ಉತ್ತರ ಕನ್ನಡ: ಚು. ಆಯೋಗದ ಜಾಗೃತಿ ವಿಡಿಯೋದಲ್ಲಿ ಕಲೆ ಸಂಸ್ಕೃತಿ ಅನಾವರಣ

ಲೋಕಸಭಾ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ರಾಜ್ಯದಲ್ಲಿ ಏಪ್ರಿಲ್ 26 ಮತ್ತು ಮೇ 7 ರಂದು ನಡೆಯುವ ಚುನಾವಣೆಯಲ್ಲಿ ಮತದಾನದ ಮಹತ್ವ ಕುರಿತಂತೆ ಸಾರ್ವಜನಿಕರಿಗಾಗಿ ರಾಜ್ಯಾದ್ಯಂತ ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ರಾಜ್ಯ ಚುನಾವಣಾ ಆಯೋಗವು, ಚುನಾವಣಾ ಜಾಗೃತಿ ಕುರಿತು ಸಿದ್ದಪಡಿಸಿರುವ ವೀಡಿಯೋದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಲೆ ಸಂಸ್ಕೃತಿ ಮತ್ತು ಪ್ರವಾಸಿ ತಾಣಗಳನ್ನು ಬಳಸಿಕೊಂಡು ಆಕರ್ಷಕ ವೀಡಿಯೋ ತಯಾರಿಸಿದ್ದು, ಈ ವೀಡಿಯೋಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಬೆಂಗಳೂರು ಅವರು, ಚುನಾವಣಾ ಪರ್ವ ದೇಶದ ಗರ್ವ ಎಂಬ ಘೋಷವಾಕ್ಯದೊಂದಿಗೆ ಸಿದ್ದಪಡಿಸಿರುವ ಈ ಜಾಗೃತಿ ವೀಡಿಯೋದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಜನಾಂಗದ ಮಹಿಳೆಯರು ತಮ್ಮ ವಿಶಿಷ್ಠ ನೃತ್ಯ ಪ್ರಕಾರವಾದ ಡಮಾಮಿ ನೃತ್ಯದ ಮೂಲಕ ಮತ್ತು ಸಂಗೀತದ ಮೂಲಕ ಮತದಾನದ ಮಹತ್ವ ಕುರಿತಂತೆ ಜಾಗೃತಿ ಮೂಡಿಸುತ್ತಿದ್ದಾರೆ.

ವೀಡಿಯೋ ದೃಶ್ಯದಲ್ಲಿ ಸಿದ್ದಿ ಸಮುದಾಯದ ಮಹಿಳೆಯರು ತಮ್ಮ ಸಾಂಪ್ರದಾಯಿಕ ವೇಷಭೂಷಣಗಳು ಮತ್ತು ಡಮಾಮಿ ವಾದ್ಯದ ಮೂಲಕ ಲಯಬದ್ದವಾಗಿ ಮತದಾನ ಜಾಗೃತಿ ಬಗ್ಗೆ ಹಾಡುವುದರ ಮೂಲಕ ಜಿಲ್ಲೆಯ ವಿಶಿಷ್ಠ ಕಲೆಯನ್ನು ರಾಜ್ಯಾದ್ಯಂತ ಸಾರಿದ್ದಾರೆ. ಅಲ್ಲದೇ ದೇಶದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗುವ ಮೂಲಕ ಜಿಲ್ಲೆಗೆ ಗೌರವನ್ನು ಇಮ್ಮಡಿಗೊಳಿಸಿರುವ ವೃಕ್ಷಮಾತೆ ಎಂದು ಹೆಸರಾದ ತುಳಸಿ ಗೌಡ ಅವರೂ ಕೂಡಾ ವೀಡಿಯೋದಲ್ಲಿ ರಾಷ್ಟ್ರ ಧ್ವಜ ಹಿಡಿದು ಮತದಾನದ ಸಂದೇಶ ನೀಡಿದ್ದಾರೆ.

ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ಯಾಣದ ಸುಂದರ ದೃಶ್ಯಗಳನ್ನು ವಿಡಿಯೋದಲ್ಲಿ ಅಳವಡಿಸಿದ್ದು, ಯಾಣದಲ್ಲಿ ಯುವಕರೊಬ್ಬರೂ ಮತದಾನ ಮಾಡುವ ಸಂಕೇತ ತೋರಿಸಿದ್ದಾರೆ. ಮತದಾನ ಜಾಗೃತಿ ಕುರಿತಂತೆ ಸಿದ್ದಪಡಿಸಿರುವ ವೀಡಿಯೋವನ್ನು ಸಿದ್ದಿ ಸಮುದಾಯ ದವರು ವಾಸಿಸುವ ಹಳಿಯಾಳ ತಾಲೂಕಿನ ಸಾಂಬ್ರಾಣಿ ಗ್ರಾಮದಲ್ಲಿ ಚಿತ್ರೀಕರಿಸಲಾಗಿದ್ದು, ಜೂಲಿಯಾನ ಫೆರ್ನಾಂಡಿಸ್ ಅವರು ನೇತೃತ್ವದಲ್ಲಿ 20 ಕ್ಕೂ ಅಧಿಕ ಮಹಿಳೆಯರು ಡಮಾಮಿ ನೃತ್ಯದಲ್ಲಿ ಭಾಗವಹಿಸಿದ್ದು, ಸಿದ್ದಿ ಜನಾಂಗದ ಆಡು ಭಾಷೆಯಲ್ಲಿ ಚುನಾವಣಾ ಜಾಗೃತಿಯ ಸಂದೇಶ ಸಾರಿದ್ದಾರೆ.
ಸುಮಾರು ಎರಡು ತಿಂಗಳ ಹಿಂದೆ ನಡೆದ ಈ ವೀಡಿಯೋ ಚಿತ್ರೀಕರಣದಲ್ಲಿ ನಮ್ಮ ಸಮುದಾಯದ 20 ಕ್ಕೂ ಅಧಿಕ ಮಂದಿ ಮಹಿಳೆಯರು ಭಾಗವಹಿಸಿದ್ದೆವು, ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಮ್ಮ ಸಮುದಾಯದ ಜಾನಪದ ಕಲೆ ಸಂಸ್ಕೃತಿಯನ್ನು ರಾಜ್ಯ ಚುನಾವಣಾ ಆಯೋಗ ಬಳಸಿಕೊಂಡಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಈ ಮೂಲಕ ರಾಜ್ಯಾದ್ಯಂತ ನಮ್ಮ ವೈಶಿಷ್ಟ್ಯ ಪೂರ್ಣ ಸಂಸ್ಕೃತಿಯ ಬಗ್ಗೆ ಜನತೆಗೆ ತಿಳಿಯುವಂತಾಗಿದೆ. ನಮಗೆ ತುಂಬಾ ಸಂತೋಷವಾಗಿದೆ: ಜೂಲಿಯಾನ ಫೆರ್ನಾಂಡಿಸ್, ಡಮಾಮಿ ನೃತ್ಯ ತಂಡದ ನಾಯಕಿ.

Leave a Reply

Your email address will not be published. Required fields are marked *

error: Content is protected !!