ಉಡುಪಿ: ಮಾನ್ಸೂನ್ ಪ್ರಶಸ್ತಿಯೊಂದಿಗೆ ಅಕ್ಕಿ ಮುಡಿ ಹೆಗಲೇರಿಸಿಕೊಂಡ ವಿ.ಎಸ್.ಸಿ ಪಿತ್ರೋಡಿ..!

ಉಡುಪಿ: ಉದ್ಯಾವರದ ಹೆಸರು ಕೇಳಿದ ತಕ್ಷಣ ಯುವಜನರಿಗೆ ನೆನಪಾಗುವುದು ಗ್ರಾಮ ಪಂಚಾಯತ್ ಮೈದಾನ. ಈ ಮೈದಾನದಲ್ಲಿ ಗ್ರಾಮೀಣ ಮಟ್ಟದ ಕ್ರಿಕೆಟ್ ಪಂದ್ಯ ಕೂಟದಿಂದ ರಾಜ್ಯ ರಾಷ್ಟ್ರೀಯ ಮಟ್ಟದ ಪಂದ್ಯ ಕೂಟಗಳು ಕೂಡ ನಡೆದಿವೆ. ಟೆನಿಸ್ ಬಾಲ್ ಕ್ರಿಕೆಟ್ ಇತಿಹಾಸದ ಬಹಳಷ್ಟು ಬಲಾಢ್ಯ ತಂಡಗಳು ಮತ್ತು ಪ್ರಖ್ಯಾತ ಕ್ರಿಕೆಟ್ ಆಟಗಾರರು ಈ ಮೈದಾನದಲ್ಲಿ ಆಡಿದ ನೆನಪು ಎಲ್ಲರಿಗೂ ಇದೆ. ಅಗಲ ಕಿರಿದಾದ ಈ ಮೈದಾನ ದಾಂಡಿಗರಿಗೆ ಸ್ವರ್ಗವಾದರೆ , ಎಸೆತಗಾರರು ಪಡುತ್ತಿರುವ ಕಷ್ಟ ಯಾರಿಗೂ ಬೇಡ. ಬಹುತೇಕ ಎಲ್ಲ ಭಾನುವಾರಗಳಲ್ಲಿ ಈ ಮೈದಾನ ಬ್ಯುಸಿಯಾಗಿರುತ್ತದೆ. ಏನೇ ಇರಲಿ , ಇಂತಹ ಪ್ರಖ್ಯಾತ ಕ್ರಿಕೆಟ್ ಮೈದಾನದಲ್ಲಿ ಕಳೆದ ಆದಿತ್ಯವಾರ ವಿಶಿಷ್ಟ ಕ್ರಿಕೆಟ್ ಪಂದ್ಯಾಕೂಟ ನಡೆಯಿತು. ಫೈನಲ್ ನಲ್ಲಿ ಸೋಲು ಗೆಲುವಿನ ತಂಡಕ್ಕೆ ಶಾಶ್ವತ ಫಲಕದೊಂದಿಗೆ ದೊಡ್ಡ ಮೊತ್ತದ ನಗದು ಕೂಡ ಸಿಗುತ್ತಿತ್ತು. ಆದರೆ ಇಲ್ಲಿ ನಡೆದ ಪಂದ್ಯ ಕೂಟದಲ್ಲಿ ಶಾಶ್ವತ ಫಲಕದೊಂದಿಗೆ ಅಕ್ಕಿಯನ್ನು ಪ್ರತಿ ಆಟಗಾರನಿಗೆ ಪ್ರಶಸ್ತಿ ರೂಪದಲ್ಲಿ ಕೊಡಲಾಗಿತ್ತು.

ಉದ್ಯಾವರದ ಪ್ರತಿಷ್ಠಿತ ಕ್ರಿಕೆಟ್ ಸಂಸ್ಥೆಗಳಲ್ಲಿ ಪಿತ್ರೋಡಿ ವೆಂಕಟ್ರಮಣ ಸ್ಪೋರ್ಟ್ಸ್ ಮತ್ತು ಕಲ್ಚರಲ್ (ರಿ). ಕೂಡ ಒಂದು.  ಗ್ರಾಮೀಣ ಮಟ್ಟದ ಪಂದ್ಯ ಕೂಟದಿಂದ ರಾಜ್ಯ ಮಟ್ಟದ ಪಂದ್ಯ ಕೂಟದಲ್ಲಿ ಈ ತಂಡ  ಭಾಗವಹಿಸಿದೆ. ಬಹಳಷ್ಟು ಯುವ ಕ್ರಿಕೆಟಿಗರಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶ ಕೊಟ್ಟಿದೆ. ಮಾತ್ರವಲ್ಲದೆ ಗ್ರಾಮೀಣ ಮಟ್ಟದಿಂದ ರಾಜ್ಯಮಟ್ಟದ ಪ್ರತಿಷ್ಠಿತ ಪಂದ್ಯ ಕೂಟಗಳನ್ನು ನಡೆಸಿದ ಸಂಸ್ಥೆ ಕೂಡ ಹೌದು. ಪ್ರಸ್ತುತ ವೆಂಕಟ್ರಮಣ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ರಿ. ಸಂಸ್ಥೆಗೆ 31ರ ಸಂಭ್ರಮ.

ಯುವಕರಿಗೆ ಮನೆಯ ನಿರ್ವಹಣಾ ಜವಾಬ್ದಾರಿ ಬರಬೇಕೆನ್ನುವ ಉದ್ದೇಶದಿಂದ ವೆಂಕಟ್ರಮಣ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಸಂಸ್ಥೆ ಉದ್ಯಾವರ ಗ್ರಾಮೀಣ ಭಾಗದ ಕ್ರಿಕೆಟ್ ತಂಡಗಳಿಗೆ ಪಂದ್ಯ ಕೂಟವನ್ನು ನಡೆಸಿತು.  ಈ ಪಂದ್ಯ ಕೂಟದಲ್ಲಿ   22 ತಂಡಗಳು ಭಾಗವಹಿಸಿದ್ದವು. ಸೆಮಿಫೈನಲ್ ಪಂದ್ಯದಲ್ಲಿ ವಿ.ಎಸ್.ಸಿ. ಪಿತ್ರೋಡಿ ತಂಡ ಕೋಸ್ಟಲ್ ಪಿತ್ರೋಡಿ ಯನ್ನು ಸೋಲಿಸಿದರೆ, ಕರಾವಳಿ ಕಡೆಕಾರು ಶ್ರೀ ಬೊಳ್ಜೆ ಯನ್ನು ಸೋಲಿಸಿ ಫೈನಲ್ಗೆ ಲಗ್ಗೆ ಇಟ್ಟಿದ್ದವು. ಫೈನಲ್ ಪಂದ್ಯಾಟದಲ್ಲಿ ಕರಾವಳಿ ಕಡೆಕಾರ್ ತಂಡವನ್ನು ಸೋಲಿಸಿ, ವಿ.ಎಸ್.ಸಿ. ಪಿತ್ರೋಡಿ “ವೆಂಕಟ್ರಮಣ ಮಾನ್ಸೂನ್ ಟ್ರೋಫಿ”ಯನ್ನು  ಗೆದ್ದುಕೊಂಡಿತು. ಪ್ರಶಸ್ತಿಯೊಂದಿಗೆ ವಿಜಯಿ ತಂಡದ ಎಲ್ಲ ಸದಸ್ಯರು 25 ಕಿಲೋ ಅಕ್ಕಿಯನ್ನು ಪಡೆದರೆ , ಪರಾಜಿತ ಕಡೆಕಾರ್ ತಂಡದ ಎಲ್ಲ ಸದಸ್ಯರು 15 ಕಿಲೋ ಅಕ್ಕಿಯನ್ನು ಪ್ರಶಸ್ತಿ ರೂಪದಲ್ಲಿ ಪಡೆದರು.ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ನಿಖಿಲ್ ಪಿತ್ರೋಡಿ, ಉತ್ತಮ ದಾಂಡಿಗ ಯೋಗೀಶ್ ಪಿತ್ರೋಡಿ , ಉತ್ತಮ ಎಸೆತಗಾರ ಧನುಷ್ ಪಿತ್ರೋಡಿ ಹಾಗೂ ಸರಣಿ ಶ್ರೇಷ್ಠ ಪ್ರಜ್ವಲ್ ಕಡೆಕಾರ್, ಪ್ರಶಸ್ತಿ ರೂಪದಲ್ಲಿ ತಲಾ 15 ಕಿಲೋ ಅಕ್ಕಿಯನ್ನು ಪಡೆದರು. 3 ಬಡ ಕುಟುಂಬಗಳಿಗೆ ಸಂಸ್ಥೆಯ ವತಿಯಿಂದ ಅಕ್ಕಿಯನ್ನು ವಿತರಿಸಲಾಯಿತು.ವೆಂಕಟರಮಣ ಸ್ಪೋರ್ಟ್ ಮತ್ತು ಕಲ್ಚರಲ್ ರಿ. ಇದರ ಅಧ್ಯಕ್ಷರಾದ ಮಲ್ಲೇಶ್ ಬಂಗೇರ ಪಂದ್ಯ ಕೂಟಕ್ಕೆ ಚಾಲನೆಯನ್ನು ನೀಡಿದರು.

ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಸ್ಪೋರ್ಟ್ಸ್ ಕನ್ನಡ ಕ್ರೀಡಾ ವೆಬ್ಸೈಟ್ ಮುಖ್ಯಸ್ಥ ಕೋಟ ರಾಮಕೃಷ್ಣ ಆಚಾರ್ ಮಾತನಾಡಿ, ಸದಾ ಸಮಾಜಮುಖಿ ಕಾರ್ಯಗಳಲ್ಲಿ ನಿರತರಾಗಿರುವ ವೆಂಕಟರಮಣ ತಂಡವು , ರವಿವಾರ ಕ್ರಿಕೆಟಿನ ಮೂಲಕ ಯುವಪೀಳಿಗೆಗೆ ಆಟದೊಂದಿಗೆ ಮನೆಯ ಜವಾಬ್ದಾರಿಯನ್ನು ಮೂಡಿಸುವ ವಿನೂತನ ಪ್ರಯತ್ನಕ್ಕೆ ಕೈ ಹಾಕಿ ಯಶಸ್ಸು ಸಾಧಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯ ಜೀತೇಂದ್ರ ಶೆಟ್ಟಿ ಉದ್ಯಾವರ, ಸ್ಥಳೀಯರಾದ ಗೋಪಾಲ ಅಮೀನ್, ವಿಜಯ ಕೋಟ್ಯಾನ್, ಸತೀಶ್ ಕುಂದರ್, ನವೀನ್ ಸಾಲ್ಯಾನ್, ವಾಸು ಸಾಲ್ಯಾನ್, ಯೊಗೀಶ್, ತಂಡದ ನಾಯಕ ಪ್ರವೀಣ್ ಕುಮಾರ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷ ಮಲ್ಲೇಶ್ ಬಂಗೇರ ಸ್ವಾಗತಿಸಿದರೆ , ಪಂದ್ಯ ಕೂಟದ ಉಸ್ತುವಾರಿ ಡೆರಿನ್ ಪಿತ್ರೋಡಿ ವಂದಿಸಿದರು. ರಾಜ್ಯಮಟ್ಟದ ವೀಕ್ಷಣೆ ವಿವರಣಕಾರ ವಿನಯ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!