ಅಭಿಮಾನಿಗಳು ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸವೇ ನನ್ನ ಚಿರ ಆಸ್ತಿ: ಪದ್ಮರಾಜ್ ಆರ್ ಪೂಜಾರಿ

ಮಂಗಳೂರು: ‘‘ರಾಜ್ಯದಲ್ಲಿ ಅತ್ಯಂತ ಬಡ ಕ್ಯಾಂಡಿಡೇಟ್‌ಗಳಲ್ಲಿ ನಾನೂ ಕೂಡಾ ಒಬ್ಬ. ಈ ಜಿಲ್ಲೆಯಲ್ಲಿ ಬೇರೆ ಬೇರೆ ಊರುಗಳಲ್ಲಿರುವ ಅಭಿಮಾನಿಗಳು ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸವೇ ನನ್ನ ಚಿರ ಆಸ್ತಿಯಾಗಿದೆ. ಅದು ಬಿಟ್ಟು ಬೇರೇನು ನನ್ನಲ್ಲಿ ಇಲ್ಲ’’ ಹೀಗೆಂದವರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪದ್ಮರಾಜ್ ಆರ್. ಪೂಜಾರಿ.

ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಾಮಪತ್ರ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ದೇಶಕಂಡ ಪ್ರಬುದ್ಧ, ಸಚ್ಛಾರಿತ್ರ್ಯದ, ಪ್ರಾಮಾಣಿಕ ರಾಜಕಾರಣಿ ಎಂದು ವಿಪಕ್ಷಗಳಿಂದ ಕರೆಸಿಕೊಂಡವರು. ಅವರ ಗರಡಿಯಲ್ಲಿ ಪಳಗಿದವನು ನಾನು. ಸುಮಾರು 33-34 ವರ್ಷಗಳಿಂದ ಅವರೊಂದಿಗೆ ಅವರೊಟ್ಟಿಗೆ ನಿಕಟ ಸಂಪರ್ಕ ಇಟ್ಟುಕೊಂದ್ದೇನೆ. ಬಿ. ಜನಾರ್ದನ ಪೂಜಾರಿ ತಮ್ಮ ಬಳಿ ಸಹಾಯ ಯಾಚಿಸಿ ಬರುವ ಬಡವರ ಕಷ್ಟಗಳಿಗೆ ಹೇಗೆ ಸ್ಪಂದಿಸುತ್ತಿದ್ದರು ಎನ್ನುವುದನ್ನು ಹತ್ತಿರದಿಂದ ನೋಡಿದವನು. ಅದಕ್ಕಿಂತ ಮುಖ್ಯವಾಗಿ ನಾನೂ ಕೂಡಾ ಬಡತನದಲ್ಲಿ ಬೆಳೆದವನು. ನಾನು ನನ್ನ ಅಫಿಡವಿಟ್‌ನ್ನು ಸಲ್ಲಿಸಿದ್ದೇನೆ. ಅದರಲ್ಲಿ ನನ್ನ ಆಸ್ತಿ ಏನೆಂಬುದನ್ನು ನೋಡಬಹುದು ಎಂದರು.

ಕಾಂಗ್ರೆಸ್ ಪಕ್ಷ ಯಾವತ್ತೂ ದ್ವೇಷದ ರಾಜಕಾರಣ ಮಾಡಿಲ್ಲ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಪದ್ಮರಾಜ್ ಯಾವತ್ತೂ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಭಾರತೀಯ ಕಾಂಗ್ರೆಸ್ ಪಕ್ಷ ನನಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡಿದೆ. ಪ್ರಜಾಪ್ರಭುತ್ವದ ಹಬ್ಬವಾಗಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಪಕ್ಷದ ರಾಜ್ಯ ಮತ್ತು ಜಿಲ್ಲಾ ನಾಯಕರ, ಕಾರ್ಯಕರ್ತರ ಉಪಸ್ಥಿತಿಯಲ್ಲಿ ನಾನು ನಾಮಪತ್ರ ಸಲ್ಲಿಸಿದ್ದೇನೆ. ಈ ಹೊತ್ತು ಜನರಲ್ಲಿ ಹೊಸ ಹುರುಪು, ಹುಮ್ಮಸ್ಸು ಕಂಡು ಬಂದಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆ ತುಳುನಾಡ ಜಿಲ್ಲೆಯಾಗಿದೆ. ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವ ಈ ಜಿಲ್ಲೆ ಸೌಹಾರ್ದತೆಗೆ ಒಂದೊಮ್ಮೆ ಹೆಸರಾಗಿತ್ತು. ಜಾತಿ , ಧರ್ಮವನ್ನು ಮೀರಿದ ಸಂಸ್ಕೃತಿಯನ್ನು ಹೊಂದಿರುವ ಈ ಜಿಲ್ಲೆ ಜಾಗತಿಕವಾಗಿ ಗಮನ ಸೆಳೆದಿತ್ತು. ಎಲ್ಲರಿಗೂ ಗೌರವದಿಂದ ಬದುಕುವ ಅವಕಾಶ ಇತ್ತು. ಆದರೆ ಕಳೆದ ಮೂವತ್ತು ವರ್ಷಗಳಿಂದ ಇಲ್ಲಿನ ಸಂಸ್ಕೃತಿ, ಸಂಸ್ಕಾರಕ್ಕೆ ಧಕ್ಕೆ ಉಂಟಾಗಿದೆ. ಜಾತಿ, ಧರ್ಮಗಳ ನಡುವೆ ಕಂದಕ ಉಂಟಾಗಿ ಕೋಮು ಸೂಕ್ಷ್ಮ ಪ್ರದೇಶವಾಗಿ ಗುರುತಿಸಿಕೊಂಡಿದೆ. ಬ್ಲಾಕ್ ಲೀಸ್ಟ್‌ನಲ್ಲಿ ಸೇರಿಕೊಂಡಿದೆ. ಹೀಗಾಗಿ ಇಲ್ಲಿಗೆ ಈಗ ಯಾವುದೇ ಕೈಗಾರಿಕೆಗಳು, ಉದ್ದಿಮೆಗಳು ಸ್ಥಾಪನೆ ಆಗುತ್ತಿಲ್ಲ. ಬಂಡವಾಳ ಹರಿದು ಬರುತ್ತಿಲ್ಲ. ಈಗ ಇಲ್ಲಿನ ಜನರಿಗೆ, ಮತದಾರರಿಗೆ ಇವೆಲ್ಲವುಗಳ ಅರಿವಾಗಿದೆ. ಜನರು ಬದಲಾವಣೆ ಬಯಸಿದ್ದಾರೆ. ತುಳುನಾಡಿನಲ್ಲಿ ಹಿಂದೆ ಇದ್ದ ಎಲ್ಲರೂ ಪರಸ್ಪರ ಗೌರವ, ಸೌಹಾರ್ದತೆ, ಪ್ರೀತಿ ವಿಶ್ವಾಸದಿಂದ ಬದುಕುವ ವಾತಾವರಣವನ್ನು ಕಲ್ಪಿಸಿಕೊಡುವುದು ನನ್ನ ಆದ್ಯತೆಯಾಗಿದೆ ಎಂದರು.

ಮೊದಲು 40 ವರ್ಷಗಳ ಕಾಲ ಇಲ್ಲಿಂದ ಪಾರ್ಲಿಮೆಂಟ್‌ಗೆ ಆಯ್ಕೆಯಾಗಿದ್ದ ಕಾಂಗ್ರೆಸ್ ಎಂಪಿಗಳು ಮಾಡಿರುವ ಅಭಿವೃದ್ಧಿ ಕಾರ್ಯಗಳು ಮಾತ್ರ ಇವತ್ತು ನಮ್ಮ ಮುಂದೆ ಕಾಣಿಸಿಕೊಳ್ಳುತ್ತಾ ಇದೆ. ಆ ಬಳಿಕ ಅಧಿಕಾರದ ಸವಿಯನ್ನುಂಡ ಬಿಜೆಪಿ ಸಂಸದರು ಕಳೆದ 34 ವರ್ಷಗಳಲ್ಲಿ ಜನರಿಗೇನು ಕೊಟ್ಟಿದ್ದಾರೆ, ಜಿಲ್ಲೆಯ ಅಭಿವೃದ್ಧಿಗೆ ಏನು ಕೊಡುಗೆ ನೀಡಿದ್ದಾರೆ ಎಂದು ನಾವು ಮೊನ್ನೆಯಿಂದ ಕೇಳುತ್ತಿದ್ದೇವೆ. ಆದರೆ ಅವರಿಂದ ಉತ್ತರ ಬಂದಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಅಧಿಕಾರರೂಢ ಕಾಂಗ್ರೆಸ್ ಸರಕಾರ 11 ತಿಂಗಳಲ್ಲಿ ಮಾಡಿದ ಸಾಧನೆಗಳು , ಜಾರಿಗೊಳಿಸಿದ ಯೋಜನೆಗಳು ಹಾಗೂ ಕಾಂಗ್ರೆಸ್‌ನ ಮಾಜಿ ಸಂಸದರು ನೀಡಿರುವ ಕೊಡುಗೆಗಳನ್ನು ಜನರ ಮುಂದಿಟ್ಟು ಕಾಂಗ್ರೆಸ್ ಮತ ಯಾಚಿಸಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ಘೋಷಿಸಿಕೊಂಡಿದ್ದ ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದ, ಬಡವರ ಮನೆಯಲ್ಲಿ ಗೃಹಿಣಿಯರ ಮುಖದಲ್ಲಿ ನೆಮ್ಮದಿಯ ನಗು ಕಾಣುವಂತಾಗಿದೆ. ಅವರಿಗೆ ಬೆಲೆ ಏರಿಕೆಯನ್ನು ನಿಭಾಯಿಸಲು, ಮಕ್ಕಳ ಶಿಕ್ಷಣದ ವೆಚ್ಚವನ್ನು ನಿಭಾಯಿ ಸಲು ಮತ್ತು ಕುಟುಂಬದ ಸದಸ್ಯ ಅನಾರೋಗ್ಯಕ್ಕೆ ತುತ್ತಾದಾಗ ಅದನ್ನು ಎದುರಿಸಲು ಮಹಿಳೆಯರಿಗೆ ಧೈರ್ಯ ಸಿಕ್ಕಿದೆ ಎಂದರು.

ನಾವು ದ್ವೇಷದ ರಾಜಕಾರಣ ಮಾಡುವುದಿಲ್ಲ. ಯಾರನ್ನೂ ಟೀಕಿಸುವುದಿಲ್ಲ. ಪ್ರೀತಿಯನ್ನು ಹಂಚುವುದು ಕಾಂಗ್ರೆಸ್‌ನ ಧ್ಯೇಯವಾಗಿದೆ. ಈ ಬಾರಿ ಕಾಂಗ್ರೆಸ್ ಇಲ್ಲಿ ಜಯ ಗಳಿಸುವುದು ಖಚಿತ ಎಂದು ಸ್ಪಷ್ಟಪಡಿಸಿದರು.

ಕೋಮು ಸಾಮರಸ್ಯ ಮರುಸ್ಥಾಪನೆ ಗುರಿ: ಬಿಜೆಪಿಯು ‘ಹಿಂದುತ್ವದ ಬದ್ಧತೆ, ಅಭಿವೃದ್ಧಿಗೆ ಆದ್ಯತೆ’ ಎಂಬ ಟಾಗ್‌ಲೈನ್ ಇಟ್ಟುಕೊಂಡಿದೆ. ಕಾಂಗ್ರೆಸ್‌ನ ಆದ್ಯತೆ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಪದ್ಮರಾಜ್ ಅವರು ‘ತುಳುನಾಡಿನಲ್ಲಿ ಕೋಮು ಸಾಮರಸ್ಯದ ಗತ ವೈಭವವನ್ನು ಸ್ಥಾಪಿಸುವುದು ಕಾಂಗ್ರೆಸ್‌ನ ಆದ್ಯತೆಯಾಗಿದೆ ಎಂದು ಉತ್ತರಿಸಿದರು.

ಕಾಂಗ್ರೆಸ್‌ನ ಗ್ಯಾರಂಟಿಗೆ ಬೆಲೆ ಇದೆ: ದಿನೇಶ್ ಗುಂಡೂರಾವ್

ರಾಜ್ಯದಲ್ಲಿ ಕಾಂಗ್ರೆಸ್‌ನ ಗ್ಯಾರಂಟಿಗಳಿಗೆ ಬೆಲೆ ಇದೆ. ಯಾಕೆಂದರೆ ಕಾಂಗ್ರೆಸ್ ನುಡಿದಂತೆ ನಡೆದುಕೊಂಡಿದೆ. ಜನರಿಗೆ ಕಾಂಗ್ರೆಸ್‌ನ ಮೇಲೆ ವಿಶ್ವಾಸ ಇದೆ. ಪ್ರತಿಯೊಂದು ಕುಟುಂಬಕ್ಕೂ ಅನುಕೂಲವಾದ ಯೋಜನೆಯನ್ನು ಕಾಂಗ್ರೆಸ್ ಮಾಡಿದೆ. ಈ ಕಾರಣದಿಂದಾಗಿ ರಾಜ್ಯದಲ್ಲಿ ಗ್ಯಾರಂಟಿಯ ಪ್ರಭಾವ ಖಂಡಿತವಾಗಿಯೂ ಇರುತ್ತದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರ ನಾಮಪತ್ರ ಸಲ್ಲಿಸುವ ಕಾರ್ಯಕ್ರಮದಲ್ಲಿ ಬುಧವಾರ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಜನರಿಗೆ ಮಾತು ಕೊಟ್ಟ ಮೇಲೆ ಅದನ್ನು ಉಳಿಸಿಕೊಳ್ಳುವುದು ಮುಖ್ಯ. ಆದರೆ ಬಿಜೆಪಿಯವರು ಗ್ಯಾರಂಟಿ ಕೊಟ್ಟಿದ್ದರು ಆದರೆ ಅದನ್ನು ಜಾರಿಗೊಳಿಸಲಿಲ್ಲ. ರೈತರ ಆದಾಯ ದುಪ್ಪಟ್ಟು ಹೆಚ್ಚಳ, ಪ್ರತಿವರ್ಷ 2 ಕೋಟಿ ಉದ್ಯೋಗ, ಡಾಲರ್ ಇಳಿಕೆ ಮಾಡುವ ಗ್ಯಾರಂಟಿ ಕೊಟ್ಟಿದ್ದರು. ಆದರೆ ಯಾವುದನ್ನು ಮಾಡಲಿಲ್ಲ. ಅವರೇ ಹೇಳಿದರು ಇದು ಜುಮ್ಲಾಗಳು ಎಂದು. ಈ ಕಾರಣದಿಂದಾಗಿ ಬಿಜೆಪಿಯ ಗ್ಯಾರಂಟಿಗೆ ಬೆಲೆ ಇಲ್ಲ ಎಂದರು.

ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆ ಕಾಂಗ್ರೆಸ್‌ನ ಕೈ ಹಿಡಿಯಲಿದೆ, ಸಿದ್ದರಾಮಯ್ಯ ಸರಕಾರದ ಸಾಧನೆ ಕಾಂಗ್ರೆಸ್‌ಗೆ ಅನುಕೂಲವಾಗಿದೆ. ಅಲ್ಲದೆ ಬಿಜೆಪಿ ಕರ್ನಾಟಕಕ್ಕೆ ಮಾಡಿರುವ ಮೋಸ ಜನರಿಗೆ ಗೊತ್ತಾಗಿದೆ. ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ನಿನ್ನೆ ಸುಳ್ಳು ಹೇಳಿ ಹೋಗಿದ್ದಾರೆ. ಬರಗಾಲಕ್ಕೆ ರಾಜ್ಯದಿಂದ ಸರಿಯಾದ ಮಾಹಿತಿ ಕೊಡದ ಕಾರಣ ಅನುದಾನ ಕೊಟ್ಟಿಲ್ಲ ಎಂದು ಸಚಿವ ಅಮಿತ್ ಶಾ ಹೇಳಿದ್ದಾರೆ. ಅವರು ಹೇಳಿದ್ದು ಅಪ್ಟಟ ಸುಳ್ಳು ಹೇಳಿದ್ದಾರೆ. ನಾವು ಈ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಿದ್ದೇವೆ. ಧೈರ್ಯ ಇದ್ದರೆ ಅವರು ಸುಪ್ರೀಂ ಕೋರ್ಟ್‌ನಲ್ಲಿ ಹೇಳಿಕೆ ನೀಡಲಿ. ನಾವು ಒಪ್ಪುಕೊಳ್ಳುತ್ತೇವೆ ಎಂದು ಹೇಳಿದರು.

ದೇಶದ ರಾಜಕಾರಣ, ಪ್ರಭಾಪ್ರಭುತ್ವದ ವ್ಯವಸ್ಥೆಯನ್ನು ಕೆಡಿಸುವ ಪ್ರಯತ್ನ ನಡೆಯುತ್ತಿರುವುದು ಮತ್ತು ಬಿಜೆಪಿ ಕಾನೂನಾತ್ಮಕವಾಗಿ ಭ್ರಷ್ಟಾಚಾರ ಎಸೆಗಿರುವುದು ಜನರಿಗೆ ಗೊತ್ತಾಗಿದೆ. ಕಾನೂನನ್ನು ಉಪಯೋಗಿಸಿಕೊಂಡು ಬಿಜೆಪಿ ಸುಮಾರು 12 ಸಾವಿರ ಕೋಟಿ ರೂ. ಲೂಟಿ ಮಾಡಿದೆ. ಈಡಿ, ಐಟಿ, ಸಿಬಿಐ ಅನ್ನು ಮುಂದಿಟ್ಟುಕೊಂಡು ಜನರನ್ನು ಹೆದರಿಸಿ, ಬೆದರಿಸಿ ದೋಚಿಸಿದ ಪ್ರಕರಣಗಳು ಬಯಲಾಗಿದೆ. ಈ ಚುನಾವಣೆಯಲ್ಲಿ ಬಿಜೆಪಿಗೆ ಜನರು ಸರಿಯಾದ ಪಾಠ ಕಲಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ದೇಶ ವಿಭಜನೆಯ ಮಾತನಾಡುವವರಿಗೆ ಟಿಕೆಟ್ ಕೊಟ್ಟಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಭಾಷಣದ ವೇಳೆ ಹೇಳಿದ್ದಾರೆ. ಆದರೆ ಪ್ರಧಾನಿ ಈ ರೀತಿ ಹೇಳಬಾರದಿತ್ತು. ಭಯೋತ್ಪಾದನೆಗೆ ಯಾವುದೇ ಸರಕಾರ ಬೆಂಬಲ ನೀಡದು. ನಾವು ಖಂಡಿತ ನೀಡುವುದಿಲ್ಲ. ಸಣ್ಣಪುಟ್ಟ ಘಟನೆಗಳನ್ನು ಹಿಡಿದುಕೊಂಡು ಅವರು ಈ ರೀತಿ ಮಾಡುತ್ತಾರೆ. ಕಾಂಗ್ರೆಸ್‌ನ ನಾಯಕರಾದ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ ಗಾಂಧಿ ಅವರಂತವರು ತ್ಯಾಗ, ಬಲಿದಾನ ಮಾಡಿದ್ದಾರೆ. ಆದರೆ ಬಿಜೆಪಿಯಲ್ಲಿ ಯಾರು ಬಲಿದಾನ ಮಾಡಿದ್ದಾರೆ. ಅವರು 10 ವರ್ಷಗಳಲ್ಲಿ ಜನರಿಗೆ ಏನು ಸಹಾಯ ಮಾಡಿದರು ? ಪ್ರಧಾನಿ ನರೇಂದ್ರ ಮೋದಿ ಬರೇ ವಿಶ್ವಗುರು, ವಿದೇಶದಲ್ಲಿ ಹೆಸರು ಮಾಡಿಕೊಂಡಿದ್ದೇನೆ ಎಂದು ಹೇಳಿಕೊಂಡು ಹೋಗುತ್ತಿದ್ದಾರೆ. ಅವರು ದೇಶದ ಜನರಿಗೇನು ಮಾಡಿದ್ದಾರೆಂದು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.

ಕರ್ನಾಟಕದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಕಳೆದ ವಿಧಾನ ಸಭೆ ಚುನಾವಣೆಗಿಂತಲೂ ಉತ್ತಮ ಫಲಿತಾಂಶವನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿಸಲು ಸಾಧ್ಯ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಹಿಂದುತ್ವದ ಭದ್ರಕೋಟೆ ಮಹಾರಾಷ್ಟ್ರದಲ್ಲೇ ಇಲ್ಲ : ಬಿ.ಕೆ.ಹರಿಪ್ರಸಾದ್

ಹಿಂದುತ್ವದ ಭದ್ರಕೋಟೆ ಮಹಾರಾಷ್ಟ್ರದಲ್ಲೇ ಇಲ್ಲ.. ಸಾವರ್ಕರ್ ಸೃಷ್ಟಿಸಿದ ಹಿಂದುತ್ವದ ಕೋಟೆ ಅಲ್ಲೇ ಭದ್ರವಾಗಿಲ್ಲ. ಹೀಗಿರುವಾಗ ಎರಡು ದಿವಸ ಖರೀದಿ ಮಾಡಿ ಹಿಂದುತ್ವದ ಕೋಟೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಬುಧವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು.

ದಕ್ಷಿಣ ಕನ್ನಡದಲ್ಲಿ ಬಿಜೆಪಿ ಬೇರೆ ಬೇರೆ ಕಾರಣಗಳಿಂದಾಗಿ ಗೆದ್ದಿದೆ. ಇದರ ಅರ್ಥ ದ.ಕ. ಹಿಂದುತ್ವದ ಭದ್ರ ಕೋಟೆ ಎಂದು ಹೇಳಲು ಸಾಧ್ಯವಿಲ್ಲ. ದೊಡ್ಡ ದೊಡ್ಡ ಕೋಟೆಗಳೇ ಮುರಿದು ಹೋಗಿವೆ. ರಾಜಮಹಾರಾಜರುಗಳ ಕೋಟೆಗಳೇ ಪಾಳು ಬಿದ್ದಿವೆ. ಹೀಗಿರುವಾಗ ಭದ್ರಕೋಟೆ ಎಲ್ಲಿಂದ ಬಂತು ಪ್ರಶ್ನಿಸಿದರು.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪದ್ಮರಾಜ್ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷದ ಹಿರಿಯ ನಾಯಕರು ಹೊಸ ಮುಖ , ಹೊಸ ಆಧ್ಯಾಯ ಆರಂಭಿಸುವ ಉದ್ದೇಶದೊಂದಿಗೆ ಅವರಿಗೆ ಅವಕಾಶ ನೀಡಿದೆ ಎಂದರು.

ಸಂವಿಧಾನದ ರಕ್ಷಣೆ, ಪ್ರಜಾಪ್ರಭುತ್ವ , ಜಾತ್ಯತೀತ ತತ್ವವನ್ನು ಕಾಪಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕೆಲಸ ಆಗಬೇಕಾಗಿದೆ. ಸ್ವಾತಂತ್ರ್ಯ ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದ ದ.ಕ. ಮತ್ತು ಉತ್ತರ ಕನ್ನಡದಲ್ಲಿ ಸ್ವತಂತ್ರ ಭಾರತದ ಆಶಯವನ್ನು ಉಳಿಸಿ ಬೆಳೆಸಲು ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ಹರಿಪ್ರಸಾದ್ ನುಡಿದರು.

Leave a Reply

Your email address will not be published. Required fields are marked *

error: Content is protected !!