ಆ್ಯಂಟಿ ಕಮ್ಯೂನಲ್ ವಿಂಗ್ ಲವ್‌ಜಿಹಾದ್, ಕಸಾಯಿಖಾನೆಗಳ ವಿರುದ್ಧ ಕಾರ್ಯಾಚರಿಸಲಿ- ಸುನಿಲ್ ಕೆ.ಆರ್
ಉಡುಪಿ: ರಾಜ್ಯದಲ್ಲಿ ಲವ್ ಜಿಹಾದ್, ಗೋಹತ್ಯೆ ನಿಷೇಧ, ಮತಾಂತರ ತಡೆಗಟ್ಟಿದರಷ್ಟೇ ಶಾಂತಿ ನೆಲೆಸಲು ಸಾಧ್ಯವಿದೆ. ಅದನ್ನು ಬಿಟ್ಟು ಧರ್ಮರಕ್ಷಣೆಗಾಗಿ ಕೆಲಸ ಮಾಡುವ ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿ ನೈತಿಕತೆ ಕಸಿಯುವ ಕೆಲಸವನ್ನು ರಾಜ್ಯ ಸರಕಾರ ಮಾಡಬಾರದು ಎಂದು ವಿಶ್ವಹಿಂದೂ ಪರಿಷತ್ ಮುಖಂಡ ಮತ್ತು ಪ್ರಾಂತ ಗೋರಕ್ಷಾ ಪ್ರಮುಖ್ ಸುನಿಲ್ ಕೆ.ಆರ್.ಹೇಳಿದರು.
ಹಿಂದೂ ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತದ ವತಿಯಿಂದ ದ.ಕ.ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಿಂದೂ ಸಂಘಟನೆಗಳ ಸಾಮಾಜಿಕ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಕಾನೂನು ವಿರೋಧಿ ಪೊಲೀಸ್ ಇಲಾಖೆಯ ಕ್ರಮವನ್ನು ಖಂಡಿಸಿ, ಕಾಂಗ್ರೆಸ್ ಸರಕಾರದ ವಿರುದ್ಧ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ನಡೆದ ಬೃಹತ್ ಪ್ರತಿಭಟನ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕರಾವಳಿ ಗಲಭೆಯುಕ್ತ ಪ್ರದೇಶ ಎಂಬ ರೀತಿ ರಾಜ್ಯ ಸರಕಾರ ಬಿಂಬಿಸುತ್ತಿದೆ. ಹಿಂದೂ ಸಮಾಜವನ್ನು ಮುನ್ನಡೆಸುತ್ತಿರುವವರ ಮೇಲೆ ರೌಡಿಶೀಟರ್,ಗೂಂಡಾ ಕಾಯ್ದೆಗಳನ್ನು ಹಾಕುವ ಸಂಚು ಇದರ ಹಿಂದಿದೆ. ಈ ಮೂಲಕ ಕರಾವಳಿಯಲ್ಲಿ ಹಿಂದುತ್ವದ ಫ್ಯಾಕ್ಟರಿಯನ್ನು ಧ್ವಂಸ ನಡೆಸುವ ಕೆಲಸದಲ್ಲಿ ರಾಜ್ಯ ಸರಕಾರ ನಿರತವಾಗಿದೆ. ಭಾಷಣ ಮಾಡಿದರೆ, ರಾಷ್ಟ್ರೀಯತೆ ವಿಚಾರ ಪ್ರಚಾರ ಮಾಡಿದರೆ ಪ್ರಕರಣ ದಾಖಲಿಸಲಾಗುತ್ತಿದೆ. ಮನೆ-ಮನೆಗೆ ನುಗ್ಗಿ ಕಾರ್ಯಕರ್ತರನ್ನು ತಪಾಸಣೆ ಮಾಡುವ ಕೆಲಸ ನಡೆಯುತ್ತಿದೆ. ಹಿಂಜಾವೇ ಮಂಗಳೂರು ವಿಭಾಗವು ದೇಶ ಹಾಗೂ ಹಿಂದೂ ವಿರೋಧಿ ಚಟುವಟಿಕೆಗಳಿಗೆ ಪೂರ್ಣವಿರಾಮ ನೀಡುವ ಉದ್ದೇಶವನ್ನು ಹೊಂದಿದ್ದು, ಇದಕ್ಕೆ ರಾಜ್ಯ ಸರಕಾರ ತಡೆಯೊಡ್ಡುತ್ತಿದೆ ಎಂದು ಕಿಡಿಕಾರಿದರು.
ಸರಕಾರ ಕರಾವಳಿ ಭಾಗದಲ್ಲಿ ಆ್ಯಂಟಿ ಕಮ್ಯೂನಲ್ ವಿಂಗ್ ಮಾಡಿರುವುದು ಸ್ವಾಗತಾರ್ಹವಾದರೂ ಇದು ಕೇವಲ ಹಿಂದೂಗಳ ಮೇಲೆ ಮಾತ್ರ ಪ್ರಕರಣ ದಾಖಲಿಸಲು ಸೀಮಿತವಾದಂತಿದೆ. ಹಿಂದೂ ಕಾರ್ಯಕರ್ತರ ವಿರುದ್ಧ ನಿರ್ಬಂಧ ಹೇರಿದರೆ ನಾವು ಸುಮ್ಮನಿರುವುದಿಲ್ಲ. ಹಿಂದೂ ಸಮಾಜವನ್ನು ಜಾಗೃತಗೊಳಿಸುವ ಕೆಲಸ ಸಂಘಟನೆ ಮಾಡುತ್ತಿದೆ. ಆ್ಯಂಟಿ ಕಮ್ಯೂನಲ್ ವಿಂಗ್ ಲವ್‌ಜಿಹಾದ್, ಕಸಾಯಿಖಾನೆಗಳ ವಿರುದ್ಧ ಕಾರ್ಯಾಚರಿಸಲಿ ಎಂದರು. ಕುಂಜಾಲಿನಲ್ಲಿ ಇತ್ತೀಚೆಗೆ ನಡೆದ ಗೋವಿನ ಕಳೇಬರೆ ಪತ್ತೆ ಘಟನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕಾರಣಕ್ಕೆ ಪ್ರಕರಣ ದಾಖಲಿಸಲಾಗಿದೆ. ಹಿಂದೂ ಮುಖಂಡ ಸತೀಶ್ ಪೂಜಾರಿಗೆ ಜಿಲ್ಲಾ ಪ್ರವೇಶ ನಿರ್ಬಂಧಿಸಲಾಗಿದೆ. ಇವೆಲ್ಲವೂ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಧರ್ಮ ವಿರೋಧಿ ಹೇಳಿಕೆ ನೀಡುವ ಸಚಿವರ ಮೇಲೆ ಪೊಲೀಸರು ಕ್ರಮ ತೆಗೆದುಕೊಳ್ಳಲಿ ಎಂದರು.
ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ ಗಂಟಿಹೊಳೆ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಹಿಂಜಾವೆ ಪ್ರಮುಖರಾದ ಮಹೇಶ್ ಬೈಲೂರು, ವಾಸುದೇವ ಗಂಗೊಳ್ಳಿ, ದಿನೇಶ್ ಮೆಂಡನ್, ಉಮೇಶ್ ನಾಯಕ್ ಸೂಡ, ಉಮೇಶ್ ಶೆಟ್ಟಿ ಪಕ್ಕಾಲು, ರೇಷ್ಮಾ ಉದಯ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.





