ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಕೋಟ ಶ್ರೀನಿವಾಸ ಪೂಜಾರಿಗಿಂತ ಅವರ ಪತ್ನಿ ಶ್ರೀಮಂತೆ

ಉಡುಪಿ, ಎ.4: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು ಒಟ್ಟು ಸುಮಾರು 1.11 ಕೋಟಿ ರೂ. ಮೌಲ್ಯದ ನಗದು, ಚಿನ್ನಾಭರಣ, ಸ್ಥಿರ ಹಾಗೂ ಚರ ಆಸ್ತಿಗಳನ್ನು ಹೊಂದಿರುವುದಾಗಿ ಚುನಾವಣಾಧಿಕಾರಿಗೆ ಸಲ್ಲಿಸಿರುವ ಅಫಿದಾವತ್‌ನಲ್ಲಿ ತಿಳಿಸಿದ್ದಾರೆ.

ಆದರೆ ಕೋಟ ಅವರು ಬ್ಯಾಂಕಿನಲ್ಲಿ 40.64 ಲಕ್ಷ ರೂ.ಗಳ ಸಾಲವನ್ನು ತೋರಿಸಿದ್ದಾರೆ. ಕೋಟರ ಪತ್ನಿ ಶಾಂತ ಅವರ ಹೆಸರಿನಲ್ಲಿ ಒಟ್ಟು 1.73 ಕೋಟಿ ರೂ. ಸಂಪತ್ತಿದ್ದರೂ, ಅವರ ಹೆಸರಿನಲ್ಲೂ 35.43 ಲಕ್ಷ ರೂ. ಸಾಲವನ್ನೂ ತೋರಿಸಲಾಗಿದೆ. ಮಗ ಶಶಿಧರ ಬಳಿ 47.59 ಲಕ್ಷ ರೂ., ಮಗಳು ಸ್ವಾತಿ ಬಳಿ 3.70 ಲಕ್ಷ ರೂ. ಹಾಗೂ ಮಗಳು ಶೃತಿ ಬಳಿ 66,466ರೂ. ಸಂಪತ್ತಿದೆ.

ಅಫಿದಾವತ್‌ನಲ್ಲಿ ಕೋಟ ತಿಳಿಸಿದಂತೆ ಅವರ ಬಳಿ 90,000 ರೂ., ಪತ್ನಿ ಶಾಂತ ಬಳಿ 20,000ರೂ., ಮಗಳು ಸ್ವಾತಿ ಬಳಿ 10ಸಾವಿರ ರೂ., ಮಗ ಶಶಿಧರ ಬಳಿ 25 ಸಾವಿರ ರೂ. ನಗದು ಹಣ ಬ್ಯಾಂಕಿನಲ್ಲಿದೆ. ಮಗಳು ಶೃತಿ ಅವರಲ್ಲಿ ಯಾವುದೇ ಹಣವಿಲ್ಲ. ಕೋಟ ಅವರಲ್ಲಿ ಮಾರುತಿ ಅಲ್ಟೋ ಹಾಗೂ 22 ಲಕ್ಷ ರೂ.ಮೌಲ್ಯದ ಇನ್ನೋವಾ ಕಾರಿದೆ. ಮಗ ಶಶಿಧರನ ಹೆಸರಿನಲ್ಲಿ 16.5 ಲಕ್ಷ ರೂ. ಮೌಲ್ಯದ ಹೊಂಡಾ ಸಿಟಿ ಕಾರಿದೆ.

ಕೋಟ ಶ್ರೀನಿವಾಸ ಪೂಜಾರಿ ಅವರಲ್ಲಿ 63,850 ರೂ.ಮೌಲ್ಯದ 10 ಗ್ರಾಂ ತೂಕದ ಚಿನ್ನದ ಉಂಗುರವಿದೆ. ಪತ್ನಿ ಬಳಿ 9.57ಲಕ್ಷ ರೂ.ಮೌಲ್ಯದ 150 ಗ್ರಾಂ ಚಿನ್ನಾಭರಣವಿದ್ದರೆ, ಮಗಳು ಸ್ವಾತಿ ಬಳಿ 3.19ಲಕ್ಷ ರೂ.ಮೌಲ್ಯದ ಚಿನ್ನಾಭರಣ, ಮಗ ಶಶಿಧರ ಹಾಗೂ ಪುತ್ರಿ ಶೃತಿ ಬಳಿ ತಲಾ 10 ಗ್ರಾಂ (63,850ರೂ.) ತೂಕದ ಚಿನ್ನಾಭರಣಗಳಿವೆ.

ಕೋಟ ಅವರ ಹೆಸರಿನಲ್ಲಿ ಕೋಟತಟ್ಟು ಗ್ರಾಮದಲ್ಲಿ 13 ಸೆನ್ಸ್ ಹಾಗೂ ಪತ್ನಿಯ ಹೆಸರಿನಲ್ಲಿ 56 ಸೆನ್ಸ್ ಜಾಗವಿದೆ. ಇದನ್ನವರು 2011ರ ನವೆಂಬರ್ ತಿಂಗಳಲ್ಲಿ ಖರೀದಿಸಿದ್ದರು. ಅದರ ಮೌಲ್ಯ ಈಗ ಕ್ರಮವಾಗಿ 8 ಲಕ್ಷ ರೂ. ಹಾಗೂ 55ಲಕ್ಷ ರೂ.ಗಳಾಗಿದೆ.

ಕೋಟ ಅವರಿಗೆ ಬೆಂಗಳೂರಿನ ಬನಶಂಕರಿ ಬಡಾವಣೆಯಲ್ಲಿ ಸರಕಾರ ನೀಡಿದ 50+8 ಅಡಿ ವಿಸ್ತೀರ್ಣದ ಜಾಗವಿದ್ದು, ಈಗ ಅದರ ಮೌಲ್ಯ 40 ಲಕ್ಷ ರೂ. ಪತ್ನಿ ಶಾಂತ ಅವರ ಹೆಸರಿನಲ್ಲಿ ಗಿಳಿಯಾರು ಗ್ರಾಮದಲ್ಲಿ 2019ರಲ್ಲಿ ಖರೀದಿಸಿದ 13.5 ಸೆನ್ಸ್ ಜಾಗವೂ ಇದೆ. ಈಗ ಅದರ ಮೌಲ್ಯ ಐದು ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಗಿಳಿಯಾರು ಜಾಗದಲ್ಲಿ ಕಟ್ಟಡ ನಿರ್ಮಿಸಿದ್ದು ಅದರ ಅಂದಾಜು ಮೌಲ್ಯ 97.50 ಲಕ್ಷ ರೂ. ಎಂದು ಅಫಿದಾತ್‌ನಲ್ಲಿ ತಿಳಿಸಲಾಗಿದೆ. ಕೋಟ ಅವರಿಗೆ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕಿನಲ್ಲಿ 40.64 ಲಕ್ಷ ರೂ. ಹಾಗೂ ಪತ್ನಿ ಶಾಂತರಿಗೆ ಬ್ರಹ್ಮಾವರದ SBI 35.43 ಲಕ್ಷ ಸಾಲವಿದೆ. ಮಗ ಶಶಿಧರರ ಹೆಸರಿನಲ್ಲೂ ವಿವಿಧ ಬ್ಯಾಂಕುಗಳಲ್ಲಿ 28.35 ಲಕ್ಷ ರೂ. ಸಾಲವಿದೆ.

Leave a Reply

Your email address will not be published. Required fields are marked *

error: Content is protected !!