ದೇಶದ ಆಡಳಿತ ಮತ್ತು ಭದ್ರತೆಯ ಚುನಾವಣೆ- ಜಾತಿ ಆಧಾರದಲ್ಲಿ ಜನ ಮತ ಹಾಕಲ್ಲ: ಯತ್ನಾಳ್

ಉಡುಪಿ : ರಾಜ್ಯದ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ಕೆ.ಎಸ್. ಈಶ್ವರಪ್ಪ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿಗೆ ಕರೆದಿದ್ದಾರೆ. ಈಶ್ವರಪ್ಪ ಅವರ ದೆಹಲಿ ಪ್ರವಾಸ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸ ನನಗೆ ಇದೆ. ಈ ಪ್ರವಾಸ ಪಕ್ಷದ ಪರವಾಗಿ ಇರಲಿ ಮತ್ತು ವಂಶಪಾರಂಪರ್ಯ ರಾಜಕೀಯ ಅಂತ್ಯವಾಗಲಿ ಎಂದು ಮಾಜಿ ಕೇಂದ್ರ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್ ಹಾರೈಸಿದರು.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಟುಂಬ ರಾಜಕಾರಣ, ಭ್ರಷ್ಟಾಚಾರ ಮತ್ತು ಅಜೆಸ್ಟ್‌ಮೆಂಟ್ ರಾಜಕೀಯವನ್ನು ಒಪ್ಪಲ್ಲ ಎಂದು ಮೋದಿ ಹೇಳಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದಿಂದ ಯಾರನ್ನು ಇಳಿಸಬೇಕು, ಏರಿಸಬೇಕು ಮತ್ತು ಮೂಲೆಗೊತ್ತಬೇಕು ಎಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಬಿಜೆಪಿ ಸಾಮಾನ್ಯ ಕಾರ್ಯಕರ್ತರು ಬಯಸುವ ನಿರೀಕ್ಷೆ ಈಡೇರಿಕೆ ಆಗುತ್ತದೆ ಎಂಬ ವಿಶ್ವಾಸ ಇದೆ ಎಂದರು.

ಹಿಂದೂ ಸಮಾಜದ ಜಾತಿಗಳ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಯನ್ನು ಸಿದ್ದರಾಮಯ್ಯ ಉಳಿಸಿಕೊಂಡಿಲ್ಲ. ಸಿದ್ಧರಾಮಯ್ಯ ಹಿಂದುತ್ವ ಮತ್ತು ಹಿಂದೂ ವಿಚಾರಧಾರೆಗೆ ವಿರೋಧ ಇದ್ದವರು. ಲೋಕಸಭಾ ಚುನಾವಣೆ ನಂತರ ಸಿದ್ದರಾಮಯ್ಯನವರ ಪತನ ಖಚಿತ. ಸಿಎಂ ಹತಾಶರಾಗಿ ಚಾಮರಾಜನಗರ ಮೈಸೂರಿನಲ್ಲಿ ಮಾತನಾಡುತ್ತಿದ್ದಾರೆ. ಎರಡು ಲೋಕಸಭಾ ಕ್ಷೇತ್ರ ಸೋತರೆ, ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಇಳಿಸುತ್ತಾರೆ ಎಂಬ ಭಯವಿದೆ. ಅನುಕಂಪದ ಆಧಾರದಲ್ಲಿ ಮತ ತೆಗೆದುಕೊಳ್ಳುವ ಪ್ರಯತ್ನ ಸಿದ್ಧರಾಮಯ್ಯ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಸಾಮಾನ್ಯ ಕಾರ್ಯಕರ್ತ ಎಲ್ಲಾದರೂ ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದಿದ್ದಾನೆಯೇ? ಕೇವಲ ಮಂತ್ರಿ ಮಕ್ಕಳೇ ಸ್ಪರ್ಧೆ ಮಾಡಿದ್ದಾರೆ. ಹಣ ಇದ್ದರೆ ಜನ ಮತ ಹಾಕುತ್ತಾರೆ ಎಂಬ ಮೂರ್ಖ ದ್ವಂದ್ವ ವಿಚಾರದಲ್ಲಿ ಕಾಂಗ್ರೆಸ್ ಇದೆ. ಒಬ್ಬ ಮಂತ್ರಿಯೂ ಕಾಂಗ್ರೆಸ್‌ಗಾಗಿ ತ್ಯಾಗವನ್ನು ಮಾಡಿಲ್ಲ ಎಂದು ಅವರು ಆರೋಪಿಸಿದರು.

ಗ್ರಾಮಾಂತರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಅದು ದೇಶದ ದುರ್ದೈವ. ಡಾ.ಮಂಜುನಾಥ್ ಶ್ರೇಷ್ಠ ಮತ್ತು ಮನುಷ್ಯತ್ವ ಇರುವ ವೈದ್ಯ. ಅವರು ಸೋತರೆ ಅದು ಕರ್ನಾಟಕದ ದುರಂತ. ಭ್ರಷ್ಟರು ಗೂಂಡಾಗಳು ಇದೇ ಚುನಾವಣೆಯಲ್ಲಿ ಕೊನೆಯಾಗಬೇಕು ಎಂದು ಅವರು ತಿಳಿಸಿದರು.

ಬಿಜೆಪಿಗೆ ಕನಿಷ್ಠ 25 ಸೀಟ್ ಬರಬೇಕು ಎಂಬುದು ನಮ್ಮ ಲೆಕ್ಕಾಚಾರವಾಗಿದೆ. ಇದು ಜಾತಿ ಮೇಲೆ ನಡೆಯುವ ಚುನಾವಣೆ ಅಲ್ಲ. ದೇಶದ ಚುನಾವಣೆ, ಆಡಳಿತ ಮತ್ತು ಭದ್ರತೆಯ ಚುನಾವಣೆ ಆಗಿದೆ. ಜಾತಿ ಆಧಾರದ ಮೇಲೆ ಜನ ಮತ ಹಾಕಲ್ಲ ಎಂದು ಯತ್ನಾಳ್ ಹೇಳಿದರು.

ಸಂಸದೆ ಸುಮಲತಾ ದೇಶದ ದೃಷ್ಟಿಯಿಂದ ಎಲ್ಲರಿಗೆ ಒಪ್ಪಿಗೆ ಆಗುವ ನಿರ್ಣಯ ತೆಗೆದುಕೊಂಡಿದ್ದಾರೆ. ಇದರಿಂದ ಸುಮಲತಾ ಮೇಲಿನ ಗೌರವ ಇಮ್ಮಡಿಯಾಗುತ್ತದೆ. ಮುಂದೆ ಸುಮಲತಾಗೆ ಸೂಕ್ತ ಸ್ಥಾನಮಾನ ಕೊಡಬೇಕು ಎಂಬುದಾಗಿ ನಾನು ಒತ್ತಾಯ ಮಾಡುತ್ತೇನೆ. ಚುನಾವಣೆಯವರೆಗೆ ಉಪಯೋಗ ಮಾಡಿ ಬಿಟ್ಟುಬಿಟ್ಟರೆ ನಮ್ಮ ಪಕ್ಷಕ್ಕೆ ಗೌರವ ಉಳಿಯುವುದಿಲ್ಲ. ಮಂಡ್ಯದಲ್ಲಿ ಕುಮಾರಸ್ವಾಮಿ ಗೆಲುವು ನಿಶ್ಚಿತ. ರಾಜಕಾರಣದಲ್ಲಿ ಶಾಶ್ವತ ಮಿತ್ರ ಶತ್ರು ಎಂಬುವುದು ಇಲ್ಲ. ಸಿದ್ದಾಂತಗಳ ಮೇಲೆ ಪ್ರಜಾತಂತ್ರ ವ್ಯವಸ್ಥೆ ಇದೆ’

-ಬಸನಗೌಡ ಪಾಟೀಲ್ ಯತ್ನಾಳ್

Leave a Reply

Your email address will not be published. Required fields are marked *

error: Content is protected !!