ಲೋಕ ಅದಾಲತ್‌ನಲ್ಲಿ ರಾಜಿಯಾದ 3 ವರ್ಷಗಳ ಬಳಿಕ ಹೈಕೋರ್ಟ್‌ನಲ್ಲಿ ಪ್ರಶ್ನೆ- ಅರ್ಜಿದಾರನಿಗೆ 25 ಸಾವಿರ ರೂ. ದಂಡ

ಬೆಂಗಳೂರು: ಭೂವಿವಾದಕ್ಕೆ ಸಂಬಂಧಿಸಿದ ಪ್ರಕರಣವೊಂದು ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡ ನಂತರ ಅದನ್ನು ಪ್ರಶ್ನಿಸಿ 3 ವರ್ಷಗಳ ಬಳಿಕ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್, ಅರ್ಜದಾರರಿಗೆ 25 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.

ಲೋಕ ಅದಾಲತ್‌ನಲ್ಲಿ ಇತ್ಯರ್ಥವಾಗಿದೆ ಎಂದು ಸಂಧಾನ ಅರ್ಜಿಯನ್ನು ಪುರಸ್ಕರಿಸಿ ಸಿವಿಲ್‌ ದಾವೆ ರದ್ದುಪಡಿಸಿ 2021ರ ಆಗಸ್ಟ್ 14ರಂದು ಚಿಕ್ಕಮಗಳೂರಿನ ತರೀಕೆರೆಯ ಹಿರಿಯ ಸಿವಿಲ್‌ ನ್ಯಾಯಾಲಯ ನೀಡಿದ್ದ ಆದೇಶ ರದ್ದುಕೋರಿ ಚೇತನ್‌ ಕುಮಾರ್‌ ಎಂಬಾತ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ನ್ಯಾಯಪೀಠ ಸೋಮವಾರ ವಜಾಗೊಳಿಸಿದೆ.

ಸಂಧಾನ ಅರ್ಜಿಯನ್ನು ನ್ಯಾಯಾಲಯದ ಮುಂದೆ ಸಲ್ಲಿಕೆ ಮಾಡಿದಾಗ ಅದೇ ನ್ಯಾಯಾಲಯ ಅದನ್ನು ದಾಖಲಿಸಿಕೊಳ್ಳಬೇಕೆ ಹೊರತು ಅದನ್ನು ಲೋಕ ಅದಾಲತ್‌ಗೆ ವರ್ಗಾಯಿಸಬಾರದು ಎಂದು ರೇಣುಕಾ ಪ್ರಕರಣದಲ್ಲಿ ಹೈಕೋರ್ಟ್‌ ಆದೇಶಿಸಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಆದರೆ, ರೇಣುಕಾ ಪ್ರಕರಣದ ತೀರ್ಪು 2022ರಲ್ಲಿ ಬಂದಿದ್ದು, ಹಾಲಿ ಪ್ರಕರಣದ ಸಂಧಾನ 2021ರಲ್ಲಿ ನಡೆದಿದೆ. ಆದ್ದರಿಂದ, ರೇಣುಕಾ ಪ್ರಕರಣದ ತೀರ್ಪು ಈ ಪ್ರಕರಣಕ್ಕೆ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ವಿಚಾರಣೆ ವೇಳೆ ನ್ಯಾಯಪೀಠ, ಲೋಕ ಅದಾಲತ್‌ಗೆ ಹೋಗಿ ಸಹಿ ಮಾಡಿ, ಆನಂತರ ಸಂಧಾನ ಪತ್ರದಲ್ಲಿ ವಿಚಾರ ಗೊತ್ತಿರಲಿಲ್ಲ ಎಂದರೆ ಹೇಗೆ? ಕಾನೂನು ಪ್ರಕ್ರಿಯೆ ಆರಂಭಿಸಲು ನ್ಯಾಯಾಲಯ ಮುಂದಾಗಬೇಕೆ? ಈ ಪ್ರಕರಣವನ್ನು ವಕೀಲರ ಪರಿಷತ್‌ಗೆ ಕಳುಹಿಸಲಾಗುವುದು. ವಕೀಲರು ಸಂಧಾನದ ಬಗ್ಗೆ ನಿಮಗೆ ಮಾಹಿತಿ ನೀಡಿರಲಿಲ್ಲ ಎನ್ನುವ ವಿಚಾರ ಕುರಿತು ತನಿಖೆಗಾಗಿ ಪ್ರಕರಣವನ್ನು ಕಳುಹಿಸಲಾಗುವುದು. ರಾಜಿ ಮಾಡಿಕೊಂಡು ಇಲ್ಲಿ ಈ ರೀತಿ ವಾದಿಸುತ್ತಾರಲ್ಲಾ? ಅವರನ್ನು ಏನೆಂದುಕೊಂಡಿದ್ದಾರೆ? ಇದು ನ್ಯಾಯಾಲಯವನ್ನು ಮೀರುವ ಯತ್ನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು.

25 ಸಾವಿರ ರೂ. ದಂಡ: ಸಂಧಾನ ಪತ್ರದಲ್ಲಿನ ವಿಷಯಕ್ಕೆ ಸಂಬಂಧಿಸಿದಂತೆ ಅರ್ಜಿದಾರರಲ್ಲಿ ವಿಚಾರಿಸಲಾಗಿದೆ. ಆಗ ಅರ್ಜಿದಾರರು ವಕೀಲರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಆದ್ದರಿಂದ, ಇಲ್ಲಿ ಸಲ್ಲಿಸಲಾಗಿರುವ ಹಾಲಿ ಅರ್ಜಿಯು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗಿದೆ. ಅರ್ಜಿದಾರರು ಸಂಧಾನ ಅರ್ಜಿಗೆ ಸಹಿ ಹಾಕಿದ್ದು, ಆನಂತರ ಅದರ ಫಲವನ್ನೂ ಪಡೆದಿದ್ದಾರೆ. ಈಗ 3 ವರ್ಷಗಳ ಬಳಿಕ ಸಂಧಾನವನ್ನು ಪ್ರಶ್ನಿಸಿದ್ದಾರೆ. ಆದ್ದರಿಂದ, 25 ಸಾವಿರ ರೂ. ದಂಡ ವಿಧಿಸಿ ಅರ್ಜಿ ವಜಾಗೊಳಿಸಲಾಗಿದೆ. ದಂಡದ ಮೊತ್ತವನ್ನು 4 ವಾರಗಳಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸಬೇಕು. ಜುಲೈ 14ರೊಳಗೆ ದಂಡ ಪಾವತಿಸದಿದ್ದರೆ ಪ್ರಾಧಿಕಾರವು ಭೂಕಂದಾಯ ಹಿಂಬಾಕಿ ಎಂದು ಅದನ್ನು ವಸೂಲಿ ಮಾಡಬಹುದು ಎಂದು ನ್ಯಾಯಾಲಯ ನಿರ್ದೇಶಿಸಿದೆ.

Leave a Reply

Your email address will not be published. Required fields are marked *

error: Content is protected !!