ಕರಕುಶಲ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ನಿರ್ದೇಶಕಿ- ಅಧ್ಯಕ್ಷರ ಪತ್ರ ಸಮರ: ಸರ್ಕಾರಕ್ಕೆ ಮತ್ತೆ ಮುಜುಗರ!

ಬೆಂಗಳೂರು: ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಡಿ. ರೂಪಾ ನಡುವೆ  ಪತ್ರ ಸಮರ ಆರಂಭವಾಗಿದೆ. ಭ್ರಷ್ಟಾಚಾರ, ಅಧಿಕಾರ ದುರ್ಬಳಕೆಯ ಪರಸ್ಪರ ಆರೋಪದಡಿ ಇಬ್ಬರೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಿ ಬಿಜೆಪಿ ಸರ್ಕಾರವನ್ನು ಮುಜುಗರಕ್ಕೀಡು ಮಾಡಿದ್ದಾರೆ.

ಕರಕುಶಲ ಅಭಿವೃದ್ಧಿ ನಿಗಮ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಬಿಜೆಪಿ ಸರ್ಕಾರದಿಂದ ರಾಜಕೀಯ ನೇಮಕಗೊಂಡಿದ್ದಾರೆ, ಎಂಡಿ ಡಿ ರೂಪ ಮೌದ್ಗಿಲ್ ಐಜಿಪಿ ಶ್ರೇಣಿಯ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದಾರೆ. ರಾಘವೇಂದ್ರ ಶೆಟ್ಟಿ ವಿರುದ್ಧ ಬುಧವಾರ ಪ್ರತಿ ದೂರು ಸಲ್ಲಿಸಿರುವ ರೂಪಾ, ‘ನಿಗಮದ ಅಧ್ಯಕ್ಷರು ಅಧಿಕಾರ ಇಲ್ಲದಿದ್ದರೂ ದೈನಂದಿನ ಆಡಳಿತದಲ್ಲಿ ಹಸ್ತಕ್ಷೇಪನಡೆಸುತ್ತಿದ್ದಾರೆ. 25 ಕೋಟಿ ಅಕ್ರಮ ನಡೆಸಿ ಪ್ರಧಾನ ವ್ಯವಸ್ಥಾಪಕ ವಜಾಗೊಂಡಿರುವ ಕಿಶೋರ್‌ ಕುಮಾರ್‌ ಎಂಬುವವರನ್ನು ಮರಳಿ ಅದೇ ಹುದ್ದೆಗೆ ನೇಮಕ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ  5 ಕೋಟಿ ಹಣದ ವ್ಯವಹಾರದ ಮಾತುಕತೆ ನಡೆದಿರುವ ಮಾಹಿತಿ ಇದೆ’ ಎಂದು ಆರೋಪಿಸಿದ್ದಾರೆ.

‘ನಿಗಮದ ಅಧ್ಯಕ್ಷರಿಗೆ ನೀಡಿದ್ದ ಕಾರನ್ನು ಅವರೇ ಅಪಘಾತ ಮಾಡಿ, ಚಾಲಕನ ಮೇಲೆ ಹೊರಿಸಿದ್ದರು. ಕಾರಿನ ದುರಸ್ತಿಗೆ 10.84 ಲಕ್ಷ ವೆಚ್ಚವಾಗಿದೆ. ಅಧ್ಯಕ್ಷರ ಕಚೇರಿ ಸಿಬ್ಬಂದಿಯ ಹಾಜರಾತಿ ವಿವರ ಒದಗಿಸದೇ ಮಾಸಿಕ  5 ಲಕ್ಷದಷ್ಟು ವೇತನ ಮತ್ತು ಇತರ ವೆಚ್ಚ ಪಡೆಯಲಾಗುತ್ತಿದೆ. ನಿಗಮದ ಅಧಿಕಾರಿಗಳಿಂದ ಬಲವಂತವಾಗಿ ಊಟ ತರಿಸಿಕೊಂಡು ಬಳಸಿದ್ದಾರೆ. ಮಹಿಳಾ ಆಪ್ತ ಸಹಾಯಕಿಯೇ ಬೇಕು ಎಂಬ ಬೇಡಿಕೆಯನ್ನು ಅಧ್ಯಕ್ಷರು ಇರಿಸಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕೆಎಸ್‌ಎಚ್‌ಡಿಸಿಎಲ್‌ನ ದೈನಂದಿನ ಕೆಲಸದಲ್ಲಿ ಅಧ್ಯಕ್ಷರು ಹಸ್ತಕ್ಷೇಪ ಮಾಡಬಾರದು ಎಂಬ ನಿಯಮವಿದ್ದರೂ, ರಾಘವೇಂದ್ರ ಶೆಟ್ಟಿ ಯೋಜನೆಗಳಿಗೆ ಸಂಬಂಧಿಸಿದ ಕಡತಗಳನ್ನು ತರಲು ಸಿಬ್ಬಂದಿಯನ್ನು ಕಳುಹಿಸುತ್ತಾರೆ ಎಂದು ರೂಪಾ ಆರೋಪಿಸಿದ್ದಾರೆ. ಹಣ ನೀಡದೆ ಶೋರೂಂಗಳಿಂದ ಶ್ರೀಗಂಧ ಹಾಗೂ ಇತರೆ ಉತ್ಪನ್ನಗಳನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ರೂಪಾ ದೂರಿದ್ದಾರೆ.

ಮಂಗಳವಾರ ಮುಖ್ಯ ಕಾರ್ಯದರ್ಶಿಯವರಿಗೆ ಆರು ಪುಟಗಳ ಪತ್ರ ಬರೆದಿರುವ ರಾಘವೇಂದ್ರ ಶೆಟ್ಟಿ, ರೂಪಾ ನಿಗಮದಲ್ಲಿ 6 ಕೋಟಿಗೂ ಹೆಚ್ಚು ಮೊತ್ತದ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ನಿಗಮದ ಕಡತಗಳನ್ನು ನೀಡುವಂತೆ ಪತ್ರ ಬರೆದರೂ ಸ್ಪಂದಿಸುತ್ತಿಲ್ಲ ಎಂದು ದೂರಿದ್ದರು.

ಶೋ ರೂಂನಲ್ಲಿ ಕ್ಯಾಶಿಯರ್‌ ಹುದ್ದೆಯಲ್ಲಿದ್ದ ಶ್ರೀಧರ್‌ ಎಂಬ ನೌಕರನನ್ನು ಹಣಕಾಸು ವಿಭಾಗದ ಪ್ರಧಾನ ವ್ಯವಸ್ಥಾಪಕ ಹುದ್ದೆಗೆ ನೇಮಿಸಿಕೊಂಡು ಅವರ ಮೂಲಕ ಅವ್ಯವಹಾರ ನಡೆಸುತ್ತಿದ್ದಾರೆ. ನಿಗಮದ ಮೂರು ಕಾರು ಮತ್ತು ಒಂದು ದ್ವಿಚಕ್ರ ವಾಹನವನ್ನು ರೂಪಾ ಹಾಗೂ ಅವರ ಕುಟುಂಬದವರು ಬಳಸುತ್ತಿದ್ದಾರೆ. ವೈಯಕ್ತಿಕ ಕೆಲಸಕ್ಕೆ ಹೋದಾಗಲೂ ನಿಗಮದಿಂದ ಲಕ್ಷಾಂತರ ರೂಪಾಯಿ ವಿಮಾನ ಪ್ರಯಾಣ ವೆಚ್ಚ, ಹೋಟೆಲ್‌ ವೆಚ್ಚವನ್ನು ಭರಿಸಲಾಗಿದೆ. ಅವರ ಮನೆಗೆಲಸದ ಸಿಬ್ಬಂದಿಗೂ ನಿಗಮದಿಂದಲೇ ವೇತನ ನೀಡಲಾಗುತ್ತಿದೆ. ವ್ಯವಸ್ಥಾಪಕ ನಿರ್ದೇಶಕರ ಸ್ನೇಹಿತರಿಗೆ ನಿಗಮದ ಮಳಿಗೆಗಳಲ್ಲಿ ಶೇಕಡ 30ರಷ್ಟು ರಿಯಾಯ್ತಿ ನೀಡಲಾಗುತ್ತಿ. ಈ ಎಲ್ಲ ವಿಷಯಗಳ ಬಗ್ಗೆಯೂ ತನಿಖೆಗೆ ಆದೇಶಿಸಬೇಕು’ ಎಂದು ಆಗ್ರಹಿಸಿದ್ದರು.

ರಾಘವೇಂದ್ರ ಶೆಟ್ಟಿಯ ಆಪ್ತ ಎಂದು ಇಟ್ಟುಕೊಂಡಿದ್ದ ಶ್ರೀಕಾಂತ್ ಎಂಬಾತ ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಬಂಧನಕ್ಕೆ ಒಳಗಾಗಿದ್ದಾನೆ. ಇದರಿಂದ ನಿಗಮದ ಘನತೆಗೆ ಧಕ್ಕೆ ಆಗಿದೆ. ಈ ಹಗರಣದಲ್ಲಿ ರಾಘವೇಂದ್ರ ಶೆಟ್ಟಿಯ ಪಾತ್ರ ಇರುವ ಬಗ್ಗೆ ತನಿಖೆ ನಡೆಸುವಂತೆ ಕೋರುತ್ತೇನೆ ಎಂದು ರೂಪಾ ಅವರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!