ಲೋಕಸಭೆ ಚುನಾವಣೆ ಸತ್ಯ-ಸುಳ್ಳಿನ ನಡುವಿನ ಹೋರಾಟವಾಗಿದೆ: ಸಿಎಂ ಸಿದ್ದರಾಮಯ್ಯ

ಮಂಡ್ಯ: ಈ ಬಾರಿಯ ಲೋಕಸಭಾ ಚುನಾವಣೆ ಸತ್ಯ ಮತ್ತು ಸುಳ್ಳಿನ ನಡುವಿನ ಹೋರಾಟವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹೇಳಿದರು.

ಕಾಂಗ್ರೆಸ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕಕ್ಕೆ ಆಗಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವಲ್ಲಿ 27 ಸಂಸದರು ವಿಫಲರಾಗಿದ್ದಾರೆ. ಹೀಗಾಗಿ ಈ ಬಾರಿ ಬಿಜೆಪಿಯನ್ನು ತಿರಸ್ಕರಿಸುವಂತೆ ಮತದಾರರಿಗೆ ಕರೆ ನೀಡಿದರು.

ಇದೇ ವೇಳೆ ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ ಅವರು, ಮುಖ್ಯಮಂತ್ರಿಯಾಗಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಗೆಲುವನ್ನು ಖಚಿತಪಡಿಸಿಕೊಳ್ಳಲಾಗದ ಕುಮಾರಸ್ವಾಮಿ ಅವರು ಇದೀಗ ಮಂಡ್ಯದಿಂದ ಸ್ಪರ್ಧಿಸುತ್ತಿದ್ದು, ಅವರೂ ಸೋಲಿನ ರುಚಿ ನೋಡಲಿದ್ದಾರೆ ಎಂದು ಹೇಳಿದರು.

ಮಂಡ್ಯದ ಜನರು ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೆಸರುವಾಸಿಯಾಗಿದ್ದಾರೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣ ಗೌಡ (ಸ್ಟಾರ್ ಚಂದ್ರು) ಗೆಲುವನ್ನು ಖಚಿತಪಡಿಸುತ್ತಾರೆಂಬ ವಿಶ್ವಾಸವಿದೆ. ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧಿಸಬೇಕಿದ್ದ ಕುಮಾರಸ್ವಾಮಿ ಆ ಕ್ಷೇತ್ರದಲ್ಲಿ ಸೋಲಿನ ಭೀತಿಯಿಂದ ಮಂಡ್ಯಕ್ಕೆ ಬಂದಿದ್ದಾರೆ. ಇದೀಗ ಮಂಡ್ಯ ಜನ ಅವರಿಗೂ ಸೋಲಿನ ರುಚಿ ತೋರಿಸಬೇಕೆಂದು ತಿಳಿಸಿದರು.

ಕಾಂಗ್ರೆಸ್ ಗ್ಯಾರಂಟಿ ಯೋಜನೆಯಿಂದ 1.91 ಕೋಟಿ ಮಹಿಳೆಯರು ಪ್ರಯೋಜನ ಪಡೆದಿದ್ದಾರೆ. 1.15 ಕೋಟಿ ಮಹಿಳೆಯರಿಗೆ ಯೋಜನೆಯಡಿ ತಿಂಗಳಿಗೆ 2,000 ರೂ. ಸಿಗುತ್ತಿದೆ. ಹೊಸ ಮೈಶುಗರ್ ಕಾರ್ಖಾನೆಗೆ ಸರಕಾರ 50 ಕೋಟಿ ಬಿಡುಗಡೆ ಮಾಡಿದೆ. ಇದು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಬೃಂದಾವನ ಗಾರ್ಡನ್ ಅಭಿವೃದ್ಧಿ ಪಡಿಸುತ್ತದೆ. ನೀರಾವರಿ ಕಾಲುವೆಗಳ ಸಂಪೂರ್ಣ ಆಧುನೀಕರಣವನ್ನು ಮಾಡಲಾಗುತ್ತದೆ. ಮೇಕೆದಾಟು ಯೋಜನೆಯನ್ನು ಪೂರ್ಣಗೊಳಿಸುವ ಪ್ರತಿಜ್ಞೆ ಮಾಡಿದ್ದೇವ. ‘ಡಬಲ್ ಎಂಜಿನ್ ಸರ್ಕಾರ್’ ಇದ್ದಾಗಲೂ ಕೇಂದ್ರ ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಕಷ್ಟದ ನಡುವೆಯೂ ಈ ಭಾಗದ ಜನರಿಗೆ ನೀರು ಕೊಟ್ಟಿದ್ದೇವೆ ಹೇಳಿದರು.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಾತನಾಡಿ, ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಮ್ ಎಂದು ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಕರೆದಿದ್ದರು. ಇದೀಗ ಆ ಪಕ್ಷ ಬಿಜೆಪಿಯೊಂದಿಗೆ ಅಧಿಕೃತವಾಗಿ ಕೈಜೋಡಿಸಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!