ಉಡುಪಿ: ಮಾದಕ ವಸ್ತು ಜಾಲದ ಮೇಲೆ ಪೊಲೀಸರ ಕಾರ್ಯಾಚರಣೆ- 9 ಮಂದಿ ಬಂಧನ

ಕಾರು, ಸ್ಕೂಟರ್, ಗಾಂಜಾ ನಗದು ಸೇರಿ ₹16.01 ಲಕ್ಷ ಮೌಲ್ಯದ ಸೊತ್ತು ವಶ

ಉಡುಪಿ, ಸೆ.23: ಶಿರ್ವ ಹಾಗೂ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿದಂತೆ ಒಟ್ಟು 9 ಮಂದಿಯನ್ನು ಬಂಧಿಸಲಾಗಿದ್ದು, ಗಾಂಜಾ, ಮೆಥಾಂಫೆಟಮೈನ್, ಎರಡು ಕಾರುಗಳು, ಸ್ಕೂಟರ್, ಮೊಬೈಲ್ ಫೋನ್‌ಗಳು ಹಾಗೂ ನಗದು ಸೇರಿದಂತೆ ಒಟ್ಟು ₹16,01,584 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಶಿರ್ವದಲ್ಲಿ 8 ಮಂದಿ ಬಂಧನ

ಸೆ.22ರಂದು ಮಧ್ಯಾಹ್ನ ಕಾಪು ಠಾಣೆಯ ಪಿಎಸ್‌ಐ ಶುಭಕರ ಅವರಿಗೆ ಬೆಳ್ಳೆ ಗ್ರಾಮದ ಪಡುಬೆಳ್ಳೆ ಭದ್ರಮ್ಮ ರಸ್ತೆಯಲ್ಲಿ ಎರಡು ಕಾರು ಹಾಗೂ ಸ್ಕೂಟರ್‌ನಲ್ಲಿ ಕೆಲವರು ಮಾದಕ ವಸ್ತುಗಳನ್ನು ಹೊಂದಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಸಂಜೆ 4.35ಕ್ಕೆ ಪೊಲೀಸರು ದಾಳಿ ನಡೆಸಿದಾಗ, ಮಾದಕ ವಸ್ತುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಹೊಂದಿರುವುದು ಪತ್ತೆಯಾಗಿದೆ.

ಆರೋಪಿಗಳಿಂದ 1,354.28 ಗ್ರಾಂ ಗಾಂಜಾ (₹67,714), 32.74 ಗ್ರಾಂ ಮೆಥಾಂಫೆಟಮೈನ್ (₹1,30,960), ಕೃತ್ಯಕ್ಕೆ ಬಳಸಿದ KA-20-MH-0764 ಕಾರು (₹6 ಲಕ್ಷ), KA-20-ME-9307 ಕಾರು (₹4 ಲಕ್ಷ), KA-20-ET-5634 ಸ್ಕೂಟರ್ (₹25 ಸಾವಿರ), 9 ಮೊಬೈಲ್ ಫೋನ್‌ಗಳು (₹93,300), ಎರಡು ತೂಕದ ಯಂತ್ರಗಳು ಹಾಗೂ ₹75,010 ನಗದು ವಶಪಡಿಸಿಕೊಳ್ಳಲಾಗಿದೆ.

ಈ ಪ್ರಕರಣದಲ್ಲಿ ಅಲ್ನಾಜ್ ಅಲಿಯಾಸ್ ಮೊಹಮ್ಮದ್ ಅನಾಸ್, ಮಹಮ್ಮದ್ ಅಲ್ತಾಪ್, ಸ್ಟ್ಯಾನಿ ಸಂದೀಪ್, ಶಾಕೀಬ್, ಮಹಮ್ಮದ್ ಫೈಜಲ್, ಇಮ್ತಿಯಾಜ್, ಅಜಯ್ ಕುಮಾರ್ ಹಾಗೂ ಸಂತೋಷ್ ದೇವಾಡಿಗ ಅವರನ್ನು ಬಂಧಿಸಲಾಗಿದೆ.

ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 79/2026ರಂತೆ NDPS ಕಾಯ್ದೆಯ ಕಲಂ 8B, 8C, 20(b)(ii)(B), 22(c) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಅನಿಲ್ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳು ಕೇರಳದ ಉಪ್ಪಳದಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಉಡುಪಿ ನಗರದಲ್ಲಿ ಮತ್ತೊಂದು ಪ್ರಕರಣ

ಇದೇ ವೇಳೆ, ಉಡುಪಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಶಿವಳ್ಳಿ ಗ್ರಾಮದ ವಾದಿರಾಜ ರಸ್ತೆಯ 3ನೇ ಅಡ್ಡರಸ್ತೆಯಲ್ಲಿರುವ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ಸೆ.22ರಂದು ಸಂಜೆ ಪಿಎಸ್‌ಐ ಕಾ.ಸು. ಭರತೇಶ್ ಕಂಕಣವಾಡಿ ಅವರಿಗೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ, ಪೊಲೀಸ್ ಅಧೀಕ್ಷಕರಿಂದ ಅಧಿಕಾರ ಪತ್ರ ಪಡೆದು ಪಂಚರು ಹಾಗೂ ಸಿಬ್ಬಂದಿಯೊಂದಿಗೆ ಸೆ.23ರಂದು ರಾತ್ರಿ 12.10ಕ್ಕೆ ದಾಳಿ ನಡೆಸಲಾಗಿದೆ.

ಈ ವೇಳೆ ಮಾರಾಟದ ಉದ್ದೇಶದಿಂದ ಸಂಗ್ರಹಿಸಿಟ್ಟಿದ್ದ 1 ಕೆಜಿ 659.91 ಗ್ರಾಂ ಗಾಂಜಾ (ಅಂದಾಜು ಮೌಲ್ಯ ₹83 ಸಾವಿರ), ₹1,26,500 ನಗದು, ಗಾಂಜಾ ತೂಕ ಮಾಡಲು ಬಳಸುತ್ತಿದ್ದ ಡಿಜಿಟಲ್ ಸ್ಕೇಲ್ ಹಾಗೂ ಇತರ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಪ್ರಕರಣದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮಣಗೋಡು ಗ್ರಾಮದ ಶ್ರೀವತ್ಸ ಕೆ.ಜಿ. (31) ಅವರನ್ನು ಬಂಧಿಸಲಾಗಿದೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 130/2026ರಂತೆ NDPS ಕಾಯ್ದೆಯ ಕಲಂ 8(c), 20(b)(ii)(B) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಪ್ರಕಾಶ್ ತನಿಖೆ ನಡೆಸುತ್ತಿದ್ದಾರೆ.

ಕೆಲ ಆರೋಪಿಗಳ ವಿರುದ್ಧ ಈ ಹಿಂದೆಯೂ ಪ್ರಕರಣಗಳು

ಬಂಧಿತರ ಪೈಕಿ ಕೆಲವರ ವಿರುದ್ಧ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಈ ಹಿಂದೆಯೇ ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸ್ಟ್ಯಾನ್ಲಿ ಸಂದೀಪ್ ವಿರುದ್ಧ ಮಣಿಪಾಲ ಠಾಣೆಯಲ್ಲಿ ಒಂದು ಪ್ರಕರಣ, ಮೊಹಮ್ಮದ್ ಫೈಜಲ್ ವಿರುದ್ಧ ಮಲ್ಪೆ, ಕಾರ್ಕಳ ಗ್ರಾಮಾಂತರ ಹಾಗೂ ಮಣಿಪಾಲ ಠಾಣೆಗಳಲ್ಲಿ ತಲಾ ಒಂದು ಪ್ರಕರಣ ಸೇರಿದಂತೆ ಒಟ್ಟು ಮೂರು ಪ್ರಕರಣಗಳಿವೆ ಎಂದು ತಿಳಿಸಲಾಗಿದೆ.

ಇಮ್ತಿಯಾಜ್ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಮೂರು, ಬ್ರಹ್ಮಾವರ ಠಾಣೆಯಲ್ಲಿ ಕೊಲೆ ಪ್ರಕರಣವೊಂದು, ಮಲ್ಪೆ ಠಾಣೆಯಲ್ಲಿ ಒಂದು ಹಾಗೂ ಮಣಿಪಾಲ ಠಾಣೆಯಲ್ಲಿ ಮೂರು ಪ್ರಕರಣಗಳು ಸೇರಿದಂತೆ ಒಟ್ಟು ಎಂಟು ಪ್ರಕರಣಗಳಿವೆ. ಅಜಯ್ ಕುಮಾರ್ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ದರೋಡೆ ಪ್ರಕರಣ ಸೇರಿದಂತೆ ಒಟ್ಟು ಮೂರು ಪ್ರಕರಣಗಳಿದ್ದು, ಸಂತೋಷ್ ದೇವಾಡಿಗ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಎರಡು ಗಾಂಜಾ ಸೇವನೆ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ

ಎಎಸ್‌ಪಿ ಈಶಿತಾ ಗುಪ್ತಾ ಹಾಗೂ ಉಡುಪಿ ಉಪವಿಭಾಗದ ಡಿವೈಎಸ್‌ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ, ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್.ಪಿ ಹಾಗೂ ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ಶಿರ್ವ ಠಾಣೆ ಪಿಎಸ್‌ಐ ಅನಿಲ್, ಕಾಪು ಠಾಣೆ ಪಿಎಸ್‌ಐ ಶುಭಕರ, ಎಎಸ್‌ಐ ಸುದೇಶ್, ಸುಂದರಗೌಡ, ಹೆಡ್ ಕಾನ್‌ಸ್ಟೆಬಲ್ ಮಂಜುನಾಥ್, ಹರ್ಷ, ಪೊಲೀಸ್ ಸಿಬ್ಬಂದಿಗಳಾದ ಅರುಣ, ನಾಗರಾಜ, ಶರಣ, ಕಿಶೋರ್ ಸೇರಿದಂತೆ ಸೆನ್ ಪೊಲೀಸ್ ಠಾಣೆ, ಮಣಿಪಾಲ ಪೊಲೀಸ್ ಠಾಣೆ ಹಾಗೂ ಉಡುಪಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಮತ್ತು ಸೊಕೊ ಅಧಿಕಾರಿಗಳು ಕಾರ್ಯಾಚರಣೆಗೆ ಸಹಕರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!