ಉಚ್ಚಿಲ: ಉಡುಪಿ ಜಿಲ್ಲಾ ಮಟ್ಟದ ಸಹಕಾರ ಸಪ್ತಾಹಕ್ಕೆ ಚಾಲನೆ

ಉಡುಪಿ ನ.14 (ಉಡುಪಿ ಟೈಮ್ಸ್ ವರದಿ) : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಬೆಂಗಳೂರು ಮತ್ತು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಸಹಕಾರ ಸಂಸ್ಥೆಗಳ ಸಹಯೋಗದೊಂದಿಗೆ 7 ದಿನಗಳ ಕಾಲ ಆಯೋಜಿಸಲಾದ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರಕುಮಾರ್ ರವರ ಅಭಿನಂದನಾ ಕಾರ್ಯಕ್ರಮ ಮತ್ತು ಉಡುಪಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಇಂದು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು.

ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಬೆಂಗಳೂರು ಇದರ ಅಧ್ಯಕ್ಷ ಡಾ. ಎಂ.ಎನ್ ರಾಜೇಂದ್ರ ಕುಮಾರ್ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು,

ನಾರಿ ಶಕ್ತಿಯ ಮುಂದೆ ಯಾವ ಶಕ್ತಿಯೂ ಇಲ್ಲ. ಇವತ್ತು ಉಚ್ಚಿಲದಲ್ಲಿ ನಡೆದ ಸಹಕಾರಿ ಉತ್ಸವದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮಹಿಳೆಯರು ಸೇರಿಕೊಂಡು ಸಹಕಾರಿ ಕ್ಷೇತ್ರಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. 120 ವರ್ಷಗಳ ಇತಿಹಾಸವಿರುವ ಸಹಕಾರಿ ಕ್ಷೇತ್ರವನ್ನು ಬ್ರಿಟೀಷರು ಕೂಡಾ ಗೌರವಿಸುವಂತಾಗಿದೆ. ಉಡುಪಿಯ ಚರಿತ್ರೆಯಲ್ಲಿ ಬರೆದಿಡುವಂತಹ ಮಟ್ಟಿಗೆ ಬೃಹತ್ ಮೆರವಣಿಗೆ ಯಶಸ್ವಿಯಾಗಿದೆ. ನಿಜಕ್ಕೂ ಉಡುಪಿ ಜಿಲ್ಲೆಯ ಉಚ್ಚಿಲದಲ್ಲಿ ಕರಾವಳಿ ಜಿಲ್ಲೆಯ ಸಹಕಾರಿಗಳ ಶಕ್ತಿಪ್ರದರ್ಶನ ನಡೆದಿದೆ ಎಂದರು.

ಸಹಕಾರಿ ಉತ್ಸವದ ರೀತಿಯಲ್ಲಿ ಸಹಕಾರಿ ಸಪ್ತಾಹವನ್ನು ರಾಜ್ಯಾದ್ಯಂತ ಆಚರಿಸಲಾಗುತ್ತಿದೆ. ಇದರ ಉದ್ದೇಶ ಸಹಕಾರಿ ಕ್ಷೇತ್ರವನ್ನು ಬೆಳೆಸುವುದು ಮಾತ್ರವಲ್ಲದೆ ಸಹಕಾರಿಕ್ಷೇತ್ರಕ್ಕೆ ಇನ್ನಷ್ಟು ಜನರನ್ನು ಬರಮಾಡಿಕೊಳ್ಳುವುದಾಗಿದೆ. ರಾಜ್ಯಮಟ್ಟದ ಕಾರ್ಯಕ್ರಮಕ್ಕೆ ಸರಿಸಮಾನವಾಗಿ ಉಚ್ಚಿಲದಲ್ಲಿ ಸಹಕಾರಿ ಉತ್ಸವದ ಮಾದರಿಯಲ್ಲಿ ಸಂಭ್ರಮದಿಂದ ಚಾಲನೆ ನೀಡಲಾಗಿದೆ. ನ.18ರಂದು ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಸಹಕಾರಿ ಉತ್ಸವದಲ್ಲಿ ಕೂಡಾ ಎಲ್ಲರೂ ಭಾಗವಹಿಸುವ ಮೂಲಕ ಸಹಕಾರಿಕ್ಷೇತ್ರವನ್ನು ಇನ್ನಷ್ಟು ಬಲಪಡಿಸಬೇಕು ಎಂದು ಕರೆ ನೀಡಿದರು.

ನಾವು ಇಂದು ಶಕ್ತಿ ಪ್ರದರ್ಶನ ಮಾಡಲು ಬಂದಿಲ್ಲ, ನಮ್ಮ ಶಕ್ತಿಯನ್ನು ಇನ್ನಷ್ಟು ಬಲಶಾಲಿಗೊಳಿಸಲು ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಹಕಾರಿಗಳು ಸಹಕಾರಿ ಕ್ಷೇತ್ರದ ಪ್ರಯೋಜನ ಪಡೆಯಬೇಕು ಎಂಬ ನಿಟ್ಟಿನಲ್ಲಿ ಈ ಸಹಕಾರಿ ಸಪ್ತಾಹವನ್ನು 7 ದಿನಗಳ ಕಾಲ ಉತ್ಸವ, ಜಾತ್ರೆ ರೀತಿಯಲ್ಲಿ ನಡೆಸುತ್ತಿದ್ದೇವೆ. ನವೋದಯ ಸ್ವ ಸಹಾಯ ಆರಂಭಗೊಂಡು 23 ವರ್ಷಗಳಾಗಿದೆ. 1990 ರಲ್ಲಿ ಪ್ರಾರಂಭಗೊಂಡ “ಸ್ತ್ರೀ ಶಕ್ತಿ” ಇಂದು ಅವಿಭಜಿತ ಜಿಲ್ಲೆಗೆ ಮಾತ್ರ ಸೀಮಿತವಾಗಿರದೆ ಕರ್ನಾಟಕದ 20 ಜಿಲ್ಲೆಯಲ್ಲಿ ಪ್ರಾರಂಭಗೊಳ್ಳುವುದರಲ್ಲಿದೆ. ನವೋದಯದಲ್ಲಿ ದುಡಿಯುತ್ತಿರುವ ಮಹಿಳೆಯರನ್ನು ಕಂಡು ಇತರ ಜಿಲ್ಲೆಯ ಮಹಿಳೆಯರು ನವೋದಯವನ್ನು ನಮ್ಮಲ್ಲಿಯೂ ಪ್ರಾರಂಭಿಸಿ ಎನ್ನುವ ಮಾತನನ್ನು ಹೇಳಿದರೆ ಅದರ ಕೀರ್ತಿ ನವೋದಯದ ಮಹಿಳೆಯರಿಗೆ ಸಲ್ಲುತ್ತದೆ ಎಂದರು. ಹಾಗೂ ನಿಮ್ಮ ಸಹಕಾರ, ಸೇವೆಯುಂದಾಗಿ ನನಗೆ ಸನ್ಮಾನ ಬಿರುದು ಎಲ್ಲಾ ಸಿಕ್ಕಿದೆ. ಆದ್ದರಿಂದ ನನಗೆ ಸಿಕ್ಕ ಎಲ್ಲಾ ಗೌರವವರನ್ನು ನಿಮಗೇ ಸಮರ್ಪಿಸುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಆಶಿರ್ವಚನ ನೀಡಿ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಶುಭ ಹಾರೈಸಿದರು.

ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಸಹಕಾರರತ್ನ ಪ್ರಶಸ್ತಿಗೆ ಆಯ್ಕೆಯಾದ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಸಹಕಾರಿ ಸಂಸ್ಥೆಗಳು ಅಭೂತಪೂರ್ವವಾಗಿ ಬೆಳೆಯುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಸಹಕಾರಿ ಸಂಸ್ಥೆಗಳಲ್ಲಿ 4200 ಕೋಟಿ ಠೇವಣಿ ಹೊಂದಿರಲು ಸಹಕಾರಿ ಕೇತ್ರದ ಮೇಲೆ ಜನರು ಇರಿಸಿರುವ ವಿಶ್ವಾಸವೇ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ವಿಧಾನಪರಿಷತ್, ರಾಜ್ಯಸಭೆಗಳಲ್ಲಿ ಸಹಕಾರಿ ಕ್ಷೇತ್ರಕ್ಕೆ ಪ್ರಾತಿನಿಧ್ಯ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ಇದೇ ವೇಳೆ ಕರ್ನಾಟಕರಾಜ್ಯ ಸಹಕಾರ ಮಹಾಮಂಡಲಕ್ಕೆ 2ನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಸಮಸ್ತ ಸಹಕಾರಿಗಳ ಪರವಾಗಿ ಅದ್ದೂರಿಯಾಗಿ ಸನ್ಮಾನಿಸಲಾಯಿತು. ಹಾಗೂ ಸನ್ಮಾನಪತ್ರ ,ಸ್ಮರಣಿಕೆ ,ಬೆಳ್ಳಿ ಶಂಖದೊಂದಿಗೆ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಭಾವಚಿತ್ರವುಳ್ಳ ತ್ರೆಡ್ ಆರ್ಟ್ ಲಾಕೃತಿಯನ್ನು ಉಡುಗೊರೆಯಾಗಿನೀಡಲಾಯಿತು.

ಇದೇ ವೇಳೆ ಡಿಸಿಸಿ ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಬೆಳಪು ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್‍ಪಾಲ್ ಎ.ಸುವರ್ಣ, ಅರುಣಾ ರಾಜೇಂದ್ರ ಕುಮಾರ್, ಮಾಜಿಸಚಿವ ವಿನಯ ಕುಮಾರ್ ಸೊರಕೆ, ದಕ್ಷಿಣ ಕನ್ನಡಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಕೆಎಂಎಫ್ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ, ನಿರ್ದೇಶಕ ಕಾಪು ದಿವಾಕರ ಶೆಟ್ಟಿ, ಮೈಸೂರು ಸಹಕಾರ ಸಂಘಗಳ ಜಂಟಿ ನಿರ್ದೇಶಕ ಡಾ. ಉಮೇಶ್ ಜಿ, ಸಹಕಾರಿ ಇಲಾಖಾಧಿಕಾರಿಗಳಾದ ಲಕ್ಷ್ಮೀ ನಾರಾಯಣ ಜಿ.ಎನ್, ಪ್ರವೀಣ್ ನಾಯಕ್,ರಮೇಶ್ ಎಚ್.ಎಸ್.,ಲಾವಣ್ಯ ಕೆ.ಆರ್,ಸುಧೀರ್ ಕುಮಾರ್,ಗೋಪಿನಾಥ್ ಭಟ್,ಸಹಕಾರಿ ಯೂನಿಯನ್ ಉಪಾಧ್ಯಕ್ಷ ಅಶೋಕ್ ಕುಮಾರ್ ಬಲ್ಲಾಳ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಹರೀಶ್ ಬಿ.ಬಿ. ಮತ್ತಿತರರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲೆಯ 800ಕ್ಕೂ ಮೇಲ್ಪಟ್ಟ ಸಹಕಾರ ಸಂಸ್ಥೆಗಳವರು ಬೆಳಿಗ್ಗೆ 7.30ಕ್ಕೆ ಸಹಕಾರ ಧ್ವಜಾರೋಹಣ ಮಾಡಿ ಸಪ್ತಾಹಕ್ಕೆ ಚಾಲನೆ ನೀಡಿ, ಸಂಸ್ಥೆಗಳಲ್ಲಿ ಸಹಕಾರ ಗೀತೆ ಮತ್ತು ನಾಡಗೀತೆಯನ್ನು ಹಾಡುವ ಮೂಲಕ ಸಹಕಾರಿ ಉತ್ಸವಕ್ಕೆ ಚಾಲನೆ ನೀಡಿದರು. ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಮತ್ತು ನೌಕರರು ದ್ವಿ-ಚಕ್ರ ವಾಹನ ಮತ್ತು ನಾಲ್ಕು ಚಕ್ರ ವಾಹನಗಳಲ್ಲಿ ಸಹಕಾರ ಧ್ವಜವನ್ನು ಕಟ್ಟಿಕೊಂಡು ಬೃಹತ್ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡರು. ಶಿರೂರು-ಬೈಂದೂರು-ಕುಂದಾಪುರ-ಬ್ರಹ್ಮಾವರ-ಉಡುಪಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಯ ಉದ್ಯಾವರ ಜಂಕ್ಷನ್ ನಲ್ಲಿ ಸೇರಿದರು. ಉದ್ಯಾವರ ರಾಷ್ಟ್ರೀಯ ಹೆದ್ದಾರಿ ಸಮೀಪ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಸಹಕಾರರತ್ನ ಪ್ರಶಸ್ತಿಗೆ ಆಯ್ಕೆಯಾದ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ವಾಹರ್ಯಾಲಿಗೆ ಚಾಲನೆನೀಡಿದರು. ಎರಡುಸಾವಿರ ಸಹಕಾರಿಗಳು ವಾಹನ ಜಾಥದೊಂದಿಗೆ ಶಿಸ್ತುಬದ್ಧವಾಗಿ ರಾಷ್ಟ್ರೀಯ ಹೆದ್ದಾರಿಯ ಮೂಲಕ ಸಾಗಿ ಮುಳೂರು ತಲುಪಿದರು. ಕಾರ್ಕಳ ತಾಲೂಕಿನ ಸಹಕಾರಿಗಳು ಬೆಳ್ಮಣ್ ಮಾರ್ಗವಾಗಿ ಉಚ್ಚಿಲದ ಸಭಾಂಗಣಕ್ಕೆ ತಮ್ಮ ದ್ವಿ-ಚಕ್ರ ಮತ್ತು ನಾಲ್ಕು ಚಕ್ರ ವಾಹನದೊಂದಿಗೆ ಮತ್ತು ಜಿಲ್ಲೆಯ ಸಮಸ್ತ ನವೋದಯ ಸ್ವ-ಸಹಾಯ ಸದಸ್ಯರು ಉಚ್ಚಿಲದ ತುಂಬೆ ಕರ್ಕೇರ ಸಭಾಭವನದಲ್ಲಿ ಸೇರಿದರು. ಸಹಕಾರಿಗಳ ಭವ್ಯ ಮೆರವಣಿಗೆಯಲ್ಲಿ ಆಕರ್ಷಕ ಸ್ತಬ್ದ ಚಿತ್ರಗಳು, ವಾಹನ ಜಾಥ ಮತ್ತು ಮೆರವಣಿಗೆಯ ಮೂಲಕ ಸಮಸ್ತ ಸಹಕಾರಿ ಗಣ್ಯರನ್ನು ಕೂಡಿಕೊಂಡು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರೊಂದಿಗೆ, ಸಹಕಾರ ರತ್ನ ಡಾ|ಎಂ.ಎನ್.ರಾಜೇಂದ್ರಕುಮಾರ್ ಇವರೆಲ್ಲರನ್ನು ಮೆರವಣಿಗೆಯಲ್ಲಿ ಉಚ್ಚಿಲದ ಮಹಾಲಕ್ಷ್ಮೀ ದೇವಸ್ಥಾನದ ಸಭಾಭವನಕ್ಕೆ ಅದ್ಧೂರಿ ಮೆರವಣಿಗೆಯೊಂದಿಗೆ ಕರೆತರಲಾಯಿತು. ಸುಮಾರು 8000 ಸಹಕಾರಿಗಳು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!