ಅಂಬಲಪಾಡಿ ಜಂಕ್ಷನ್ ಬಳಿ ಹೆದ್ದಾರಿ ದಿಢೀರ್ ಬ್ಲಾಕ್ : ಸಾರ್ವಜನಿಕರ ಆಕ್ರೋಶ

ಉಡುಪಿ ಜ.31 (ಉಡುಪಿ ಟೈಮ್ಸ್ ವರದಿ) : ಅಂಬಲಪಾಡಿ ಜಂಕ್ಷನ್ ಬಳಿ ಇಂದು ಬೆಳಗ್ಗೆ ನಾಮ ಫಲಕವನ್ನು ಅಳವಡಿಸುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿಯ ಏಕಮುಖ ಸಂಚಾರವನ್ನು ದಿಢೀರ್ ಬಂದ್ ಮಾಡಿದ್ದು ಸಾರ್ವಜನಿಕರು ಪರದಾಡುವಂತಾಗಿತ್ತು.

ಈ ವೇಳೆ ನಾಮಫಲಕ ಅಳವಡಿಸಲು ಅನುಮತಿ ಪಡೆದಿದ್ದರೂ, ಕಾಮಗಾರಿ ನಡೆಸುವ ಪೂರ್ವದಲ್ಲಿ ಸ್ಥಳೀಯ ಟ್ರಾಫಿಕ್ ಪೊಲೀಸರಿಗೆ ಮಾಹಿತಿ ನೀಡದೆ ಗುತ್ತಿಗೆದಾರರು ಏಕಾಏಕೀ ಹೆದ್ದಾರಿ ಬ್ಲಾಕ್ ಮಾಡಿದಕ್ಕೆ ವಾಹನ ಸವಾರರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದರು.

ಈ ಬಗ್ಗೆ ಮಾಹಿತಿ ತಿಳಿದ ಸಮಾಜ ಸೇವಕ ವಿಶು ಶೆಟ್ಟಿ ಅವರು ತಕ್ಷಣ ಸ್ಥಳಕ್ಕೆ ಧಾವಿಸಿ, ಟ್ರಾಫಿಕ್ ಪೊಲೀಸರಿಗೆ ಮಾಹಿತಿ ನೀಡಿದರು. ಮಾತ್ರವಲ್ಲದೆ, ಪೊಲೀಸರು ಸ್ಥಳಕ್ಕೆ ಬರುವವರೆಗೆ ತಾವೇ ನಿಂತು ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಶ್ರಮ ವಹಿಸಿದರು.

ಈ ಬಗ್ಗೆ ಮಾತನಾಡಿದ ಸಮಾಜ ಸೇವಕ ವಿಶು ಶೆಟ್ಟಿ ಅವರು, ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡುವ ಮೊದಲು ಪಕ್ಕದ ಸರ್ವಿಸ್ ರೋಡ್‍ನಲ್ಲಿ ಲಂಗರು ಹಾಕಿದ 2 ಘನ ಲಾರಿಗಳನ್ನು ತೆರವುಗೊಳಿಸಿ ಸರಿಯಾದ ಮುಂಜಾಗ್ರತೆ, ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಹಾಗೂ ಸಂಚಾರಿ ಪೊಲೀಸರು ಆಗಮಿಸಿದ ಬಳಿಕ ಕಾಮಗಾರಿ ನಡೆಸಬೇಕಾಗಿತ್ತು. ಆದರೆ ಇದ್ಯಾವುದನ್ನೂ ಗುತ್ತಿಗೆದಾರರು ಮಾಡಿಲ್ಲ. ಇದರಿಂದಾಗಿ ಏಕಾಏಕೀ ವಾಹನಗಳು ಸರ್ವಿಸ್ ರಸ್ತೆಗೆ ನುಗ್ಗಿದ ಕಾರಣ ಟ್ರಾಫಿಕ್ ಜಾಮ್ ಉಂಟಾಗಿ ಮೂರು ಆಂಬ್ಯುಲೆನಸ್ ಗಳು ಸೇರಿದಂತೆ ತುರ್ತು ವಾಹನಗಳು ಸಿಕ್ಕಿ ಹಾಕಿಕೊಂಡವು ಎಂದು ತಿಳಿಸಿದ್ದಾರೆ. ಹಾಗೂ ಹೆದ್ದಾರಿಯಲ್ಲಿ ಮುಂದೆ ಇಂತಹ ಎಡವಟ್ಟುಗಳು ಗುತ್ತಿಗೆದಾರ ಕಂಪೆನಿಯಿಂದ ನಡೆಯದಂತೆ ಟ್ರಾಫಿಕ್ ಪೊಲೀಸರು, ಸಂಬಂಧಪಟ್ಟ ಪ್ರಾಧಿಕಾರ ಗಮನ ಹರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!