ಚುನಾವಣಾ ನೀತಿ ಸಂಹಿತೆ ಜಾರಿ: ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ

ಉಡುಪಿ: 2024ರ ಸಾರ್ವತ್ರಿಕ ಲೋಕಸಭಾ ಚುನಾವಣಾ ದಿನಾಂಕಗಳನ್ನು ದೇಶದ ಮುಖ್ಯ ಚುನಾವಣಾಧಿಕಾರಿಗಳು ಶನಿವಾರ ಪ್ರಕಟಿಸಿದ್ದು, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾ.16ರಿಂದ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರು ತಿಳಿಸಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಗಳನ್ನು ಹಂಚಿಕೊಂಡ ಅವರು, ಚುನಾವಣಾ ನೀತಿ ಸಂಹಿತೆ ದೇಶದಲ್ಲಿ ಚುನಾವಣಾ ನೀತಿ ಸಂಹಿತೆ ಮುಕ್ತಾಯ ಗೊಳ್ಳುವ ಮುಂದಿನ ಜೂನ್ 6ರವರೆಗೆ ಜಾರಿಯಲ್ಲಿರುತ್ತದೆ ಎಂದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವು ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳು(ಕುಂದಾಪುರ, ಉಡುಪಿ, ಕಾಪು, ಕಾರ್ಕಳ) ಹಾಗೂ ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರ (ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು, ತರೀಕೆರೆ)ಗಳನ್ನು ಒಳಗೊಂಡಿದೆ. ಭಾರತ ಚುನಾವಣಾ ಆಯೋಗವು ಈ ಕ್ಷೇತ್ರಕ್ಕೆ ಎರಡನೇ ಹಂತದಲ್ಲಿ ಅಂದರೆ ಎಪ್ರಿಲ್ 26ರಂದು ಚುನಾವಣೆಯನ್ನು ನಿಗದಿಪಡಿಸಿದೆ ಎಂದರು.

ಮಾ.28ಕ್ಕೆ ಅಧಿಸೂಚನೆ: ಮಾ.28 ಗುರುವಾರ ಚುನಾವಣೆಗೆ ಅಧಿಸೂಚನೆಯನ್ನು ಹೊರಡಿಸಲಾಗು ವುದು. ನಾಮಪತ್ರ ಸಲ್ಲಿಸಲು ಎ.4 ಗುರುವಾರ ಕೊನೆಯ ದಿನವಾಗಿರುತ್ತದೆ. ಎ.5ರ ಶುಕ್ರವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಎ.8ರ ಸೋಮವಾರ ನಾಮಪತ್ರ ಹಿಂದೆಗೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ. ಎ.26ರ ಶುಕ್ರವಾರ ಮತದಾನ ನಡೆಯಲಿದ್ದು, ಜೂನ್ 4 ಮಂಗಳವಾರ ದಂದು ಮತಗಳ ಎಣಿಕೆ ಸೈಂಟ್ ಸಿಸಿಲೀಸ್ ವಿದ್ಯಾಸಂಸ್ಥೆಯಲ್ಲಿ ನಡೆಯಲಿದೆ ಎಂದು ಅವರು ವಿವರಿಸಿದರು.

ಪ್ರತಿ ವಿಧಾನಸಭಾ ಕ್ಷೇತ್ರಗಳಿಗೊಬ್ಬರು ಸಹಾಯಕ ಚುನಾವಣಾಧಿಕಾರಿ (ಎಆರ್‌ಓ)ಗಳನ್ನು ನಿಯುಕ್ತಿಗೊಳಿಸಲಾಗಿದೆ. ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತಲಾ ನಾಲ್ವರು ಎಆರ್‌ಓಗಳು ನೇಮಕಗೊಂಡಿದ್ದಾರೆ. ಅದೇ ರೀತಿ ಚುನಾವಣೆಯ ವಿವಿಧ ವಿಭಾಗಗಳ ನಿರ್ವಹಣೆಗಾಗಿ ಒಟ್ಟು 16 ಮಂದಿ ಹಿರಿಯ ಅಧಿಕಾರಿಗಳನ್ನು ಜಿಲ್ಲೆಯ ನೋಡೆಲ್ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆಗಳ ಸಮರ್ಪಕ ನಿರ್ವಹಣೆಗಾಗಿ ವಿವಿಧ ತಂಡಗಳನ್ನು ಸಹ ರಚಿಸಲಾಗಿದೆ ಎಂದರು.

ಹೊಸ ಆ್ಯಪ್, ಆನ್‌ಲೈನ್ ಅರ್ಜಿ: ಈ ಬಾರಿಯ ಚುನಾವಣಾ ಆಯೋಗ ಹಲವು ಹೊಸ ಆ್ಯಪ್‌ಗಳನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು, ವಿವಿಧ ರಾಷ್ಟ್ರೀಯ ಪಕ್ಷಗಳು ಈ ಬಾರಿ ಅಭ್ಯರ್ಥಿಗಳ ನಾಮಪತ್ರಗಳನ್ನು ಆನ್‌ಲೈನ್‌ಗಳ ಮೂಲಕ ಸಲ್ಲಿಸಬೇಕಾಗಿದೆ. ಇದಕ್ಕಾಗಿ ಸುವಿಧಾ ಆ್ಯಪ್ ಇದ್ದು, ಅದರ ಮೂಲಕವೇ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸಬೇಕಿದೆ ಎಂದರು.

ಉಳಿದಂತೆ ಎನ್‌ಕೋರ್ ನೋಡೆಲ್ ಆ್ಯಪ್, ಸಿ-ವಿಝಿಲ್, ಸಕ್ಷಮ-ಇಸಿಐ, ವೋಟರ್ ಹೆಲ್ಫ್‌ಲೈನ್ ಆ್ಯಪ್‌ಗಳೊಂದಿಗೆ ಚುನಾವಣಾ ಆಯೋಗ ಈ ಬಾರಿ ಇಎಸ್‌ಎಂಎಸ್ ಎಂಬ ಹೊಸ ಆ್ಯಪ್‌ನ್ನು ಬಿಡುಗಡೆಗೊಳಿಸಿದೆ. ಚುನಾವಣಾ ಫಲಿತಾಂಶ, ಟ್ರೆಂಡ್‌ಗಳನ್ನು ಸಹ ಇವುಗಳಿಂದ ತಿಳಿದುಕೊಳ್ಳಬಹುದು ಎಂದರು.

ಇಎಸ್‌ಎಂಎಸ್ ಆ್ಯಪ್‌ನಲ್ಲಿ ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳನ್ನು ನೀಡಬಹುದಾಗಿದ್ದು, ಇವುಗಳನ್ನು ಪರಿಶೀಲಿಸಿ 100 ನಿಮಿಷಗಳಲ್ಲಿ ನೀವು ನೀಡಿದ ದೂರನ್ನು ಪರಿಶೀಲಿಸಿ ಮಾಹಿತಿ ನೀಡಲಾಗುವುದು. ಚುನಾವಣಾ ಪ್ರಚಾರಕ್ಕೆ 18 ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು (ಬಾಲಕಾರ್ಮಿಕರು) ಬಳಸಿಕೊಳ್ಳುವಂತಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

14 ಚೆಕ್‌ಪೋಸ್ಟ್‌ಗಳು: ಚುನಾವಣಾ ಅವಧಿಯಲ್ಲಿ ತಪಾಸಣೆಗಾಗಿ ಇಂದಿನಿಂದಲೇ ಜಿಲ್ಲೆಯಲ್ಲಿ 14 ಚೆಕ್‌ ಪೋಸ್ಟ್ ಗಳನ್ನು ತೆರೆಯಲಾಗಿದೆ. ಇವುಗಳಲ್ಲಿ ಮೂರು ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ (ಶಿರೂರು, ಕೊಲ್ಲೂರು ದಳಿ, ಹೊಸಗಂಡಿ), ಕುಂದಾಪುರದಲ್ಲಿ ಒಂದು (ಸಾಬರಕಟ್ಟೆ), ಉಡುಪಿಯಲ್ಲಿ ಎರಡು (ಗುಡ್ಡೆಯಂಗಡಿ ಮಣಿಪುರ ಕ್ರಾಸ್, ಉದ್ಯಾವರ), ಕಾಪುವಿನಲ್ಲಿ ಎರಡು (ಹೆಜಮಾಡಿ, ಫಲಿಮಾರು) ಹಾಗೂ ಕಾರ್ಕಳದಲ್ಲಿ 6 (ಮಾಳ, ಮುಂಡ್ಕೂರು ಸಚ್ಚರಿಪೇಟೆ, ನಾಡ್ಪಾಲು ಸೋಮೇಶ್ವರ, ಮುಡಾರು ಬಜಗೋಳಿ, ಸಾಣೂರು, ಹೊಸ್ಮಾರು ನಲ್ಲೂರು) ಇರಲಿವೆ.

ದೂರು ನಿರ್ವಹಣೆ: ಮಾದಿರ ನೀತಿ ಸಂಹಿತೆಯ ಉಲ್ಲಂಘನೆಯ ಹಾಗೂ ಇತರೆ ದೂರುಗಳ ನಿರ್ವಹಣೆಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ದೂರು ನಿರ್ವಹಣಾ ಕೇಂದ್ರವನ್ನು ಸ್ಥಾಪಿಸಿದ್ದು, ಯಾವುದೇ ದೂರುಗಳಿದ್ದಲ್ಲಿ ದೂರವಾಣಿ ಸಂಖ್ಯೆ:0820-2574802 ಹಾಗೂ ವಾಟ್ಸಪ್ ನಂಬರ್: 9880831516 ನ್ನು ಸಂಪರ್ಕಿಸಬಹುದು. ಆಯೋಗ ಅಭಿವೃದ್ಧಿ ಪಡಿಸಿದ ಮೊಬೈಲ್ ಆ್ಯಪ್ ಸಿ-ವಿಝಿಲ್ ಮೂಲಕವೂ ಸಾರ್ವಜನಿಕರು ದೂರುಗಳನ್ನು ದಾಖಲಿಸಬಹುದು ಎಂದು ಡಾ.ವಿದ್ಯಾ ಕುಮಾರಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್. ಉಪಸ್ಥಿತರಿದ್ದರು.

ಕ್ಷೇತ್ರದ ಮತದಾರರ ಸಂಖ್ಯೆ 15.72 ಲಕ್ಷ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಇರುವ ಒಟ್ಟು ಮತದಾರರ ಸಂಖ್ಯೆ 15,72,958. ಇವರಲ್ಲಿ ಪುರುಷ ಮತದಾರರ ಸಂಖ್ಯೆ 7,62,558 ಆದರೆ, ಮಹಿಳಾ ಮತದಾರರ ಸಂಖ್ಯೆ 8,10,362. 38 ಮಂದಿ ತೃತೀಯ ಲಿಂಗ ಮತದಾರರು ಇದರಲ್ಲಿ ಸೇರಿದ್ದಾರೆ.

ಕ್ಷೇತ್ರದಲ್ಲಿ ಒಟ್ಟು 565 ಮಂದಿ ಸೇವಾ ಮತದಾರರು. ಕುಂದಾಪುರ 51, ಉಡುಪಿ 51, ಕಾಪು 53, ಕಾರ್ಕಳ 34, ಶೃಂಗೇರಿ 58, ಮೂಡಿಗೆರೆ 83, ಚಿಕ್ಕಮಗಳೂರು 140, ತರೀಕೆರೆ 95 ಮಂದಿ ಸೇವಾ ಮತದಾರರಿದ್ದಾರೆ.

1842 ಮತಗಟ್ಟೆಗಳು: ಈ ಬಾರಿ ಕ್ಷೇತ್ರದಲ್ಲಿ ಒಟ್ಟು 1842 ಮತಗಟ್ಟೆ ಗಳನ್ನು ತೆರೆಯಲಾಗುವುದು. ವಿಧಾನಸಭಾ ಕ್ಷೇತ್ರವಾರು ಮತಗಟ್ಟೆಗಳ ಸಂಖ್ಯೆ ಹೀಗಿದೆ. ಕುಂದಾಪುರ-222, ಉಡುಪಿ-226, ಕಾಪು-209, ಕಾರ್ಕಳ- 209, ಶೃಂಗೇರಿ-256, ಮೂಡಿಗೆರೆ-231, ಚಿಕ್ಕಮಗಳೂರು-261 ಹಾಗೂ ತರೀಕೆರೆಯಲ್ಲಿ 228 ಮತಗಟ್ಟೆಗಳಿರುತ್ತವೆ.

29,909 ಯುವ ಮತದಾರರು

ಕ್ಷೇತ್ರದಲ್ಲಿ ಈ ಬಾರಿ 29,909 ಮಂದಿ ಮೊದಲ ಬಾರಿ ಮತ ಚಲಾಯಿಸುವ ಹಕ್ಕನ್ನು ಪಡೆದ ಯುವ ಮತದಾರರಿದ್ದಾರೆ. ಕುಂದಾಪುರ-3916, ಉಡುಪಿ-4477, ಕಾಪು-4235, ಕಾರ್ಕಳ-4528, ಶೃಂಗೇರಿ-3346, ಮೂಡಿಗೆರೆ-2692, ಚಿಕ್ಕಮಗಳೂರು-3796, ತರೀಕೆರೆ- 2919 ಈ ಮತದಾರರಿದ್ದಾರೆ. ಅಲ್ಲದೇ ಒಟ್ಟು 17,959 ಮಂದಿ ವಿಕಲಚೇತನ ಮತದಾರರು ಸಹ ಉಡುಪಿ, ಚಿಕ್ಕಮಗಳೂರು ಜಿಲ್ಲೆಯಲ್ಲಿದ್ದಾರೆ.

85+ ವಯೋಮಾನದವರು 21,521: 85ಕ್ಕಿಂತ ಅಧಿಕ ವಯೋಮಾನ ದ ಒಟ್ಟು 21521 ಮಂದಿ ಹಿರಿಯ ಮತದಾರರು ಕ್ಷೇತ್ರದಲ್ಲಿದ್ದಾರೆ. ಕುಂದಾಪುರದಲ್ಲಿ 2920, ಉಡುಪಿ-3624, ಕಾಪು-2758, ಕಾರ್ಕಳ-2692, ಶೃಂಗೇರಿ-1881, ಮೂಡಿಗೆರೆ-1747, ಚಿಕ್ಕಮಗಳೂರು- 2878, ತರೀಕೆರೆ-3021 ಮಂದಿ ಹಿರಿಯ ಮತದಾರರಿದ್ದಾರೆ.

536 ಮಂದಿ ಶತಾಯುಷಿ ಮತದಾರರು

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ 100 ವರ್ಷ ಪ್ರಾಯ ಮೀರಿದ 536ಮಂದಿ ಶತಾಯುಷಿ ಮತದಾರರಿದ್ದಾರೆ. ಇವರಲ್ಲಿ 205 ಮಂದಿ ಪುರುಷರಾದರೆ, 331 ಮಂದಿ ಮಹಿಳೆಯರು. ಕುಂದಾಪುರದಲ್ಲಿ 21, ಉಡುಪಿಯಲ್ಲಿ 71, ಕಾಪು-50, ಕಾರ್ಕಳ-36, ಶೃಂಗೇರಿ-34, ಮೂಡಿಗೆರೆ-55, ಚಿಕ್ಕಮಗಳೂರು-148, ತರೀಕೆರೆ-121ಮಂದಿ ಶತಾಯುಷಿ ಮತದಾರರಿದ್ದಾರೆ.

85ವರ್ಷ ಮೇಲ್ಪಟ್ಟ ಹಿರಿಯ ಮತದಾರರು ಹಾಗೂ ವಿಕಲಚೇತನ ಮತದಾರರಿಗೆ ಮನೆಯಲ್ಲಿ ಮತದಾನದ ಸೌಲಭ್ಯ ಪಡೆಯಲು ಅವಕಾಶವಿದ್ದು ಅದಕ್ಕಾಗಿ ಅರ್ಜಿಗಳನ್ನು ತುಂಬಿಸಿ ಸಲ್ಲಿಸಬೇಕಿದೆ. ಪರಿಶೀಲಿಸಿ ಅವರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!