ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಆಸ್ತಿ ಮೌಲ್ಯ ಎಷ್ಟು ಗೊತ್ತಾ?

ಉಡುಪಿ, ಎ.4: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಅವರು ಒಟ್ಟು 13.48 ಕೋಟಿ ರೂ. ಮೌಲ್ಯದ ನಗದು, ಚಿನ್ನಾಭರಣ, ಸ್ಥಿರ ಹಾಗೂ ಚರ ಆಸ್ತಿಗಳನ್ನು ಹೊಂದಿರುವುದಾಗಿ ಚುನಾವಣಾಧಿಕಾರಿಗೆ ಸಲ್ಲಿಸಿರುವ ಅಫಿದಾವತ್‌ನಲ್ಲಿ ತಿಳಿಸಿದ್ದಾರೆ.

ಇವುಗಳಲ್ಲಿ 35.38 ಲಕ್ಷ ರೂ. ಚರಾಸ್ಥಿಯಾದರೆ,13.12 ಕೋಟಿ ರೂ. ಸ್ಥಿರಾಸ್ಥಿಯ ಮೌಲ್ಯವಾಗಿದೆ. ಹೆಗ್ಡೆ ಅವರ ಪತ್ನಿ ಶೋಭಾ ಜೆ.ಹೆಗ್ಡೆ ಅವರು ಸಹ ಒಟ್ಟು 1.86 ಕೋಟಿ ರೂ.ಮೌಲ್ಯದ ಚರಾಸ್ಥಿ ಹಾಗೂ ಸ್ಥಿರಾಸ್ಥಿಯನ್ನು ಹೊಂದಿದ್ದಾರೆ. ಇವುಗಳಲ್ಲಿ 81.46 ಲಕ್ಷ ರೂ. ಚರಾಸ್ಥಿಯ ಮೌಲ್ಯವಾದರೆ, 1.05 ಕೋಟಿ ರೂ.ಸ್ಥಿರಾಸ್ಥಿಯ ಮೌಲ್ಯವಾಗಿದೆ.

ಇದು ಅವರು 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಘೋಷಿಸಿದ ಸಂಪತ್ತಿಗಿಂತ ಸುಮಾರು 5.60 ಕೋಟಿ ರೂ. ಅಧಿಕವಾಗಿದೆ. ಅಂದು ಅವರು ಒಟ್ಟು 7.80 ಕೋಟಿ ರೂ. ಮೌಲ್ಯದ ನಗದು, ಚಿನ್ನಾಭರಣ, ಸ್ಥಿರ ಹಾಗೂ ಚರ ಆಸ್ತಿಗಳನ್ನು ಹೊಂದಿರುವುದಾಗಿ ಚುನಾವಣಾಧಿಕಾರಿಗೆ ಸಲ್ಲಿಸಿದ್ದ ಅಫಿದಾವತ್‌ನಲ್ಲಿ ತಿಳಿಸಿದ್ದರು.

2014ರಲ್ಲಿ 85 ಲಕ್ಷ ರೂ.ಮೊತ್ತದ ಸಾಲವನ್ನು ಹೊಂದಿದ್ದ ಹೆಗ್ಡೆ ಅವರು ಈ ಬಾರಿಯ ಅಫಿದಾವತ್‌ನಲ್ಲಿ ಕೇವಲ 15 ಲಕ್ಷ ರೂ.ಗಳ ಬ್ಯಾಂಕ್ ಸಾಲವನ್ನು ಘೋಷಿಸಿದ್ದಾರೆ. ಹೆಗ್ಡೆ ಅವರಿಗೆ ಹೋಲಿಸಿದರೆ ಅವರ ಪತ್ನಿಯವರ ಸಂಪತ್ತಿನಲ್ಲಿ ಹೆಚ್ಚಿನ ಹೆಚ್ಚಳವಾಗಿಲ್ಲ. ಅಲ್ಲದೇ ಪತ್ನಿ ಸಾಲದಿಂದಲೂ ಮುಕ್ತರಾಗಿದ್ದಾರೆ.

ಅಫಿದಾವತ್‌ನಲ್ಲಿ ಹೆಗ್ಡೆ ತಿಳಿಸಿದಂತೆ ಅವರ ಬಳಿ 85,000ರೂ. ಹಾಗೂ ಅವರ ಪತ್ನಿ ಬಳಿ 92,000ರೂ. ನಗದು ಹಣವಿದೆ. ಹೆಗ್ಡೆ ಅವರ ಬಳಿ ಇರುವ ಚರಾಸ್ಥಿಗಳ ಮೌಲ್ಯ 35.34 ಲಕ್ಷ ರೂ.ಗಳಾದರೆ, ಪತ್ನಿಯ ಬಳಿ 81.46 ಲಕ್ಷ ರೂ. ಚರಾಸ್ಥಿಗಳಿವೆ. ಇದರಲ್ಲಿ ವಿವಿಧ ಬ್ಯಾಂಕುಗಳ ಉಳಿತಾಯ ಖಾತೆ, ಬಾಂಡ್ ಹಾಗೂ ಶೇರ್‌ಗಳಲ್ಲಿರುವ ಹಣವೂ ಸೇರಿದೆ. ಪತಿ ಹಾಗೂ ಪತ್ನಿ ಇಬ್ಬರ ಹೆಸರಿನಲ್ಲಿ ಯಾವುದೇ ವಾಹನಗಳಿಲ್ಲ.

ಆದರೆ ಜಯಪ್ರಕಾಶ್ ಹೆಗ್ಡೆ ಅವರ ಬಳಿ 1.84 ಲಕ್ಷ ರೂ. ಮೌಲ್ಯದ 30 ಗ್ರಾಮ್ ಚಿನ್ನ, ವಜ್ರಾಭರಣಗಳೂ 1.29 ಲಕ್ಷ ರೂ.ಮೌಲ್ಯದ ಬೆಳ್ಳಿ ವಸ್ತುಗಳಿವೆ. ಹೆಗ್ಡೆ ಅವರ ಪತ್ನಿ ಬಳಿ 64.41 ಲಕ್ಷ ರೂ.ಮೌಲ್ಯದ 1050 ಗ್ರಾಂ ಚಿನ್ನಾಭರಣವಿದೆ.

ಹೆಗ್ಡೆಯವರ ಹೆಸರಿನಲ್ಲಿ 13.12 ಕೋಟಿ ರೂ.ಮೌಲ್ಯದ ಸ್ಥಿರಾಸ್ಥಿ ಇದೆ. ಇದರಲ್ಲಿ 8.69 ಕೋಟಿ ರೂ. ಪಿತ್ರಾರ್ಜಿತ ಆಸ್ತಿಯಾದರೆ, 4.42 ಕೋಟಿ ರೂ. ಸ್ವಯಾರ್ಜಿತ ಆಸ್ತಿಯೂ ಇದೆ. ಪತ್ನಿ ಬಳಿ ಒಟ್ಟು 1.05 ಕೋಟಿ ರೂ. ಮೌಲ್ಯದ ಸ್ಥಿರಾಸ್ಥಿ ಇದ್ದು, ಇದರಲ್ಲಿ 60.09 ಲಕ್ಷ ರೂ.ಪಿತ್ರಾರ್ಜಿತ ಆಸ್ತಿಯಾದರೆ, 44.91 ಲಕ್ಷ ರೂ. ಸ್ವಯಾರ್ಜಿತ ಆಸ್ತಿಯಾಗಿದೆ ಎಂದು ಅಫಿದಾವತ್‌ನಲ್ಲಿ ತಿಳಿಸಲಾಗಿದೆ.

ಹೆಗ್ಡೆ ಅವರ ವಿರುದ್ಧ ಯಾವುದೇ ಮೊಕದ್ದಮೆಯೂ ದಾಖಲಾಗಿಲ್ಲ. 2022-23ನೇ ಸಾಲಿನಲ್ಲಿ ಹೆಗ್ಡೆ ಅವರು 67.76 ಲಕ್ಷ ರೂ.ಆದಾಯವನ್ನು ತೋರಿಸಿದ್ದರೆ, ಪತ್ನಿ ವೀಣಾ ಅವರು 34.93 ಲಕ್ಷ ರೂ.ಆದಾಯ ಘೋಷಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!