ಇದು ರಾಜಸ್ವ ಹೆಚ್ಚಳದ ಅಮೃತ ಕಾಲದ ಬಜೆಟ್ : ಸುನಿಲ್ ಕುಮಾರ್

ಬೆಂಗಳೂರು ಫೆ.17 (ಉಡುಪಿ ಟೈಮ್ಸ್ ವರದಿ): ಕೋವಿಡ್ ನಂತರದ ದಿನಗಳಲ್ಲಿ ರಾಜ್ಯದ ಹಣಕಾಸು ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿ ಹಿಡಿದಿಡುವ ಮೂಲಕ ಸುಮಾರು 402 ಕೋಟಿ ರೂ. ರಾಜಸ್ವ ಹೆಚ್ಚಳದ ಬಜೆಟ್ ಮಂಡನೆ ಮಾಡುವ ಮೂಲಕ ಸಿಎಂ ಬಸವರಾಜ್ ಬೊಮ್ಮಾಯಿ ರಾಜ್ಯದ ಅಭಿವೃದ್ಧಿಗೆ ಪೂರಕವಾದ ಆಯವ್ಯಯ ಮಂಡಿಸಿದ್ದಾರೆ ಎಂದು ಇಂಧನ ಹಾಗೂ ಕನ್ನಡ ಸಂಸ್ಕ್ರತಿ ಸಚಿವ ವಿ ಸುನಿಲ್ ಕುಮಾರ್ ಹೇಳಿದ್ದಾರೆ.

ಇಂದಿನ ಸಿಎಂ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ರಾಜಸ್ವ ವೆಚ್ಚ, ಬಂಡವಾಳ ವೆಚ್ಚ ಹಾಗೂ ಸಾಲ ಮರುಪಾವತಿ ಸೇರಿದಂತೆ 3, 09, 182 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದಾರೆ. ವಿತ್ತೀಯ ಹೊಣೆಗಾರಿಕೆ ಮಿತಿಯಲ್ಲೇ ರಾಜ ಸ್ವ ಹೆಚ್ಚಳದ ಬಜೆಟ್ ಮಂಡನೆ ಮೂಲಕ ಬೊಮ್ಮಾಯಿ ಸೈ ಎನಿಸಿಕೊಂಡಿದ್ದಾರೆ. ರಾಜ್ಯದ ರೈತ ಸಮುದಾಯಕ್ಕೆ ಈ ಬಾರಿಯ ಬಜೆಟ್ ನಲ್ಲಿ ವಿಶೇಷ ಕೊಡುಗೆ ನೀಡಲಾಗಿದೆ. ಸಹಕಾರ ಬ್ಯಾಂಕ್ ಗಳ ಮೂಲಕ ನೀಡಲಾಗುತ್ತಿದ್ದ ಶೂನ್ಯ ಬಡ್ಡಿ ಸಾಲ ಪ್ರಮಾಣವನ್ನು 3ರಿಂದ 5 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ. 30 ಲಕ್ಷ ರೈತರಿಗೆ ಇದರಿಂದ ಅನುಕೂಲವಾಗಲಿದೆ. 56 ಲಕ್ಷ ಸಣ್ಣ ಹಾಗೂ ಅತಿಸಣ್ಣ ರೈತ ಕುಟುಂಬಗಳಿಗೆ ವಿಮಾ ಯೋಜನೆ ಕಲ್ಪಿಸಿರುವುದು ಶ್ಲಾಘನೀಯ ಎಂದರು.

ಮೀನುಗಾರರಿಗೆ ವಸತಿ ಸೌಲಭ್ಯ ಕಲ್ಪಿಸಲು ನಮ್ಮ ಸರ್ಕಾರ ಆದ್ಯತೆ ನೀಡಿದ್ದು, ಪ್ರಸಕ್ತ ಸಾಲಿನಲ್ಲಿ ಹತ್ತು ಸಾವಿರ ವಸತಿ ರಹಿತ ಮೀನುಗಾರರಿಗೆ ಸೂರು ಕಲ್ಪಿಸಲಾಗುತ್ತದೆ. ಮೀನುಗಾರಿಕಾ ದೋಣಿಗಳಿಗೆ 2 ಲಕ್ಷ ಕಿ ಲೀಟರ್ ಡೀಸೆಲ್ ನೀಡಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಸರ್ಕಾರ 250 ಕೋಟಿ ರೂ. ವಿನಿಯೋಗಿಸಲಿದೆ. ಸೀಗಡಿ ರಫ್ತು ಪ್ರೋತ್ಸಾಹಿಸಲು ಸೀಗಡಿ ಕೃಷಿ ಕ್ಕಸ್ಟರ್ ಸ್ಥಾಪನೆಗೆ ಮುಂದಾಗಿರುವುದು ಸ್ವಾಗತಾರ್ಹ. ಪಶ್ಚಿಮವಾಹಿನಿ ಎರಡನೇ ಹಂತದಲ್ಲಿ 378 ಕೋಟಿ ರೂ. ಮೊತ್ತದ ಕಾಮಗಾರಿ ಅನುಷ್ಠಾನಕ್ಕೆ ಬಜೆಟ್ ನಲ್ಲಿ ಭರವಸೆ ನೀಡಲಾಗಿದೆ. ಆಳಸಮುದ್ರ ಮೀನುಗಾರಿಕೆಯನ್ನು ಉತ್ತೇಜಿಸಲು 100 ಆಳ ಸಮುದ್ರ ಮೀನುಗಾರಿಕಾ ದೋಣಿಗಳಿಗೆ ಮತ್ಸ್ಯ ಸಿರಿ ಯೋಜನೆ ಸಂಯೋಜನೆ ಮಾಡಲು ಮುಂದಾಗಿರುವ ಮೂಲಕ ಮತ್ಸ್ಯೋದ್ಯಮಕ್ಕೆ ಆದ್ಯತೆ ನೀಡಲಾಗಿದೆ. ಒಟ್ಟಾರೆಯಾಗಿ ಇದು ಎಲ್ಲರನ್ನು ಒಳಗೊಳ್ಳುವ ಅಮೃತ ಕಾಲದ ಬಜೆಟ್ ಎಂದು ಬಣ್ಣಿಸಿದ್ದಾರೆ.

ಹಾಗೂ ಸ್ತ್ರ್ರೀಯರ ಸಬಲೀಕರಣಕ್ಕಾಗಿ ಒಂದು ಲಕ್ಷ ಮಹಿಳೆಯರಿಗೆ ಕೌಶಲ್ಯ ತರಬೇತಿ, ಮಹಿಳಾ ಕಾರ್ಮಿಕರಿಗೆ 500ರೂ. ಸಹಾಯ ಧನ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಸಣ್ಣ ಮತ್ತು ಅತಿ ಸಣ್ಣ ಕುಟುಂಬಗಳಿಗೆ ಜೀವನ್ ಜ್ಯೋತಿ ವಿಮಾ ಯೋಜನೆ, ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆ ಸೇರಿದಂತೆ ಜನ ಸಾಮಾನ್ಯರಿಗೆ ಹೊರೆಯಾಗದಂತೆ ಮುಖ್ಯಮಂತ್ರಿಗಳು ಯೋಜನೆ ರೂಪಿಸಿದ್ದಾರೆ. ಇಂಧನ ಕ್ಷೇತ್ರದ ಸುಧಾರಣೆಗಾಗಿ ಗುರುಚರಣ್ ಸಮಿತಿ ವರದಿ ಅನುಷ್ಢಾನದ ಬಗ್ಗೆ ಬಜೆಟ್ ನಲ್ಲಿ ಭರವಸೆ ನೀಡಲಾಗಿದೆ. ಇಂಧನ ಕಂಪನಿಗಳಿಗೆವ 13,743 ಕೋಟಿ ರೂ.ಅನುದಾನ ನೀಡುವ ಭರವಸೆ ನೀಡಲಾಗಿರುವುದು ಶ್ಲಾಘನೀಯ. ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಿಗೆ ಬೊಮ್ಮಾಯಿ ಉದಾರ ಹೃದಯ ತೋರಿದ್ದಾರೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!