ಡೆಲ್ಟಾ ಪ್ಲಸ್, 3ನೇ ಅಲೆ ಮತ್ತು ನಾವು… -ಡಾ.ಎಡ್ವರ್ಡ್ ನಜ್ರೆತ್
ಎರಡನೇ ಬಾರಿಯ ಲಾಕ್ಡೌನ್ ಇನ್ನೇನು ಕೊನೆಗೊಂಡು ಆರಾಮವಾಗಿರಬಹುದೆಂದು ಬಗೆದರೆ, ಕೊರೊನಾದ ಮೂರನೇ ಅಲೆಯು ಸಪ್ಟೆಂಬರ್-ಅಕ್ಟೋಬರ್ ಒಳಗೆ ಅಪ್ಪಳಿಸಲಿದೆ…
ಇದು ಈ ಮೊದಲಿನ ಅಲೆಗಳಿಗಿಂತ ಬಲಶಾಲಿಯಾಗಿದ್ದು ಮತ್ತಷ್ಟು ಅನಾಹುತಗಳಿಗೆ ಕಾರಣವಾಗಬಹುದು ಎಂಬ ಎಚ್ಚರಿಕೆಯು ಕೇಳಿ ಬಂದಿದೆ. ಮತ್ತೆ ಕೆಲವರು, ಮೂರನೇ ಅಲೆಯು ಮುಂದಿನ ದಸೆಂಬರ್ ತಿಂಗಳವರೆಗೆ ಬರಲಾರದು ಮತ್ತೆ ಅದು ಅಷ್ಟು ಭಯಾನಕರವಾಗಿರಲಾರದು ಎಂದೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎರಡನೇ ಅಭಿಪ್ರಾಯ ಕೊಡುವವರು ಜನರು ಲಸಿಕೆ ಹಾಕಿಕೊಂಡರೆ ಮತ್ತು ಮುಂದಿನ ದಿನಗಳಲ್ಲಿ ಕೋವಿಡ್- 19 ಹರಡದಂತೇ ಎಚ್ಚರ ವಹಿಸಿದರೆ ಎಂಬ ಷರತ್ತುಗಳನ್ನು ಲಘು ದ್ವನಿಯಲ್ಲಿ ಹೇಳಿದ್ದಾರೆ.
ನಮ್ಮ ಸಮಸ್ಸ್ಯೆಯಿರುವುದೇ ಈ ಷರತ್ತುಗಳಲ್ಲಿ. ಒಮ್ಮೆ ಕಚ್ಚಿಸಿಕೊಂಡವನು ಎರಡನೇ ಬಾರಿಗೆ ಎಚ್ಚರಿಕೆಯಿಂದಿರುತ್ತಾನೆ ಎಂಬ ಮಾತೊಂದಿದೆ. ಆದರೆ ಕೊರೊನಾಕ್ಕೆ ಸಂಬಂಧಪಟ್ಟಂತೆ ಇದು ನಮಗೆ ಅನ್ವಯಿಸುವುದೇ ಇಲ್ಲ. ಕೊರೊನಾದ ಮೊದಲನೇ ಅಲೆಯ ಸಮಯದಲ್ಲಿ ಲಾಕ್ಡೌನ್, ಕ್ವ್ಯಾರಂಟಯ್ನ್ ಇತ್ಯಾದಿಗಳನ್ನು ಮೊತ್ತ ಮೊದಲ ಬಾರಿಗೆ ಅನಿಭವಿಸಿದ್ದು, ಜನರು ಭಯ ಭೀತರಾಗಿದ್ದು ಆದಷ್ಟು ಜಾಗರೂಕರಾಗಿದ್ದರು. ಕಳೆದ ಡಿಸೆಂಬರ್ ಹೊತ್ತಿಗೆ ಮೊದಲ ಅಲೆಯ ತೀವೃತೆ ಕಡಿಮೆಯಾಗುತ್ತಿದ್ದಂತೇ ಇನ್ನೇನು ಕೊರೊನಾ ವೈರಸ್ ನಮ್ಮನ್ನು ಬಿಟ್ಟೇ ಹೋಯಿತು ಎಂಬಂತೇ ಜನರು ಮುಂಜಾಗ್ರತೆಗಳನ್ನೆಲ್ಲಾ ಮರೆತೇ ಬಿಟ್ಟಿದ್ದರು. ಎರಡೇ ತಿಂಗಳೊಳಗೆ ಕೊರೊನಾದ ಎರಡನೇ ಅಲೆಯ ಲಕ್ಷಣಗಳು ಹತ್ತಿರದ ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ ಗೋಚರಿಸಿದ್ದರೂ ಆಡಳಿತ ನಡೆಸುವವರಾಗಲಿ, ಜನಸಾಮಾನ್ಯರಾಗಲೀ ಆ ಕಡೆ ಗಮನ ಕೊಡಲೇ ಇಲ್ಲ. ಎರಡನೇ ಅಲೆಯ ಹೊಡೆತಭೀಕರವಾಗಿತ್ತು. ಮೊದಲನೇ ಅಲೆಯು ಹೆಚ್ಚುಕಡಿಮೆ ನಗರವಾಸಿಗಳಿಗೇ ಸೀಮಿತವಾಗಿದ್ದರೆ ಎರಡನೇ ಅಲೆಯು ಗ್ರಾಮೀಣ ಪ್ರದೇಶಗಳಿಗೂ ಹಬ್ಬಿತು. ನಮ್ಮ ಪರಿಚಯದವರು, ಹತ್ತಿರದವರು, ಆರೋಗ್ಯದಿಂದಿದ್ದವರು, ಸಣ್ಣವಯಸ್ಸಿನವರೂ ಎರಡನೇ ಅಲೆಯಲ್ಲಿ ಕೊರೊನ ವೈರಸಿನ ಅಟ್ಟಹಾಸಕ್ಕೆ ಬಲಿಯಾದರು.
ಈಗ ಎರಡನೇ ಲಾಕ್ಡೌನ್ ಸಡಿಲಿಸಿ ಜನರ ಸೀಮಿತ ಓಡಾಟಕ್ಕೆ ಅನುಮತಿ ಸಿಕ್ಕಿದಕ್ಷಣ ಬೇಕಾಬಿಟ್ಟಿ ಅಲೆದಾಡುವವರು ಹೆಚ್ಚಾಗಿ ದ್ದಾರೆ. ಲಾಕ್ಡೌನ್ಗಳು ಮತ್ತದರ ಸಡಿಲಿಕೆಗಳು ನಮಗೆ ಅಭ್ಯಾಸವಾಗಿ ಬಿಟ್ಟಂತಿದೆ. ಸಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಚಟುವಟಿಕೆಗಳಿಗೆ ಸರಕಾರವು ಕಡಿವಾಣ ಹಾಕದಿದ್ದರೆ ಸಾವಿರಾರು ಜನರು ಸೇರಲು ಈಗಲೂ ಹಿಂಜರಿಯುವುದಿಲ್ಲ. ಬಹಳಷ್ಟು ಕಡೆ ಪೋಲಿಸರ ಕಣ್ಣು ತಪ್ಪಿಸಿ ಸಮಾರಂಭಗಳನ್ನು ಆಯೋಜಿಸುವವರೂ ಇದ್ದಾರೆ. ‘ಕೊರೊನಾ ಬರುವುದು ಬೇರ್ಯಾರಿಗೋ.. ನನಗಲ್ಲ’ ಎಂಬ ಹುಂಬತನ ಬಹಳಷ್ಟು ಮಂದಿಯಲ್ಲಿ ಕಾಣಬಹುದು.
ಎರಡನೇ ಅಲೆಯು ಅಪ್ಪಳಿಸುವ ಮೊದಲು ಲಸಿಕೆಯ ಬಗ್ಗೆ ಲಘುವಾಗಿ ಮಾತನಾಡುವವರು, ಲಸಿಕೆ ಹಾಕಿಸಿಕೊಳ್ಳದಂತೇ ಸಂದೇಶ ರವಾನಿಸುವವರು ಹೆಚ್ಚುಕಡಿಮೆ ಸುಮ್ಮನಾಗಿದ್ದಾರೆ. ಲಸಿಕೆ ಬೇಡ ಅನ್ನುತಿದ್ದ ಬಹಳ ಮಂದಿ ಈಗ ಲಸಿಕೆ ಹಾಕಿಸಿ ಕೊಂಡಿದ್ದಾರೆ. ಇಲ್ಲಿಯವರೆಗೆ ನಮ್ಮ ದೇಶದಲ್ಲಿ ಸುಮಾರು 32 ಕೋಟಿಯಷ್ಟು ಲಸಿಕೆಗಳನ್ನು ನೀಡಲಾಗಿದ್ದು, 5.6 ಕೋಟಿ ಜನರು ಲಸಿಕೆಯ ಎರಡೂ ಡೋಜ್ಗಳನ್ನು ಸ್ವೀಕರಿಸಿದ್ದಾರೆ. ಆದರೆ ಇದು ನಮ್ಮ ಒಟ್ಟಾರೆ ಜನಸಂಖ್ಯೆಯ 4.1% ಅಷ್ಟೇ! ಈಗಿನ ವೇಗದಲ್ಲೇ ಲಸಿಕೆ ಹಾಕಿಸುವುದಾದರೆ ಸುಮಾರು ಫೆಬ್ರುವರಿ2022ರ ಸುಮಾರಿಗೆ 300 ಕೋಟಿ ಭಾರತೀಯರಿಗೆ ಲಸಿಕೆ ಹಾಕಬಹುದೆಂದು ಅಂದಾಜಿ ಸಲಾಗಿದೆ. ಆ ಘಟ್ಟವನ್ನು ಮುಟ್ಟಲು ಆನೇಕ ಅಡೆತಡೆಗಳಿವೆ. ಈಗಾಲೂ ಕೆಲವೊಂದು ಸಮುದಾಯದವರು ಲಸಿಕೆ ಹಾಕಿಸಿಕೊಳ್ಳ ಲು ಮುಂದೆ ಬರುವುದಿಲ್ಲ.
ಶಕ್ತಿ ವೃದ್ಧಿಸಿಕೊಂಡ ವೈರಾಣು: ಅಲೆ ಅಲೆಯಾಗಿ ಜನರಿಗೆ ಕಾಡುವುದು ವೈರಾಣು ಸಾಂಕ್ರಾಮಿಕ ರೋಗಗಳ ಲಕ್ಷಣ. ವೈರಾಣು ಗಳು ಜನರ ದೇಹವನ್ನು ಪ್ರವೇಶಿಸುವುದು ತಮ್ಮ ಸಂಖ್ಯೆಯನ್ನು ಹೆಚ್ಚಿಸಲೇ ಹೊರತು ಜನರನ್ನು ರೋಗ ಬಂದು ಅವರು ಸಾಯ ಬೇಕೆಂದಲ್ಲ. ಮನುಷ್ಯನ(ಹಾಗೇಯೆ ಇತರ ಪ್ರಾಣಿಗಳ) ದೇಹದೊಳಗಿನ ಜೀವಕೋಶಗಳಿಗೆ ಪ್ರವೇಶಿಸಿದ ವೈರಾಣು ಅಲ್ಲಿನ ಜೀವ ತಂತುಗಳನ್ನು ದರೋಡೆ ಮಾಡಿ, ಅದರಲ್ಲಿನ ಅಮೈನೋ ಆಸಿಡ್ ಎಂಬ ವಸ್ತುಗಳನ್ನು ತನ್ನದಾಗಿಸಿಕೊಂಡು, ತನ್ನ ಸಂಖ್ಯೆಯನ್ನು ಹೆಚ್ಚಿಸುತ್ತಾ ಹೋಗುತ್ತದೆ. ಮನುಷ್ಯನ(ಹಾಗೂ ಇತರ ಪ್ರಾಣಿಗಳ) ಜೀವಕೋಶಗಳು ಈ ದರೋಡೆಕೋರರನ್ನು ಹಿಮ್ಮೆಟ್ಟಿಸಲು ಹೋರಾಟ ಮಾಡಬೇಕಾಗುತ್ತದೆ. ವೈರಾಣುಗಳನ್ನು ನಿರ್ನಾಮ ಮಾಡಲು ದೇಹದೊಳಗೆ ಪ್ರತಿಕಾಯಗಳನ್ನು ಸೃಷ್ಟಿಸಲಾಗುತ್ತದೆ. ಈ ಪ್ರತಿಕಾಯಗಳು ನಿರ್ದಿಷ್ಟ ವೈರಾಣುವನ್ನು ಗುರುತಿಸಿ ಅದನ್ನು ನಾಶಮಾಡುವ ಗುರಿ ಹೊಂದಿದ್ದು, ಒಮ್ಮೆ ತಯಾರಾದ ಪ್ರತಿಕಾಯಗಳು ಅನೇಕ ಸಮಯದವರೆಗೆ, ಆ ವೈರಾಣು ಮತ್ತೆ ಎದುರಾದರೆ ಅವುಗಳನ್ನು ನಿರ್ನಾಮ ಮಾಡಲು ಶಕ್ತವಾಗಿರುತ್ತವೆ. ಅನೇಕಬಾರಿ ವೈರಾಣು ಮತ್ತು ಪ್ರತಿಕಾಯದ ನಡುವಿನ ಯುದ್ಧ ವೈರಾಣುವಿಗೆ ಆತಿಥ್ಯ ನೀಡಿದ ದೇಹಕ್ಕೆ ಮಾರಕವಾಗಿ ಸಮಸ್ಸ್ಯೆ ಯಾಗುವುದಿದೆ. ಇದುವೇ ವೈರಾಣುವಿನಿಂದ ಬರುವ ರೋಗ.
ಮನುಷ್ಯ ಮತ್ತು ವೈರಾಣುವಿನ ಹೋರಾಟದಲ್ಲಿ ವೈರಾಣು ಸುಮ್ಮನೆ ಶರಣಾಗುವುದಿಲ್ಲ.ಪ್ರತಿಕಾಯಗಳಿಂದ ವೈರಾಣುವಿನ ಸಂಖ್ಯೆ ಹೆಚ್ಚಾಗುವುದಕ್ಕೆ ಕಡಿವಾಣ ಬೀಳುವುದರಿಂದ ಅದನ್ನು ತಪ್ಪಿಸಲು ವೈರಾಣು ತನ್ನ ಸ್ವರೂಪವನ್ನೇ ಬದಲಾಯಿಸುತ್ತದೆ. ಜೀವ ಕೋಶಗಳಿಂದ ಕದ್ದ ಜೀವತಂತುಗಳಲ್ಲಿನ ಅಮೈನೋ ಆಸಿಡ್ ಎಂಬ ವಸ್ತುವನ್ನು ಉಪಯೋಗಿಸಿ ವೈರಾಣುಗಳು ತಮ್ಮ ಸಂಖ್ಯೆ ಯನ್ನು ಹೆಚ್ಚಿಸುತ್ತಾ ಹೋಗುವಾಗ ತನ್ನ ಮೂಲರೂಪದಲ್ಲಿದ್ದ ಅಮೈನೋ ಆಸಿಡಿನ ಸ್ಥಾನವನ್ನು ಬದಲಾಯಿಸುತ್ತದೆ. ಇದನ್ನು ಮ್ಯೂಟೇಶನ್ ಅಥವಾ ರೂಪಾಂತರ ಎಂದು ಕರೆಯಲಾಗುತ್ತದೆ. ರೂಪಾಂತರಗೊಳ್ಳುವುದರಿಂದ ವೈರಾಣುವಿನ ಮೂಲ ಸ್ವರೂಪ ಮತ್ತು ಗುಣಗಳಲ್ಲಿ ವ್ಯತ್ಯಾಸವಾಗುತ್ತದೆ. ಒಬ್ಬರಿಂದ ಇನ್ನೊಬ್ಬರಿಗೆ ಹರಡಿ ಹೋಗುವ, ಪ್ರಾಣಿಯ ದೇಹದೊಳಗೆ ಕಾಯಿಲೆ ಉದ್ಭವಿ ಸುವ ಮತ್ತು ಪ್ರತಿಕಾಯಗಳಿಗೆ ಬಗ್ಗುವ ಶಕ್ತಿಯಲ್ಲಿ ವ್ಯತ್ಯಾಯವಾಗುತ್ತದೆ. ಅನೇಕಬಾರಿ ವೈರಾಣು ಕುಸಿದು ಹೋದರೂ, ಕೆಲವೊಂದು ಬಾರಿ ಶಕ್ತಿಯನ್ನು ವೃದ್ಧಿಸಿ ಕೊಳ್ಳುತ್ತದೆ.
ಕೊವಿಡ್-19 ವೈರಾಣು ಸುಮಾರು 24 ಸಾವಿರಕ್ಕೂ ಅಧಿಕಬಾರಿ ರೂಪಾಂತರಗೊಂಡಿದ್ದು ಸುಮಾರು 7000ದಷ್ಟು ಪ್ರಭೇದಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಕಾಯಿಲೆ ಉಲ್ಭಣಗೊಳಿಸುವ ರೂಪಾಂತರಿಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ಇಂತಹ ರೂಪಾಂತ ರಿಗಳು ಮೊದಲು ಯಾವ ದೇಶದಲ್ಲಿ ಗುರುತಿಸಲಾಗಿತ್ತೋ ಆ ದೇಶದ ಹೆಸರುಗಳನ್ನು ನೀಡಲಾಗುತ್ತಿತ್ತು. ಬ್ರಿಟನಿನ ತಳಿ B.1.1.7; ದಕ್ಷಿಣ ಆಫ್ರಿಕಾದ B.1.351ತಳಿ ಮತ್ತು ಬ್ರೆಜಿಲ್ ದೇಶದ್ದು P.1 ಇತ್ಯಾದಿ. ಭಾರತದಲ್ಲಿ B.1.617.2 ಎಂಬ ತಳಿಯು ಡಿಸೆಂಬರ್ 2020 ರಲ್ಲಿ ಗುರುತಿಸಲಾಗಿತ್ತು. ಇತ್ತೀಚಿಗೆ ವಿಶ್ವ ಆರೋಗ್ಯ ಸಂಸ್ಥೆಯು ಬ್ರಿಟನ್ನಿನ ತಳಿಗೆ ಆಲ್ಫಾ, ದಕ್ಷಿಣ ಆಫ್ರಿಕಾದ ತಳಿಗೆ ಬೀಟ, ಬ್ರೆಜಿಲ್ ದೇಶದ ತಳಿಗೆ ಗಾಮ್ಮ ಮತ್ತು ಭಾರತದಲ್ಲಿ ಗುರುತಿಸಿದ ತಳಿಗೆ ಡೆಲ್ಟಾ ಎಂಬ ಗ್ರೀಕ್ ಅಕ್ಷರಗಳನ್ನು ಬಳಸಿ ನಾಮಕರಣ ಮಾಡಿದೆ.
ಭಾರತದಲ್ಲಿ ಮೊತ್ತಮೊದಲು ಗುರುತಿಸಿಲಾಗಿದ್ದದ ಡೆಲ್ಟಾ ವೈರಾಣು ಭಾರತದಲ್ಲಿ ಎರಡನೇ ಅಲೆಗೆ ಕಾರಣವಾಗಿತ್ತು. ಬಹಳ ಬೇಗ ಒಬ್ಬರಿಂದ ಇನ್ನೊಬ್ಬರಿಗೆ ಹರಡಿ ಹೋಗುವುದರೊಂದಿಗೆ ತೀವೃವಾದ ಕಾಯಿಲೆಗೆ ಕೂಡ ಇದು ಕಾರಣವಾಗಿತ್ತು. ಡೆಲ್ಟಾ ವೈರಾಣು ಈಗ ಅನೇಕ ದೇಶಗಳಲ್ಲಿ ಕಾಣಿಸಿಕೊಂಡಿದೆ. ಬ್ರಿಟನ್ ದೇಶದಲ್ಲಿ ಇತ್ತೀಚಿಗೆ ಕೊವಿಡ್೧೯ ರೋಗಿಗಳು ಹೆಚ್ಚಾಗಲು ಡೆಲ್ಟಾ ವೈರಾಣು ಕಾರಣವೆಂದು ತಿಳಿದು ಬಂದಿದೆ. ಹೊಸದಾಗಿ ರೋಗ ಪತ್ತೆಹಚ್ಚಿದವರಲ್ಲಿ ೯೦ಶೇಕಡಕ್ಕೂ ಹೆಚ್ಚು ಜನರಲ್ಲಿ ಡೆಲ್ಟಾ ತಳಿ ಗುರುತಿಸ ಲಾಗಿದೆ. ಜೂನ್ 10 ರಂದು ಇಸ್ರೇಲ್ ತನ್ನನ್ನು ಕೊವಿಡ್೧೯ ಮುಕ್ತ ದೇಶವೆಂದು ಘೋಷಿಸಿ, ಜನರು ಮಾಸ್ಕ್ ಧರಿಸುವ ಅಗತ್ಯವಿಲ್ಲ ವೆಂದು ಸಾರಿತ್ತು. ಎರಡೇ ವಾರಗಳಲ್ಲಿ ದೈನಂದಿನ ಹೊಸ ಕೊವಿಡ್ ಪಾಸಿಟಿವ್ ಜನರು 100 ಕ್ಕೂ ಹೆಚ್ಚಾಗುತ್ತಿದ್ದಂತೆ ಮತ್ತೆ ಮಾಸ್ಕ್ ಧರಿಸಲು ಆಜ್ಞಾಪಿಸಲಾಯಿತು. ಈ ಬೆಳವಣಿಗೆಗೆ ಡೆಲ್ಟಾ ವೈರಾಣುವೇ ಕಾರಣವೆಂದು ತಿಳಿದುಬಂದಿದೆ. ಈಗ ಬಳಕೆಯಲ್ಲಿರುವ ವ್ಯಾಕ್ಸಿನ್ಗಳಿಂದ ತಯಾರಾದ ಪ್ರತಿಕಾಯಗಳು ಡೆಲ್ಟಾತಳಿಯ ಮೇಲೆ ಹೆಚ್ಚು ಪರಿಣಾಮಕಾರಿಯಾಗಿರುವು ದಿಲ್ಲವೆಂದು ತಿಳಿದು ಬಂದಿದೆ. ಕೊವಿಶೀಲ್ಡ್ ಲಸಿಕೆಯ ಒಂದೇ ಡೋಜ್ ಪಡೆದರೆ 33% ಮತ್ತು ಎರಡೂ ಡೋಜ್ ಪಡೆದರೆ 60%ರಷ್ಟು ಮಾತ್ರ ಸಂರಕ್ಷಣೆ ಸಿಗುತ್ತದೆ.
ಡೆಲ್ಟಾದಿಂದ ಡೆಲ್ಟಾಪ್ಲಸ್: ಈಗಾಗಲೇ ಭಯಾನಕವಾಗಿ ಮಾರ್ಪಾಡಾಗಿದ್ದ ಕೊವಿಡ್೧೯ ವೈರಾಣುವಿನ ಡೆಲ್ಟಾತಳಿಯು, ಮತ್ತೂ ರೂಪಾಂತರಗೊಂಡು ಡೆಲ್ಟಾಪ್ಲಸ್ ಎಂಬ ಹೊಸ ತಳಿಯು ಹುಟ್ಟಿಕೊಂಡಿದೆ. ಭಾರತದಲ್ಲಿ ಪರೀಕ್ಷೆಗೆ ಒಳಪಡಿಸಿದ ಕೊವಿಡ್-19 ತಳಿಗಳಲ್ಲಿ ಸುಮಾರು 50 ಕ್ಕೂ ಹೆಚ್ಚು ಮಂದಿಯಲ್ಲಿ ಡೆಲ್ಟಾಪ್ಲಸ್ ರುಪಾಂತರಿಯು ಗುರುತಿಸಲಾಗಿದ್ದು, ಬ್ರಿಟನ್, ಅಮೇರಿಕಾ, ಚೀನಾ ಸೇರಿದಂತೇ ಸುಮಾರು 9 ಇತರ ದೇಶಗಳಲ್ಲೂ ಹೊಸ ತಳಿ-ಡೆಲ್ಟಾಪ್ಲಸ್ ಕಂಡು ಬಂದಿದೆ. ಭಾರತದಲ್ಲಿ ಕೊರೊನಾದ ಎರಡನೇ ಅಲೆಗೆ ಡೆಲ್ಟಾತಳಿಯ ರೂಪಾಂತರಿಯು ಕಾರಣವಾದಂತೇ ಮೂರನೇ ಅಲೆ ಡೆಲ್ಟಾಪ್ಲಸ್ ತಳಿಯ ಮೇಲೆ ಹೊಂದಿರ ಬಹುದೆಂಬ ಆತಂಕ ಕೂಡ ವ್ಯಕ್ತವಾಗಿದೆ. ಭಾರತದಲ್ಲಿ ಕೊರೊನಾದ ಮೊದಲನೇ ಮತ್ತು ಎರಡನೇ ಅಲೆಗಳ ಉಗಮ ಕೇರಳ ಮತ್ತು ಮಹಾರಾಷ್ಟ್ರವಾಗಿತ್ತು. ಭಾರತದಲ್ಲಿ ಮೊತ್ತಮೊದಲ ಬಾರಿಗೆ ಕೊರೊನಾ ವೈರಸ್ ಕಾಣಿಸಿಕೊಂಡದ್ದೇ ಕೇರಳದಲ್ಲಿ. ಈವಾಗ ಡೆಲ್ಟಾಪ್ಲಸ್ ರೂಪಾಂತರಿಯೂ ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದ್ದು, ಕೊರೊನಾದ ಚರಿತ್ರೆಯು ಪುನಾರವರ್ತಿತವಾದರೆ ಮೂರನೇ ಅಲೆಯು ಕೊರೊನಾ ವೈರಸಿನ ಶಕ್ತಿಶಾಲಿಯಾದ ಡೆಲ್ಟಾಪ್ಲಸ್ನಿಂದ ಮೊದಲ ಎರಡು ಅಲೆಗಳಿಗಿಂತ ಭಯಂಕರವಾಗ ಬಲ್ಲದು.
ಇದಕ್ಕೆ ಕಾರಣ, ಡೆಲ್ಟಾಪ್ಲಸ್ ತಳಿಯು ತನ್ನ ಮೂಲವಾದ ಡೆಲ್ಟಾ ತಳಿಗಿಂತ ಹೆಚ್ಚು ಶಕ್ತಿಶಾಲಿಯಾಗಿರುವುದು. ಇದು ಡೆಲ್ಟಾ ತಳಿ ಗಿಂತ ವೇಗವಾಗಿ ಹರಡುತ್ತದೆ ಮತ್ತು ಮನುಷ್ಯನ ಶ್ವಾಸಕೋಶದ ಜೀವಕಣಗಳಿಗೆ ಸುಲಭವಾಗಿ ಅಂಟಿಕೊಳ್ಳುತ್ತದೆ. ಇದಕ್ಕಿಂತ ಕಳಕಳಿಯ ಇನ್ನೊಂದು ಅಂಶವೂ ತಿಳಿದು ಬಂದಿದೆ. ಡೆಲ್ಟಾಪ್ಲಸ್ ತಳಿಯು ಕೃತಕವಾಗಿ ತಯಾರಿಸಿದ ಮೊನೊಕ್ಲೊನಲ್ ಪ್ರತಿಕಾ ಯಗಳಿಗೆ ಬಗ್ಗುವುದಿಲ್ಲ. ಮೊನೊಕ್ಲೊನಲ್ ಪ್ರತಿಕಾಯಗಳನ್ನು ಮನುಷ್ಯನ ದೇಹದ ನಿರ್ದಿಷ್ಟ ಜೀವಕಣಗಳನ್ನು ಬಳಸಿ ತಯಾರಿ ಸಲಾಗುತ್ತಿದ್ದು, ಈವರೆಗಿನ ತಳಿಗಳು ಮೊನೊಕ್ಲೊನಲ್ ಪ್ರತಿಕಾಯಗಳಿಂದ ನಾಶವಾಗ ಬಲ್ಲವಾಗಿದ್ದರೆ ಡೆಲ್ಟಾಪ್ಲಸ್ ತಳಿಯು ಕೃತಕ ಪ್ರತಿಕಾಯಕಗಳಿಗೆ ಸಡ್ಡು ಹೊಡೆಯುವ ಗುಣಹೊಂದಿರುವುದು ಆತಂಕಕಾರಿಯಾಗಿದೆ. ಡೆಲ್ಟಾಪ್ಲಸ್ ತಳಿಯ ಕೊರೊನಾ ವೈರಸ್ ಮೊನೊಕ್ಲೊನಲ್ ಪ್ರತಿಕಾಯಗಳಿಗೆ ಮಾತ್ರ ಪ್ರತಿರೋಧ ಶಕ್ತಿಯನ್ನು ಹೊಂದಿದೆಯೋ ಅಥವಾ ಈವಾಗ ಉಪಯೋಗಿ ಸುತ್ತಿರುವ ಲಸಿಕೆಗಳಿಂದ ಮನುಷ್ಯನ ದೇಹದಲ್ಲಿ ತಯಾರಾಗುತ್ತಿರುವ ಪ್ರತಿಕಾಯಗಳಿಂದಲೂ ನಾಶವಾಗುವುದಿಲ್ಲವೋ ಎಂಬುದು ಇನ್ನೂ ತಿಳಿಯ ಬೇಕಷ್ಟೇ.
ಕೆಲವು ಲಸಿಕೆಗಳು ಡೆಲ್ಟಾಪ್ಲಸ್ ತಳಿಯ ಮೂಲತಳಿ, ಡೆಲ್ಟಾ ತಳಿಯ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗುವುದಿಲ್ಲವೆಂದ ಮೇಲೆ ಅದಕ್ಕಿಂತ ಶಕ್ತಿಶಾಲಿಯಾದ ಡೆಲ್ಟಾಪ್ಲಸ್ಗೆ ಯಾವ ರೀತಿ ಪ್ರತಿಕ್ರಿಯೆ ನೀಡುವುವು ಎಂಬುದನ್ನು ಕಾದು ನೊಡಬೇಕಷ್ಟೇ.ಡೆಲ್ಟಾಪ್ಲಸ್ ಈಗತಾನೇ ಗುರುತಿಸಲಾಗಿದ್ದು ಅದರ ಬಗ್ಗೆ ಹೆಚ್ಚಿನ ಸಂಶೋಧನೆಗಳು ಇನ್ನು ನಡೆಯಬೇಕಾಗಿವೆ. ಒಂದುವೇಳೆ ಡೆಲ್ಟಾಪ್ಲಸ್ತಳಿಯ ರೂಪಾಂತರಿಯು ಲಸಿಕೆಗಳಿಂದಾದ ಪ್ರತಿಕಾಯಗಳಿಂದ ನಾಶವಾಗಲಾರದೇ ಹೋದರೆ ಪರಿಣಾಮವು ಗಂಭೀರ ವಾಗಬಹುದು.
ಲಸಿಕೆ ಮತ್ತು ಮುಂಜಾಗ್ರತೆ…
ಕೊವಿಡ್-19 ವೈರಸಿನ ಮುಂದೆ ಬರಬಹುದಾದ ಮೂರನೇ ಅಥವಾ ಹೆಚ್ಚಿನ ಅಲೆಗಳನ್ನು ಎದುರಿಸಲು ನಮ್ಮೊಂದಿಗೆ ಇರುವ ಅಸ್ತ್ರಗಳು ಬರೇ ಲಸಿಕೆ ಮತ್ತು ಮುಂಜಾಗ್ರತೆ ಮಾತ್ರ. ಡೆಲ್ಟಾಪ್ಲಸ್ ಮತ್ತು ಮುಂದಿನ ರುಪಾಂತರಿಗಳು ಲಸಿಕೆಗಳಿಗೆ ಹೇಗೆ ಪ್ರತಿಕ್ರಿಯೆ ತೋರಿಸುತ್ತವೆ ಎಂದು ಈಗ ಹೇಳಲಾಗದಿದ್ದರೂ, ಇಲ್ಲಿಯವರೆಗೆ ಕೊರೊನಾದ ಲಸಿಕೆಗಳನ್ನು ಪಡೆದವರಲ್ಲಿ ಸೋಂಕು ತಗಲಿದರೂ ಗಂಭೀರ ರೋಗ ಲಕ್ಷಣಗಳು ಕಂಡು ಬರುವ ಸಾಧ್ಯತೆಗಳು ಇರುವುದಿಲ್ಲ. ಲಸಿಕೆಪಡೆದ ಕೆಲವರಲ್ಲಿ ರೋಗ ಕಂಡು ಬಂದರೂ ಆಸ್ಪತ್ರೆಗೆ ದಾಕಲಾಗಬೇಕಾಗಿ ಬಂದಂತಹ ಸನ್ನಿವೇಶಗಳು ತುಂಬಾ ಕಡಿಮೆ. ಲಸಿಕೆಗಳಿಂದ ಅನಾಹುತಗಳಾಗುತ್ತವೆ ಎಂದು ಜನ ಸಾಮಾನ್ಯರನ್ನು ಹೆದರಿಸಿದ ಸಂದೇಶಗಳು ಮಾಧ್ಯಮದಲ್ಲಿ ಹರಿದಾಡಿದ್ದರೂ ವಾಸ್ತವಿಕವಾಗಿ ಸಮಸ್ಸ್ಯೆಗಳು ಆದದ್ದೇ ಇಲ್ಲ. ಅನೇಕ ಬಾರಿ ಲಸಿಕೆಪಡೆದ ನಂತರ ನಡೆದ ಇತರ ತೊಂದರೆಗಳನ್ನು, ಮೊದಲೇ ಇದ್ದು ಉಲ್ಭಣಿಸಿದ ಆರೋಗ್ಯದ ಸಮಸ್ಸ್ಯೆಗಳನ್ನು ಲಸಿಕೆ ಗಳ ಬಗ್ಗೆ ಅಪಪ್ರಚಾರಕ್ಕೆ ಬಳಸಲಾಗಿತ್ತು. ಇಂತಹ ಕಾಕತಾಳೀಯ ಘಟನೆಗಳು ಲಸಿಕೆ ಪಡೆದ ಇತರರಲ್ಲಿ ಮತ್ತೆ ಮರುಕಳಿ ಸಲಿಲ್ಲ. ನಮ್ಮದೇ ದೇಶದಲ್ಲಿ ಈವರೆಗೆ ಕೋಟಿಗಟ್ಟಲೆ ಜನರಿಗೆ ಲಸಿಕೆಗಳನ್ನು ಕೊಡಲಾಗಿದೆ. ಸ್ವಲ್ಪ ಜ್ವರ, ಮೈಕೈ ನೋವು ಬಿಟ್ಟರೆ ಬೇರೆ ತೊಂದರೆಗಳು ಕಾಣಿಸಿಕೊಂಡದ್ದು ಇಲ್ಲವೇ ಇಲ್ಲವೆಂಬುವಷ್ಟು ಅಪರೂಪ. ಆದುದರಿಂದ ಅನಾಹುತಗಳಾಗುತ್ತವೆ ಎಂದು ಹೆದರದೆ ಅವಕಾಶ ಸಿಕ್ಕಿದವರೆಲ್ಲಾ ಲಸಿಕೆಗಳನ್ನು ಹಾಕಿಸಿಕೊಳ್ಳಬೇಕು.
ಇಷ್ಟರಲ್ಲೇ ಆರೋಗ್ಯದ ಬೇರೆ ಸಮಸ್ಸ್ಯೆಯಿದ್ದವರಿಗೆ ಕೊರೊನಾ ಸೋಂಕು ಇತರರಿಗಿಂತ ಹೆಚ್ಚು ಅನಾಹುತಗಳಿಗೆ ಕಾರಣವಾಗ ಬಹುದಾದುದರಿಂದ ಅವರು ಅವಷ್ಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ಯಾವುದೇ ಆರೋಗ್ಯದ ಸಮಸ್ಸ್ಯೆಯು ಲಸಿಕೆ ಹಾಕಿಸಿ ಕೊಳ್ಳದಿರಲು ಕಾರಣವಾಗುವುದಿಲ್ಲ. ಹಾಗಿದ್ದರೂ ಸಂಶಯವಿದ್ದರೆ ತಮಗೆ ಚಿಕಿತ್ಸೆ ಕೊಡುವ ವೈದ್ಯರ ಸಲಹೆ ಪಡೆಯಬೇಕೇ ವಿನಃ ಮಾಧ್ಯಮಗಳಲ್ಲಿ ಬಂದ ಮಾಹಿತಿಯನ್ನು ನೇರವಾಗಿ ನಂಬುವುದಲ್ಲ.
ಕೊವಿಡ್-19 ವೈರಸ್ ಒಬ್ಬರಿಂದ ಅನೇಕರಿಗೆ ಹೇಗೆ ಹರಡುತ್ತದೆ ಎಂಬುದರ ಕುರಿತು ಈಗ ಸ್ವಷ್ಟ ಮಾಹಿತಿ ಲಭ್ಯವಿದೆ. ವೈರಸ್ ಇದ್ದರೂ ಅನೇಕರಲ್ಲಿ ಯಾವುದೇ ಬಾಹ್ಯ ಲಕ್ಷಣಗಳಿರುವುದಿಲ್ಲ, ಆದರೆ ಅವರು ಇತರರಿಗೆ ವೈರಸ್ ಹರಡಬಲ್ಲರು. ಆದುದರಿಂದ ತಮ್ಮ ಮನೆಯವರು ಬಿಟ್ಟು ಬೇರೆ ಯಾವುದೇ ವ್ಯಕ್ತಿಯ ಸನಿಹಕ್ಕೆ ಹೋಗಬೇಕಾಗಿ ಬಂದಾಗ ಮಾಸ್ಕ್ ಸೂಕ್ತವಾಗಿ ಧರಿಸುವುದು ಅಗತ್ಯ. ವಾತಾಯನ ವ್ಯವಸ್ಥೆ ಸೂಕ್ತವಾಗಿಲ್ಲದ, ಮುಚ್ಚಿದ ಹವಾನಿಯಂತ್ರಣದ ಕೊಠಡಿಗಳಲ್ಲಿ ಅನೇಕರು ಸೇರಿದ್ದರೆ ವೈರಸ್ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚು. ಸೋಂಕಿತ ವ್ಯಕ್ತಿಯ ಜೊತೆ ಎಷ್ಟು ಸಮಯ ಕಳೆಯುತ್ತೀರೋ, ಸೋಂಕು ತಗಲುವ ಸಾಧ್ಯತೆಗಳು ಅಷ್ಟೂ ಹೆಚ್ಚಾಗುತ್ತವೆ. ಆದುದರಿಂದ ಸಮಾರಂಭಗಳು, ಹೆಚ್ಚು ಜನರು ಸೇರುವ ಇತರ ಕಾರ್ಯಕ್ರಮಗಳು ಸೋಂಕು ಹರಡಲು ಕಾರಣವಾಗುತ್ತವೆ ಎಂಬುದು ನೆನಪಿಡಲಿ.
ಲಸಿಕೆಗಳು ನೂರಕ್ಕೆ ನೂರರಷ್ಟು ಸಂರಕ್ಷಣೆ ಕೊಡುವುದಿಲ್ಲ. ಆದುದರಿಂದ ಲಸಿಕೆ ಹಾಕಿಸಿಕೊಂಡವರೂ ಇತರರಂತೆ ಮುಂಜಾಗ್ರತೆ ವಹಿಸುವುದು ಅಗತ್ಯ. ಆಡಳಿತ ನಡೆಸುವವರು, ತಜ್ಞರು ಮುಂಜಾಗೃತೆಯ ಬಗ್ಗೆ ಹೇಳಬಲ್ಲರು ಮಾತ್ರ. ಅದನ್ನು ಪಾಲಿಸುವುದು ನಮ್ಮ ಕೈಯಲ್ಲಿದೆ. ಮುಂಜಾಗ್ರತೆಯಿಂದ ಮಾತ್ರ ನಾವು ಕೊರೊನಾದ ಮುಂದಿನ ಅಲೆಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು.