ದತ್ತು ಕೇಂದ್ರದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಪೋಕ್ಸೊ ಆರೋಪಿಗೆ 10 ವರ್ಷ ಶಿಕ್ಷೆ

ಉಡುಪಿ: ಕುಂದಾಪುರ ಸ್ಪೂರ್ತಿಧಾಮ ದತ್ತು ಕೇಂದ್ರದಲ್ಲಿ ಪುನರ್ ವಸತಿಯಲ್ಲಿದ್ದ ಇಬ್ಬರು ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪೋಕ್ಸೊ ಆರೋಪಿಗೆ 10 ವರ್ಷ ಜೈಲುಶಿಕ್ಷೆ ಹಾಗೂ ಆ ವಿಚಾರ ತಿಳಿದೂ ದೂರು ದಾಖಲಿಸದ ಸಂಸ್ಥೆಯ ಮಾಲಕನಿಗೆ ಒಂದು ವರ್ಷಗಳ ಶಿಕ್ಷೆ ವಿಧಿಸಿ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ 1(ಪೋಕ್ಸೊ) ಇಂದು ಆದೇಶ ನೀಡಿದೆ.

ಕೋಟೇಶ್ವರ ನಿವಾಸಿ ಹನುಮಂತ (32) ಹಾಗೂ ಸಂಸ್ಥೆಯ ಮಾಲಕ ಕೇಶವ ಕೋಟೇಶ್ವರ ಶಿಕ್ಷೆಗೆ ಗುರಿಯಾದ ಆರೋಪಿಗಳು. ಸ್ಪೂರ್ತಿಧಾಮದಲ್ಲಿ ಹಲವು ಬಾಲಕ, ಬಾಲಕಿಯರು ಪುನವರ್ಸತಿಯಲ್ಲಿದ್ದು ಹನುಮಂತ ನೊಂದ ಬಾಲಕಿ ಯನ್ನು ಶಾಲೆಯ ಬಳಿ ಪರಿಚಯಿಸಿಕೊಂಡಿದ್ದನು. ಆ ಬಾಲಕಿಯನ್ನು ಪ್ರೀತಿಸು ವುದಾಗಿ ಮತ್ತು ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ಆತನ ಕಾರಿನಲ್ಲಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದನು.

ಅಲ್ಲದೆ ಕೇಶವ ಕೋಟೇಶ್ವರ ಅವರ ಅಧೀನ ಸಂಸ್ಥೆಗೆ ರಾತ್ರಿ ಸಮಯದಲ್ಲಿ ಭೇಟಿ ನೀಡಿದ ಹನುಮಂತ, ಇತರ ಮಕ್ಕಳಿಗೆ ತಿಂಡಿ ತಿನಿಸುಗಳನ್ನು ನೀಡಿ ಇಬ್ಬರು ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದನು. ಅದೇ ರೀತಿ ಹನುಮಂತ ನೊಂದ ಬಾಲಕಿಗೆ ಮೊಬೈಲ್ ತೆಗೆಸಿಕೊಟ್ಟಿದ್ದನು. ಈ ಬಗ್ಗೆ ಶಾಲಾ ಅಧ್ಯಾಪಕರು ವಿಚಾರ ತಿಳಿದು ಕೇಶವ ಕೋಟೇಶ್ವರ ಅವರಿಗೆ ಮಾಹಿತಿ ನೀಡಿದ್ದರು.

ಈ ಕುರಿತು ಇತರ ಮಕ್ಕಳನ್ನು ವಿಚಾರಿಸುವ ವೇಳೆ ಹನುಮಂತ ನೊಂದ ಬಾಲಕಿಗೆ ದೌರ್ಜನ್ಯ ಎಸಗಿರುವ ತಿಳಿದು ಬಂತು. ಆದರೂ ಕೂಡ ಕೇಶವ ಕೋಟೇಶ್ವರ ಈ ಬಗ್ಗೆ ಯಾವುದೇ ಕ್ರಮ ಕೆಗೊಂಡಿಲ್ಲ ಎಂದು ದೂರಲಾಗಿದೆ. ಈ ಸಂಸ್ಥೆ ಯಿಂದ ಮಂಗಳೂರಿನ ದಂಪತಿ ಒಂದು ಮಗುವನ್ನು ದತ್ತು ಪಡೆದಿದ್ದು, ಈ ಮಗು ತನ್ನ ದತ್ತು ತಂದೆ ತಾಯಿಯಲ್ಲಿ ಘಟನೆಯ ವಿಚಾರವನ್ನು ತಿಳಿಸಿತ್ತು.

ಅದರಂತೆ ಆಗಿನ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಕಪಿಲಾ ಬಾಲಕಿಯಿಂದ ಸಮಾಲೋಚನೆ ನಡೆಸಿ ಮಾಹಿತಿ ಪಡೆದು ಈ ಬಗ್ಗೆ ದೂರು ನೀಡಿದ್ದರು. ಈ ಬಗ್ಗೆ ಆಗಿನ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಂಪತ್ ಕುಮಾರ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಆಗಿನ ಉಡುಪಿ ಡಿವೈಎಸ್ಪಿ ಟಿ.ಆರ್.ಜೈಶಂಕರ್ ಆರೋಪಿ ವಿರುದ್ಧ ದೋಷರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಒಟ್ಟು 62 ಸಾಕ್ಷಿಗಳ ಪೈಕಿ 37ಸಾಕ್ಷಿಗಳ ವಿಚಾರಣೆ ಮಾಡಲಾಗಿದ್ದು, ಸಾಂದರ್ಭಿಕ ಸಾಕ್ಷಿ ಮತ್ತು ಮುಖ್ಯವಾಗಿ ನೊಂದ ಬಾಲಕಿಯ ಸಾಕ್ಷಿಗಳನ್ನು ಪರಿಗಣಿಸಿದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಆರೋಪಿತರು ತಪ್ಪಿತಸ್ಥರು ಎಂದು ಮನಗಂಡು ಶಿಕ್ಷೆ ವಿಧಿಸಿ ಆದೇಶ ನೀಡಿದರು.

ಹನುಮಂತಗೆ ಅತ್ಯಾಚಾರ ನಡೆಸಿದಕ್ಕಾಗಿ 10 ವರ್ಷಗಳ ಜೈಲುಶಿಕ್ಷೆ ಮತ್ತು 20ಸಾವಿರ ರೂ. ದಂಡ ಮತ್ತು ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದಕ್ಕೆ 10ವರ್ಷಗಳ ಜೈಲುಶಿಕ್ಷೆ ಮತ್ತು 20ಸಾವಿರ ರೂ. ದಂಡ ಮತ್ತು ದೂರು ದಾಖಲಿಸದ ಕಾರಣಕ್ಕಾಗಿ ಕೇಶವ ಕೋಟೇಶ್ವರಗೆ ಒಂದು ವರ್ಷ ಸಾದಾ ಶಿಕ್ಷೆ ಮತ್ತು 10ಸಾವಿರ ರೂ. ದಂಡ ವಿಧಿಸಿ ಆದೇಶಿಸಲಾಗಿದೆ.

ಒಟ್ಟು ದಂಡದ ಮೊತ್ತ 50 ಸಾವಿರ ರೂ.ನಲ್ಲಿ ಸರಕಾರಕ್ಕೆ 10ಸಾವಿರ ರೂ. ಮತ್ತು 20ಸಾವಿರ ರೂ. ತಲಾ ನೊಂದ ಬಾಲಕಿಯರಿಗೆ ಪರಿಹಾರವಾಗಿ ನೀಡುವಂತೆ ಮತ್ತುಪ ಸರಕಾರದಿಂದ ತಲಾ ಇಬ್ಬರು ನೊಂದ ಬಾಲಕಿಯರಿಗೆ 2ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ ನೀಡಿದೆ. ಪ್ರಕರಣದ ಸಂಪೂರ್ಣ ವಿಚಾರಣೆಯನ್ನು ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ನಡೆಸಿದ್ದು, ಸರಕಾರಿ ಅಭಿಯೋಜಕ ಜಯರಾಮ್ ಶೆಟ್ಟಿ ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *

error: Content is protected !!