9 ವರ್ಷದ ಬಾಲಕಿಯನ್ನು ಅಪಹರಿಸಿ ಆಸ್ತಿ ಬರೆಸಿಕೊಂಡಿದ್ದಕ್ಕೆ ಡಿಕೆಶಿ ‘ಕೈ’ ಬಲಪಡಿಸಬೇಕಾ?: ದೇವೇಗೌಡ

ಚಿಕ್ಕಮಗಳೂರು: ಬಿಡದಿ ಬಳಿಯ ರಸ್ತೆ ಬದಿಯ ಜಾಗ ಬರೆಸಿಕೊಳ್ಳಲು ಒಂಬತ್ತು ವರ್ಷದ ಹೆಣ್ಣು ಮಗಳ ಕಣ್ಣಿಗೆ ಬಟ್ಟೆ ಕಟ್ಟಿ ಕೂಡಿ ಹಾಕಿದ್ದರಲ್ಲ ಅದಕ್ಕೆ ಅವರ ಕೈ ಇನ್ನಷ್ಟು ಬಲಪಡಿಸಬೇಕಾ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.

ಮೂಡಿಗೆರೆ ತಾಲೂಕಿನಲ್ಲಿ ಮೈತ್ರಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಪರ ಮತಯಾಚನೆ ಮಾಡಿದ ದೇವೇಗೌಡರು, ಒಕ್ಕಲಿಗ ಸಮುದಾಯ ಹೆಚ್ಚಿರುವ ಕಡೆ ನನ್ನ ಕೈ ಬಲಪಡಿಸಿ ಎಂದು ಹೇಳುತ್ತಿರುವ ಡಿ.ಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದರು. ಅವರ ಕೈಯನ್ನ ಏಕೆ ಬಲಪಡಿಸಬೇಕು? 9 ವರ್ಷದ ಹುಡುಗಿಯನ್ನು ಎತ್ತುಕೊಂಡು ಹೋಗಿ ಆಸ್ತಿ ಬರೆಸಿಕೊಂಡರಲ್ಲಾ ಅದಕ್ಕಾ ಎಂದು ಪ್ರಶ್ನಿಸಿದ್ದಾರೆ.

ಅಮೆರಿಕದಲ್ಲಿ ದುಡಿದು ತಂದಿದ್ದ ಹಣದಲ್ಲಿ ಉದ್ಯಮಿಯೊಬ್ಬರು ಬಿಡದಿ ಬಳಿ ಐ.ಟಿ ಕಂಪನಿ ಸ್ಥಾಪನೆ ಮಾಡಲು ಮುಂದಾಗಿದ್ದರು. ಅದರ ಹಿಂದಿನ ದಿನ ಇವರು ಸುಳ್ಳು ಕ್ರಯಪತ್ರ ಸಿದ್ಧಡಿಸಿದ್ದರು. ನನ್ನ ಬಳಿ ದಾಖಲೆ ಇದೆ ಎಂದು ಅದನ್ನು ಮುಂದಿಟ್ಟುಕೊಂಡು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗೆ ಹೋಗಿದ್ದರು. ಎರಡೂ ಕಡೆ ಮುಖಭಂಗವಾದ ಬಳಿಕ ಆ ವ್ಯಕ್ತಿಯ ಮಗಳನ್ನು ಗಂಗಮ್ಮ ತಿಮ್ಮಯ್ಯ ಕಲ್ಯಾಣ ಮಂಟಪದ ಪಕ್ಕದ ಮನೆಯಲ್ಲಿ ಒಂಬತ್ತು ದಿನ ಇಟ್ಟಿದ್ದರು. ಆಸ್ತಿ ಪತ್ರಕ್ಕೆ ಸಹಿ ಹಾಕಿ ನಿಮ್ಮ ಮಗಳನ್ನು ಕರೆದುಕೊಂಡು ಹೋಗಿ ಎಂದು ಧಮ್ಕಿ ಹಾಕಿದ್ದರು ಇಂಥವರ ಕೈ ಬಲಪಡಿಸಬೇಕಾ’ ಎಂದು ಮರುಪ್ರಶ್ನಿಸಿದರು.

ಅಲ್ಲಿಗೆ ಹೋದಾಗ, ಆ ಮಗುವನ್ನ ದೂರ ಕೂರಿಸಿ ಕಣ್ಣಿಗೆ ಕಟ್ಟಿದ್ದ ಬಟ್ಟೆ ಬಿಚ್ಚುತ್ತಾರೆ. ಆ ಮಗು ಅಪ್ಪ ಅಂತ ಓಡಿ ಬರುತ್ತೆ, ಮತ್ತೆ ಆ ಮಗುವನ್ನ ಒಳಗೆ ಕರೆದುಕೊಂಡು ಹೋಗುತ್ತಾರೆ. ಇದನ್ನ ಎಲೆಕ್ಷನ್ ನಲ್ಲಿ ಬಳಸಿ ಅಂತ ಲಾಯರ್ ತಂದು ಕೊಟ್ಟರು.

ಆ ಪುಣ್ಯಾತ್ಮ ನಾನು ಕರ್ನಾಟಕದಲ್ಲಿ ಯಾರಿಗೂ ಮತ ಹಾಕಲ್ಲ. ನಾನು ವೋಟರ್ ಲಿಸ್ಟ್ ನಲ್ಲಿ ಇಲ್ಲ. ಈ ಕರ್ನಾಟಕದ ಸಹವಾಸ ಸಾಕು ಅಂತಾರೆ. ನನಗೆ ಅವರ ಹೆಸರು ಮರೆತು ಹೋಗಿದೆ. ಆಮೇಲೆ ಅವರು ಜೀವನಕ್ಕಾಗಿ ಬೇರೆಯವರ ಅಧೀನದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೆಚ್‍ಡಿಡಿ ಗರಂ ಆದರು.

Leave a Reply

Your email address will not be published. Required fields are marked *

error: Content is protected !!