ಜಾಮೀನು ಸಿಕ್ಕ ಖುಷಿಯಲ್ಲಿ ಆರೋಪಿಗಳಿಂದ ರೋಡ್ ಶೋ : ವಿಡಿಯೋ ವೈರಲ್
ಹಾವೇರಿ: ಜಾಮೀನು ಸಿಕ್ಕ ಖುಷಿಯಲ್ಲಿ ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳು ರೋಡ್ ಶೋ ಮಾಡಿ ವಿಜಯೋತ್ಸವ ಮಾಡಿದ್ದ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಆರೋಪಿಗಳನ್ನು ಮತ್ತೆ ವಶಕ್ಕೆ ಪಡೆದುಕೊಂಡಿದ್ದಾರೆ.
ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ಪ್ರಮುಖ ಏಳು ಆರೋಪಿಗಳಿಗೆ ಜಾಮೀನು ಸಿಕ್ಕ ಬಳಿಕ ಜೈಲಿನಿಂದ ಬಿಡುಗಡೆಯಾಗಿ 5 ಕಾರುಗಳಲ್ಲಿ 20ಕ್ಕೂ ಹೆಚ್ಚು ಹಿಂಬಾಲಕರೊಂದಿಗೆ ವಿಜಯೋತ್ಸವದ ರೀತಿಯಲ್ಲಿ ಮೆರವಣಿಗೆ ನಡೆಸಿದ್ದರು. ರೋಡ್ ಶೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಆರೋಪಿಗಳ ಈ ನಡೆಗೆ ತೀರ್ವ ಆಕ್ರೋಶ ವ್ಯಕ್ತವಾಗಿತ್ತು. ರೋಡ್ ಶೋ ಭಾರೀ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ನಾಲ್ವರು ಆರೋಪಿಗಳನ್ನು ಪೊಲೀಸರು ಮತ್ತೆ ವಶಕ್ಕೆ ಪಡೆದುಕೊಂಡಿದ್ದಾರೆ.ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಈ ಬಗ್ಗೆ ಸರ್ಕಾರದ ವಿರುದ್ಧ ಟೀಕೆ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು,ಹಾವೇರಿಯ ಹಾನಗಲ್ ನಲ್ಲಿ ಸಾಮೂಹಿಕ ಅತ್ಯಾಚಾರದ ಆರೋಪಿಗಳು ನ್ಯಾಯಾಲಯದಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಸಂದರ್ಭವನ್ನು ರೋಡ್ ಶೋ ಮೂಲಕ ಸಂಭ್ರಮಿಸಿರುವುದು ಹಾಗೂ ಇದಕ್ಕೆ ಅವಕಾಶ ಮಾಡಿಕೊಟ್ಟಿರುವ ಕಾನೂನು ಸುವ್ಯವಸ್ಥೆಯ ಸ್ಥಿತಿಯನ್ನು ಗಮನಿಸಿದರೆ ಈ ರಾಜ್ಯದಲ್ಲಿ ಸಭ್ಯ ನಾಗರಿಕರ ಸಮಾಜ ಮರೆಯಾಗುತ್ತಿರುವ ಆತಂಕ ಉಂಟಾಗುತ್ತಿದೆ ಎಂದರು.
ಘಟನೆ ಹಿನ್ನೆಲೆ
2021 ರ ಜನವರಿಯಲ್ಲಿ ಹಾನಗಲ್ ತಾಲೂಕಿನಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 19 ಮಂದಿ ಆರೋಪಿಗಳು ಜೈಲು ಪಾಲಾಗಿದ್ದರು. ಆ ಪೈಕಿ 12 ಆರೋಪಿಗಳಿಗೆ ಈ ಹಿಂದೆಯೇ ಜಾಮೀನು ಸಿಕ್ಕಿತ್ತು. ಉಳಿದ 7 ಮಂದಿಗೆ ಮೇ.20 ರಂದು ನ್ಯಾಯಾಲಯ ಜಾಮೀನು ನೀಡಿತ್ತು.





