5ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಶಿಕ್ಷಣ ಕಾಯ್ದೆಯಲ್ಲಿ ಅನುಮತಿಯಿಲ್ಲ: ಆರ್‌ಟಿಇ ಅಸೋಸಿಯೇಷನ್
ಬೆಂಗಳೂರು: ರಾಜ್ಯ ಸರ್ಕಾರವು 5, 8, 9 ಮತ್ತು 11 ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸಲು ಅಧಿಸೂಚನೆಗಳನ್ನು ಹೊರಡಿಸುವ ಮೂಲಕ ಕಾನೂನಿನ ಕಾರ್ಯವಿಧಾನವನ್ನು ಅನುಸರಿಸದೆ ವಂಚನೆ ಮಾಡಿದೆ ಎಂದು ಆರ್‌ಟಿಇ ವಿದ್ಯಾರ್ಥಿಗಳು ಮತ್ತು ಪೋಷಕರ ಸಂಘ ಮಾ.15 ರಂದು ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರತಿಪಾದಿಸಿದೆ.
ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸಿ ಏಕ ಸದಸ್ಯ ನ್ಯಾಯಪೀಠ ನೀಡಿದ ಆದೇಶದ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿದ ಮೇಲ್ಮನವಿಗಳ ವಿಚಾರಣೆ ನಡೆಯಿತು.
ಈ ಸಂದರ್ಭದಲ್ಲಿ ಆರ್ ಟಿ ಇ ಅಸೋಸಿಯೇಷನ್‌ನ ವಕೀಲರಾದ ಎ ವೇಲನ್ ಅವರು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್ ಮತ್ತು ರಾಜೇಶ್ ರೈ ಕೆ ಅವರ ವಿಭಾಗೀಯ ಪೀಠದ ಮುಂದೆ ವಾದ ಮಂಡಿಸಿದರು.
ಕರ್ನಾಟಕ ಶಿಕ್ಷಣ ಕಾಯ್ದೆಯ ನಿಬಂಧನೆಗಳ ಪ್ರಕಾರ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವ ಬೋರ್ಡ್ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸುವ ಮೊದಲು ರಾಜ್ಯ ಸರ್ಕಾರವು ಪೋಷಕರು, ಶಿಕ್ಷಕರು ಮತ್ತು ಶಾಲೆಗಳನ್ನು ಸಂಪರ್ಕಿಸಬೇಕು ಎಂದು ವಕೀಲರು ವಾದ ಮಾಡಿದರು.
ಶಿಕ್ಷಣ ಹಕ್ಕು ಕಾಯಿದೆಯು 6 ರಿಂದ 14 ವರ್ಷದೊಳಗಿನ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ಅನುಮತಿಸುವುದಿಲ್ಲ. ರಾಜ್ಯದ ನಿರ್ಧಾರವು ಕಾಯಿದೆಗೆ ಸಂಪೂರ್ಣ ನಿರ್ಲಕ್ಷ್ಯವಾಗಿದೆ. ಸೋಮವಾರದೊಳಗೆ ವಾದ ಮಂಡಿಸಲು ಕಾಲಾವಕಾಶ ನೀಡುವಂತೆ ಅರ್ಜಿದಾರರ ಪರ ವಕೀಲರು ಕೋರಿದರು. ಪ್ರಕರಣದ ತುರ್ತು ಪರಿಗಣಿಸಿ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.