ಮದುವೆ ಮನೆಯ ಡಿಜೆ ಸೌಂಡ್‌ಗೆ 140 ಕೋಳಿಗಳ ಸಾವು- ಡಿಜೆ ಮಾಲಿಕನ ವಿರುದ್ಧ ದೂರು
ಮದುವೆ ಮನೆಯವರು ಬಳಸಿದ ಡಿಜೆ ಸೌಂಡ್‌ನ ಶಬ್ದದಿಂದ ಕೋಳಿ ಫಾರ್ಮ್‌ನಲ್ಲಿದ್ದ ಸುಮಾರು 140 ಹೃದಯಾಘಾತದಿಂದ ಕೋಳಿಗಳು ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಮಾಹಿತಿಯ ಪ್ರಕಾರ, ಉತ್ತರ ಪ್ರದೇಶದ ಸುಲ್ತಾನ್‌ಪುರ ಎಂಬಲ್ಲಿ ವಿಶ್ವಕರ್ಮ ಅವರ ಮಗಳ ಮದುವೆ ಮೆರವಣಿಗೆ ಶಬೀರ್ ಅವರ ಕೋಳಿ ಫಾರ್ಮ್ ಎದುರುಗಡೆಯಿಂದ ಸಾಗುವಾಗ ಭಾರಿ ಶಬ್ದದ ಡಿಜೆ ವ್ಯವಸ್ಥೆ ಬಳಸಲಾಗಿದೆ. ಇದರಿಂದ ಭಯಭೀತಗೊಂಡ ಕೋಳಿಗಳು ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದರೆಂದು ಫಾರ್ಮ್ ಮಾಲೀಕ ಶಬೀರ್ ಆರೋಪಿಸಿದ್ದಾರೆ.
ಘಟನೆಯಿಂದ ದೊಡ್ಡ ಪ್ರಮಾಣದ ಆರ್ಥಿಕ ನಷ್ಟ ಉಂಟಾಗಿದೆ ಎಂದು ತಿಳಿಸಿರುವ ಅವರು, ಸಂಬಂಧಪಟ್ಟ ಡಿಜೆ ಮಾಲಿಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರು ಸ್ವೀಕರಿಸಿರುವ ಪೊಲೀಸರು ಪ್ರಕರಣದ ಕುರಿತು ಪರಿಶೀಲನೆ ನಡೆಸುತ್ತಿದ್ದು, ಶಬ್ದ ಮಾಲಿನ್ಯ ನಿಯಮ ಉಲ್ಲಂಘನೆ ಸಂಬಂಧ ತನಿಖೆ ಕೈಗೊಂಡಿದ್ದಾರೆ.





