ಉಡುಪಿ: ಬ್ಯಾಂಕ್ ಉದ್ಯೋಗಿಯ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆ

ಉಡುಪಿ ನ.14(ಉಡುಪಿ ಟೈಮ್ಸ್ ವರದಿ): ನಗರದ ವಾದಿರಾಜ ರಸ್ತೆಯ ಮನೆಯೊಂದರಲ್ಲಿ ಬ್ಯಾಂಕ್ ನ ಕಾನೂನು ಸಲಹೆಗಾರರೊಬ್ಬರ ಮೃತದೇಹ ಬೆಂಕಿ ಹತ್ತಿಕೊಂಡು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

ವಾದಿರಾಜ ರಸ್ತೆಯ ನಿವೃತ ಪೊಲೀಸ್ ಕೃಷ್ಣ ಸಾಮಗ ಅವರ ಮಗ ಕರ್ನಾಟಕ ಬ್ಯಾಂಕ್ ನ ಲೀಗಲ್ ಆಫೀಸರ್ ರಾಜು ಗೋಪಾಲ್ ಸಾಮಗ(42) ಮೃತಪಟ್ಟವರು.

ಇಂದು ಮನೆಯಲ್ಲಿ ಹೊಗೆಯನ್ನು ಕಂಡು ನೆರೆ ಮನೆಯವರು ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮನೆಯವರು ತಕ್ಷಣ ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಉಡುಪಿ ಅಗ್ನಿಶಾಮಕ ದಳ ಹಾಗೂ ನಗರ ಠಾಣೆಯ ಪೊಲೀಸರು ಕೋಣೆ ಬಾಗಿಲು ಒಳಗಡೆಯಿಂದ ಲಾಕ್ ಆಗಿದ್ದ ಕಾರಣ ಬಾಗಿಲನ್ನು ಒಡೆದು ಪರಿಶೀಲಿಸಿದಾಗ ರಾಜು ಗೋಪಾಲ್ ಸಾಮಗ ಅವರ ಮೃತ ದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಇವರು ಕೋಣೆಯಲ್ಲಿ ಲ್ಯಾಪ್ಟಾಪ್ ಹಾಗೂ ಮೊಬೈಲ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಮೊಬೈಲ್ ಸ್ಪೋಟಗೊಂಡು ಬೆಂಕಿ ಹತ್ತಿಕೊಂಡಿರಬಹುದು ಎಂದು ಮನೆಯವರು ಶಂಕಿಸಿದ್ದಾರೆ. 

ಹೈದರಾಬಾದ್ ಕರ್ನಾಟಕ ಬ್ಯಾಂಕ್ ನ ಶಾಖೆಯಲ್ಲಿ ಹಲವು ವರ್ಷ ದುಡಿಯುತ್ತಿದ್ದ ರಾಜ್ ಗೋಪಾಲ್ ಅವರು ಒಂದು ತಿಂಗಳ ಹಿಂದೆ ಮಂಗಳೂರಿಗೆ ವರ್ಗಾವಣೆ ಆಗಿತ್ತು. ಮೃತರ ಪತ್ನಿ ಕೆನರಾ ಬ್ಯಾಂಕಿನ ಉದ್ಯೋಗಿ.

ಮೃತರು ತಂದೆ, ತಾಯಿ, ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Leave a Reply

Your email address will not be published.

error: Content is protected !!