲ್ಲಿ ತರಕಾರಿ ತಂದು ಮಾರುತ್ತಿರುವಾಗ. ಈ ವ್ಯಕ್ತಿ ಕುಡಿದು ಬಂದು ಟೆಂಪೋದಲ್ಲಿ ಮಲಗಿದ್ದಾರೆ. ಇವರ ಏಳದೇ ಇರುವುದನ್ನು ಕಂಡು ಟೆಂಪೋದವರು ಅವರು ದಿನಾ ಮಲಗುತ್ತಿದ್ದ ಜಾಗದಲ್ಲಿ ಬಿಟ್ಟು ಹೋಗಿದ್ದಾರೆ. ಆತ ವಿಪರೀತ ಮದ್ಯಪಾನ ಮಾಡಿದ್ದರಿಂದ ಜನರು ದೇಹದಲ್ಲಿ ಯಾವುದೇ ಸ್ಪಂದನೆ ಇಲ್ಲದ್ದನ್ನು ನೋಡಿ ಕೊಲೆ ಮಾಡಿ ಎಸೆದಿದ್ದಾರೆ ಎಂದು ಕೊಂಡಿದ್ದಾರೆ. ಆದರೆ ವಿಡಿಯೋದಲ್ಲಿ ದೇಹದಲ್ಲಿ ಕೈಕಾಲು ಚಲನೆ ಇರುವುದು ಕಂಡು ಬರುತ್ತದೆ. ಆದಾದ ಮೇಲೆ ಯಾವುದೋ ಕಾರಣದಿಂದ ಆತ ಮೃತಪಟ್ಟಿದ್ದಾರೆ. ಮೇಲ್ನೋಟಕ್ಕೆ ಪರಿಶೀಲನೆ ನಡೆಸಿದಾಗ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಪತ್ತೆಯಾಗಿರಲಿಲ್ಲ. ಮೃತ ವ್ಯಕ್ತಿ ಹಾಗೂ ಆತನ ಜೊತೆಗಿದ್ದವರನ್ನು ವಿಚಾರಣೆ ನಡೆಸಿದಾಗ ಅವರು ಸ್ನೇಹಿತರು ಅವರ ನಡುವೆ ಯಾವುದೇ ಗಲಾಟೆಗಳು ಆಗಿಲ್ಲ ಎಂಬುದು ತಿಳಿದು ಬಂದಿದೆ. ಸದ್ಯ ಮೃತ ವ್ಯಕ್ತಿಯ ಮನೆಯವರು ಮಾಹಿತಿ ಮೇರೆಗೆ ಅನುಮನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದೇವೆ. ಮುಂದೆ ಹೆಚ್ಚಿನ ಮಾಹಿತಿ ಬಂದ ಬಳಿಕ ಪ್ರಕರಣದ ಸ್ಪಷ್ಟ ಮಾಹಿತಿ ಲಭ್ಯವಗುತ್ತದೆ. ಸದ್ಯ ಇದು ಕೊಲೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಜನರೂ ಈ ಬಗ್ಗೆ ಭಯಭೀತರಾಗುವುದು ಬೇಡ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!