ಉಡುಪಿ: ನಿವೇಶನ ಸಂತ್ರಸ್ತರಿಂದ ಕಂದಾಯ ಇಲಾಖೆ ಸಮಸ್ಯೆ ಬಗ್ಗೆ ಡಿ.ಕೆ ಶಿವಕುಮಾರ್’ಗೆ ಮನವಿ

ಉಡುಪಿ ಜು.6 (ಉಡುಪಿ ಟೈಮ್ಸ್ ವರದಿ): ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರಿಗೆ ಉಡುಪಿ ನಿವೇಶನ ಸಂತ್ರಸ್ತರ ಪರವಾಗಿ ಮನವಿ ಸಲ್ಲಿಸಲಾಯಿತು.

ಈ ಮನವಿಯನ್ನು ಸಂತ್ರಸ್ತರ ಪರವಾಗಿ ರಾಬರ್ಟ್ ಡಿಸೋಜ, ತಾರಾನಾಥ ಹೆಗ್ಡೆ, ಕಮಲೇಶ್, ಮೇಲ್ಮೀನ್ ರೇಗೋ, ವಾಸುದೇವ್ ಗಡಿಯಾರ್, ಬಾಲಚಂದ್ರ ಭಟ್, ಸ್ಟಿಫನ್ ಅವರು ಕೆ.ಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಈ ಬಗ್ಗೆ ಸಲ್ಲಿಸಿರುವ ಮನವಿಯಲ್ಲಿ ವಸತಿ ಬಡಾವಣೆಗಳ ನಿರ್ಮಾಣಕ್ಕಾಗಿ ಸರ್ಕಾರವು ರೂಪಿಸಿದ ನೀತಿ ನಿಯಮಗಳ ಬಗ್ಗೆ ಇದ್ದ ಕಾನೂನನ್ನು ಕರ್ನಾಟಕ ಸರ್ಕಾರ 1984 ರಲ್ಲಿ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಅಧಿಸೂಚನೆ ಹೊರಡಿಸಿದ್ದರೂ ಉಡುಪಿ ಕಂದಾಯ ಇಲಾಖೆಯು ಈ ನಿಯಮಗಳನ್ನು ಸಡಿಲಿಸಿ, ನೋಂದಣಿ ಪ್ರಕ್ರಿಯೆಗೆ ಹೇಗೆ ಅನುವು ಮಾಡಿಕೊಟ್ಟಿತೆಂಬುದು ಪ್ರಶ್ನಾರ್ಹ ಮಾತ್ರವಲ್ಲ, ಅಪರಾಧ ಕೂಡ.

ಅಂದಿನ ದಿನಗಳಲ್ಲಿ, ‘ಈ ಬಗೆಯ’ ನಿವೇಶನಗಳ ನೋಂದಣಿಯನ್ನು ಉಡುಪಿ ಪ್ರಾಧಿಕಾರವು ತಡೆದಿದ್ದರೆ ಮತ್ತು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದರೆ ನಾವು ಇಂದು ಈ ಪರಿಸ್ಥಿತಿಗೆ ಬರುತ್ತಿರಲಿಲ್ಲ. ಸರ್ಕಾರದ ವ್ಯವಹಾರಗಳನ್ನು ಪ್ರಾಮಾಣಿಕವಾಗಿ ನಂಬುವ ನಾವು, ನಿವೇಶನಗಳನ್ನು ನಮ್ಮ ಹೆಸರಿಗೆ ಸರ್ಕಾರವೇ ಹಸ್ತಾಂತರಿಸಿದ ಕಾರಣ, ಅವುಗಳು ಕ್ರಮವಾಗಿಲ್ಲದನ್ನು ಗುರುತಿಸಲು ಸೋತೆವು, ಆದರೆ ಸಂತ್ರಸ್ತರಾದ ನಮ್ಮನ್ನು ಪ್ರಾಧಿಕಾರ, ಆಕ್ರಮಿಗಳನ್ನಾಗಿ ಬಿಂಬಿಸಿ ದಂಡಕಟ್ಟಿ ಸಕ್ರಮ ಮಾಡಿಕೊಳ್ಳಲು ಆದೇಶಿಸಿತು, ಪ್ರಾಧಿಕಾರದ ಆದೇಶದ ಪ್ರಕಾರ ಆಕ್ರಮ-ಸಕ್ರಮಕ್ಕೆ ಅರ್ಜಿ ಸಲ್ಲಿಸಿಯೂ ಪರಿಹಾರ ಸಿಗದವರ ಸಂಖ್ಯೆ 7 ಸಾವಿರ ವೆಂತಿದ್ದರೆ, ಇದ್ಯಾವುದರ ಅರಿವೆಯೇ ಇಲ್ಲದೆ, ಸುಮಾರು 10 ವರ್ಷಗಳಿಂದ ನಿವೇಶನದ ಸಮಸ್ಯೆಯಿಂದ  20 ಸಾವಿರಕ್ಕೂ ಅಧಿಕ ಮಂದಿ ಬವಣೆ ಪಡುತ್ತಿದ್ದಾರೆ.

ಸಂತ್ರಸ್ತರ ಹಿತದೃಷ್ಟಿಯಿಂದ ಸರ್ಕಾರ ಖುದ್ದಾಗಿ ಈ ಪ್ರಕರಣದ ತುರ್ತು ವಿಚಾರಣೆಯ ಬಗ್ಗೆ ಪ್ರಯತ್ನ ಪಡಬೇಕು, 4 ವರ್ಷಗಳಿಂದ ತಟಸ್ಥ ವಾಗಿರುವ ಕರ್ನಾಟಕ ಟೌನ್ ಆಂಡ್ ಕಂಟ್ರಿ ಪ್ಲಾನಿಂಗ್( ರೆಗ್ಯುಲರೈಸೇಶನ್ ಆಫ್ ಅನ್ ಆಥರೈಸ್ಡ್ ಡೆವೆಲಪ್ಮೆಂಟ್) ಕಾಯ್ದೆ 2013 ರ‌ ಮೇಲೆ ಇರುವ SLP ಯನ್ನು ಶೀಘ್ರ ವಿಚಾರಣೆ ಮಾಡಿಸಲು ಬೇಕಾದ ಕ್ರಮವನ್ನು ಈಗಲಾದರೂ ತೆಗೆದುಕೊಳ್ಳದಿದರೆ ಖಂಡಿತವಾಗಿಯೂ ಸಂತ್ರಸ್ತರ ಜೀವಿತಾವಧಿಯಲ್ಲಿ ನ್ಯಾಯ ಸಿಗುವುದಿಲ್ಲ. ಇದು ತಮಗೂ ನೋವುಂಟುಮಾಡುವ ವಿಚಾರವೆಂದು ಭಾವಿಸುತ್ತೇವೆ. ಸುಪ್ರೀಂ ಕೋರ್ಟಿನ ಮುಂದಿರುವ ಅಕ್ರಮ-ಸಕ್ರಮ ಯೋಜನೆಯನ್ನು ಸಧ್ಯ ಪ್ರಶ್ನಿಸಿರುವ ದಾವೆಯನ್ನು ಬಿ.ಡಿ.ಎ ತಿದ್ದುಪಡಿ ಮಸೂದೆ ಜುಲೈ 2020 ಅನಗತ್ಯ-ಅಪ್ರಸ್ತುತಗೊಳಿಸಿದೆ. ಆದುದರಿಂದ ಬಿ.ಡಿ.ಎ ವ್ಯಾಪ್ತಿಯ ಹೊರಗಿರುವ ಕರ್ನಾಟಕದ ಜನತೆಯ ಹಿತಾಸಕ್ತಿಯನ್ನು ಅನುಲಕ್ಷಿಸಿ ಮೇಲೆ ಉಲ್ಲೇಖಿಸಿದ ದಾವೆಯ ವಾದಿ – ಪ್ರತಿವಾದಿಗಳು ಒಮ್ಮತದಿಂದ ವಿಷಯವನ್ನು ವಿಶ್ಲೇಷಿಸಿ ತಮ್ಮ ತಮ್ಮ ದಾವೆಗಳನ್ನು ಹಿಂತೆಗೆದುಕೊಳ್ಳಬೇಕಾಗಿದೆ ಎಂದು ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!