ಧ್ವನಿವರ್ಧಕ ಪರವಾನಿಗೆಗೆ ಶುಲ್ಕ ನಿಗದಿಪಡಿಸಿದ ರಾಜ್ಯ ಸರಕಾರ

ಬೆಂಗಳೂರು: ಧ್ವನಿವರ್ಧಕ ಪರವಾನಗಿಗೆ ನಿಗದಿಪಡಿಸಿದ್ದ ಶುಲ್ಕವನ್ನು ಪರಿಷ್ಕರಿಸಿದ್ದು, ಒಂದು ದಿನಕ್ಕೆ 75 ರೂ., ಒಂದು ತಿಂಗಳಿಗೆ ಮೇಲ್ಪಟ್ಟ ಅವಧಿ(ದಿನಕ್ಕೆ 15 ರೂ.)ಗೆ 450 ರೂ.ಗಳನ್ನು ನಿಗದಿಪಡಿಸಿ ರಾಜ್ಯ ಸರಕಾರದ ಒಳಾಡಳಿತ(ಕಾನೂನು ಮತ್ತು ಸುವ್ಯವಸ್ಥೆ) ಇಲಾಖೆ ಆದೇಶ ಹೊರಡಿಸಿದೆ.

ಈ ಹಿಂದೆ ಒಂದು ತಿಂಗಳಿಗಿಂತ ಮೇಲ್ಪಟ್ಟು ಕೊಡುವಂತಹ ಪರವಾನಿಗೆಗಳಿಗೆ ಶುಲ್ಕ ನಿಗದಿಪಡಿಸಿರಲಿಲ್ಲ. ಇದೀಗ ಸರಕಾರ ಒಂದು ತಿಂಗಳ ಮೇಲ್ಪಟ್ಟ ಧ್ವನಿವರ್ಧಕಗಳ ಬಳಕೆಯ ಪರವಾನಿಗೆಗೆ ಶುಲ್ಕ ವಿಧಿಸಿ ಆದೇಶ ಹೊರಡಿಸಿದೆ. ಸರಕಾರ ಶಬ್ದ ಮಾಲಿನ್ಯ (ಪ್ರತಿಬಂಧಕ ಹಾಗೂ ನಿಯಂತ್ರಣ) ನಿಯಮ-2000ನ್ನು ಅನುಷ್ಟಾನಗೊಳಿಸುತ್ತಾ, ರಾಜ್ಯಾದ್ಯಂತ ಧ್ವನಿವರ್ಧಕ ಬಳಕೆ ಬಗ್ಗೆ ಸುಪ್ರೀಂ ಕೋರ್ಟ್‌ ಆದೇಶ ಜಾರಿಗೊಳಿಸಲು ನಿರ್ದೇಶನ ನೀಡಿದೆ.

ಈ ಕಾನೂನಿನ ಪ್ರಕಾರ ಧ್ವನಿ ವರ್ಧಕಗಳ ಬಳಕೆಗೆ ಎರಡು ವರ್ಷಗಳ ಅವಧಿಯ ವರೆಗೆ ಪರವಾನಿಗೆ ನೀಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರ ಪರಿಷ್ಕೃತ ಆದೇಶ ಹೊರಡಿಸಿ ಒಂದು ತಿಂಗಳಿಗಿಂತ ಮೇಲ್ಪಟ್ಟ ಕಾಲಾವಧಿಗೆ ನೀಡಲಾಗುವ ಎಲ್ಲ ಪರವಾನಿಗೆಗಳಿಗೆ ಒಟ್ಟಾರೆ ಶುಲ್ಕ 450 ರೂ.ಗಳನ್ನು ನಿಗದಿಪಡಿಸಿ ಒಳಾಡಳಿತ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ರಾಜಶೇಖರ ಎಂ.ಜಿ. ಆದೇಶ ಹೊರಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!