ಧರ್ಮಸ್ಥಳ ಪ್ರಕರಣ: ಡಾ. ವೀರೇಂದ್ರ ಹೆಗ್ಗಡೆ ಶ್ರೇಷ್ಠ ವ್ಯಕ್ತಿ, ನನ್ನನ್ನು ಅನಗತ್ಯವಾಗಿ ಎಳೆದುಕೊಳ್ಳಲಾಗುತ್ತಿದೆ- ನಟ ಪ್ರಕಾಶ್ ರಾಜ್
Oplus_131072
ಉಡುಪಿ: ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದಿರುವ ವಿವಾದ ಮತ್ತು 200 ಕೋಟಿ ರೂಪಾಯಿ ಷಡ್ಯಂತ್ರದ ಆರೋಪಗಳ ನಡುವೆಯೇ ಬಹುಭಾಷಾ ನಟ ಪ್ರಕಾಶ್ ರಾಜ್ ಮೊದಲ ಬಾರಿಗೆ ವಿಸ್ತೃತ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಅಪಾರ ಗೌರವ ವ್ಯಕ್ತಪಡಿಸಿ, “ವೀರೇಂದ್ರ ಹೆಗ್ಗಡೆ ಅವರು ಅದ್ಭುತವಾದ ಹಾಗೂ ಶ್ರೇಷ್ಠ ವ್ಯಕ್ತಿ. ಅವರ ವಿರುದ್ಧ ನನಗೆ ಯಾವುದೇ ದ್ವೇಷ ಅಥವಾ ವೈಯಕ್ತಿಕ ಅಸಮಾಧಾನ ಇಲ್ಲ” ಎಂದು ಹೇಳಿದರು.
ಇದೇ ವೇಳೆ, ಧರ್ಮಸ್ಥಳದ ವಿರುದ್ಧ 200 ಕೋಟಿ ರೂಪಾಯಿ ವೆಚ್ಚದ ಷಡ್ಯಂತ್ರ ನಡೆದಿದೆ ಎಂಬ ಆರೋಪಗಳ ಕುರಿತಂತೆ ತಮ್ಮ ಹೆಸರು ಪ್ರಸ್ತಾಪವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್, ತಮಗೆ ಸಂಬಂಧಿಸಿದ ಹಲವು ವಿಚಾರಗಳನ್ನು ತಿರುಚಿ ಬಿಂಬಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಮ್ಮ ವಿರುದ್ಧ ಹರಿದಾಡುತ್ತಿರುವ ಆರೋಪಗಳಿಗೆ ಯಾವುದೇ ಆಧಾರವಿಲ್ಲ ಎಂದು ಅವರು ಹೇಳಿದರು.
ಚಿನ್ನಯ್ಯ ಸಲ್ಲಿಸಿರುವ ಅರ್ಜಿಯಲ್ಲಿ, ದೂರವಾಣಿ ಮೂಲಕ ಪ್ರಕಾಶ್ ರಾಜ್ ಮಾತನಾಡಿದ್ದರು ಹಾಗೂ ಕೆಲವು ಸೂಚನೆಗಳನ್ನು ನೀಡಿದ್ದರು ಎಂಬ ಆರೋಪ ಉಲ್ಲೇಖವಾಗಿತ್ತು. ಅಲ್ಲದೆ ಧರ್ಮಸ್ಥಳದ ವಿರುದ್ಧ 200 ಕೋಟಿ ರೂ. ಬಜೆಟ್‌ನೊಂದಿಗೆ ಷಡ್ಯಂತ್ರ ರೂಪಿಸಲಾಗಿತ್ತು ಎಂಬ ಆರೋಪಗಳೂ ದಾಖಲಾಗಿವೆ. ಈ ಕುರಿತಂತೆ ಹೈಕೋರ್ಟ್‌ನಲ್ಲಿ ವಿಚಾರಣೆ ಮುಂದುವರಿದಿದೆ.
ಪ್ರಕಾಶ್ ರಾಜ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ತಮ್ಮನ್ನು ಈ ಪ್ರಕರಣಕ್ಕೆ ಅನಗತ್ಯವಾಗಿ ಎಳೆದು ತರಲಾಗುತ್ತಿದೆ ಎಂದು ಹೇಳಿದ್ದು, ಸತ್ಯಾಂಶಗಳು ತನಿಖೆಯಿಂದ ಹೊರಬರಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಧರ್ಮಸ್ಥಳ ಪ್ರಕರಣದ ಸುತ್ತ ರಾಜಕೀಯ ಹಾಗೂ ಸಾಮಾಜಿಕ ಚರ್ಚೆಗಳು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಪ್ರಕರಣದ ತನಿಖೆ ಮತ್ತು ನ್ಯಾಯಾಂಗ ಪ್ರಕ್ರಿಯೆಗಳತ್ತ ಸಾರ್ವಜನಿಕರ ಗಮನ ನೆಟ್ಟಿದೆ.





