ಪುನೀತ್ ರಾಜಕುಮಾರ್ 50 ನೇ ಹುಟ್ಟುಹಬ್ಬ…
ಕರುನಾಡು ಈ ದಿನ ಪುನೀತ್ ರಾಜಕುಮಾರ್ ರವರ 50ನೇ ಹುಟ್ಟು ಹಬ್ಬದ ಸಂಭ್ರಮವನ್ನು ಆಚರಿಸುತ್ತಿದೆ ಜೊತೆಗೆ ಪುನೀತ್ ರವರ “ಅಪ್ಪು” ಚಿತ್ರವೂ ಮರು ಬಿಡುಗಡೆಗೊಂಡು ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದ್ದು ಅಭಿಮಾನಿಗಳ ಸಂಭ್ರಮವನ್ನು ದುಪಟ್ಟುಗೊಳಿಸಿದೆ.
ಪುನೀತ್ ರವರ ಹೊಸ ಚಿತ್ರ ಬಿಡುಗಡೆಗೊಂಡಾಗ ಯಾವ ರೀತಿ ಕ್ರೇಜ್ ಇರುತಿತ್ತೋ ಅದೇ ಕ್ರೇಜ್ ಇವತ್ತಿಗೂ ಅಭಿಮಾನಿಗಳಲ್ಲಿ ಇರುವುದು ಅವರ ಎಂದೂ ಮಾಸದ ಜನಪ್ರಿಯತೆಗೆ ಹಿಡಿದ ಕೈಗನ್ನಡಿಯಾಗಿದೆ. ಜೊತೆಗಿರದ ಜೀವ ಎಂದಿಗೂ ಜೀವಂತ ಎಂಬ ಮಾತಿಗೆ ಸಾಕ್ಷಿಯಂತಿದೆ.
ಪುನೀತ್ ರಾಜಕುಮಾರ್ ಮೊದಲ ಹೆಸರು ಮಾಸ್ಟರ್ ಲೋಹಿತ್ ಮೂಲತಃ ಕಲಾಕುಟುಂಬ ವರನಟ ಡಾ. ರಾಜಕುಮಾರ್ ಮಗನಾಗಿದ್ದರೂ ಬಾಲ ನಟನಾಗಿ ಚಿತ್ರರಂಗ ಪ್ರವೇಶಿಸಿದ್ದು ಆಕಸ್ಮಿಕ ಅದು 1975 ಇಸವಿ ‘ಪ್ರೇಮದ ಕಾಣಿಕೆ’ ಚಿತ್ರೀಕರಣ ನಡೆಯುತ್ತಿದ್ದ ಸಮಯ ಸಣ್ಣ ಕೂಸಿನ ಪಾತ್ರದ ಚಿತ್ರೀಕರಣ ನಡೆಯುತ್ತಿತ್ತು ಆದರೆ ಕರೆಸಿದ ಕೂಸು ಚಿತ್ರೀಕರಣಕ್ಕೆ ಸಹಕರಿಸದಿದ್ದಾಗ ತುರ್ತಾಗಿ ಚಿತ್ರೀಕರಣ ಮುಗಿಸಬೇಕಿದ್ದಿದ್ದರಿಂದ 6 ತಿಂಗಳ ಹಸುಗೂಸಾದ ಮಾಸ್ಟರ್ ಲೋಹಿತ್ ಗೆ ಮೊದಲ ಬಾರಿಗೆ ಕ್ಯಾಮೆರಾ ಎದುರಿಸುವ ಅದೃಷ್ಟ ಒದಗಿ ಬರುತ್ತೆ ನಂತರ ಕಲಾದೇವಿಯ ಆಶೀರ್ವಾದದಿಂದ ಹಲವಾರು ಚಿತ್ರಗಳಲ್ಲಿ ಬಾಲ ನಟನಾಗಿ ಅಭಿನಯಿಸಿ “ಬೆಟ್ಟದ ಹೂವು” ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಗಳಿಸಿದ್ದು ಈಗ ಇತಿಹಾಸ.
ಬಾಲನಟನಾಗಿ ಹಲವಾರು ಸಿನೆಮಾಗಳಲ್ಲಿ ಅಭಿನಯಿಸಿದ ನಂತರ ಯಾಕೋ ನಟನೆ ಮೇಲೆ ಆಸಕ್ತಿ ಕಮ್ಮಿಯಾಗಿ ನಟನೆಗೆ ವಿರಾಮ ಕೊಟ್ಟು ಸ್ನೇಹಿತರ ಜೊತೆಗೂಡಿ ಉದ್ಯಮದ ಕಡೆ ಗಮನ ಕೇಂದ್ರೀಕರಿಸುತ್ತಾರೆ ಆದರೆ ಉದ್ಯಮದಲ್ಲಿ ಅವರಿಗೆ ಅದೃಷ್ಟ ಕೈ ಹಿಡಿಯುವುದಿಲ್ಲ ಸುಖಾ ಸುಮ್ಮನೆ ಅಪವಾದಗಳು ಸುತ್ತಿಕೊಳ್ಳಲು ಪ್ರಾರಂಭವಾಗುತ್ತೆ ಇದರಿಂದ ಬೇಸೆತ್ತ ಪುನೀತ್ ಪುನಃ “ಅಪ್ಪು” ಚಿತ್ರದ ಮೂಲಕ ನಾಯಕನಟನಾಗಿ ಬಡ್ತಿ ಪಡೆದು ಚಿತ್ರರಂಗಕ್ಕೆ ಪುನಃ ಪ್ರವೇಶಮಾಡುತ್ತಾರೆ. “ಅಪ್ಪು” ಚಿತ್ರ ಅವರಿಗೆ ಯಾವ ಮಟ್ಟದಲ್ಲಿ ಜನಪ್ರಿಯತೆಯನ್ನು ತಂದು ಕೊಡುತ್ತೆ ಎಂದರೆ ಅಭಿಮಾನಿ ವಲಯದಲ್ಲಿ ಅವರು ಅದೇ ಹೆಸರಿನಿಂದ ಖ್ಯಾತಿ ಪಡೆಯುತ್ತಾರೆ ನಂತರದಲ್ಲಿ ಅವರು ಮುಟ್ಟಿದೆಲ್ಲಾ ಚಿನ್ನವಾಗುತ್ತ ಹೋಗುತ್ತೆ ಹಿಟ್ ಮೇಲೆ ಹಿಟ್ ಚಿತ್ರಗಳನ್ನು ನೀಡುತ್ತಾರೆ. ಸರಿಸುಮಾರು 30 ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸುತ್ತಾರೆ. ಫ್ಯಾಮಿಲಿ ಎಲ್ಲಾ ಜೊತೆ ಕೂತು ನೋಡುವಂತ ಒಂದೊಳ್ಳೆ ಸಂದೇಶವನ್ನು ಸಮಾಜಕ್ಕೆ ನೀಡುವ ಸದಭಿರುಚಿಯ ಚಿತ್ರಗಳನ್ನೇ ಹೆಚ್ಚಾಗಿ ಆರಿಸಿ ನಟಿಸುತ್ತಾರೆ. ಕಿರುತೆರೆಯಲ್ಲಿ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ತುಂಬಾನೇ ಉತ್ಸಾಹದಿಂದ ನಿರೂಪಿಸಿ ಕೊಟ್ಟು ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಪ್ರತಿ ಮನೆ ಮನದಲ್ಲೂ ತಮ್ಮ ನಿರೂಪಣೆಯ ಛಾಪು ಮೂಡಿಸುತ್ತಾರೆ.
ಪುನೀತ್ ಹುಟ್ಟಿದ ದಿನಾಂಕ ಮಾರ್ಚ್ 17th ಒಮ್ಮೆ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ನಟ ಜಗ್ಗೇಶ್ ಬಂದಿದ್ದಾಗ 17 ನಂಬರ್ ವಿಶೇಷತೆ ಬಗ್ಗೆ ಮಾತನಾಡುತ್ತ “ಎಲ್ಲರೂ ಒಂದು ದಿನ ಸಾಯುತ್ತಾರೆ ಆದರೆ ನಂಬರ್ 17 ಸತ್ತ ಮೇಲೆ ಬದುಕುತ್ತಾರೆ” ಎಂದು ಉಲ್ಲೇಖಿಸಿದ್ದರು. ನನಗೆ ಇನ್ನೂ ನೆನಪಿದೆ ಪುನೀತ್ ಕೊನೆಯದಾಗಿ ನಾಯಕ ನಟನಾಗಿ ಅಭಿನಯಸಿದ್ದ “ಜೇಮ್ಸ್” ಚಿತ್ರ ಅವರ ನಿಧನದ ನಂತರ ಬಿಡುಗಡೆಗೊಂಡಾಗ ಫ್ಯಾನ್ಸ್ ಕ್ರೇಜ್ ಕಲೆಕ್ಷನ್ಸ್ ವಿಷಯದಲ್ಲಿಅವರ ಹಿಂದಿನ ಎಲ್ಲಾ ಚಿತ್ರಗಳ ದಾಖಲೆಗನ್ನು ಅಳಿಸಿ ಹಾಕಿ ಹೊಸ ದಾಖಲೆ ಬರೆದಿತ್ತು .
ಪುನೀತ್ ಎಷ್ಟೇ ಜನಪ್ರಿಯ ನಟನಾಗಿದ್ದರೂ ಎಂದೂ ಸಹ ಅಹಂಕಾರವನ್ನು ಪ್ರದರ್ಶಿಸಿದವರಲ್ಲ ತುಂಬಾನೇ ಸರಳವಾಗಿ ಬದುಕ್ಕಿದ್ದವರು ಸಹಬಾಳ್ವೆಯನ್ನೇ ಜಾಸ್ತಿಯಾಗಿ ಇಷ್ಟ ಪಡುತ್ತಿದ್ದರು. ಹಿಂದೊಮ್ಮೆ ರಾಘವೇಂದ್ರ ರಾಜಕುಮಾರ್ ರವರು ಪುನೀತ್ ರವರು ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಸಲುವಾಗಿ ಸ್ಥಾಪಿಸಿದ್ದ PRK ಪ್ರೊಡಕ್ಷನ್ಸ್ ಕಾರ್ಯಕ್ರಮದಲ್ಲಿ ಮಾತನಾಡುತ್ತ “ತಾನು ಬೆಳೆಯುವುದರ ಜೊತೆ ತನ್ನವರನ್ನು ಬೆಳೆಸೋ ಅಪ್ಪು ಗುಣದ ಮೆಚ್ಚುಗೆ ವ್ಯಕ್ತಪಡಿಸುತ್ತ ಪುನೀತ್ ರವರಲ್ಲಿ ನಾನು ಶಂಕರನಾಗ್ ನೋಡ್ತೀನಿ ಶಂಕರನಾಗ್ ರಲ್ಲಿ ಇದ್ದ ಹಾಗೆ ಎನರ್ಜಿ ಮತ್ತೆ ವಿಭಿನ್ನ ರೀತಿಯಲ್ಲಿ ಸಿನಿಮಾ ಮಾಡಬೇಕು ಎಂಬ ಕನಸು ಅಪ್ಪುಗೂ ಇದೆ ಎಂದಿದ್ದರು. ರಾಘಣ್ಣ ತಿಳಿಸಿದ ಹಾಗೆ ಪುನೀತ್ ಅವರಲ್ಲಿ ಇದ್ದ ಅಂತಹದೊಂದು ಕನಸು ಬೆಳಕಿಗೆ ಬಂದದ್ದು ಅವರ ಕೊನೆಯದಾಗಿ ಕಾಣಿಸಿಕೊಂಡ ಗಂಧದಗುಡಿ ಚಿತ್ರದಲ್ಲಿ ಅಲ್ಲಿ ಅವರ ಸರಳತೆಯ ಪಾಠವಿತ್ತು ಪ್ರಕೃತಿಯ ಬಗ್ಗೆ ಪ್ರೀತಿಯಿತ್ತು ವನ್ಯಜೀವಿಗಳ ಬಗ್ಗೆ ಕಾಳಜಿ ಪ್ರತಿಬಿಂಬಿಸುತಿತ್ತು. ಪುನೀತ್ ಅಭಿನಯಿಸಿದ್ದ ಚಿತ್ರಗಳಲ್ಲಿ ಅಡಕವಾಗಿದ್ದ ಸಂದೇಶಗಳು ಅವರು ನಿಧನರಾದ ನಂತರ ಬೆಳಕಿಗೆ ಬಂದ ಅವರು ಮಾಡಿದ ಸಮಾಜಮುಖಿ ಕೆಲಸಗಳು ಈಗಿನ ಜನರೇಶನ್ ಯುವಕ ಯುವತಿಯರ ಮೇಲೆ ತುಂಬಾನೇ ಪ್ರಭಾವ ಬೀರಿದೆ ಎಂದರೆ ತಪ್ಪಾಗಲಾರದು.
–ನಾಗೇಶ್ ಶೆಣೈ, ಉಡುಪಿ





