ಸುರತ್ಕಲ್: ಬಂಟರ ಸಂಘದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಕ್ರಮ

ಸುರತ್ಕಲ್ ಮಾ.16(ಉಡುಪಿ ಟೈಮ್ಸ್ ವರದಿ): ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರೆ ಮತ್ತು ಬಂಟರ ಸಂಘ ಸುರತ್ಕಲ್ ಇದರ ಸಂಯುಕ್ತ ಆಶ್ರಯದಲ್ಲಿ “ಎಸ್ಸೆಸ್ಸೆಲ್ಸಿ ನಂತರ ಮುಂದೇನು” ಎಂಬ ವಿಚಾರದ ಕುರಿತು ಮಾಹಿತಿ ಕಾರ್ಯಕ್ರಮ ಸುರತ್ಕಲ್‌ನ ಬಂಟರ ಭವನದಲ್ಲಿ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಅವರು, “ಈಗಿನ ಪಠ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ 100 ಅಂಕ ಗಳಿಸುವುದು ಕಷ್ಟವಲ್ಲ, ಆದರೆ ಮುಂದೆ ಬರಲಿರುವ ಪಿಯು ಶಿಕ್ಷಣ ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಅತ್ಯಮೂಲ್ಯವಾಗಿದೆ. ಎನ್ ಸಿ ಆರ್ ಸಿಲೆಬಸ್ ನಲ್ಲಿ ಎಷ್ಟು ಅಂಕ ಪಡೆದರೂ ಮೆಡಿಕಲ್, ಡೆಂಟಲ್ ಅಥವಾ ಬೇರೆ ಶಿಕ್ಷಣ ಪಡೆಯಲು ಸಾಧ್ಯವಾಗುವುದಿಲ್ಲ. ಮೆಡಿಕಲ್ ಸೀಟ್ ಪಡೆಯಬೇಕಾದರೆ ನೀಟ್ ನಂತಹ ಪೂರಕ ಪರೀಕ್ಷೆಗೆ ಹಾಜರಾಗಬೇಕು ಎಂದು ಸಲಹೆ ನೀಡಿದರು.

ಹಾಗೂ ಮಕ್ಕಳಿಗೆ ಕರ್ನಾಟಕ ಹೊರತುಪಡಿಸಿದರೆ ಬೇರೆ ರಾಜ್ಯಗಳಲ್ಲಿ ಒಂದನೇ ತರಗತಿಯಿಂದಲೇ ಪೂರಕ ಪರೀಕ್ಷೆ ತರಬೇತಿ ಆರಂಭವಾಗುತ್ತದೆ. ಇದು ಬೆಳೆಯುತ್ತ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗುತ್ತದೆ. ನಮ್ಮ ಇಡೀ ದೇಶದಲ್ಲಿ ಇರುವುದು ಅಂದಾಜು ಎರಡೂವರೆ ಲಕ್ಷ ಸಿಎ, ಸಿಎಸ್ ಆದವರು. ಆದರೆ 20 ಲಕ್ಷದಷ್ಟು ಸಿಎಗಳು ದೇಶಕ್ಕೆ ಅಗತ್ಯವಿದ್ದಾರೆ. ಇದಕ್ಕೆ ಕಾರಣ ಮಕ್ಕಳು ಪೂರಕ ಪರೀಕ್ಷೆ ಕುರಿತು ಭಯ ಹೊಂದಿರುವುದು. ಇದನ್ನು ನಿವಾರಿಸಿದಲ್ಲಿ ಮಾತ್ರವೇ ಮಕ್ಕಳು ಸಾಧನೆ ಮಾಡಲು ಆಗುವುದು” ಎಂದರು.

ಆಳ್ವಾಸ್ ಶಿಕ್ಷಣ ಸಂಸ್ಥೆಯು ಈ ನಿಟ್ಟಿನಲ್ಲಿ ಬಹುಮುಖ್ಯ ಸಾಧನೆ ಮಾಡಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪೂರಕ ಪರೀಕ್ಷೆ ಕೋಚಿಂಗ್ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಇಷ್ಟೇ ಅಲ್ಲದೆ ಶಿಕ್ಷಣ ಸಂಸ್ಥೆಯ 15-20 ಕಿಮೀ ಸುತ್ತಮುತ್ತಲಿನ ಪ್ರದೇಶದ ಮಕ್ಕಳಿಗೆ ಫೀಸ್ ನಲ್ಲಿ ಶೇ.50 ರಷ್ಟು ರಿಯಾಯಿತಿ ಕೊಡಲಾಗುವುದು” ಎಂದರು.

“8:30ಕ್ಕೆ ಸರಿಯಾಗಿ ಪಿಯು ತರಗತಿಗಳು ಆರಂಭವಾಗಿ ಮಧ್ಯಾಹ್ನ ಕ್ಲಾಸ್ ಮುಗಿಸಿ ಊಟವನ್ನು ಅಲ್ಲಿಯೇ ಮುಗಿಸಿ 4 ಗಂಟೆಗೆ ಲಘು ಉಪಹಾರ ನಡೆಸಿ ಅಂದಿನ ಪಠ್ಯವನ್ನು ಅಲ್ಲಿಯೇ ಓದಿ ಮನನ ಮಾಡಿಕೊಂಡು 5:30ಕ್ಕೆ ಅಲ್ಲಿಂದ ಹೊರಡುವುದು. ಯಾಕೆಂದರೆ ಮಕ್ಕಳಿಗೆ ಗುರಿ, ಇಚ್ಛಾಶಕ್ತಿ ಇದ್ದರೆ ಮಾತ್ರ ಜೀವನದಲ್ಲಿ ಯಶಸ್ಸು ಕಾಣುವುದು ಸಾಧ್ಯ.  ನಮ್ಮ ಕಾರ್ಯಕ್ರಮ ಈ ರೀತಿಯಿದ್ದು ಮಕ್ಕಳು ಅದರ ಸದುಪಯೋಗ ಪಡೆದುಕೊಳ್ಳಬೇಕು. ಒಂದು ವೇಳೆ ಆಳ್ವಾಸ್ ಹಾಸ್ಟೆಲ್ ನಲ್ಲಿ ಉಳಿದುಕೊಂಡು ವ್ಯಾಸಂಗ ಮಾಡುವುದಾದರೆ ಸ್ಥಳೀಯ ವಿದ್ಯಾರ್ಥಿಗಳಿಗೆ ಶೇ.50 ರಷ್ಟು ರಿಯಾಯಿತಿ ನೀಡಲಾಗುವುದು” ಎಂದು ಹೇಳಿದರು.

ವೇದಿಕೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಉದ್ಯಮಿ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಸುಧಾಕರ್ ಎಸ್. ಪೂಂಜಾ, ಮಾಜಿ ಅಧ್ಯಕ್ಷ ದೇವಾನಂದ ಶೆಟ್ಟಿ, ಉಪಾಧ್ಯಕ್ಷ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಪ್ರಧಾನ ಕಾರ್ಯದರ್ಶಿ ಲೀಲಾಧರ್ ಶೆಟ್ಟಿ, ಕೋಶಾಧಿಕಾರಿ ಅವಿನಾಶ್ ಶೆಟ್ಟಿ, ಶಿಕ್ಷಣ ಸಮಿತಿ ಸಂಚಾಲಕ ಲೊಕೇಶ್ ರೈ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!