ಸೈಲೆಂಟ್ ಆಗಿ ಜನಪರ ಕೆಲಸ ಮಾಡುವ ‘ಮೇಕ್ ಸಮ್ ಓನ್ ಸ್ಮೈಲ್’ ತಂಡ

ಉಡುಪಿ (ಉಡುಪಿ ಟೈಮ್ಸ್ ವರದಿ): ಸೇವೆಯಲ್ಲಿ ದೇವರನ್ನು ನೋಡು ಎನ್ನುವ ಮಾತಿದೆ. ಅದೇ ರೀತಿ ಯಾವುದೇ ಲಾಭದ ಪ್ರತಿಫಲಾಪೇಕ್ಷೆ ಇಲ್ಲದೆ ಕರಾವಳಿಯ ಈ ಯುವಕ ತಂಡ ಉಡುಪಿ, ದ.ಕ ಜಿಲ್ಲೆಯಲ್ಲಿ ಕಳೆದ ಹಲವು ವರುಷಗಳಿಂದ ಅಸಹಾಯಕರಿಗೆ ನಿರಂತರ ಸೇವೆ ಮಾಡುತ್ತಾ ಬರುತ್ತಿದೆ. ಅದುವೇ “ಮೇಕ್ ಸಮ್ ಓನ್ ಸ್ಮೈಲ್ ” ಇದು ಮಂಗಳೂರು ಮತ್ತು ಉಡುಪಿ ಜಿಲ್ಲೆಯಾದ್ಯಂತ ಸುಮಾರು 170ಕೂ ಹೆಚ್ಚು ಯುವಕರನ್ನು ಒಳಗೊಂಡ ಒಂದು ಯುವ ಸಮೂಹದ ತಂಡವಾಗಿದೆ.

2017 ರಲ್ಲಿ ಪ್ರಾರಂಭವಾದ ಮೇಕ್ ಸಮ್ ಓನ್ ಸ್ಮೈಲ್ ಎಂಬ ಹೆಸರಿನ ಸಮಾನ ಮನಸ್ಕ ಯುವಕರ ಈ ತಂಡ ಕಳೆದ 4 ವರ್ಷ ಗಳಿಂದ ಸತತ ಉಡುಪಿ ಹಾಗೂ ದ.ಕ ಜಿಲ್ಲೆಯಾದ್ಯಂತ ವಿವಿಧ ರೀತಿಯಲ್ಲಿ ಸೇವೆ ಮಾಡುತ್ತಾ ಬರುತ್ತಿದೆ. ತಮ್ಮ ಸ್ವಂತ ದುಡಿಮೆಯ ಒಂದ್ದಿಷ್ಟು ಭಾಗವನ್ನು ಸಮಾಜದ ಬಡ ಜನರಿಗಾಗಿ ಮೀಸಲಿಟ್ಟು ಬಡವರ ಕಷ್ಟದ ಸಮಯದಲ್ಲಿ ನೆರವಾಗುವ ಮೂಲಕ ಅವರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದೆ ಈ “ಮೇಕ್ ಸಮ್ ಓನ್ ಸ್ಮೈಲ್ ” ತಂಡ.

2017ರ ಜನವರಿಯಲ್ಲಿ ಮಂಗಳೂರಿನಲ್ಲಿ ತನ್ನ ಮೊದಲ ಕಾರ್ಯಕ್ರಮ ಪ್ರಾರಂಭಿಸಿದ ಇವರು ನಂತರ ದಿನಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಅನೇಕ ವಿವಿಧ ರೀತಿಯ ಸಮಾಜ ಮುಖಿ ಕೆಲಸಗಳು ಮಾಡಿದ್ದಾರೆ , ಹಳ್ಳಿಗಳಲ್ಲಿ ಸರಕಾರಿ ಪಾಳು ಬಿದ್ದ ಕಟ್ಟಡ ಗಳನ್ನು ನವೀಕರಣ ಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರ ಮಾಡುವುದು, ಆಶ್ರಮಗಳ ನವೀಕರಣ ಮತ್ತು ದವಸ ದಾನ್ಯ ವಿತರಣೆ , ಪ್ರತಿ ವರ್ಷ ಸುಮಾರು ಎರಡು ಸರಕಾರಿ ಶಾಲೆಯನ್ನ ಸುಂದರವಾಗಿ ನವೀಕರಣ ಮಾಡುವುದು ಈ ತಂಡದ ಪ್ರಮುಖ ಸೇವೆಗಳಾಗಿವೆ. ಇದರೊಂದಿಗೆ ಈದು, ಮಾಳ, ಕಬ್ಬಿನಾಲೆ, ಮುನಿಯಾಲು, ಮೂಡಬಿದ್ರಿ, ಕಾಬೆಟ್ಟು ಹೀಗೆ ಹಲವು ಶಾಲೆಗಳಿಗೆ, ಬ್ಯಾಗ್, ನೋಟ್ಬುಕ್, ಕೊಡೆ, ಪಠ್ಯ ಸಾಮಾಗ್ರಿಗಳನ್ನೂ ಒದಗಿಸುತ್ತಾ ಬರುತ್ತಿದ್ದಾರೆ.

ಈ ವರುಷ ಗುಬ್ಬಚ್ಚಿ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ಎಂಬ ವಿನೂತನ ಕಾರ್ಯಕ್ರಮ ಆರಂಭಿಸಿದ್ದು, ಸರಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ, ಮಕ್ಕಳಿಗೆ ಇಂಗ್ಲಿಷ್ ಕಲಿಸುವ ನಲ್ಲೂರು ಶಾಲೆಯ ಅಧ್ಯಾಪಕರಿಗೆ ಒಂದು ವರುಷದ ಸಂಪೂರ್ಣ ವೇತನವನ್ನೂ ಈ ತಂಡದ ವತಿಯಿಂದ ನೀಡಲಾಗಿದೆ. ದೇಶದಲ್ಲಿ ಪ್ರಥಮ ಬಾರಿಗೆ ಒಂದು ಶಾಲೆ ಗೋಡೆಯನ್ನು ಇಂಡಿಯಾ ಬಾರ್ಡರ್ ರೀತಿಯಲ್ಲಿ ಪೈಂಟ್ ಮಾಡಿ ಹಾಗೂ ನಮ್ಮ ಊರಿನ ಸಂಸ್ಕೃತಿ ಭೂತಾರಾಧನೆ, ಕಂಬಳ, ಹುಲಿ ವೇಷ ಮೀನುಗಾರಿಕೆ ಇಂತಹ ವಿವಿಧ ಕಲೆಗಳ ಚಿತ್ತಾರ ಗೋಡೆಯಲ್ಲಿ ಮೂಡಿಸಿದ ಹೆಮ್ಮೆಯ ಕೀರ್ತಿ ಈ ತಂಡಕ್ಕೆ ಸಲ್ಲುತ್ತದೆ.

ಈ ತಂಡದ ಮತ್ತೊಂದು ಮಹತ್ವದ ಸಾಧನೆ ಎಂದರೆ ನಕ್ಸಲ್ ಪೀಡಿತಃ ಈದು ಗುಮ್ಮೆತ್ತು ಶಾಲೆಯನ್ನೂ ಕಳೆದ ವರುಷ 1.5 ಲಕ್ಷ ವೆಚ್ಚದಲ್ಲಿ ರೈಲು ಬೋಗಿ ಮಾದರಿಯಲ್ಲಿ ನವೀಕರಣ ಮಾಡಿದ್ದು. ಈ ಮೂಲಕ ಈ ತಂಡ ರಾಷ್ಟ್ರದ ಗಮನ ಸೆಳೆದಿದೆ. ಅನೇಕರು ಅನಾಥಾಲಯಗಳಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರೆ ಈ ತಂಡ ಪ್ರತಿ ತಿಂಗಳೂ ಜಿಲ್ಲೆಯಾದ್ಯಾಂತ ಇರುವ ಅಶ್ರಮಗಳಿಗೆ ತೆರಳಿ ಅಲ್ಲಿ ಇರುವ ಅನಾಥರ ಹುಟ್ಟುಹಬ್ಬ ಆಚರಣೆ ಮಾಡುವ ಅಪರೂಪದ ಕಾರ್ಯವನ್ನೂ ಮಾಡುತ್ತಿದ್ದಾರೆ.

ಕಾರ್ಕಳದ ವಿಶೇಷ ಮಕ್ಕಳ ಶಾಲೆಯ ಹಳೆ ಕಟ್ಟಡವನ್ನು ಸಂಪೂರ್ಣ ವಿನೂತನ ಮಾದರಿಯಲ್ಲಿ ನವೀಕರಿಸಿದ್ದಾರೆ. ಅನೇಕ ಕುಟುಂಬಗಳಿಗೆ ಸೋಲಾರ್ ಹಾಗೂ ವಿದ್ಯುತ್ ಒದಗಿಸುವ ಮೂಲಕ ಜನಮನ್ನಣೆ ಕಾರ್ಯಕ್ರಮ ನಡೆಸುತ್ತಾ ಬಂದಿದ್ದಾರೆ. ಅಲ್ಲದೆ ಕೆಲವೊಂದು ಕುಟುಂಬಗಳ ಮದುವೆಗೆ ಹಣದ ಸಹಾಯವನ್ನು ಈ ತಂಡ ಮಾಡುತ್ತಿದೆ, ಈವರ್ಷ ಕೋವಿಡ್ 2ನೇ ಅಲೇ ಲೊಕ್ಡೌನ್ ಸಂದರ್ಭದಲ್ಲಿ ಉಡುಪಿ ಜಿಲ್ಲೆಯಾದ್ಯಂತ ಸುಮಾರು 500ಕ್ಕಿಂತ ಹೆಚ್ಚು ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಮಾಡಿದ್ದಾರೆ. ಹಾಗೂ ಆಶಾ ಕಾರ್ಯಕರ್ತೆಯರಿಗೆ ನೆರವು, ಸನ್ಮಾನ ಮಾಡುವ ಕಾರ್ಯವನ್ನೂ ಮಾಡುತ್ತಾ ಬಂದಿದ್ದಾರೆ.

ಅಷ್ಟೇ ಅಲ್ಲದೆ ಮೂಕ ಜೀವಿಗಳ ಕಷ್ಟಕ್ಕೂ ಸ್ಪಂದಿಸಿರುವ ಈ ತಂಡ ಬೀದಿ ನಾಯಿ ಗಳಿಗೆ ಕಳೆದ ಕೆಲವು ತಿಂಗಳಿಂದ ಸುಮಾರು 1200 ಕೆಜಿ ಅಕ್ಕಿಯನ್ನು, ಮಂಗಳೂರಿನ ಪ್ರಾಣಿಪ್ರಿಯ ರಜನಿ ಶೆಟ್ಟಿಯವರಿಗೆ ದಾನ ಮಾಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಬಡವರ ಮನೆಗಳನ್ನು ದುರಸ್ತಿ ಮಾಡುವ ಕಾರ್ಯವನ್ನೂ ಆರಂಭಿಸುವ ಮಹದಾಸೆಯನ್ನು ಈ ತಂಡ ಹೊಂದಿದೆ. ತಂಡದಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಎಂಬ ವರ್ಗ ಮಾಡಿಕೊಳ್ಳದೆ ಎಲ್ಲಾ ಸದಸ್ಯರು ಒಂದಾಗಿ ಒಟ್ಟಾಗಿ ಕೆಲಸ ಮಾಡಿರುವುದೇ ಇವರ ಈ ಯಶಸ್ಸಿನ ಹಿಂದಿನ ರಹಸ್ಯ ಎಂದೇ ಹೇಳಬಹುದು.

ಈ ತಂಡ ಉತ್ತಮ ಕಾರ್ಯದ ಮೂಲಕ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಎಲ್ಲ ಸುದ್ದಿವಾಹಿನಿಗಳಲ್ಲಿ ತಮ್ಮ ಸಂಸ್ಥೆಯ ಹೆಸರನ್ನ ಗುರುತಿಸಿ ಕೊಂಡಿದೆ. ಯಾವುದೇ ಪ್ರಚಾರದ ಗೀಳು ಇಲ್ಲದೆ, ಯಾವುದೇ ಫಲಾಪೇಕ್ಷೆ ಇಲ್ಲದೇ, ಮಕ್ಕಳ, ಅನಾಥರ, ಬಡ ಜನರ, ಮುಖದಲ್ಲಿ ನಗು ಮತ್ತು ಸಂತೋಷ ಮೂಡಿಸುತ್ತಿರುವ ಈ ತಂಡದ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು. ಇವರ ಈ ಕಾರ್ಯ ಸದಾ ಹೀಗೆ ಮುಂದುವರೆಯುತ್ತಿರಲಿ ಎಂಬುದು ಇವರ ಸೇವೆಯಿಂದ ಪ್ರೇರೇಪಿತರಾದವರ ಹಾರೈಕೆಯಾಗಿದೆ.

Leave a Reply

Your email address will not be published. Required fields are marked *

error: Content is protected !!