ಜಲ ಸಂರಕ್ಷಣೆ: ಜೀವ ಜಗತ್ತಿನ ಉಳಿವಿಗಾಗಿ ಒಂದು ಜಾಗೃತಿ ನಡೆ- ನಮ್ಮ ನಾಳಿನ ಉಸಿರಾದ ನೀರನ್ನು ಉಳಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ
ಇತ್ತೀಚಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ತೀವ್ರವಾದ ಬರಗಾಲದ ಪರಿಸ್ಥಿತಿ ತಲೆದೋರಿದ್ದು, ಜಲಮೂಲಗಳು ಬತ್ತಿ ಹೋಗುತ್ತಿವೆ. ಇಂತಹ ಸಂಕಷ್ಟದ ಸಮಯದಲ್ಲಿ ಜಲಸಂರಕ್ಷಣೆ ಎಂಬುದು ಕೇವಲ ಒಂದು ಘೋಷಣೆಯಾಗುಳಿಯದೆ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ.
ಭೂಮಿಯ ಮೇಲೆ ಅಗಾಧವಾದ ನೀರಿದ್ದರೂ, ಅದರಲ್ಲಿ ಕೇವಲ ಶೇಕಡಾ 2.5 ರಷ್ಟು ಮಾತ್ರ ಸಿಹಿನೀರು ಲಭ್ಯವಿದೆ ಎಂಬ ಕಹಿ ಸತ್ಯವನ್ನು ನಾವಿಂದು ಅರಿಯಬೇಕಾಗಿದೆ. ಈ ಲಭ್ಯವಿರುವ ಅತ್ಯಲ್ಪ ಸಿಹಿನೀರಿನ ಮೂಲಗಳನ್ನು ಸಂರಕ್ಷಿಸುವುದು ಮತ್ತು ಮರುಬಳಕೆ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ.
ನೀರು ಮಾನವನ ದೇಹವನ್ನು ಮತ್ತು ಜೀವಕೋಶಗಳನ್ನು ಪೋಷಿಸಿದರೆ, ಇಂಧನವು ಮಾನವ ನಾಗರಿಕತೆ ಹಾಗೂ ಆರ್ಥಿಕತೆಯ ಚಲನಶೀಲತೆಯನ್ನು ಕಾಯ್ದುಕೊಳ್ಳುತ್ತದೆ. ಇವೆರಡೂ ಒಂದಕ್ಕೊಂದು ಪೂರಕವಾಗಿವೆ.

ಪ್ರಸ್ತುತ ವರ್ಷದಲ್ಲಿ ಜಾಗತಿಕ ಹವಮಾನ ವೈಪರಿತ್ಯದ ತೀವ್ರ ಸ್ವರೂಪವಾದ ‘ಎಲ್ ನಿನೊ’ ಪ್ರಭಾವದಿಂದಾಗಿ ನಮ್ಮ ರಾಜ್ಯದಲ್ಲಿ ಅಭೂತಪೂರ್ವ ಹವಾಮಾನ ಏರುಪೇರುಗಳು ಉಂಟಾಗಿವೆ. ವಾಡಿಕೆಯಂತೆ ಬರಬೇಕಾದ ಮಳೆಯು ಕೈಕೊಟ್ಟಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳು ಭೀಕರ ಬರಗಾಲದ ಕರಾಳ ನೆರಳಿಗೆ ತುತ್ತಾಗಿವೆ. ಜಲಾಶಯಗಳಲ್ಲಿ ನೀರಿನ ಮಟ್ಟ ತಳ ತಲುಪಿದ್ದು, ಕೃಷಿ ಕ್ಷೇತ್ರ ಮತ್ತು ದೈನಂದಿನ ಜೀವನ ದುಸ್ತರವಾಗಿದೆ. ಇಂತಹ ಸಂದರ್ಭದಲ್ಲಿ ನೈಸರ್ಗಿಕ ಸಂಪನ್ಮೂಲಗಳಾದ ಜಲ (ನೀರು) ಮತ್ತು ಇಂಧನ (ಶಕ್ತಿ) ಸಂರಕ್ಷಣೆ ಕೇವಲ ಆಯ್ಕೆಯಾಗಿ ಉಳಿದಿಲ್ಲ, ಬದಲಿಗೆ ಅದು ನಮ್ಮ ಬದುಕಿನ ಉಳಿವಿಗಾಗಿ ಅತ್ಯಂತ ತುರ್ತಾಗಿ ಮಾಡಬೇಕಾದ ಕರ್ತವ್ಯವಾಗಿದೆ.
ಜಲ ಚಕ್ರ ಮತ್ತು ಅಂತರ್ಜಲದ ಮಹತ್ವ: ನಿಸರ್ಗವು ಜಲಚಕ್ರದ ಮೂಲಕ ಮಳೆ, ಭಾಷ್ಪೀಕರಣ, ಮತ್ತು ಇಂಗುವಿಕೆಯ ಪ್ರಕ್ರಿಯೆಗಳಿಂದ ಜಲಮೂಲಗಳನ್ನು ಸದಾ ಜೀವಂತವಾಗಿಟ್ಟಿರುತ್ತದೆ. ಈ ಪ್ರಕ್ರಿಯೆಯಲ್ಲಿ ಪ್ರಕೃತಿಯ ಅತಿ ದೊಡ್ಡ ಕೊಡುಗೆ ಎಂದರೆ ಅಂತರ್ಜಲದ ಪದರಗಳು ಭೂಮಿಯ ಒಳಗಿರುವ ಈ ನೈಸರ್ಗಿಕ ಜಲಶೇಖರಣಾ ವ್ಯವಸ್ಥೆಯು ಕೃಷಿ, ಕುಡಿಯುವ ನೀರು ಮತ್ತು ಪರಿಸರ ಸಮತೋಲನಕ್ಕೆ ಪ್ರಮುಖ ಆಧಾರವಾಗಿದೆ. ಬರಗಾಲದ ಸಮಯದಲ್ಲಿ ಮೇಲ್ಮೈ ಜಲಮೂಲಗಳು ಒಣಗಿದಾಗ ನಮಗೆ ನೆರವಾಗುವುದು ಇದೇ ಅಂತರ್ಜಲ. ಆದ್ದರಿಂದ, ಮಳೆನೀರನ್ನು ಭೂಮಿಗೆ ಇಂಗಿಸುವ ಮೂಲಕ ಅಂತರ್ಜಲವನ್ನು ಮರುಪೂರಣ ಮಾಡುವುದು ಅತಿ ಮುಖ್ಯವಾಗಿದೆ.
ವರ್ಚುವಲ್ ವಾಟರ್ (ಅಗೋಚರ ಜಲ) ಮತ್ತು ನಮ್ಮ ಜವಾಬ್ದಾರಿ: ನಾವು ದಿನನಿತ್ಯ ಬಳಸುವ ಪ್ರತಿಯೊಂದು ವಸ್ತುವಿನ ಉತ್ಪಾದನೆಯ ಹಿಂದೆ ದೊಡ್ಡ ಪ್ರಮಾಣದ ನೀರು ವ್ಯಯವಾಗಿರುತ್ತದೆ, ಇದನ್ನು ‘ವರ್ಚುವಲ್ ವಾಟರ್’ ಅಥವಾ ಅಗೋಚರ ಜಲ ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ಕೃಷಿ ಉತ್ಪನ್ನಗಳು ಮತ್ತು ಉಡುಪುಗಳ ತಯಾರಿಕೆಗೆ ಅಪಾರ ಪ್ರಮಾಣದ ಹಸಿರು, ನೀಲಿ ಮತ್ತು ಬೂದು ಜಲದ ಹೆಜ್ಜೆ ಗುರುತುಗಳು ಕಾರಣವಾಗಿರುತ್ತವೆ. ಈ ಕಾರಣದಿಂದಾಗಿ, ಯಾವುದೇ ವಸ್ತುವನ್ನು ವ್ಯರ್ಥ ಮಾಡುವ ಮುನ್ನ ಅದರ ಹಿಂದೆ ಬಳಕೆಯಾದ ನೀರಿನ ಮೌಲ್ಯವನ್ನು ನಾವು ಅರ್ಥಮಾಡಿಕೊಳ್ಳ ಬೇಕು.
ಏನಿದು ಹಸಿರು, ನೀಲಿ ಮತ್ತು ಬೂದು ಜಲದ ಹೆಜ್ಜೆಗುರುತುಗಳು

ಹಸಿರು ನೀರು: ಇದು ಮಳೆಯ ಮೂಲಕ ಮಣ್ಣಿನಲ್ಲಿ ಸಂಗ್ರಹವಾಗಿ, ಗಿಡಮರಗಳು ಮತ್ತು ಬೆಳೆಗಳ ಬೆಳವಣಿಗೆಗೆ ನೇರವಾಗಿ ಬಳಕೆಯಾಗುವ ತೇವಾಂಶವಾಗಿದೆ. ಅರಣ್ಯೀಕರಣ ಮತ್ತು ಮಣ್ಣಿನ ತೇವಾಂಶ ರಕ್ಷಣೆ ಇದಕ್ಕೆ ಪೂರಕವಾಗಿದೆ.
ನೀಲಿ ನೀರು: ನದಿಗಳು, ಕೆರೆಗಳು ಹಾಗೂ ಭೂಮಿಯೊಳಗಿನ ಅಂತರ್ಜಲ ಮೂಲಗಳಿಂದ ನಾವು ಕುಡಿಯಲು, ಕೃಷಿಗೆ ಮತ್ತು ಕೈಗಾರಿಕೆಗೆ ಬಳಸುವ ಸಿಹಿನೀರು ಇದಾಗಿದೆ. ಬರಗಾಲದಲ್ಲಿ ಇದರ ಮೇಲೆಯೇ ಅತಿ ಹೆಚ್ಚು ಒತ್ತಡ ಬೀಳುತ್ತದೆ.
ಬೂದು ನೀರು: ಮಾನವನ ಬಳಕೆಯಿಂದ ಕಲುಷಿತಗೊಂಡ ನೀರನ್ನು ಮರುಬಳಕೆಗೆ ಯೋಗ್ಯವಾಗಿಸಲು ಬೇಕಾಗುವ ಸಿಹಿನೀರಿನ ಪ್ರಮಾಣವನ್ನು ಇದು ಸೂಚಿಸುತ್ತದೆ. ತ್ಯಾಜ್ಯನೀರಿನ ವೈಜ್ಞಾನಿಕ ನಿರ್ವಹಣೆ ಇದರ ತೀವ್ರತೆಯನ್ನು ಕಡಿಮೆ ಮಾಡುತ್ತದೆ.
ಸಮಗ್ರ ಜಲಸಂಪನ್ಮೂಲ ಅಭಿವೃದ್ಧಿ : ಬರಗಾಲದ ದೀರ್ಘಕಾಲೀನ ನಿಯಂತ್ರಣಕ್ಕಾಗಿ ಕೇವಲ ನೀರನ್ನು ಉಳಿಸುದಷ್ಟೇ ಅಲ್ಲದೆ, ಇಡೀ ವ್ಯವಸ್ಥೆಯನ್ನು ಸುಧಾರಿಸಬೇಕಾಗಿದೆ. ಮಳೆನೀರು ಕೊಯ್ಲು, ಮೇಲ್ಮೈ ಜಲಮೂಲಗಳಾದ ಕೆರೆ-ನದಿಗಳ ಹೂಳೆತ್ತುವುದು ಮತ್ತು ಅಂತರ್ಜಲದ ಮರುಪೂರಣವನ್ನು ಸಮಾನವಾಗಿ ಕೈಗೊಳ್ಳಬೇಕು. ಇವೆಲ್ಲವು ಜಲ ಸಂರಕ್ಷಣೆಯ ವಿಧಗಳಾಗಿವೆ.
ಸಂಸ್ಕರಣೆ ಮತ್ತು ಪೂರೈಕೆ : ಬಳಸಿದ ನೀರನ್ನು ಗಡಸು ನೀರು ಸಂಸ್ಕರಣಾ ಘಟಕಗಳ ಮೂಲಕ ಶುದ್ಧೀಕರಿಸಿ ಮರುಪರಿಚಲನೆಗೆ ತರಬೇಕು. ಸಮುದಾಯದ ಪಾಲ್ಗೊಳ್ಳುವಿಕೆ: ಸರ್ಕಾರದ ನೀತಿಗಳು ಮತ್ತು ನಿಯಮಗಳಷ್ಟೇ ಅಲ್ಲದೆ ಸಾರ್ವಜನಿಕರು, ರೈತರು ಮತ್ತು ಕೈಗಾರಿಕೋದ್ಯಮಿಗಳು ಒಟ್ಟಾಗಿ ಜಲಸಂರಕ್ಷಣೆಯ ಜವಾಬ್ದಾರಿಯನ್ನು ಹೊರಬೇಕು.
ದೈನಂದಿನ ಜೀವನದಲ್ಲಿ ಅಳವಡಿಸಬಹುದಾದ ಸೂಕ್ಷ್ಮ ಬದಲಾವಣೆಗಳು:

ಗೃಹ ಬಳಕೆಯಲ್ಲಿ ಜಾಗೃತಿ: ಬಟ್ಟೆ ತೊಳೆಯುವ ಯಂತ್ರ ಹಾಗೂ ಪಾತ್ರೆ ತೊಳೆಯುವ ಯಂತ್ರಗಳನ್ನು ಅವುಗಳ ಸಂಪೂರ್ಣ ಸಾಮಥ್ರ‍್ಯಕ್ಕೆ ತಕ್ಕಂತೆ ಬಟ್ಟೆ/ಪಾತ್ರೆಗಳು ಸೇರಿದಾಗ ಮಾತ್ರ ಚಾಲನೆ ಮಾಡಬೇಕು. ಇದರಿಂದ ನೂರಾರು ಲೀಟರ್ ನೀರು ಉಳಿತಾಯವಾಗುತ್ತದೆ. ಅಲ್ಲದೇ ಒಮ್ಮೆ ಬಳಸಿದ ನೀರನ್ನು ತರಕಾರಿ ತೊಳೆಯಲು, ಗಿಡಗಳಿಗೆ ಉಣಿಸಲು ಅಥವಾ ಶೌಚಾಲಯಗಳಲ್ಲಿ ಮರುಬಳಕೆ ಮಾಡಬೇಕು. ಕೈಗಾರಿಕೆ ಮತ್ತು ಕೃಷಿ ವಲಯದಲ್ಲಿ ಸಂಸ್ಕರಿಸಿದ ತ್ಯಾಜ್ಯನೀರನ್ನು ಬಳಸುವುದರಿಂದ ತಾಜಾ ಸಿಹಿನೀರಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ.
ಸ್ನಾನದ ಪದ್ಧತಿ: ಶವರ್‌ಗಳ ಅತಿಯಾದ ಬಳಕೆಯನ್ನು ಕಡಿಮೆ ಮಾಡಿ, ಮಿತವಾಗಿ ನೀರನ್ನು ಬಳಸುವುದರಿಂದ ದೈನಂದಿನ ಜಲ ವ್ಯಯವನ್ನು ತಡೆಯಬಹುದು.
ಬರಗಾಲ ನಿರ್ವಹಣೆಗೆ ಜಲಸಂರಕ್ಷಣೆಯ ತಂತ್ರಗಳು: ನಮ್ಮ ಭೂಮಿಯ ಮೇಲಿನ ಒಟ್ಟು ಜಲಸಂಪನ್ಮೂಲದಲ್ಲಿ ಶೇಕಡಾ 96.5 ರಷ್ಟು ಭಾಗ ಸಮುದ್ರದ ಉಪ್ಪು ನೀರಾಗಿದ್ದು, ಸಿಹಿನೀರಿನ ಪ್ರಮಾಣ ಅತ್ಯಲ್ಪ ಇರುವುದರಿಂದ, ಪ್ರತಿ ಹನಿಯೂ ಅಮೂಲ್ಯವಾಗಿದೆ. ಬರಗಾಲವನ್ನು ಗೆಲ್ಲಲು ಜಲಸಂರಕ್ಷಣೆಯೇ ಏಕೈಕ ಮಾರ್ಗವಾಗಿದೆ. ರಾಜ್ಯದಲ್ಲಿ ತಲೆದೂರಿರುವ ಈ ಭೀಕರ ಬರಗಾಲವನ್ನು ಸಮರ್ಥವಾಗಿ ಎದುರಿಸಲು ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಕೆಳಗಿನ ಸರಳ ಹಾಗೂ ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಾಗಿದೆ.

ಮಳೆನೀರು ಕೊಯ್ಲು ಮತ್ತು ಇಂಗುಗುಂಡಿಗಳು: ಮನೆಯ ಛಾವಣಿಯ ಮೇಲೆ ಬೀಳುವ ಪ್ರತಿಯೊಂದು ಮಳೆಹನಿಯನ್ನು ಸಂಗ್ರಹಿಸಬೇಕು ಅಥವಾ ಇಂಗುಗುಂಡಿಗಳ ಮೂಲಕ ಅಂತರ್ಜಲಕ್ಕೆ ಸೇರಿಸಬೇಕು.
ಆಧುನಿಕ ನೀರಾವರಿ ಪದ್ಧತಿ: ಕೃಷಿಯಲ್ಲಿ ಸಾಂಪ್ರದಾಯಿಕವಾಗಿ ನೀರು ಹರಿಸುವ ಬದಲಿಗೆ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಗರಿಷ್ಠ ನೀರನ್ನು ಉಳಿಸಬಹುದು.
ದೈನಂದಿನ ಜೀವನದಲ್ಲಿ ಜಾಗೃತಿ: ನಳ್ಳಿಗಳಲ್ಲಿ ಸೋರುವಿಕೆಯನ್ನು ತಕ್ಷಣವೇ ಸರಿಪಡಿಸಬೇಕು, ಹಲ್ಲುಜ್ಜುವಾಗ ಅಥವಾ ಮುಖ ತೊಳೆಯುವಾಗ ನಲ್ಲಿಯನ್ನು ಅನಗತ್ಯವಾಗಿ ತೆರೆದಿಡಬಾರದು. ಗಿಡಗಳಿಗೆ ಮುಂಜಾನೆ ಅಥವಾ ಸಂಜೆ ವೇಳೆ ನೀರು ಹರಿಸುವುದರಿಂದ ಭಾಷ್ಪೀಕರಣದಿಂದ ವ್ಯರ್ಥವಾಗುವ ನೀರನ್ನು ತಡೆಯಬಹುದು.

ತಂತ್ರಜ್ಞಾನದ ಬಳಕೆ: ಆಧುನಿಕ ಡಿಜಿಟಲ್ ವಾಟರ್ ಮೀಟರ್‌ಗಳು ಮತ್ತು ಕಡಿಮೆ ನೀರು ಬಳಸುವ ನಲ್ಲಿಗಳ ಅಳವಡಿಕೆಯಿಂದ ನೀರಿನ ಬಳಕೆಯನ್ನು ಗಣನೀಯವಾಗಿ ನಿಯಂತ್ರಿಸಬಹುದು. ನೀರು ಕೇವಲ ಜೀವ ಜಗತ್ತಿನ ಉಸಿರಷ್ಟೇ ಅಲ್ಲ, ಅದು ಆರ್ಥಿಕ ಮತ್ತು ಸಾಮಾಜಿಕ ಸುಸ್ಥಿರತೆಯ ಮೂಲಾಧಾರವಾಗಿದೆ. ಬರಗಾಲವು ನಮಗೆ ನಿಸರ್ಗ ನೀಡುತ್ತಿರುವ ಎಚ್ಚರಿಕೆಯ ಗಂಟೆಯಾಗಿದೆ. ಇಂದಿನ ಜಲಕ್ಷಾಮದ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ನಾಗರಿಕನೂ ನೀರನ್ನು ಮಿತವಾಗಿ ಬಳಸಿ, ಸಂರಕ್ಷಿಸುವ ಸಂಕಲ್ಪ ಮಾಡಬೇಕಾಗಿದೆ. ನೆನಪಿಡಿ, ಇಂದು ನಾವು ಉಳಿಸುವ ಪ್ರತಿಯೊಂದು ನೀರಿನ ಹನಿಯೂ ನಮ್ಮ ಮುಂದಿನ ಪೀಳಿಗೆಯ ಭವಿಷ್ಯವನ್ನು ಉಜ್ವಲಗೊಳಿಸುತ್ತದೆ.
ಇಂಧನ ಸಂರಕ್ಷಣೆ ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿ: ಇಂದು ನಾವು ಎದುರಿಸುತ್ತಿರುವ ಭೀಕರ ಬರಗಾಲವು ಕೇವಲ ನೀರಿನ ಅಭಾವವನ್ನು ಮಾತ್ರವಲ್ಲದೆ, ಇಂಧನ ಮತ್ತು ವಿದ್ಯುತ್ ಬಿಕ್ಕಟ್ಟನ್ನೂ ಸೃಷ್ಟಿಸಿದೆ. ಜಲವಿದ್ಯುತ್ ಉತ್ಪಾದನೆ ಕುಂಠಿತಗೊಂಡಿರುವುದರಿಂದ, ಇಂಧನವನ್ನು ಅತ್ಯಂತ ಜವಾಬ್ದಾರಿಯಿಂದ ಬಳಸುವುದು ಇಂದಿನ ತುರ್ತು ಅಗತ್ಯವಾಗಿದೆ. ಇಂಧನ ಸಂರಕ್ಷಣೆ ಎಂದರೆ ಕೇವಲ ಹಣ ಉಳಿಸುವುದಲ್ಲ, ಅದು ದೇಶದ ಸಂಪನ್ಮೂಲವನ್ನು ಕಾಯ್ದಿರಿಸುವುದು ಮತ್ತು ಪರಿಸರವನ್ನು ರಕ್ಷಿಸುವುದಾಗಿದೆ.
ನಾವು ನೈಸರ್ಗಿಕ ಸಂಪನ್ಮೂಲಗಳನ್ನು ಎಷ್ಟು ವೇಗವಾಗಿ ಬಳಸುತ್ತಿದ್ದೇವೆ ಎಂಬುದಕ್ಕೆ ‘ಅರ್ಥ್ ಓವರ್‌ಶೂಟ್ ಡೇ’ ಒಂದು ಪ್ರಮುಖ ಜಾಗತಿಕ ಸೂಚಕವಾಗಿದೆ. ಇಡೀ ವರ್ಷದಲ್ಲಿ ಭೂಮಿಯು ಮರು ಉತ್ಪತ್ತಿ ಮಾಡಬಹುದಾದ ಒಟ್ಟು ಸಂಪನ್ಮೂಲಗಳನ್ನು ಮಾನವ ಕುಲವು ಆ ವರ್ಷದ ಯಾವ ದಿನಾಂಕದ ವೇಳೆಗೆ ಸಂಪೂರ್ಣವಾಗಿ ಬಳಸಿ ಮುಗಿಸುತ್ತದೆ ಎಂಬುದನ್ನು ಸೂಚಿಸುತ್ತದೆ.

ಸಂಪನ್ಮೂಲಗಳ ಅತಿಯಾದ ಬಳಕೆ : ಪ್ರಸ್ತುತ ಜಾಗತಿಕವಾಗಿ ಮಾನವಕುಲವು ಪ್ರಕೃತಿಯ ಪುನರುತ್ಪಾದನಾ ಸಾಮಥ್ರ‍್ಯಕ್ಕಿಂತ ಶೇಕಡಾ 80 ರಷ್ಟು ವೇಗವಾಗಿ ಸಂಪನ್ಮೂಲಗಳನ್ನು ಬಳಸುತ್ತಿದೆ. ಅಂದರೆ ನಾವು ಬದುಕಲು ಪ್ರಸ್ತುತ 1.8 ಭೂಮಿಗಳ ಅಗತ್ಯವಿದೆ.
ನಮ್ಮ ದೇಶದಲ್ಲಿ ಇಂದಿಗೂ ಹೆಚ್ಚಿನ ವಿದ್ಯುತ್ ಅನ್ನು ಕಲ್ಲಿದ್ದಲು ಮತ್ತು ಅನಿಲದಂತಹ ಇಂಧನಗಳನ್ನು ಬಳಸಿ (ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ) ಉತ್ಪಾದಿಸಲಾಗುತ್ತದೆ. ಬರಗಾಲದ ಸಮಯದಲ್ಲಿ ಜಲವಿದ್ಯುತ್ ಕೊರತೆಯನ್ನು ನೀಗಿಸಲು ಈ ಇಂಧನಗಳ ಮೇಲೆ ಒತ್ತಡ ಹೆಚ್ಚುತ್ತದೆ.
ಇಂಧನ ಸಂರಕ್ಷಣೆ ಮಹತ್ವ ಮತ್ತು ಲಾಭಗಳು: ಇಂಧನ ಸಂರಕ್ಷಣೆ ಎಂದರೆ ದಕ್ಷ ತಂತ್ರಜ್ಞಾನಗಳು, ಜವಾಬ್ದಾರಿಯುತ ನಡವಳಿಕೆ ಹಾಗೂ ಆಪ್ಟಿಮೈಸ್ಟ್ ಪ್ರಕ್ರಿಯೆಗಳ ಮೂಲಕ ಇಂಧನದ ಅನಗತ್ಯ ಬಳಕೆಯನ್ನು ಕಡಿಮೆ ಮಾಡುವುದಾಗಿದೆ. ಇದರಿಂದ ಮೂರು ಪ್ರಮುಖ ವಲಯಗಳಲ್ಲಿ ಅಪಾರ ಲಾಭಗಳಿವೆ.
ಪರಿಸರ ಸಂಬಂಧಿ ಲಾಭಗಳು: ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ವಾಯು ಮಾಲಿನ್ಯವನ್ನು ನಿಯಂತ್ರಿಸಿ, ಶುದ್ಧ ಗಾಳಿಯನ್ನು ಒದಗಿಸುತ್ತದೆ. ಕಲ್ಲಿದ್ದಲು, ತೈಲ ಮತ್ತು ನೈಸರ್ಗಿಕ ಅನಿಲದಂತಹ ಸೀಮಿತ ಪಳೆಯುಳಿಕೆ ಇಂಧನ ಮೀಸಲುಗಳನ್ನು ಭವಿಷ್ಯಕ್ಕಾಗಿ ಸಂರಕ್ಷಿಸುತ್ತದೆ.

ಆರ್ಥಿಕ ಲಾಭಗಳು: ಗೃಹಬಳಕೆ ಮತ್ತು ಕೈಗಾರಿಕೆಗಳಲ್ಲಿ ವಿದ್ಯುತ್ ಹಾಗೂ ಇಂಧನ ವೆಚ್ಚಗಳನ್ನು ನೇರವಾಗಿ ತಗ್ಗಿಸುತ್ತದೆ. ಉದ್ಯಮಗಳಲ್ಲಿ ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಿ, ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತದೆ.
ಸಾಮಾಜಿಕ ಲಾಭಗಳು : ದೇಶದ ಇಂಧನ ಭದ್ರತೆ ಮತ್ತು ಸ್ವಾವಲಂಬನೆಯನ್ನು ಸುಧಾರಿಸುತ್ತದೆ. ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ಆರೋಗ್ಯಕರ ಪರಿಸರವನ್ನು ನಿರ್ಮಿಸುತ್ತದೆ.
ನೆಟ್ ಝೀರೋ ಎನರ್ಜಿ ಮತ್ತು ಭಾರತದ ಗುರಿಗಳು : ಒಂದು ಕಟ್ಟಡ ಅಥವಾ ಸೌಲಭ್ಯವು ವಾರ್ಷಿಕವಾಗಿ ತನಗೆ ಬೇಕಾದಷ್ಟು ನವೀಕರಿಸಬಹುದಾದ ಇಂಧನವನ್ನು ಸ್ವತಃ ತಾನೇ ಉತ್ಪಾದಿಸಿ, ಹೊರಗಿನಿಂದ ಪಡೆಯುವ ಇಂಧನದ ಪ್ರಮಾಣವನ್ನು ಶೂನ್ಯವಾಗಿಸುವುದನ್ನು ‘ನೆಟ್ ಝೀರೋ ಎನರ್ಜಿ’ ಎನ್ನಲಾಗುತ್ತದೆ.
ಭಾರತ ಸರ್ಕಾರವು ತನ್ನ ಹವಾಮಾನ ಕ್ರಿಯೆಯ ಅಂಗವಾಗಿ ‘ಪಂಚಾಮೃತ’ ತತ್ವಗಳನ್ನು ಅಳವಡಿಸಿಕೊಂಡಿದ್ದು, 2030 ರ ವೇಳೆಗೆ 500 mw ಪಳೆಯುಳಿಕೆಯೇತರ ಇಂಧನ ಸಾಮಥ್ರ‍್ಯ ಸಾಧಿಸುವುದು. ಹಾಗೂ ದೇಶದ ಒಟ್ಟು ಇಂಧನ ಅಗತ್ಯದ ಶೇ. 50 ರಷ್ಟನ್ನು ನವೀಕರಿಸಬಹುದಾದ ಮೂಲಗಳಿಂದ ಪಡೆಯುವುದು. ಕಾರ್ಬನ್ ತೀವ್ರತೆಯನ್ನು ಶೇಕಡಾ 45 ಕ್ಕಿಂತ ಕಡಿಮೆ ಮಾಡುವುದು ಮತ್ತು 2070 ರ ವೇಳೆಗೆ ಸಂಪೂರ್ಣವಾಗಿ ನೆಟ್-ಝೀರೋ ಇಂಗಾಲದ ಹೊರಸೂಸುವಿಕೆಯನ್ನು ತಲುಪುವ ಗುರಿಗಳನ್ನು ಹೊಂದಿದೆ.
ಇಂಧನ ಸಂರಕ್ಷಣಾ ಕ್ರಮಗಳು :ಬರಗಾಲದ ಆರ್ಥಿಕ ಹೊರೆ ಮತ್ತು ಪರಿಸರದ ತಾಪಮಾನ ಏರಿಕೆಯನ್ನು ತಡೆಯಲು ಇಂಧನ (ಪೆಟ್ರೋಲ್/ಡೀಸೆಲ್) ಉಳಿಸುವುದು ಅನಿವಾರ್ಯ. ಬಳಕೆಯಲ್ಲಿಲ್ಲದ ವಿದ್ಯುತ್ ಉಪಕರಣಗಳನ್ನು ಕಡ್ಡಾಯವಾಗಿ ಆಫ್ ಮಾಡಿ : ಬಳಕೆಯಲ್ಲಿಲ್ಲದಿದ್ದಾಗ ವಿದ್ಯುತ್ ದೀಪಗಳು, ಫ್ಯಾನ್‌ಗಳು ಮತ್ತು ಇತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕಡ್ಡಾಯವಾಗಿ ಆಫ್ ಮಾಡಿ. ಹಳೆಯ ಪ್ರಕಾಶಮಾನ ಬಲ್ಬುಗಳ ಬದಲಿಗೆ ಅತ್ಯಂತ ಕಡಿಮೆ ವಿದ್ಯುತ್ ಬಳಸುವ ಐಇಆ ಬಲ್ಬುಗಳನ್ನು ಬಳಸಿ. ಹಗಲಿನ ವೇಳೆಯಲ್ಲಿ ನೈಸರ್ಗಿಕ ಸೂರ್ಯನ ಬೆಳಕು ಮತ್ತು ಗಾಳಿಯ ಗರಿಷ್ಠ ಪ್ರಯೋಜನವನ್ನು ಪಡೆದುಕೊಳ್ಳಿ. ಹವಾನಿಯಂತ್ರಣಗಳ ತಾಪಮಾನವನ್ನು ಯಾವಾಗಲೂ 24 ಡಿಗ್ರಿಯಿಂದ 26ರ ನಡುವೆ ಇರಿಸಿ. ರೆಫ್ರಿಜರೇಟರ್‌ಗಳ ಬಾಗಿಲನ್ನು ಅನಗತ್ಯವಾಗಿ ತೆರೆದಿಡಬೇಡಿ ಮತ್ತು ಅವುಗಳನ್ನು ನಿಯಮಿತವಾಗಿ ಸುಸ್ಥಿತಿಯಲ್ಲಿ ನಿರ್ವಹಿಸಿ.
ವಿದ್ಯುತ್ ಉಪಕರಣಗಳ ಖರೀದಿ- ದಕ್ಷತೆಗೆ ಅದ್ಯತೆ ನೀಡಿ :ವಿದ್ಯುತ್ ಉಪಕರಣಗಳನ್ನು ಖರೀದಿಸುವಾಗ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ ನೀಡುವ ಸ್ಟಾರ್ ಲೇಬಲ್‌ಗಳನ್ನು ಗಮನಿಸುವುದು ಅತ್ಯಗತ್ಯ. ಹೆಚ್ಚಿನ ಸ್ಟಾರ್ ರೇಟಿಂಗ್ ಇದ್ದಷ್ಟೂ ವಿದ್ಯುತ್ ಉಳಿತಾಯ ಹೆಚ್ಚಾಗಿರುತ್ತದೆ. ವಾರ್ಷಿಕ ಇಂಧನ ಬಳಕೆ ಕಡಿಮೆ ಇದ್ದಷ್ಟೂ ಮತ್ತು ಏರ್ ಕಂಡೀಷನರ್‌ಗಳಲ್ಲಿ ISಇಇಖ ರೇಟಿಂಗ್ ಹೆಚ್ಚಿನ ಮಟ್ಟದಲ್ಲಿದ್ದಷ್ಟೂ ಇಂಧನ ದಕ್ಷತೆ ಉತ್ತಮವಾಗಿರುತ್ತದೆ.

ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಿ : ವೈಯಕ್ತಿಕ ವಾಹನಗಳ ಬದಲಿಗೆ ಸಾರ್ವಜನಿಕ ಸಾರಿಗೆಗಳಾದ ಬಸ್ ಅಥವಾ ಮೆಟ್ರೋ ಬಳಕೆಗೆ ಆದ್ಯತೆ ನೀಡಬೇಕು. ಒಂದೇ ಕಡೆ ಕೆಲಸಕ್ಕೆ ಹೋಗುವವರು ಒಟ್ಟಿಗೆ ಒಂದೇ ವಾಹನದಲ್ಲಿ ಪ್ರಯಾಣಿಸುವುದರಿಂದ ಇಂಧನ ಮತ್ತು ಹಣ ಎರಡೂ ಉಳಿಯುತ್ತದೆ. ಟ್ರಾಫಿಕ್ ಸಿಗ್ನಲ್‌ಗಳಲ್ಲಿ 30 ಸೆಕೆಂಡ್‌ಗಿಂತ ಹೆಚ್ಚು ಕಾಯಬೇಕಾಗಿ ಬಂದಾಗ ವಾಹನದ ಎಂಜಿನ್ ಆಫ್ ಮಾಡುವ ಅಭ್ಯಾಸ ಮಾಡಿಕೊಳ್ಳಿ.
ಅಡುಗೆ ಮನೆಯಲ್ಲಿ ಇಂಧನ ಬಳಕೆಯ ಬಗ್ಗೆ ನಿಗಾವಹಿಸಿ :ನಮ್ಮ ದೈನಂದಿನ ಜೀವನದಲ್ಲಿ ಅಡುಗೆ ಅನಿಲ ಪ್ರಮುಖ ಇಂಧನವಾಗಿದೆ. ಇದನ್ನು ವ್ಯವಸ್ಥಿತವಾಗಿ ಬಳಸುವ ಮೂಲಕ ಉಳಿತಾಯ ಮಾಡಬಹುದು. ಪ್ರೆಶರ್ ಕುಕ್ಕರ್ ಬಳಸುವುದರಿಂದ ಅಡುಗೆಯನ್ನು ಬೇಗನೆ ಬೇಯಿಸುವುದಲ್ಲದೆ, ಶೇಕಡಾ 30 ರಷ್ಟು ಗ್ಯಾಸ್ ಉಳಿತಾಯ ಮಾಡಬಹುದಾಗಿದೆ. ಅಡುಗೆಗೆ ಮುನ್ನ ತರಕಾರಿ ಹೆಚ್ಚುವುದು, ಮಸಾಲೆ ಅರೆಯುವುದು ಮುಂತಾದ ಕೆಲಸಗಳನ್ನು ಮೊದಲೇ ಮುಗಿಸಿ, ನಂತರ ಒಲೆ ಹಚ್ಚಿ. ಅಡುಗೆ ಮಾಡುವಾಗ ಪಾತ್ರೆಗಳನ್ನು ಮುಚ್ಚಿಡುವುದರಿಂದ ಶಾಖ ವ್ಯರ್ಥವಾಗುವುದಿಲ್ಲ.
ನವೀಕರಿಸಬಹುದಾದ ಇಂಧನಕ್ಕೆ ಆದ್ಯತೆ : ಬರಗಾಲದ ಸಮಯದಲ್ಲಿ ಸೂರ್ಯನ ತಾಪ ಹೆಚ್ಚಿರುತ್ತದೆ. ಈ ಸೌರಶಕ್ತಿಯನ್ನು ನಮಗೆ ಪೂರಕವಾಗಿ ಬಳಸಿಕೊಳ್ಳಬಹುದು. ಮನೆಗಳ ಮೇಲೆ ಸೋಲಾರ್ ವಾಟರ್ ಹೀಟರ್ ಮತ್ತು ಸೋಲಾರ್ ರೂಫ್‌ಟಾಪ್ ಅಳವಡಿಸುವುದರಿಂದ ವಿದ್ಯುತ್ ಮೇಲಿನ ಅವಲಂಬನೆ ಗಣನೀಯವಾಗಿ ಕಡಿಮೆಯಾಗುತ್ತದೆ.
ಬರಗಾಲದ ಈ ಕಠಿಣ ದಿನಗಳಲ್ಲಿ “ಇಂದಿನ ಉಳಿತಾಯವೇ ನಾಳಿನ ಇಂಧನ” ಎಂಬ ಮಂತ್ರವನ್ನು ಪ್ರತಿಯೊಬ್ಬರೂ ಪಾಲಿಸಬೇಕಾಗಿದೆ. ಸಣ್ಣ ಬದಲಾವಣೆಗಳು ದೊಡ್ಡ ಬದಲಾವಣೆಗೆ ನಾಂದಿಯಾಗಬಲ್ಲವು.
ಎಲ್ ನಿನೊ ಹಾಗೂ ಬರಗಾಲದಂತಹ ಪ್ರಕೃತಿಯ ಸವಾಲುಗಳು ನಮ್ಮ ಮುಂದಿರುವಾಗ, ನಾವು ನಮ್ಮ ದೈನಂದಿನ ನಡವಳಿಕೆಯಲ್ಲಿ ಬದಲಾವಣೆ ತಂದುಕೊಳ್ಳುವುದು ಅನಿವಾರ್ಯವಾಗಿದೆ. ಜಲ ಮತ್ತು ಇಂಧನವನ್ನು ವ್ಯರ್ಥ ಮಾಡುವುದು ದೇಶದ ಪ್ರಗತಿ ಹಾಗೂ ಪರಿಸರಕ್ಕೆ ದ್ರೋಹ ಬಗೆದಂತೆ. ನಾವೆಲ್ಲರೂ ಇಂದಿನಿಂದಲೇ ಜವಾಬ್ದಾರಿಯುತವಾಗಿ ಸಂಪನ್ಮೂಲಗಳನ್ನು ಬಳಸಿ, ನಮ್ಮ ಮುಂದಿನ ಪೀಳಿಗೆಗೆ ಸುಸ್ಥಿರ ಹಾಗೂ ಹಸಿರು ಭವಿಷ್ಯವನ್ನು ಉಡುಗೊರೆಯಾಗಿ ನೀಡಲು ಸಂಕಲ್ಪ ಮಾಡೋಣ.





